ತಂದೆ, ತಾಯಿ ಪಕ್ಕದಲ್ಲೇ ಚಿರಸ್ಥಾಯಿಯಾದ ಪುನೀತ್
ಬೆಂಗಳೂರು: ಸಕಲ ಸರ್ಕಾರಿ ಗೌರವದೊಂದಿಗೆ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಭಾನುವಾರ ನಗರದ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು. ಪುನೀತ್ ಅವರು ತಂದೆ, ತಾಯಿ ಪಕ್ಕದಲ್ಲೇ ಚಿರಸ್ಥಾಯಿಯಾಗಿದ್ದಾರೆ.
ಪುನೀತ್ ಅವರ ಅಂತ್ಯ ಸಂಸ್ಕಾರವನ್ನು ಈಡಿಗ ಸಂಪ್ರದಾಯದಂತೆ ನೆರವೇರಿಸಲಾಯಿತು. ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ಅವರು ಪುನೀತ್ ರಾಜ್ ಕುಮಾರ್ ಅವರ ಅಂತಿಮ ವಿಧಿವಿಧಾನಗಳನ್ನು ನಡೆಸಿಕೊಟ್ಟರು.
ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ, ಸಹೋದರರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಚಿತ್ರರಂಗ ಹಾಗೂ ರಾಜಕೀಯದ ಅನೇಕ ಗಣ್ಯರು ಭಾಗಿ ಆಗಿದ್ದರು. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಪ್ಪು ಕುಟುಂಬಸ್ಥರು 5ನೇ ದಿನ ಹಾಲು-ತುಪ್ಪ ಬಿಡುವ ಕಾರ್ಯವನ್ನು ನೆರವೇರಿಸಲು ತೀರ್ಮಾನಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಹೋದ್ಯೋಗಿಗಳಾದ ಕೆ ಗೋಪಾಲಯ್ಯ, ಆರ್ ಅಶೋಕ್, ಮುನಿರತ್ನ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ, ನಟರಾದ ವಿ. ರವಿಚಂದ್ರನ್, ಶಶಿಕುಮಾರ್, ಉಪೇಂದ್ರ, ಜಗ್ಗೇಶ್, ಸುದೀಪ್, ದುನಿಯಾ ವಿಜಿ, ಗಣೇಶ್, ವಿಜಯ ರಾಘವೇಂದ್ರ, ಶ್ರೀ ಮುರಳಿ, ಸಾಧು ಕೋಕಿಲ, ಉಮಾಶ್ರೀ, ತಾರಾ ಅನುರಾಧಾ, ಶೃತಿ, ರಶ್ಮಿಕಾ ಮಂದಣ್ಣ, ರಚಿತಾ ರಾಮ್, ಚಿತ್ರೋದ್ಯಮದ ಗಣ್ಯರಾದ ಸಾ ರಾ ಗೋವಿಂದು, ರಾಕ್ ಲೈನ್ ವೆಂಕಟೇಶ್, ಅವರುಗಳು ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರದ ಅಂತಿಮ ಕ್ಷಣದಲ್ಲಿ ಇದ್ದರು.
ಅಪಾರ ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಮುಂಭಾಗ ಜಮಾಯಿಸಿದ್ದರು. ಕಂಠೀರವ ಸ್ಟುಡಿಯೋ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಕಂಠೀರವ ಸ್ಟುಡಿಯೋ ಒಳಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.
ಭದ್ರತಾ ಕಾರಣಗಳು ಹಿನ್ನೆಲೆಯಲ್ಲಿ ಕುಟುಂಬಸ್ಥರ ಸಹಮತಿ ಪಡೆದು ಪ್ರಕಟಿಸಿದ ಸಮಯಕ್ಕೆ ಮೊದಲೇ ಶುಕ್ರವಾರ ಹಠಾತ್ ನಿಧನರಾದ ಈ ಯುವ ನಟನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮೊದಲು ಗಣ್ಯಾತಿ ಗಣ್ಯರು ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರದ ಮೇಲೆ ಪುಷ್ಪ ಗುಚ್ಛ ಅರ್ಪಿಸಿದ ನಂತರ ಪೊಲೀಸ್ ವಾದ್ಯಗೋಷ್ಠಿಯಿಂದ ರಾಷ್ಟ್ರ ಗೀತೆ ಮೊಳಗಿತು.
ಅಲ್ಲದೆ, ಅದೇ ಸಂದರ್ಭದಲ್ಲಿ ಪೊಲೀಸರು ಮೂರು ಬಾರಿ ಕುಶಾಲ ತೋಪು ಸಿಡಿಸಿದರು. ತದ ನಂತರ, ಎರಡು ನಿಮಿಷಗಳ ಮೌನ ಆಚರಿಸಲಾಯಿತು. ಇದಾದ ಕೂಡಲೇ, ಪುನೀತ್ ರಾಜಕುಮಾರ್ ಅವರ ದೇಹದ ಮೇಲೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಹಸ್ತಾಂತರಿಸಿದರು.