ಇಂದು ಕನ್ನಡ ರಾಜ್ಯೋತ್ಸವ
ಈ ಬಾರಿ ಕರ್ನಾಟಕ ರಾಜ್ಯೋತ್ಸವವು ಯಾವುದೇ ಅಬ್ಬರವಿಲ್ಲದೆ ಸರಳವಾಗಿ ನಡೆಸಲಾಗುತ್ತದೆ. ಕಾರಣ ಕನ್ನಡಿಗರ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಆಕಸ್ಮಿಕ ನಿಧನ ಇಡೀ ನಾಡನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.
ನಾಡು–ನುಡಿಯ ಸ್ಮರಣೆ ಮಾಡಿಕೊಳ್ಳುವುದರೊಂದಿಗೆ ಕನ್ನಡ ನಾಡು-ನುಡಿಯನ್ನು ಇನ್ನಷ್ಟು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗೆ ಹೇಗೆ, ನಾಡು ಎದುರಿಸುತ್ತಿರುವ ಸಮಸ್ಯೆಗಳು ಯಾವುವು, ಕನ್ನಡಿಗರು ಮಾಡಬೇಕಾದುದೇನು ಮುಂತಾದ ಹತ್ತು ಹಲವು ಸಂಗತಿಗಳ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆಗಳು ನಡೆಯಬೇಕಾದ ಸಂದರ್ಭ ಇದು.
ಪ್ರಸ್ತುತ ಸಂದರ್ಭದಲ್ಲಿ ರಾಜ್ಯೋತ್ಸವವೆನ್ನುವುದು ಒಂದು ವಾರ್ಷಿಕ ಜಾತ್ರೆ ಆಗಿರುವುದು ವಿಪರ್ಯಾಸ. ನವೆಂಬರ್ ತಿಂಗಳು ಮುಗಿದ ಬಳಿಕ ಕನ್ನಡ- ನಾಡು ನುಡಿಯ ಕುರಿತು ನಾವ್ಯಾರೂ ತಲೆಕೆಡಿಸಿಕೊಳ್ಳಲು ಹೋಗದಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಬರೀ ನವೆಂಬರ್ ತಿಂಗಳಲ್ಲಿ ಮಾತ್ರ ರಾಜ್ಯೋತ್ಸವ ನೆನಪು ಮಾಡಿಕೊಳ್ಳುವುದು ಕನ್ನಡ ನಾಡು- ನುಡಿ ಕುರಿತ ಎಚ್ಚರ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಅದು ವರ್ಷ ಪೂರ್ತಿ ಎಚ್ಚರವಾಗಿರಲಿ. ಕನ್ನಡ ಕುರಿತ ಕಾಳಜಿ, ಕಳವಳ ಹೀಗೆ ನಿರಂತರವಾಗಿ ನಮ್ಮೆದೆಯೊಳಗಿದ್ದರೆ ನಮ್ಮ ನಾಡು- ನುಡಿಗೆ ದೈನೇಸಿ ಸ್ಥಿತಿ ಒದಗುವ ಸಾಧ್ಯತೆ ಖಂಡಿತಾ ಬರೋಲ್ಲ.
ಕನ್ನಡದ ಅಳಿವಿಗೆ , ಕನ್ನಡ ಮೂಲೆಗುಂಪಾಗುತ್ತಿರುವುದಕ್ಕೆ ಕನ್ನಡಿಗರೇ ಕಾರಣ. ನಾವು ಮಾತ್ರ ಸುಮ್ಮಸುಮ್ಮನೆ ಅನ್ಯರನ್ನು ನಿಂದಿಸುತ್ತಲೇ ರಾಜ್ಯೋತ್ಸವವನ್ನು ಆಚರಿಸುತ್ತಿರುತ್ತೇವೆ. ಮುಕ್ಕೋಟಿ ಕನ್ನಡಿಗರೆಂದು ಹೇಳಿಕೊಳ್ಳುವುದು ವಾಡಿಕೆ. ಈಗ ಆ ಸಂಖ್ಯೆ ನಾಲ್ಕು ಕೋಟಿ ದಾಟಿ, ಏಳು ಕೋಟಿಯಾಗಿದೆ. ಆದರೆ ಈ ಏಳು ಕೋಟಿ ಜನರು ಪ್ರಾಮಾಣಿಕವಾಗಿ ಕನ್ನಡದ ಬಗ್ಗೆ ಕಾಳಜಿ ಹೊಂದಿದ್ದಾರೆಯೆ? ಏಳು ಕೋಟಿ ಎನ್ನುವುದು ಸಣ್ಣ ಸಂಖ್ಯೆಯೇನಲ್ಲ. ಇವರಿಷ್ಟೂ ಜನ ಮನಸ್ಸು ಮಾಡಿದರೆ ಕನ್ನಡ ಭಾಷೆಯ ಅಭಿವೃದ್ಧಿ, ಕನ್ನಡ ಪುಸ್ತಕಗಳ ಮಾರಾಟದ ಭರಾಟೆಗೆ ವೇಗೋತ್ಕರ್ಷ ತಂದುಕೊಡಲು ಸಾಧ್ಯವಿಲ್ಲವೆ?
ಜತೆಗೆ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯದ ಪ್ರಸಾರಾಂಗಗಳಲ್ಲಿ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತಿ ಮುಂತಾದವುಗಳಿಂದ ಪ್ರಕಟವಾಗುತ್ತಿರುವ ಕನ್ನಡ ಸಾಹಿತ್ಯದ ಪುಸ್ತಕಗಳು ಅಮೆಜಾನ್ ಕಿಂಡಲ್, ಪ್ಲಿಟ್ ಕ್ಲಟ್೯ ಮುಂತಾದ ಅನ್ ಲೈನ್ ಮಾರುಕಟ್ಟೆಗಳಲ್ಲಿ ದೊರಕುವಂತಾದರೆ, ವಿಶ್ವಾದ್ಯಂತ ಇರುವಂತ ಓದುಗರಿಗೆ ದೊರಕುವಂತೆ ಆಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸುವ ಅನಿವಾರ್ಯತೆ ಅಗತ್ಯತೆ ಇದೆ. ಈ ಬಗ್ಗೆ ಇಂದಿನ ಕನ್ನಡ ಸಂಸ್ಕೃತಿ ಇಲಾಖೆಯ ಮಂತ್ರಿಗಳು ಪ್ರಯತ್ನಿಸಲಿ.
ನಮಗೆ ಕನ್ನಡ ಭಾಷೆ ಎನ್ನುವುದು ಹೃದಯದ ಭಾಷೆಯಾಗಿದೆ ಆದರೆ ವ್ಯಾವಹಾರಿಕ ಭಾಷೆ? ಈ ಪೈಕಿ ದೊಡ್ಡ ಸಂಖ್ಯೆಯ ಜನರು ಜಾಣತನದಿಂದ ಕನ್ನಡವನ್ನು ಮರೆತಿರುವುದನ್ನು ನಾವು ಹೇಗೆ ಮರೆಯಲು ಸಾಧ್ಯ? ಅದರಲ್ಲೂ ಬೆಂಗಳೂರಿನಲ್ಲಿ ವಾಸಿಸುವ ಕನ್ನಡಿಗರು ಕನ್ನಡವೂ ಅಲ್ಲದ ಇತ್ತ ಇಂಗ್ಲಿಷ್ ಕೂಡ ಅಲ್ಲದ `ಕಂಗ್ಲಿಷ್ ‘ ಭಾಷೆಗೆ ಮೊರೆ ಹೋಗಿರುವುದು ಯಾವ ಪುರುಷಾರ್ಥಕ್ಕಾಗಿ? ನಮ್ಮ ನಮ್ಮ ಮನೆಗಳಲ್ಲಿ ದಿನ ಬೆಳಗಾದರೆ ಕೇಳಿಬರುವ ಭಾಷೆಯ ಯಾವುದು? ಅದು ಕನ್ನಡದ ಕಂಪನ್ನು ಹೊರಸೂಸುತ್ತಿದೆಯೆ? ಅಪ್ಪ, ಅಮ್ಮ, ಅಣ್ಣ ತಂಗಿ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ ಅತ್ತಿಗೆ, ಅತ್ತೆ, ಮಾವ , ಭಾವ, ನಾದಿನಿ, ಮೈದುನ, ಅಜ್ಜ ಅಜ್ಜಿ, ದೊಡ್ಡಪ್ಪ, ಮೊಮ್ಮಗ, ಷಡ್ಕ ಮುಂತಾದ ಅಪ್ಪಟ ಕನ್ನಡದ ಮನುಷ್ಯ ಸಂಬಂಧವನ್ನು ಗುರುತಿಸುವ ಪದಗಳು ಈಗಿನ ಹೊಸ ಪೀಳಿಗೆಗೆ ಅಪರಿಚಿತ ಶಬ್ದಗಳಾಗಿರುವುದಕ್ಕೆ ಯಾರು ಹೊಣೆ?
ಡ್ಯಾಡಿ, ಮಮ್ಮಿ (ಈಗ ಅದು ಡ್ಯಾಡ್, ಮಾಮ್) ಅಂಕಲ್, ಆಂಟಿ, ಕಸಿನ್, ಗ್ರ್ಯಾಂಡ್‌ಪಾ, ಕೋ-ಬ್ರದರ್ , ಫಾದರ್ ಇನ್ ಲಾ, ಸಿಸ್ಟರ್ ಇನ್ ಲಾ, ನೀಸ್ ಶಬ್ದಗಳು ನಮ್ಮ ಮನೆಯನ್ನು ಆಕ್ರಮಿಸಿಕೊಳ್ಳಲು ಮರಾಠಿಗರಾಗಲಿ, ಇಂಗ್ಲಿಷರಾಗಲಿ, ತಮಿಳರಾಗಲಿ, ತೆಲುಗಿನವರಾಗಲಿ ಖಂಡಿತ ಕಾರಣರಲ್ಲ. ಮಮ್ಮಿ ಅಂದರೆ ಅರ್ಥ dead body. ಅಮ್ಮ ಎಂದಾಗ ಆಗುವ ಸಂತಸ, ಆನಂದ ಮಮ್ಮಿ ಎಂದಾಗ ಆಗುತ್ತದೆಯೇ..? ಆದರೂ ನಮ್ಮ ಮಕ್ಕಳಿಗೆ ನಾವು `ಅಮ್ಮ ಎಂದು ಹೇಳುʼ ಎಂದು ಕಲಿಸುವುದಿಲ್ಲ.
ಮಕ್ಕಳಿಗೆ ಎದೆ ಹಾಲು ಸರ್ವಶ್ರೇಷ್ಠ ಎಂಬುದು ಹಿಂದಿನಿಂದಲೂ ನಮ್ಮವರ ನಂಬಿಕೆ. ಈಗ ವಿಶ್ವ ಆರೋಗ್ಯ ಸಂಸ್ಥೆ (World Health organisation ) ಕೂಡ ಜಗತ್ತಿನಾದ್ಯಂತ ಇದೇ ಸಂದೇಶ ಸಾರುತ್ತಲೇ ಇದೆ. ಆದರೆ ನಗರದ ಸಂಸ್ಕೃತಿಯನ್ನು ಅಪ್ಪಿಕೊಂಡಿರುವ ಕೆಲವು ತಾಯಂದಿರಿಗೆ ತಮ್ಮ ದೇಹ ಸೌಂದರ್ಯ ಕೆಡಕೂಡದು ಎನ್ನುವ ಕಾರಣಕ್ಕಾಗಿ, ತಮ್ಮ Physique maitain ಆಗಬೇಕು ಎಂಬ ಭ್ರಮೆಗಾಗಿ ಮಕ್ಕಳಿಗೆ ಎದೆಹಾಲು ಕೊಡದೆ ಬಾಟಲಿ ಹಾಲನ್ನು ನೀಡುತ್ತಾರೆ. ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಆ ಹಾಲು ಕುಡಿದರೆ ದೇಹ ಬಲಿಷ್ಠವಾಗುವುದಲ್ಲದೆ ಯಾವುದೇ ರೋಗರುಜಿನ ಬರುವುದಿಲ್ಲ. ಅದರಲ್ಲಿ ರೋಗ ನಿವಾರಕ ಶಕ್ತಿ ಇರುತ್ತದೆ. ಆದರೆ ಬಾಟಲಿ ಹಾಲಿನಲ್ಲಿ ಅಂಥ ರೋಗ ನಿರೋಧಕ ಶಕ್ತಿ ಇರಲು ಸಾಧ್ಯವಿಲ್ಲ. ತಾಯಿಯ ಹಾಲು ಕುಡಿದವರು ತಾಯಿಪ್ರೇಮ, ದೇಶಪ್ರೇಮ ಬೆಳೆಸಿಕೊಂಡು ಉತ್ತಮ ಪ್ರಜೆಯಾಗುತ್ತಾನೆ. ದೇಶಭಕ್ತನಾಗುತ್ತಾನೆ. ಆದರೆ ಬಾಟಲಿ ಹಾಲು ಕುಡಿದವನು ಮುಂದೆ ಕೇವಲ `ಬಾಟಲಿ ಪ್ರೇಮಿ’ಆಗಬಹುದಷ್ಟೆ.
ಬ್ರಿಟಿಷರು ನಮ್ಮ ದೇಶದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ವರ್ಷ ಆಡಳಿತ ನಡೆಸಿದರು. ಹಾಗಾಗಿ ಇಂಗ್ಲಿಷ್ ಭಾಷೆ, ಇಂಗ್ಲಿಷ್ ಸಂಸ್ಕೃತಿ ನಮ್ಮ ಮೇಲೆ ಗಾಢ ಪ್ರಭಾವ ಬೀರಿದೆ ಎಂದು ವಾದಿಸುವವರಿದ್ದಾರೆ. ಹೀಗೆ ಹೇಳಿಕೊಳ್ಳಲು ನಮಗೆ ನಾಚಿಕೆಯಾಗಬೇಕು. ಇಸ್ರೇಲ್ ದೇಶ ಕೂಡ ಹರಿದು ಹಂಚಿಹೋಗಿತ್ತು. ಯಹೂದಿಗಳು ಎಲ್ಲೆಲ್ಲೋ ಇದ್ದರು. ಆದರೂ ಆ ದೇಶವನ್ನು ಯಹೂದಿಗಳು ತಮ್ಮ ಪರಾಕ್ರಮದಿಂದ ಮತ್ತೆ ಒಂದುಗೂಡಿಸಿದರು. ಹೀಬ್ರೂ ಭಾಷೆಯನ್ನು ಜೀವಂತವಾಗಿಟ್ಟರು. ಈಗಲೂ ಇಸ್ರೇಲ್‌ನಲ್ಲಿ ಹೀಬ್ರೂ ಅಧಿಕೃತ ಭಾಷೆ. ಅವರ ವ್ಯವಹಾರವೆಲ್ಲ ಅದೇ ಭಾಷೆಯಲ್ಲಿ. ಜಪಾನ್ ಪ್ರಧಾನಿ ಕೆಲ ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಇಂಗ್ಲಿಷ್ ಬರುತ್ತಿತ್ತು. ಆದರೆ ಅವರು ಇಲ್ಲಿನ ಮುಖ್ಯಮಂತ್ರಿಯವರ ಜೊತೆ ಮಾತನಾಡಿದ್ದು ಜಪಾನಿ ಭಾಷೆಯಲ್ಲಿ. ಭಾಷಾಂತರಕಾರ ಅದನ್ನು ಇಂಗ್ಲಿಷಿಗೆ ತರ್ಜಮೆ ಮಾಡುತ್ತಿದ್ದ. ನಮ್ಮ ಮುಖ್ಯಮಂತ್ರಿಯೂ ಇದೇ ರೀತಿ ಕನ್ನಡದಲ್ಲೂ ಮಾತನಾಡಬಹುದಿತ್ತು. ಅದನ್ನು ಭಾಷಾಂತರಿಸಿ ಜಪಾನ್ ಭಾಷೆಯಲ್ಲಿ ಜಪಾನ್ ಪ್ರಧಾನಿಗೆ ತಿಳಿಸುವವರಿದ್ದರು. ಆದರೆ ನಮ್ಮ ಮುಖ್ಯಮಂತ್ರಿ ಜೋತು ಬಿದ್ದಿದ್ದು ಇಂಗ್ಲಿಷ್‌ಗೆ. ಜಪಾನಿನ ಪ್ರಖ್ಯಾತ ಹೀರೊ ಹೊಂಡಾ ಮೋಟಾರ್ ಕಂಪೆನಿಯ ಸಿಇಓ ಬೆಂಗಳೂರಿಗೆ ಬಂದಿದ್ದಾಗ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು ಜಪಾನ್ ಭಾಷೆಯಲ್ಲಿ. ಪತ್ರಕರ್ತರು ಇಂಗ್ಲಿಷ್‌ನಲ್ಲಿ ಕೇಳುತ್ತಿದ್ದ ಪ್ರಶ್ನೆ ಅವರಿಗರ್ಥವಾಗುತ್ತಿತ್ತು. ಆದರೆ ಆತ ಉತ್ತರಿಸುತ್ತಿದ್ದುದು ಜಪಾನ್ ಭಾಷೆಯಲ್ಲಿ. ಅದನ್ನು ಆ ನಂತರ ಭಾಷಾಂತರಿಸಿ ಇಂಗ್ಲಿಷ್‌ನಲ್ಲಿ ಒಬ್ಬಾಕೆ ಹೇಳುತ್ತಿದ್ದರು. ಜಪಾನೀಯರು ಎಲ್ಲೇ ಹೋದರೂ ಅವರ ಭಾಷೆಯಲ್ಲೇ ವ್ಯವಹರಿಸುತ್ತಾರೆ. ಇಂಗ್ಲಿಷ್ ಬಳಸುವುದಿಲ್ಲ. ಪ್ರೆಂಚರೂ ಕೂಡ ಹಾಗೆಯೇ. ಬೇರೆ ದೇಶಗಳಿಗೆ ಹೋದಾಗ ತಮ್ಮ ಭಾಷೆಯಲ್ಲಿ ಮಾತನಾಡುವುದು ಅವರಿಗೆ ಕಿರಿಕಿರಿ ಎನಿಸುವುದಿಲ್ಲ. ಹೆಮ್ಮೆಯೆನಿಸುತ್ತದೆ.
ಆದರೆ ನಮಗೆ ನಮ್ಮ ಪಕ್ಕದ ಮನೆಯವರ ಬಳಿ, ಕಚೇರಿಯ ಸಹೋದ್ಯೋಗಿ ಬಳಿ ಮಾತನಾಡುವ ಸಂದರ್ಭ ಬಂದಾಗಲೂ ನಾವು ಬಳಸುವುದು ಇಂಗ್ಲಿಷ್. ನಾವು ಮೊರೆಹೋಗುವುದು ಇಂಗ್ಲಿಷ್‌ಗೆ. ಇಂತಹ ಹೀನಾಯತೆ ನಮಗೇಕೆ? ನಾವ್ಯಾಕೆ ನಮ್ಮನ್ನು ಇಂಗ್ಲಿಷ್ ಭಾಷೆಗೆ ಮಾರಿಕೊಂಡಿದ್ದೇವೆ?
ಅಂದರೆ ಇಂಗ್ಲಿಷ್ ನಮಗೆ ಬೇಡವೇ ಬೇಡ ಎಂದಲ್ಲ. ಇಂಗ್ಲಿಷನ್ನು ದ್ವೇಷಿಸಬೇಕು ಎಂದೂ ಅಲ್ಲ. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯೋಣ. ಜಗತ್ತಿನ ಜ್ಞಾನ- ವಿಜ್ಞಾನಗಳನ್ನು ಅರಗಿಸಿಕೊಳ್ಳಲು, ನಮ್ಮದಾಗಿಸಿಕೊಳ್ಳಲು ಇಂಗ್ಲಿಷ್ ಒಂದು ಬೆಳಕಿಂಡಿಯಿದ್ದಂತೆ. ಆದರೆ, ಇಂಗ್ಲಿಷ್ ಎಲ್ಲಿ ಅವಶ್ಯಕವೋ ಅಲ್ಲಿ ಮಾತ್ರ ಬಳಸೋಣ.
ಇಂದು ನಮ್ಮ ಹಳ್ಳಿ, ಊರು, ನಗರ, ಪಟ್ಟಣಗಳಲ್ಲಿ ಪರಭಾಷಿಕರು ತಮ್ಮ ಜೀವನ ನೆಲೆ ಕಂಡುಕೊಳ್ಳುತ್ತಿದ್ದರೆ, ನೀವು ಯಾವುದೇ ಊರುಗಳಿಗೆ ಹೋದ ಸಂದರ್ಭದಲ್ಲಿ ಗಮನಿಸಿ ಪಾನಿಪೂರಿಯಂತಹ ಸಣ್ಣ ಅಂಗಡಿಯಿಂದ ಸೂಪರ್ ಮಾರ್ಕೆಟ್ ಅಂತಹ ದೊಡ್ಡ ಪ್ರಮಾಣದ ಅಂಗಡಿಗಳಲ್ಲಿ ಮತ್ತು ರಾಜ್ಯದ ಯಾವುದೇ ದೊಡ್ಡ ದೊಡ್ಡ ಮಾಲ್ ಗಳು ರೆಸ್ಟೋರೆಂಟ್‌ಗಳು, ಐಷಾರಾಮಿ ಹೋಟೆಲ್ʼಗಳಲ್ಲಿ ಹಾಗೆಯೇ ಹೆದ್ದಾರಿಗಳ ಪಕ್ಕದಲ್ಲಿರುವ ಹೋಟೆಲ್, ಡಾಬಾಗಳ ಮಾಲೀಕತ್ವವನ್ನು ಹೊರ ರಾಜ್ಯದವರು ಹೊಂದಿದ್ದರೆ ಇಡೀ ಅರ್ಥವ್ಯವಸ್ಥೆಯ ಹಿಡಿತ ಹೊಂದಿದ್ದಾರೆ. ಅಲ್ಲದೇ ಸ್ಥಾಪಿಸಲಾದ ಕೈಗಾರಿಕೆಗಳಲ್ಲಿ ಇರುವ ದುಡಿಯುವ ವರ್ಗದವರೆಲ್ಲರೂ ಹೊರ ರಾಜ್ಯದಿಂದ ಬಂದಂತಹ ಕಾರ್ಮಿಕರೇ ಆಗಿದ್ದಾರೆ, ಹಾಗಾದರೆ ನಮ್ಮವರಿಗೆ ಏಕೆ ಇಲ್ಲ? ಸರ್ಕಾರಕ್ಕೆ ಇದರ ಬಗ್ಗೆ ಚರ್ಚಿಸುವ ಕಾಲ ಇನ್ನು ಕೂಡಿಬಂದಿಲ್ಲವೇ?.
ಇತ್ತೀಚಿಗೆ ಕೇಂದ್ರ ಸರ್ಕಾರ ರೈಲ್ವೆ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿದೆ. ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಮಾಡುವತ್ತ ಸರ್ಕಾರ ಗಂಭೀರವಾದ ಚಿಂತನೆ ಮಾಡಲಿ. ಇಲ್ಲವಾದರೇ ನಮ್ಮಲ್ಲ ಕೆಲಸಗಳು, ಅರ್ಥವ್ಯವಸ್ಥೆಯು ಎಲ್ಲವನ್ನು ಅವರ (ಪರಭಾಷಿಕರ) ದಾಕ್ಷಿಣ್ಯತೆಯಲ್ಲಿ ಬದುಕುವ ಸಮಯದ ಅಂಚಿನಲ್ಲಿ ತಲುಪವುದು ದೂರವೇನೂ ಇಲ್ಲ, ಹತ್ತಿರದಲ್ಲಯೇ ಇದ್ದೇವೆ.
ಅವರು ಯಾರು ನಮ್ಮ ಭಾಷೆ ಮಾತನಾಡುವ ಅನಿವಾರ್ಯತೆ ಅವರಿಗಿಲ್ಲ. ನಾವೇ ಅವರ ಭಾಷೆಯಲ್ಲಿ ಮಾತನಾಡುವ ವಿಶಾಲ ಮನಸ್ಸಿನವರು. ಕನ್ನಡಾಭಿಮಾನ ಬೆಳೆಸಿಕೊಳ್ಳುವುದೆಂದರೆ ಇತರ ಭಾಷೆಗಳನ್ನು ದ್ವೇಷಿಸಬೇಕೆಂಬ ತಪ್ಪು ಕಲ್ಪನೆ ಖಂಡಿತ ಸರಿಯಲ್ಲ. ಭಾರತದಂಹ ವಿಶಾಲ ಬಾಹುಳ್ಯವಿರುವ ದೇಶದಲ್ಲಿ ರಾಜ್ಯಕ್ಕೊಂದು, ಜಿಲ್ಲೆಗೊಂದು ಭಾಷೆಗಳಿವೆ. ಹಲವು ಹೂಗಳ ಸುಂದರ ತೋಟವಿದ್ದಂತೆ ಹಲವು ಭಾಷೆಗಳ ವೈವಿದ್ಯಪೂರ್ಣ ದೇಶ ನಮ್ಮದು. ಕನ್ನಡದಲ್ಲೇ ಹಲವಾರು ಬಗೆಗಳಿವೆ. ಬೆಂಗಳೂರು ಕಂಗ್ಲಿಷ್ ಕನ್ನಡ, ಮೈಸೂರಿನ ಮೆಲುದನಿ ಕನ್ನಡ, ಧಾರವಾಡದ ಗಂಡುಕನ್ನಡ, ದಕ್ಷಿಣ ಕನ್ನದ ಗ್ರಾಂಥಿಕ ಕನ್ನಡ, ಕಾಸರಗೋಡಿನ ಮಲೆಯಾಳಿ ಕನ್ನಡ, ಕಲ್ಯಾಣ ಕರ್ನಾಟಕದ ಉರ್ದು ಮಿಶ್ರಿತ ಕನ್ನಡ – ಹೀಗೆ ಹತ್ತು ಹಲವು ರೀತಿ. ಅಸ್ಸಾಂ ರಾಜ್ಯದಲ್ಲಂತೂ ಜಿಲ್ಲೆಗೊಂದು ಭಾಷೆ ಇದೆ. ಅದಕ್ಕೇ ʼಅಸಮʼ, ಅಂದರೆ ಯಾವುದರಲ್ಲೂ ಸಮಾನತೆ ಇಲ್ಲ ಎಂಬ ಹೆಸರು ಬಂದಿದೆ.
ಇವೆಲ್ಲವನ್ನೂ ಮನಗಂಡೇ ರಾಷ್ಟ್ರಕವಿ ಕುವೆಂಪು ತಮ್ಮ ಕವನದಲ್ಲಿ ಹೇಳಿರೋದು – ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ: ಭಾರತಾಂಬೆಯ ಪುತ್ರಿ ಕರ್ನಾಟಕ ಮಾತೆ. ಭಾರತವೇ ತಾಯಿ- ಆಕೆಯ ಪುತ್ರಿ ಕರ್ನಾಟಕ ಮಾತ್ರ ಕನ್ನಡಾಂಬೆ. ತಾಯಿ ಭಾರತಾಂಬೆಗೆ ಕನ್ನಡಾಂಬೆ ಹೇಗೆ ಮಗಳೋ ಅದೇ ರೀತಿ ತೆಲುಗು,ತಮಿಳು, ಮಲೆಯಾಳಂ, ಮರಾಠಿ, ಅಸ್ಸಾಂ, ಹಿಂದಿ, ಬೆಂಗಾಲಿ, ಒರಿಯಾ, ಬಿಹಾರಿ, ಗುಜರಾತಿ, ಭೋಜ್‌ಪುರಿ ಎಲ್ಲ ಭಾಷೆಗಳು ಮಕ್ಕಳು. ನಮಗೆ ಅವೆಲ್ಲಾ ಸೋದರ ಭಾಷೆಗಳು. ಕರ್ನಾಟಕ ಹಿತ ರಕ್ಷಣೆ ಪ್ರಶ್ನೆ ಬಂದಾಗ ನಾವು ಸ್ವಾಭಿಮಾನವನ್ನು ಪ್ರಕಟಿಸುವುದರ ಜತೆಗೆ ನಾವು ಭಾರತಾಂಬೆಯ ಮಕ್ಕಳು, ಆಕೆಯ ಸತ್ಪುತ್ರರು ಎಂಬುದನ್ನು ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿದೆ. ಹಾಗೆ ನೆನಪಿಟ್ಟುಕೊಂಡರೆ, ನಮ್ಮ ಮನದಲ್ಲಿ ಆ ವಿಶಾಲ ಭಾವನೆಯಿದ್ದರೆ ಯಾವುದೇ ಸಂಘರ್ಷಕ್ಕೆ ಅವಕಾಶ ಇರುವುದಿಲ್ಲ. ಈಗ ಬೇಕಾಗಿರುವುದು ಸಂಘರ್ಷವಲ್ಲ, ಸಾಮರಸ್ಯ. ಇಡೀ ಭಾರತದಲ್ಲಿ ಕೋಮುಸಾಮರಸ್ಯ , ಭಾಷಾ ಸಾಮರಸ್ಯ, ಸಾಂಸ್ಕೃತಿಕ ಸಾಮರಸ್ಯ ಏರ್ಪಟ್ಟಾಗ ರಾಜ್ಯಹಿತ ರಕ್ಷಣೆಯ ಜೊತೆಗೆ ರಾಷ್ಟ್ರಹಿತದ ರಕ್ಷಣೆಯೂ ಆಗುತ್ತದೆ.
ಕನ್ನಡಕ್ಕಾಗಿ ಕೈ ಎತ್ತೋಣ.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.