ರಾಜಕಾಲುವೆ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಚಿಕ್ಕಬಳ್ಳಾಪುರ ಡೀಸಿ
ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ಆರ್.ಲತಾ ಅವರು ಬುಧವಾರ ಸಂಜೆ ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಕೆರೆಯ ನೀರಿನ ಹೊರ ಹರಿವನ್ನು ಹಾಗೂ ಕಂದವಾರ ಕೆರೆಯಿಂದ ಅಮಾನಿ ಗೋಪಾಲಕೃಷ್ಣ ಕೆರೆಯನ್ನು ಸಂಪರ್ಕಿಸುವ ಒತ್ತುವರಿ ಹಾಗೂ ಮುಚ್ಚಿಹೊಗಿದ್ದ ರಾಜಕಾಲುವೆಯೊಂದರ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.
ಇದರಿಂದಾಗಿ ಕೆರೆಗೆ ಹರಿದು ಬರುತಿರುವ ಒಳಹರಿವಿನ ನೀರು ರಾಜಕಾಲುವೆ ತೆರವಾದರೆ ಸರಾಗವಾಗಿ ನೀರು ಮುಂದಿನ ಕೆರೆಗೆ ಹಾದು ಹೋಗಲಿದೆ ಮಾತ್ರವಲ್ಲ, ರೈತರ ಹಾಗೂ ವಸತಿ ಪ್ರದೇಶದ ಯಾರಿಗೂ ತೊಡಕು ಉಂಟಾಗದು.
ನಾನಾ ವರ್ಷಗಳಿಂದ ಕೆಲ ಬಲಾಢ್ಯರು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದೂ ಅಲ್ಲದೆ ನೀರು ಕೆರೆಯಿಂದ ಮುಂದೆ ಸಾಗಿ ಬಾರದಂತೆ ಅತಿಕ್ರಮ ಪ್ರವೇಶಿಸಿದ್ದರು. ಜಿಲ್ಲಾಧಿಕಾರಿ ಲತಾ ಅವರ ಕ್ರಮದಿಂದ ಈ ಭಾಗದ ರೈತರು ಹಾಗೂ ವಸತಿ ಪ್ರದೇಶದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಲಿದೆ.
ಇದೇ ಪರಿಯಾಗಿ ನಗರದ ಇನ್ನಿತರ ಕಡೆಗಳ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಿದಲ್ಲಿ ನಗರದ ಯಾವುದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗದೆ ರಾಜಕಾಲುವೆಗಳ ಮೂಲಕ ಹರಿದು ಹೊಗಲು ಸಾಧ್ಯವಾಗಲಿದೆ. ಹೀಗಾಗಿ ನಗರದ ಲಕ್ಕಮ್ಮ ದೊಡ್ಡಮುನಿಯಪ್ಪ ಕಲ್ಯಾಣ ಮಂಟಪದ ಸನಿಹ ಹೋಗಿರುವ ರಾಜಕಾಲುವೆ, ವಾಪಸಂದ್ರ ಬಡಾವಣೆಯಲ್ಲಿ ಹಾದು ಹೊಗಿರುವ ಕಾಲುವೆ ಸೇರಿದಂತೆ ಇತರೆಡೆಯ ರಾಜಕಾಲುವೆಗಳನ್ನು ಮುಕ್ತಿಗೊಳಿಸಿಕೊಡಬೇಕೆಂದು ನಗರವಾಸಿಗಳು ಆಗ್ರಹಿಸಿದ್ದಾರೆ.
ನಗರದ ಒತ್ತುವರಿ ತೆರವು ರಾಜಕಾಲುವೆ ಜಿಲ್ಲಾಧಿಕಾರಿ ವೀಕ್ಷಣೆಯ ಈ ಸಂದರ್ಭದಲ್ಲಿ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಪೌರಾಯುಕ್ತರಾದ ಮಹಂತೇಶ್, ಅಭಿಯಂತರರಾದ ರೂಪಾ, ಶ್ರೀನಿವಾಸರೆಡ್ಡಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.