ಶೇ.967ಎಂ.ಎಂ ದಾಖಲೆಯ ಮಳೆ, ತುಂಬಿದ ಶೇ.50ಕ್ಕೂ ಹೆಚ್ಚು ಕೆರೆಗಳು; ಸರಕಾರಿ ಕೂಡಲೇ ಪರಿಹಾರ ಘೋಷಿಸಬೇಕು ಎಂದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯಿಲಿ
By GS Bharath Gudibande
ಗುಡಿಬಂಡೆ: ಬಯಲು ಸೀಮೆಯಲ್ಲಿ 40 ವರ್ಷಗಳಲ್ಲಿ ಕಂಡು ಕೇಳರಿಯದ ಮಳೆಯಾಗುತ್ತಿದ್ದು, ಜಿಲ್ಲೆಯ ಶೇ.50ಕ್ಕೂ ಹೆಚ್ಚು ಕೆರೆಗಳು ತುಂಬಿರುವುದರಿಂದ ಬರುಡು ಭೂಮಿಗೆ ಜೀವಕಳೆ ಬಂದಂತಾಗಿದೆ.
ಜಿಲ್ಲೆಯಾದ್ಯಂತ ಕಳೆದ 20 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಚಿಕ್ಕಬಳ್ಳಾಪುರ, ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ತಾಲ್ಲೂಕುಗಳ ಬಹುಪಾಲು ಕೆರೆಗಳು ತುಂಬಿವೆ. ಅಲ್ಲದೆ ಕೆರೆ ಕುಂಟೆ, ನದಿಗಳು, ನಾಲೆಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ.
ಜಿಲ್ಲೆಯಲ್ಲಿ ಪ್ರತೀ ವರ್ಷದಂತೆ ಜನವರಿಯಿಂದ ಅಕ್ಟೋಬರ್ ತಿಂಗಳವರೆಗೆ ಶೇ.648 ಎಂ.ಎಂ ಸರಾಸರಿ ಮಳೆಯ ನಿರೀಕ್ಷೆ ಇತ್ತು. ಆದರೆ ಈ ವರ್ಷ ಇರುವರೆಗೂ ಶೇ.969ಎಂ.ಎಂ ರಷ್ಟು ದಾಖಲೆಯ ಮಳೆಯಾಗಿದೆ. ಅಲ್ಲದೆ ಕಳೆದ 40 ವರ್ಷಗಳಿಂದ ಪ್ರತೀ ವರ್ಷ ಸರಾಸರಿ ಮಳೆಗಿಂತ ತೀರಾ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತಿತ್ತು. ಈ ವರ್ಷ ಸರಾಸರಿ ಮಳೆಗಿಂತ ಶೇ.49 ಎಂ.ಎಂ ನಷ್ಟು ಅಧಿಕ ಮಳೆಯಾಗಿದೆ.
ಜಿಲ್ಲೆಯಲ್ಲಿ (ಜಿಲ್ಲಾ ಪಂಚಾಯ್ತಿ, ಸಣ್ಣ ನಿರಾವರಿ ಇಲಾಖೆಯ) 1841 ಕೆರೆಗಳಿವೆ. ಇವುಗಳಲ್ಲಿ ಶೇ.50ರಷ್ಟು ಕೆರೆಗಳು ಈಗಾಗಲೇ ತುಂಬಿದ್ದು, ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಕೆರೆಗಳಿಗೆ ಒಳ ಹರಿವು ಹೆಚ್ಚಿದ್ದು, ಶೇ.90ರಷ್ಟು ಕೆರೆಗಳು ತುಂಬಬಹುದೆಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿರುವ ಸಣ್ಣ ನಿರಾವರಿ ಇಲಾಖೆಯ 169 ಕೆರೆಗಳಲ್ಲಿ 100ಕ್ಕೂ ಅಧಿಕ ಕೆರೆಗಳು ಈಗಾಗಲೇ ತುಂಬಿವೆ. ಇದುವರೆಗೂ 59 ಕೆರೆಗಳು ಶೇ.100ರಷ್ಟು ತುಂಬಿದ್ದರೆ, 33 ಕೆರೆಗಳು ಶೇ.51ರಿಂದ ಶೇ.99ರಷ್ಟು ಭರ್ತಿಯಾಗಿವೆ. ಉಳಿದ 33 ಕೆರೆಗಳು ಶೇ.31ರಿಂದ 50ರಷ್ಟು ತುಂಬಿವೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನದಿಗಳಲ್ಲಿ ಹರಿದ ಜೀವ ಜಲ
ಜಿಲ್ಲೆಯಲ್ಲಿ ದಶಗಳ ನಂತರ ನದಿಗಳಿಲ್ಲಿ ನೀರು ಹರಿಯುತ್ತಿದ್ದೆ. ಪಾಪಾಗ್ನಿ, ಉತ್ತರ ಪೀನಾಕಿನಿ ಸೇರಿದಂತೆ ಹಲವು ನದಿಗಳಲ್ಲಿ ಕಳೆದ 10 ದಿನಗಳಿಂದ ಜೀವ ಜಲ ಹರಿಯುತ್ತಿರುವುದು ಜಿಲ್ಲೆಯ ಜನರನ್ನು ಪುಳಕಿತರನ್ನಾಗಿಸಿದೆ. ಜಿಲ್ಲೆಯ ಬಹುತೇಕ ನದಿಗಳು ಮಳೆಗಾಲದಲ್ಲಿ ಮಾತ್ರ ಹರಿಯುತ್ತಿದ್ದು, ನಿರೀಕ್ಷೆಗೂ ಮೀರಿ ಸುರಿದ ವರ್ಷಧಾರೆ ನೆರೆಯ ಆಂಧ್ರ ಪ್ರದೇಶಕ್ಕೆ ವರದಾನವಾಗಿದೆ ಎನ್ನಬಹುದು.
ತುಂಬಿ ಕೋಡಿ ಹರಿದ ಕೆರೆಗಳು
ಜಿಲ್ಲೆಯ ದೊಡ್ಡ ಕರೆಗಳಾದ ಗುಡಿಬಂಡೆ ಅಮಾನಿ ಬೈರಸಾಗರ ಕೆರೆ, ಶ್ರೀನಿವಾಸ ಸಾಗರ, ಕಂದವಾರ ಕೆರೆ, ರಂಗಧಾಮ ಕೆರೆ, ಲಕ್ಷ್ಮೀಸಾಗರ ಕೆರೆ, ಅಗ್ರಹಾರ ಕೆರೆ, ಜಕ್ಕಲ ಮಡುಗು ಜಲಾಶಯ, ಕನ್ನಂಪಲ್ಲಿ ಕೆರೆ, ಬಾಗೇಪಲ್ಲಿಯ ಚಿತ್ರಾವತಿ ಜಲಾಶಯ ಸೇರಿ ಸಾಕಷ್ಟು ಕೆರೆಗಳು ಭರ್ತಿಯಾಗಿ ಕೊಡಿ ಹರಿಯುತ್ತಿವೆ.
ಗ್ರಾಮಗಳಿಗೆ ಜಲ ದಿಗ್ಭಂಧನ
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯಾದ್ಯಂತ ಕೆರೆ ಕುಂಟೆ ನದಿಗಳು ತುಂಬಿ ತುಳುಕುತ್ತಿವೆ. ಹಲವಾರು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಪ್ರವಾಹ ಭೀತಿ ಎದುರಾಗಿದ್ದರೆ, ಹಲವು ಗ್ರಾಮಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ.
ಭಾರೀ ಪ್ರಮಾಣದಲ್ಲಿ ಬೆಳೆ ಹಾನಿ
ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್‌ಗಳಲ್ಲಿ ಕೊಟ್ಯಂತರ ರೂಪಾಯಿ ಮೌಲ್ಯದ ಬೆಳೆಗಳು ನಷ್ಟವಾಗಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುವಂತಾಗಿದೆ. ಮತ್ತೊಂದೆಡೆ ಸಾಕಷ್ಟು ಕೆರೆಗಳು ಕಟ್ಟೆ ಒಡೆದಿವೆ. ಹಲವು ಕೆರೆ ಕಟ್ಟೆಗಳಿಗೆ ಹಾನಿಯಾಗಿದೆ. ಆದರೆ ಕೆರೆಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು ಅಪಾಯವನ್ನು ಆಹ್ವಾನಿಸುವಂತಾಗಿದೆ.
ಸಹಾಯವಾಣಿ
ಜಿಲ್ಲಾಡಳಿತ ಈಗಾಗಲೇ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಅಲ್ಲದೆ ಪ್ರವಾಹದ ಭೀತಿಯಲ್ಲಿರುವ ಗ್ರಾಮಸ್ಥರ ನೆರವಿಗೆ 08156-277071 ಹಾಗೂ 277077 ಸಂಖ್ಯೆಯ ಸಹಾಯವಾಣಿ ಕೂಡ ಪ್ರಾರಂಭಿಸಿದೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊಯ್ಲಿಗೆ ಬಂದಿದ್ದ ಸಾವಿರಾರು ಹೆಕ್ಟೇರ್‌ಗಳ ಜೋಳ, ಭತ್ತ, ರಾಗಿ, ಅವರೆ ಬೆಳೆಗಳು ಕೊಚ್ಚಿಕೊಂಡು ಹೋಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದ್ದರೂ ದಶಕಗಳಿಂದ ಮಳೆಕಾಣದೆ ಬರುಡಾಗಿದ್ದ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜೀವ ಕಳೆ ಬಂದಿದ್ದು, ಅಂತರ್ ಜಲ ಮಟ್ಟ ಹೆಚ್ಚುತ್ತಿರುವುದು ಜಿಲ್ಲೆಯ ಜನರಲ್ಲಿ ಹರ್ಷತುಂಬಿದೆ.
ಕಳೆದ ಹಕವು ದಿನಗಳಿಂದ ಸುರಿದ ಭಾರಿ ಮಳೆಗೆ ಕೈಗೆ ಬಂದ ಬೆಳೆ ನಾಶವಾಗಿ ರೈತರು ಸಂಕಷ್ಟ ಸಿಲುಕಿದ್ದಾರೆ, ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ ಸಂಕಷ್ಟದಲ್ಲಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರಿ ಇದುವರೆಗೂ ರೈತರಿಗೆ ಪರಿಹಾರ ಘೋಷಣೆ ಮಾಡದಿರುವುದು ನೋವಿನ ಸಂಗತಿ. ಕೂಡಲೇ ರಾಜ್ಯ ಮತ್ತು ಕೇಂದ್ರ ಸರಕಾರಿ ಪರಿಹಾರ ಘೋಷಿಸಬೇಕು.
ಡಾ.ಎಂ.ವೀರಪ್ಪ ಮೊಯಿಲಿ, ಮಾಜಿ ಮುಖ್ಯಮಂತ್ರಿ