ಪಾತಪಾಳ್ಯದಲ್ಲಿ ಸಿಪಿಐ(ಎಂ) 11ನೇ ತಾಲೂಕು ಸಮ್ಮೇಳನ
by Ra Na Gopala Reddy Bagepalli
ಬಾಗೇಪಲ್ಲಿ: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್’ವಾದಿ)ದ 11ನೇ ಬಾಗೇಪಲ್ಲಿ ತಾಲೂಕು ಸಮ್ಮೇಳನವು ಪಾತಪಾಳ್ಯದಲ್ಲಿ ನಡೆಯಿತು.
ಕೆಂಬಾವುಟ ಧ್ವಜಾರೋಹಣೆ ಮಾಡುವುದರ ಮೂಲಕ ಪ್ರಾರಂಭವಾದ ಸಮ್ಮೆಳನವು ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ, ರಾಜಕೀಯ ಭ್ರಷ್ಷಾಚಾರದ ನಿರ್ಮಲನೆಗಾಗಿ ಹಾಗೂ ಮುಂದಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಚರ್ಚೆ ವಿಮರ್ಶೆ ನಡೆಸಿತು.
ಅಂಬಟಿ ರತ್ನಂಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ಆರಂಭವಾಗುವುದಕ್ಕಿಂತ ಮೊದಲು ವೇದಿಕೆ ಮುಂಭಾಗ ಕೆಂಬಾವುಟವನ್ನು ಧ್ವಜಾರೋಹಣೆ ಮಾಡಿ, ಲಾಲ್ ಸಲಾಂಗಳನ್ನು ಅರ್ಪಿಸಿದರು. ಅನೇಕ ವೀರೋಚಿತ ಹೋರಾಟಗಳಲ್ಲಿ ಭಾಗವಹಿಸಿ, ಅಮರರಾದ ಅಮರವೀರರನ್ನು ಸ್ಮರಣೆ ಮಾಡಲಾಯಿತು.
ಶಿಕ್ಷಣ ವ್ಯಾಪಾರೀಕರಣ, ಅಸಮರ್ಪಕ ಪಡಿತರ ವ್ಯವಸ್ಥೆ, ಮೂಲಭೂತ ಸೌಲಭ್ಯಗಳ ಕೊರತೆ, ಕೋಮುವಾದ, ಧಮಾಂಧತೆ ಬಿತ್ತುವ ಮತಾಂಧ ಶಕ್ತಿಗಳ ವಿರುದ್ಧ, ನೀರಾವರಿ ಸಮಸ್ಯೆಗಳು, ಕೃಷಿ ಹಾಗೂ ರೈತರ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆಗಳು, ಭ್ರಷ್ಠಾಚಾರ, ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಅತ್ಯಾಚಾರಗಳ ಬಗ್ಗೆ, ಸರ್ಕಾರ ತಂದಿರುವ ಜಾಗತೀಕರಣ ಹಾಗೂ ಉದಾರೀಕರಣ, ಖಾಸಗೀಕರಣ ನೀತಿಗಳು ತಾಲೂಕನ್ನು ಬಾಧಿಸುತ್ತಿದ್ದು, ರೈತರಿಗೆ ಆಗುತ್ತಿರುವ ತೊಂದರೆ ಇತ್ಯಾದಿ ಸಮಗ್ರ ಜನಪರ ವಿಷಯಗಳ ಬಗ್ಗೆ ಹಾಗೂ ಕೇಂದ್ರದ ರೈತ ವಿರೋಧಿ ನೀತಿಗಳು, ವಿದ್ಯುತ್ ಖಾಸಗಿಕರಣ, ಭೂಸುದಾರಣೆ ಕಾಯಿದೆ, ಎಪಿಎಂಸಿ ಕಾಯಿದೆಗಳ ವಿರುದ್ಧ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಜಿ.ವಿ.ರಾಘವುಲು ಹಾಗೂ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಬಸವರಾಜ್ ಅವರು ಮಾತನಾಡಿದರು.
ತಾಲೂಕಿನಲ್ಲ್ಲಿಯಾವುದೇ ರೀತಿಯಾದ ಶಾಶ್ವತ ನೀರಾವರಿ ಯೋಜನೆಗಳಾಗಲಿ, ನದಿ ನಾಲೆಗಳಾಗಲಿ ಇಲ್ಲ. ಆದರೆ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕಾಗಿದೆ ಬಾಗೇಪಲ್ಲಿ. ಕೆರೆಗಳಲ್ಲಿ ಹೂಳು ತುಂಬಿಕೊಂಡು ಶೇಖರಣಾ ಸಾಮರ್ಥ್ಯ ಕಡಿಮೆಯಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಬಹು ದೂರದ ಊರುಗಳಿಗೆ ಜನ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಗಳಿಂದ, ಸಾಮಾನ್ಯ ಜನರ ಜೀವನದಿಂದ ಪಾತಪಾಳ್ಯದಲ್ಲಿ ನಡೆಯುತ್ತಿರುವ 11ನೇ ತಾಲ್ಲೂಕಿನ ಸಮ್ಮೇಳನವು ಮಹತ್ವವನ್ನು ಪಡೆದುಕೊಂಡಿತು.
ಈ ಸಮ್ಮೇಳನದಲ್ಲಿ ಮುಖಂಡರಾದ ಡಾ. ಅನಿಲ್‌ಕುಮಾರ್, ರಘುರಾಮರೆಡ್ಡಿ, ಎಂ.ಪಿ.ಮುನಿವೆಂಕಟಪ್ಪ, ಮಂಜುನಾಥ ರೆಡ್ಡಿ, ಬಿಳ್ಳೂರು ನಾಗರಾಜ್, ಜಿ.ಪಂ.ಸದಸ್ಯ ಬಿ. ಸಾವಿತ್ರಮ್ಮ, ಪಿ. ಓಬಳರಾಜು, ಜೆಬಿವುಲ್ಲಾ, ಮಹಮದ್ ಅಕ್ರಂ, ಹೆಚ್.ಪಿ. ಲಕ್ಷ್ಮೀನಾರಾಯಣ, ಶೋಭಾರಾಣಿ, ಮುನಿಕೃಷ್ಣಪ್ಪ, ಸುಜಾತಮ್ಮ, ಶ್ರೀರಾಮಪ್ಪ, ಶ್ರೀರಾಮನಾಯಕ್, ಆಂಜನೇಯ ರೆಡ್ಡಿ, ವೇಮಚಂದ್ರ, ಅಶ್ವತ್ಥಪ್ಪ, ಜಯರಾಮರೆಡ್ಡಿ ಮತ್ತಿತರೆ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ತಾಲೂಕಿನ ಗೂಳೂರು ಕಮ್ಯುನಿಸ್ಟ್ ಪಕ್ಷದ ತವರೂರು ಮತ್ತು ಕೆಂಪುಕೋಟೆ ಎಂದು ಹೆಸರಾಗಿತ್ತು, ಅದಕ್ಕೂ ಮೊದಲು ಈ ಭಾಗದಲ್ಲಿ ಜಮೀನುದಾರರದ್ದೇ ಪ್ರಾಬಲ್ಯವಿತ್ತು ಇಲ್ಲಿ. ನಂತರ 1952ರಲ್ಲಿ ಬಸವ ಪುನ್ನಮಿಯ ದಿನ, ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ರೈತ ಸಂಘ ಕಟ್ಟಿದರು, ಅಂದಿನಿಂದ ಅನೇಕ ಹೋರಾಟಗಳನ್ನು ಮಾಡಿ, ತಾಲೂಕಿನ ಕಮ್ಯುನಿಸ್ಟ್ ಪಕ್ಷಗಳ ಇತಿಹಾಸದ ಪುಟಗಳಲ್ಲಿ ಅನೇಕ ಧೀರೋದ್ಧಾತ್ತ ಹೋರಾಟಗಳು ದಾಖಲೆಯಾಗಿವೆ.
1947ರ ನಂತರ ಕಮ್ಯುನಿಸ್ಟ್ ಚಳವಳಿ ನಡೆದು, ಭೂಹೀನರಿಗೆ ಭೂಮಿ ಸಿಕ್ಕುವಂತಾಗಿದ್ದು, 1952ರಲ್ಲಿ ಜೋಡಿ ಇನಾಂತಿ ರದ್ದತಿ ಹೋರಾಟ, 1972ರಲ್ಲಿ ಅರಣ್ಯ ಭೂಮಿ, ಬಂಜರು ಭೂಮಿ ಹೋರಾಟ, ಉಳುವವನಿಗೆ ಭೂಮಿ ಹೋರಾಟಗಳು, ಆಗಸ್ಟ್ 7, 1980ರ ಹೋರಾಟ, ವಿಜಯನಗರದ ಉಕ್ಕು, ಕನ್ನಡಿಗರ ಹಕ್ಕು ಹೋರಾಟ, 1990 ರಲ್ಲಿ ಡಂಕಲ್ ಗ್ಯಾಂಟ್ ಒಪ್ಪಂದದ ವಿರುದ್ದ ಹೋರಾಟ, ಬಾಬರಿ ಮಸೀದಿ ಧ್ವಂಸ ಮಾಡಿದ ವಿರುದ್ಧ ಹೋರಾಟ, ಕುಡಿಯುವ ನೀರಿಗಾಗಿ ಚಿತ್ರಾವತಿ ಅಣೆಕಟ್ಟೆಯ ಹೋರಾಟ, ಶಾಶ್ವತ ವೀರಾವರಿ ಹೋರಾಟ ಹೀಗೆ ಒಂದೇ ಎರಡೆ ಅಸಂಖ್ಯಾತ ಹೋರಾಟಗಳ ಮೂಲಕ ಜನರಲ್ಲಿ ಚೈತನ್ಯ ಮೂಡಿಸಿ, ಅನೇಕ ಹಕ್ಕುಗಳನ್ನು ದೊರಕಿಸಿಕೊಂಡಿತು, ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿತು.
ಅಂದಿನ ದಿನಗಳಲ್ಲಿ ಸಿಪಿಐ(ಎಂ) ಪಾಲಿಟ್ ಬ್ಯೋರೋ ಸದಸ್ಯೆ ಕಾಂ.ಬಿ.ಟಿ.ರಣದಿವೆ, ಕಾಂ.ವಿಮಲಾ ರಣದಿವೆ, ಕಾಂ.ಎ.ಕೆ. ಗೋಪಾಲನ್, ಕಾಂ.ಇ.ಎಂ.ಎಸ್ ನಂಬೂದರಿಪಾಡ್, ಕಾಂ.ಬಿ.ವಿ. ಕಕ್ಕಿಲಾಯ, ಕಾಂ.ವರ್ತೂರು ಎಸ್. ಸೂರ್ಯನಾರಾಯಣರಾವ್, ಕಾಂ.ಬಿ.ವಿ. ರಾಘವುಲು, ಕಾಂ.ಪಿ.ಸುಂದರಯ್ಯ, ಕಾ.ಗಪೂರ್, ಕಾಂ.ಜಗನ್ನಾಥ್, ಕಾಂ.ಪ್ರಕಾಶ್ ಕಾರಟ್, ಕಾಂ.ಬೃಂದಾ ಕಾರಟ್, ಕಾಂ.ಸೀತಾರಾಮ್ ಯಾಚೂರಿ ಅವರಂಥ ಅತಿರಥ ಮಹಾರಥ ದಿಗ್ಗಜರು ಇಲ್ಲಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ವಿಶೇಷ ಅಲಂಕಾರ
ಪಾತಪಾಳ್ಯದ ಮುಖ್ಯ ಬೀದಿ ಹಾಗೂ ಮುಖ್ಯ ರಸ್ತೆಗಳಲ್ಲಿ ಕೆಂಪು ಬಾವುಟದ ತೋರಣ, ಬಣ್ಣ ಬಣ್ಣದ ಪ್ಲೆಕ್ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ತಾಲೂಕಿನಾದ್ಯಂತ ವ್ಯಾಪಕ ಪ್ರಚಾರ ಮಾಡಲಾಗಿತ್ತು.