ಬಂಗಾಳವೆಂಬ ಇನ್ನೊಂದು ಇಂಡಿಯಾ; ಇದು ಟಾಂಗಾ ವಾಲಾ ಒಬ್ಬರ ತಲ್ಲಣ ಕಥೆ
ಒಂದು ಸಣ್ಣ ಸೂಟ್‌ಕೇಸ್ ಹಿಡಿದುಕೊಂಡು ಆಗತಾನೆ ಕೋಲ್ಕತಾದ ನ್ಯೂ ಮಾರ್ಕೆಟ್ ರಸ್ತೆಯಲ್ಲಿ ಬಸ್‌ನಿಂದ ಇಳಿದಿದ್ದೆ. ಬೆಂಗಳೂರಿನಿಂದ ಸುಮಾರು ಮೂರು ಗಂಟೆಗಳ ವಿಮಾನಯಾನದ ನಂತರ ಕೋಲ್ಕತಾದ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಯಾವುದೋ ಬಸ್ ಹತ್ತಿ ನಾನು ತಲುಪಬೇಕಿದ್ದ ನ್ಯೂ ಮಾರ್ಕೆಟ್ ಬಳಿ ಆಗಷ್ಟೇ ಇಳಿದಿದ್ದೆ.
ಪ್ರಯಾಣ ಪ್ರಯಾಸವಾಗಿತ್ತು. ಆಯಾಸವೂ ಆಗಿತ್ತು. ನಾನು ಮುಂದೆ ಸಾಗಬೇಕಾದ ರಸ್ತೆಯ ಹುಡುಕಾಟದಲ್ಲಿ ಕತ್ತೆತ್ತಿ ನನ್ನ ಕಣ್ಣುಗಳನ್ನು ಸಾಗಬೇಕಾದ ದಿಕ್ಕಿನತ್ತ ಹೊರಳಿಸುತ್ತಿರುವಾಗಲೇ ಇಳಿವಯಸ್ಸಿನ ಮುದುಕನೊಬ್ಬ ‘ನೊಮೊಷ್ಕಾರ್ ಬಾಬು’ ಎಂದದ್ದು ತಟ್ಟನೆ ಕೇಳಿಸಿ ರಸ್ತೆಯ ಹುಡುಕಾಟದಲ್ಲಿದ್ದ ನನ್ನ ಗಮನ ಆತನ ಮೇಲೆ ಬಿದ್ದಿತ್ತು.
ಸುಮಾರು ೭೦ರ ಆಸುಪಾಸಿನಲ್ಲಿ ಮಾಗುತ್ತಿದ್ದ ಸಣಕಲು ದೇಹವದು. ಎಣಿಸಲೂ ಸಾಧ್ಯವಾಗದಷ್ಟು ತೂತುಗಳ ತುಂಬು ತೋಳುಗಳ ಒಂದು ಬನಿಯನ್, ಮೊಣಕಾಲನ್ನು ಒಂದು ಚೂರು ಕೆಳಗೆ ದಾಟಿಸಿಕೊಂಡು ಕಟ್ಟಿದ್ದ ಪಂಚೆ, ಚಪ್ಪಲಿ ಇಲ್ಲದ ಕಾಲು, ಬಿಳಿಯ ಗಡ್ಡ, ಒಣಗಿದ ದೇಹ, ಬಾಗಿದ ಬೆನ್ನು, ಆಸೆ ಭರಿತ ಕಣ್ಣುಗಳು ನನ್ನ ಮುಂದೆ ಜೀತದಾಳಿನಂತೆ ಕೈ ಕಟ್ಟಿ ನಿಂತ ಹಿರಿಯ ಜೀವ ಕಂಡು ಮಹಾನಗರಿ ಕಲ್ಕತ್ತಾ ಪುರಿಯಲ್ಲಿ ನನಗೆ ಮಾತನಾಡಿಸುವವ ಇವ ಯಾರೆಂದು ಕ್ಷಣಕಾಲ ಗಾಬರಿಯಾಗಿ ಯೋಚಿಸಲು ಪ್ರಾರಂಭಿಸಿದ್ದೆ.
ನನಗೆ ಬರುತ್ತಿದ್ದ ಒಂದೆರೆಡು ಬಂಗಾಳಿ ಶಬ್ದಗಳನ್ನು ಬಳಸಿಕೊಂಡು ‘ಕೀ ಭೋಲೋ’ ಎಂದೆ. ಆಗ ಆತನು ಕೊಟ್ಟ ಉತ್ತರ ನನಗೆ ಅರ್ಥವಾಗಲಿಲ್ಲ. ಆತನ ಮಾತು ನನಗೆ ಅರ್ಥವಾಗಿತ್ತಿಲ್ಲ ಎಂದುಕೊಂಡವನೇ ತುಸು ದೂರದಲ್ಲಿ ನಿಲ್ಲಿಸಿದ್ದ ತನ್ನ ಟಾಂಗಾವನ್ನು ಕ್ಷಣ ಮಾತ್ರದಲ್ಲಿ ಎಳೆದು ತಂದು ನನ್ನ ಮುಂದೆ ನಿಲ್ಲಿಸಿ ಎಲ್ಲಿಗೆ ಹೋಗಬೇಕು ಎಂದ. ಆ ರಿಕ್ಷಾವನ್ನೇ ದಿಟ್ಟಿಸಿ ನೋಡತೊಡಗಿದೆ. ಮತ್ತೆ ಆಸೆಬುರಕ ಕಂಗಳಿಂದ ದಿಟ್ಟಿಸಿ ನೋಡುತ್ತಲೇ ಗೋಗೆರೆದ ಆ ವ್ಯಕ್ತಿ ನನ್ನ ಸೂಟ್ ಕೇಸ್ ತೆಗೆದುಕೊಂಡು ಟಾಂಗಾದಲ್ಲಿ ಇರಿಸಿಕೊಳ್ಳಲು ಮುಂದಾದ.
ಆ ಕ್ಷಣದಲ್ಲಿ ನನಗೆ ಮಾತುಗಳು ಹೊರಡಲಿಲ್ಲ, ಕೇವಲ ಸಂಜ್ಞೆಗಳಿಂದಲೇ ಬೇಡ ಎಂದೆ. ಕೇವಲ ಹತ್ತು ರೂಪಾಯಿ ಕೊಡಿ, ನಿಮಗೆ ಬೇಕಾದ ಜಾಗವನ್ನು ತಲುಪಿಸುತ್ತೇನೆ. ದಯವಿಟ್ಟು ಹತ್ತಿ ಎಂದು ಗೋಗೆರೆಯಲು ಮುಂದಾದ. ಸ್ವಲ್ಪ ಸಾವರಿಸಿಕೊಂಡು ನನಗೆ ಬೆಂಗಾಳಿ ಬರುವುದಿಲ್ಲವೆಂದೂ, ಹಿಂದಿ ಮಾತನಾಡಬಲ್ಲೆ ಎಂದು ತಿಳಿಸಿದಾಗ ಮುಗಳ್ನಗೆ ನಕ್ಕ ಆ ಮುದುಕ ಸರ್ ಹತ್ತು ರೂಪಾಯಿ ಕೊಡಿ ನೀವು ಹೋಗಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ. ಮಧ್ಯಾಹ್ನದಿಂದಲೂ ಒಂದು ಗಿರಾಕಿಯೂ ಹತ್ತಿಲ್ಲ, ದಯವಿಟ್ಟು ಇಲ್ಲ ಎನ್ನಬೇಡಿ ಎನ್ನುತ್ತಲೇ ಇದ್ದ.
ನಾನು ಹೋಗಬೇಕಾದ ದೂರ ತುಸು ಹೆಚ್ಚಾಗಿಯೇ ಇತ್ತು. ಸುಮಾರು ಒಂದೂವರೆ ಫರ್ಲಾಂಗು. ಸಂಜೆಯ ಸಮಯ ಟ್ರಾಫಿಕ್ ಬೇರೆ ಅಧಿಕವಾಗಿತ್ತು. ಅದನ್ನು ಹೇಳುತ್ತಾ ನಯವಾಗಿಯೇ ನಿರಾಕರಿಸಲುತೊಡಗಿದೆ. ಪರವಾಗಿಲ್ಲ ಸರ್ ಜೀವನಪೂರ್ತಿ ಈ ರಸ್ತೆಗಳಲ್ಲಿ ಕಳೆದಿದ್ದೇನೆ. ನೀವು ಆರಾಮವಾಗಿ ಕುಳಿತುಕೊಳ್ಳಿ. ಒಂದೂವರೆ ಫರ್ಲಾಂಗು ಆದರೂ ಚಿಂತೆಯಿಲ್ಲ, ಹತ್ತು ರೂಪಾಯಿ ಕೊಟ್ಟರೆ ನಡೆಯುತ್ತದೆ. ದಯವಿಟ್ಟು ಖಾಲಿ ಮಾಡಬೇಡಿ ಎಂದು ದೈನ್ಯತೆಯಿಂದಲೇ ಅಂಗಲಾಚತೊಡಗಿದ.
ಕೈಯ್ಯಲ್ಲಿದ್ದ ಸೂಟ್‌ಕೇಸ್ ನೆಲದ ಮೇಲಿಟ್ಟು ಆ ಹಿರಿಯ ಜೀವಕ್ಕೆ ಕೈ ಕುಲುಕಿದೆ. ಆತನ ಒಂದು ಕೈಯ್ಯನ್ನು ನನ್ನ ಎರಡೂ ಕೈಗಳಿಂದ ಹಿಡಿದುಕೊಂಡು ಒಂದು ಸಣ್ಣ ಮುಗಳ್ನಗೆ ಬೀರಿದೆ. ರಸ್ತೆಯಿಂದ ಸ್ವಲ್ಪ ಪಕ್ಕಕೆಕ್ಕ ಕರೆದುಕೊಂಡು ಬಂದು ಮಾತಿಗೆ ಇಳಿದೆ. ನಿಮಗೆ ವಯಸ್ಸಾಗಿದೆ. ತಂದೆಯ ವಯಸ್ಸಿಗೆ ಸಮವಾಗಿ ಕಾಣುತ್ತಿದ್ದೀರಿ. ಚಪ್ಪಲಿ ಇಲ್ಲದ ಕಾಲಿನಲ್ಲಿ, ಬೇಯುತ್ತಿರುವ ಡಾಂಬರು ರಸ್ತೆಯಲ್ಲಿ, ಟಾಂಗಾದಲ್ಲಿ ನನ್ನನ್ನು ಕೂರಿಸಿಕೊಂಡು ಕೇವಲ ರಟ್ಟೆಗಳ ಬಲದಿಂದ ನನ್ನ ಸುಮಾರು ಒಂದೂವರೆ ಫರ್ಲಾಂಗು ದೂರ ಎಳೆದುಕೊಂಡು ಹೋಗುವುದಾದರೂ ಹೇಗೆ, ಮಾಗಿದ ವಯಸ್ಸಿನಲ್ಲಿ ನೀವು ನನ್ನನ್ನು ಕೋರಿಸಿಕೊಂಡು ಟಾಂಗಾ ಎಲೆಯುತ್ತಾ ಹೋಗಬೇಕಾದರೆ ನಿಮ್ಮನ್ನು ನೋಡಿಕೊಂಡು ನಾನು ಇದರಲ್ಲಿ ಕೂರುವುದಾದರೂ ಹೇಗೆ? ಇದು ನನ್ನಿಂದ ಒಲ್ಲದ ಕಾರ್ಯ, ದಯವಿಟ್ಟು ಕ್ಷಮಿಸಿ ಎಂದೆ.
ಹಿರಿಯರಾದ್ದರಿಂದ ನನ್ನ ಟಾಂಗಾದಲ್ಲಿ ಕೂರುವುದಿಲ್ಲ ಎಂದು ತಾವು ದೂರ ಹೋದರೆ ನನ್ನ ಈ ರಾತ್ರಿಯ ಊಟ ನೀವು ಕಸಿದುಕೊಂಡಂತೆ ಎಂದು ನೋವಿನಿಂದಲೇ ಹೇಳತೊಡಗಿದ. ಸಂಜೆಯಾಗಿದೆ, ಗಿರಾಕಿಗಳೂ ಇಲ್ಲ, ದಯವಿಟ್ಟು ಹತ್ತಿ ಎನ್ನುತ್ತಲೇ ಇದ್ದ. ಆತನ ದೈನ್ಯತೆ ನನ್ನ ಮನಸ್ಸಿನಲ್ಲಿ ನಾನಾ ಆಲೋಚನೆಗಳು ಹುಟ್ಟು ಹಾಕತೊಡಗಿದವು. ಆದರೆ ಎಲ್ಲವೂ ಯೋಚನೆ ಮಾಡಿಕೊಂಡು, ಸಮಯ ಕಳೆಯಲು ಅಸಾಧ್ಯ. ನಾನು ಇನ್ನೂ ಮುಂದೆ ಸಾಗಬೇಕಿತ್ತು. ಥಟ್ಟನೆ ಐವತ್ತು ರೂಪಾಯಿ ತೆಗೆದು ಆತನ ಕೈಗಿತ್ತು, ದಯವಿಟ್ಟು ಕ್ಷಮಿಸಿ ನಾನು ಇನ್ನೂ ಅಷ್ಟು ಕ್ರೂರಿಯಾಗಿಲ್ಲ, ಮನುಷ್ಯನ ಹೆಗಲ ಮೇಲೆ ಸವಾರಿ ಮಾಡುವಷ್ಟು. ಬಡ ಮದುಕನ ರಟ್ಟೆಗಳ ಬಲ ನುಂಗುವಷ್ಟು. ಮಾಗಿದ ಮನುಷ್ಯ ಜೀವದ ರಕ್ತ ಹಾಗೂ ಬೆವರಿನ ರುಚಿ ನೋಡುವಷ್ಟು.
ದಯವಿಟ್ಟು ಈ ಹಣದಲ್ಲಿ ಇಂದು ಊಟ ಮಾಡಿ. ನಿಮಗೆ ಒಳಿತಾಗಲಿ ಎಂದು ಹೇಳಿದಾಗ ಆತನಿಗೆ ಇದರಿಂದ ಏನಾಯಿತೋ ತಿಳಿಯದು, ಆ ಮಂದ ಬೆಳಕಿನಲ್ಲಿ ಕೆನ್ನೆಗಳ ಮೇಲೆ ಜಾರಿದ ಕಣ್ಣೀರ ಹನಿಗಳು ಮಾತ್ರ ಕ್ಷಣ ಹೊಳೆದು ಮಾಯವಾದವು. ನೋಡನೋಡುತ್ತಿದ್ದಂತೆ ಜನಸಂದಣಿಯಲ್ಲಿ, ವಾಹನಗಳ ಓಡಾಟದಲ್ಲಿ ಆ ಟಾಂಗಾ ಮಾಯವಾಯಿತು.
ನಿಜ, ಇಂದಿಗೂ ಕೋಲ್ಕತಾ ಮಹಾನಗರದಲ್ಲಿ ಸಾವಿರಾರು ಮಂದಿ ಟಾಂಗಾ ಎಳೆದುಕೊಂಡು ಅತ್ಯಂತ ಸಂಕಷ್ಟದ ಜೀವನವನ್ನು ಸಾಗಿಸುತ್ತಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಕಮ್ಯುನಿಸ್ಟ್ ಆಳ್ವಿಕೆಯಿದ್ದ ಬಡವರ ರಾಜ್ಯವೆಂದೇ ಗುರುತಿಸಲ್ಪಟ್ಟಿದ್ದ ಕೋಲ್ಕತಾದಲ್ಲಿ ಇಂದಿಗೂ ಮನುಷ್ಯರನ್ನು ಕೂರಿಸಿಕೊಂಡು ಎಳೆಯುವ ರಿಕ್ಷಾಗಳು ಮರೆಯಾಗಿಲ್ಲ. ಮನುಷ್ಯನ ಹೆಗಲ ಮೇಲೆ ಸವಾರಿ ಮಾಡುವುದು ನಿಂತಿಲ್ಲ. ಬಡ ಕಾರ್ಮಿಕರ ಬೆವರ ಹನಿಗಳಿಗೆ ಬೆಲೆಯಿಲ್ಲ, ರಕ್ತ ಹರಿಯುವುದು ಬಿಟ್ಟಿಲ್ಲ, ಬಾಗಿದ ಬೆನ್ನಿನ ಮೇಲೆ ಸವಾರಿಯ ಬರೆಗಳು, ಬಡತನದ ಬಾಸುಂಡೆಗಳು ನಿಂತಿಲ್ಲ.
‘ತಾನಾ ರಿಕ್ಷಾ’ ಎಂದು ಬೆಂಗಾಳಿ ಭಾಷೆಯಲ್ಲಿ ಕರೆಯಲ್ಪಡುವ ಈ ರಿಕ್ಷಾಗಳಲ್ಲಿ ಮನುಷ್ಯರನ್ನು ಕೂರಿಸಿಕೊಂಡು ಓರ್ವ ವ್ಯಕ್ತಿ ಎಳೆದುಕೊಂಡು ಹೋಗಬೇಕು ಇದು ಕೇವಲ ಮನುಷ್ಯನ ಶ್ರಮದಿಂದ ಮಾತ್ರ ನಡೆಯುವ ಸಾಧನ. ಅದಕ್ಕಾಗಿಯೇ ಇದು ಮಹಾನಗರದಲ್ಲಿ ಇಂದಿಗೂ ಅಗ್ಗದ ಸಾಧನ.
ಸುಮಾರು ೧೮ರ ಶತಮಾನದಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿಯೇ ಈ ತಾನಾ ರಿಕ್ಷಾಗಳು ಪ್ರಾರಂಭವಾಗಿರುವ ಬಗ್ಗೆ ಬೆಂಗಾಳಿ ಗೆಜಿಟಿಯರ್‌ಗಳು ಉಲ್ಲೇಖಿಸುತ್ತವೆ. ಶತಮಾನಗಳ ಹಿಂದೆ ಈ ರಿಕ್ಷಾಗಳು ಬಲಿತ ಬೆಂಗಾಳಿ ಬಾಬುಗಳ ಪ್ರತಿಷ್ಠೆಯ ಸಾಧನಗಳಾಗಿದ್ದವು. ಇವುಗಳಲ್ಲಿ ಸಂಚರಿಸುವುದು ಬಾಬುಗಳ ಘನತೆಯನ್ನು ಹೆಚ್ಚುವಂತೆ ಮಾಡಿದ್ದವು. ಸಂಜೆಯಾಗುತ್ತಲೇ ಸಾಹುಕಾರ ಬಾಬುಗಳು ಧೋತಿ, ಜುಬ್ಬಾತೊಟ್ಟು, ಕಲ್ಕತ್ತಾ ಪಾನ್ ಅಗೆಯುತ್ತಾ, ತುಟಿಗಳ ಮೇಲೆ ಎರಡು ಬೆರಳುಗಳನ್ನು ಇರಿಸಿಕೊಂಡು ಅವುಗಳ ಸಂದಿಯಿಂದ ರಸ್ತೆಯ ಪಕ್ಕಕ್ಕೆ ಎಂಜಲು ಉಗಿಯುತ್ತಾ, ಮೀಸೆಯನ್ನು ನೀವುತ್ತಾ, ಮದವೇರಿದ ಮೊಖ ಹೊತ್ತು ಮುಜರಾಗಳಿಗೆ, ಘರವಾಲಿಗಳ ಘರ್‌ಗಳಿಗೆ ತೆರಳುವುದು ಒಂದು ಶೋಕಿಯಾಗಿತ್ತು, ಒಂದು ಪ್ರತಿಷ್ಠೆಯ ವಿಷಯವೂ ಆಗಿತ್ತು.
ಶರತ್ ಚಂದ್ರ ಚಟ್ಟೋಪಾಧ್ಯಾಯರವರು ೧೯೧೭ರಲ್ಲಿ ಬೆಂಗಾಳಿಯಲ್ಲಿ ಬರೆದ ʼದೇವದಾಸ್ʼ ಕಾದಂಬರಿಯಲ್ಲಿ ಕಾಣಸಿಗುವ ಕಥಾನಾಯಕ ದೇವದಾಸ್ ಮತ್ತು ಇದೇ ತಾನಾ ರಿಕ್ಷಾವಾಲಾಗಳ ಸಂಬಂಧ, ಆ ತಾನಾಗಳಲ್ಲಿ ದೇವದಾಸ್ ಕೂತು ಪಾರು ಎಂಬ ಮುಜರಾ ಹೆಂಗಸೊಬ್ಬಳ ಸಹವಾಸಕ್ಕೆ ಬರುವ ಸನ್ನಿವೇಶ ಇಂದಿಗೂ ಆ ಕೃತಿ ಕಣ್ಣಿಗೆ ಕಟ್ಟುತ್ತದೆ.
ಈ ತಾನಾವಾಲಾ ರಿಕ್ಷಾ ಹಾಗೂ ಅವರ ಬದುಕುಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ಹಿಂದಿನಿಂದಲೂ ಬಹಳಷ್ಟು ಮಂದಿ ದೇಶ-ವಿದೇಶಗಳ ಪ್ರಖ್ಯಾತ ಬರಹಗಾರರು ಮಾಡಿದ್ದಾರೆ. ೧೯೫೩ರರಲ್ಲಿ ಬಿಮಲ್ ರಾಯ್‌ರವರು ‘ದೋ ಬಿಗ್ಹಾ ಝಮೀನ್ ಕೃತಿಯಲ್ಲಿ ಇದೇ ತಾನಾವಾಲಾಗಳ ಬದುಕುಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ.
ವಿಶ್ವ ಪ್ರಸಿದ್ಧ ಬರಹಗಾರ ಡೋಮಿನಿಕ್ ಲೆಪಿರ‍್ಸ್ರವರು ೧೯೮೫ರಲ್ಲಿ ‘ಸಿಟಿ ಆಫ್ ಜಾಯ್’ ಎಂಬ ಕಾದಂಬರಿಯನ್ನು ಬರೆದಿದ್ದು ಅದರಲ್ಲಿಯೂ ಈ ತಾನಾ ರಿಕ್ಷಾಗಳ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ. ಇದರೊಂದಿಗೆ ನೂರಾರು ಕಥೆ ಕಾದಂಬರಿಗಳಲ್ಲಿ ಇದೇ ತಾನಾಗಳ ಬದುಕುಗಳು ಅನಾವರಣವಾಗಿವೆ. ಲೇಖಕ, ಕಲಾವಿದ, ಸಾಹಿತಿ, ಕವಿಗಳಿಗೆ ಒಂದೊಂದು ದಿಕ್ಕಿಗೂ ಒಂದೊಂದು ಚಿಂತನೆಯನ್ನು, ಆಲೋಚನೆಗಳನ್ನು, ಭಾವನೆಗಳನ್ನು, ಪ್ರೇರಣೆಗಳನ್ನು ಒದಗಿಸಿದ ಈ ತಾನಾಗಳು ಇಂದಿಗೂ ಅದೇ ಶತಮಾನಗಳ ಹಿಂದಿನ ಏಕತಾನತೆಯನ್ನೇ ಹೊಂದಿವೆ.
ಯುವ ಜನತೆ ಅಲ್ಲದಿದ್ದರೂ ಹಿಂದಿನ ಮನಸ್ಥಿತಿಯ ಅದೇ ಬಲಿತ ಬಂಗಾಳಿ ಬಾಬುಗಳು ಡೊಳ್ಳು ಹೊಟ್ಟೆಗಳನ್ನು ಹಾಕಿಕೊಂಡು, ಪಾನ್ ಅಗೆಯುತ್ತಾ, ಧೋತಿಯ ಬದಲಿಗೆ ಪ್ಯಾಂಟ್ ಹಾಕಿಕೊಂಡು ಜೊತೆಗೆ ಹೆಂಡತಿಯನ್ನೂ ಕರೆದುಕೊಂಡು ಸಂಜೆಯ ಹೊತ್ತು ಸವಾರಿ ಹೊರಡುವುದೂ ನಡೆಯುತ್ತಿದೆ. ನಾಗರೀಕ ಸಮಾಜ ಗಹಗಹಿಸಿ ನಗುತ್ತಿದೆ. ಮಾನವ ಹಕ್ಕುಗಳು ಕಿರಿದಾದ ಡಾಂಬರು ರಸ್ತೆಗಳಲ್ಲಿ ತಾನಾಗಳ ಬೆವರ ಹನಿಗಳ ಜೊತೆಗೆ ಕರಗಿ ಹೋಗುತ್ತಿವೆ. ನಿಜವಾಗಲೂ ಜಗತ್ತಿನ ಶ್ರಮಿಕ ವರ್ಗದ ಮೇಲೆ ಬಲಿತ ಸಮಾಜ ನಡೆಸುತ್ತಿರುವ ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದ ಅದೇ ಗಡ್ಡಧಾರಿ ಕಾರ್ಲ್ ಮಾರ್ಕ್ಸ್ ತಲೆ ತಗ್ಗಿಸಿಕೊಂಡು ಮುಗಮ್ಮನೆ ಮೌನವಾಗಿ ಕೋಲ್ಕತಾದ ರಸ್ತೆ ಬದಿಯಲ್ಲಿ ನೇತು ಹಾಕಿದ ಕೆಂಬಾವುಟದ ಕೆಳಗೆ ಕತ್ತಲಿನಲ್ಲಿ ಏಕಾಂಗಿಯಾಗಿ ನಿಂತು ಬಿಕ್ಕಿಬಿಕ್ಕಿ ಅಳುತ್ತಿದ್ದಾನೆ.
ಡಾ.ಕೆ.ಎಂ.ನಯಾಜ್ ಅಹ್ಮದ್
- ಬಾಗೇಪಲ್ಲಿ ಪಟ್ಟಣದ ಸರಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ. ಬರಹಗಾರ, ಸಂಶೋಧಕ ಹಾಗೂ ಜಾನಪದ ಸಾಹಿತ್ಯದ ಆರಾಧಕ. ನೇರ ನಿಷ್ಠುರ ಬರವಣಿಗೆಯ ಜತೆಗೆ ಬಂಡಾಯ ಪ್ರವೃತ್ತಿಯ ಬರವಣಿಗೆ ಇವರ ಶಕ್ತಿ.