ಗುಡಿಬಂಡೆ ಪಟ್ಟಣ ಪಂಚಾಯತಿ: ಬಷಿರಾ ರಿಜ್ವಾನ್ ಅಧ್ಯಕ್ಷೆ & ಅನೀಲ್ ಕುಮಾರ್ ಉಪಾಧ್ಯಕ್ಷ
- ಸಚಿವ ಡಾ.ಕೆ.ಸುಧಾಕರ್ ಕಮಾಲ್; ಕೊನೆ ಕ್ಷಣದಲ್ಲಿ ಬಿಜೆಪಿಗೆ ಕಾಂಗ್ರೆಸ್ ಸದಸ್ಯರ ಜಂಪ್
- ಸಂಸದರ ಕಾರು ತಡೆದು ಬಾಯಿ ಬಡಿದುಕೊಂಡ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ
- ಶಾಸಕರು ಪೊಲೀಸರ ಮಧ್ಯ ವಾಗ್ವಾದ, ಧರಣಿ ಪ್ರತಿಭಟನೆ
By GS Bharath Gudibande
ಗುಡಿಬಂಡೆ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಶೂನ್ಯದಿಂದ ಅಧಿಕಾರಕ್ಕೇರಿದೆ! ಕನಿಷ್ಠ ಒಂದೇ ಒಂದು ಸ್ಥಾನ ಗೆಲ್ಲದಿದ್ದರೂ ಇಲ್ಲಿನ ಅಧಿಕಾರವನ್ನು ವಶಪಡಿಸಿಕೊಂಡಿದೆ.
ಈ ಮೂಲಕ ಅಧ್ಯಕ್ಷರಾಗಿ ಬಷಿರಾ ರಿಜ್ವಾನ್ ಹಾಗೂ ಉಪಾಧ್ಯಕ್ಷರಾಗಿ ಅನೀಲ್ ಕುಮಾರ್ ಆಯ್ಕೆಯಾದರು.
ರಾಜ್ಯದ ಆಪರೇಷನ್ ʼಕಮಲದ ಪಿತಾಮಹʼರೂ ಆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಕ್ಕೇರಲು ಅನುಸರಿಸಿದ ಮಾರ್ಗವನ್ನೇ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ನಾಯಕರು ಗುಡಿಬಂಡೆ ಪಟ್ಟಣ ಪಂಚಾಯಿತಿ ಅಧಿಕಾರವನ್ನು ಕಸಿಯಲು ಅನುಸರಿಸಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮತ್ತವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡರ ತೀವ್ರ ಪ್ರತಿಭಟನೆ, ಧರಣಿ ನಡುವೆಯೂ ಬಿಜೆಪಿಯೂ ಆಪರೇಷನ್ ಕಮಲದ ಮೂಲಕ ಅಧಿಕಾರವನ್ನು ಗಿಟ್ಟಿಸಿಕೊಂಡಿತು. ಇದೇ ಮೊದಲ ಬಾರಿಗೆ ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿತು.
ಕಳೆದ ಕೆಲ ದಿನಗಳಿಂದ ಹೂಡಿದ್ದ ವ್ಯೂಹದಂತೆ ಬಿಜೆಪಿ ತನ್ನ ಆಕ್ರಮಣಶೀಲ ರಾಜಕೀಯ ತಂತ್ರಗಾರಿಕೆಯಿಂದ ಎಚ್ಚರ ತಪ್ಪಿದ್ದ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಗದಂತೆ ನೋಡಿಕೊಂಡಿತು. ಕೊನೆಪಕ್ಷ ಚುನಾವಣೆಯಲ್ಲಿ ಖಾತೆಯನ್ನೇ ತೆರೆಯದ ಬಿಜೆಪಿ ತನ್ನ ಒಳ ರಾಜಕೀಯ ಚದುರಂಗದಾಟದ ರಣವ್ಯೂಹಕ್ಕೆ ಗುಡಿಬಂಡೆ ಇಂದು ಸಾಕ್ಷಿಯಾಯಿತು.
ಬಿಜೆಪಿ ತಂತ್ರಗಾರಿಕೆಯಿಂದ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ಧರಣಿ ಪ್ರತಿಭಟನೆ ನಡೆಸಿದರಾದರೂ ಪೊಲೀಸರ ಸರ್ಪಗಾವಲಿನಲ್ಲಿ ಏನೂ ಮಾಡಲಾಗಲಿಲ್ಲ. ಸರಕಾರ, ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಿಡಿದೆದ್ದು ಸ್ವತಃ ಶಾಸಕರೇ ರಸ್ತೆಯಲ್ಲಿ ಕೂತರೂ ಕವಡೆ ಕಾಸಿನ ಕಿಮ್ಮತ್ತು ಸಿಗಲಿಲ್ಲ. ಇಡೀ ಗುಡಿಬಂಡೆ ಪಟ್ಟಣವೇ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ರಣಾಂಗಣದಲ್ಲಿ ನಲುಗಿಹೋಯಿತು.
ಪೊಲೀಸರು-ಶಾಸಕರ ನಡುವೆ ವಾಗ್ವಾದ
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಅವರ ಬೆಂಬಲಿಗರು ಪೊಲೀಸರ ಜೊತೆ ತೀವ್ರ ವಾಗ್ವಾದಕ್ಕೆ ಇಳಿದು, ಬ್ಯಾರಿಕೇಡ್ʼಗಳನ್ನು ತಳ್ಳಿಹಾಕಿ ಪಟ್ಟಣ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆಯನ್ನು ಮುಂದೂಡುವಂತೆ ಒತ್ತಾಯಿಸಿದರು.
ಆದರೆ, ಇವರ ಒತ್ತಾಯ ಆಕ್ರೋಶಗಳೆಲ್ಲವೂ ಪೊಲೀಸರ ಮುಂದೆ ಬರೀ ಅರಣ್ಯರೋಧನವಾಯಿತಷ್ಟೇ. ಮೊದಲೇ ಪ್ಲ್ಯಾನ್ ಮಾಡಿದಂತೆ ಯಾರೂ ಶಾಸಕರಿಗೆ ಕಿಮ್ಮತ್ತೇ ನೀಡಲಿಲ್ಲ. ಇಡೀ ಬೆಳವಣಿಗೆಗಳನ್ನು ಬಿಜೆಪಿ ನಾಯಕರು ವ್ಯವಸ್ಥಿತವಾಗಿ ನಿರ್ದೇಶನ ಮಾಡಿದಂತಿತ್ತು. ಅದರಲ್ಲಿ ಅಧಿಕಾರಿಗಳೆಲ್ಲರೂ ಪಾತ್ರಧಾರಿಗಳಂತೆ ಆಗಿದ್ದರು ಎನ್ನುವ ಹಾಗಿತ್ತು.
ಬಹುಮತವಿದ್ದರೂ ಎಡವಿದ ಕಾಂಗ್ರಸ್
ಅಧ್ಯಕ್ಷ ಪದವಿ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ಸಿನ ಬಷಿರಾ ರಿಜ್ವಾನ್ ಹಾಗೂ ಉಪಾಧ್ಯಕ್ಷ ಪದವಿ ಆಕಾಂಕ್ಷಿಯಾಗಿದ್ದ ಪಕ್ಷೇತರ ಸದಸ್ಯ ಅನೀಲ್ ಕುಮಾರ್ ಇಬ್ಬರೂ ಬದಲಾದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದರು. ಇಬ್ಬರ ಪರವಾಗಿ ಜೆಡಿಎಸ್ ಪಕ್ಷದ ಇಬ್ಬರು, ಮೂವರು ಪಕ್ಷೇತರರು ಹಾಗೂ ಸಂಸದ ಬಿ.ಎನ್. ಬಚ್ಚೇಗೌಡ ಮತ ಚಲಾಯಿಸಿದರು.
ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವಿದ್ದರೂ ಸೋಲಬೇಕಾಯಿತು. ಇದರಿಂದ ಆಕ್ರೋಶಗೊಂಡ ಶಾಸಕ ಸುಬ್ಬಾರೆಡ್ಡಿ ಹಾಗೂ ಅವರ ಬೆಂಬಲಿಗರು ಸಂಸದ ಬಿ.ಎನ್ ಬಚ್ಚೇಗೌಡರ ಕಾರನ್ನು ತಡೆದು ಬಾಯಿ ಬಡಿದುಕೊಂಡು ಪ್ರತಿಭಟಿಸಿದರು.
ಶೂನ್ಯದಿಂದ ಅಧಿಕಾರಕ್ಕೇರಿದ ಬಿಜೆಪಿ
ಪಟ್ಟಣ ಪಂಚಾಯಿತಿಯಲ್ಲಿ ಜೆಡಿಎಸ್-2 ಕಾಂಗ್ರೆಸ್-06, ಪಕ್ಷೇತರರು -3 ಸ್ಥಾನಗಳು ಸೇರಿ 11 ಸದಸ್ಯರು ಚುನಾವಣೆಯಲ್ಲಿ ಗೆದ್ದಿದ್ದರು. ಬಿಜೆಪಿಯಿಂದ ಒಬ್ಬ ಸದಸ್ಯನೂ ಆಯ್ಕೆಯಾಗಿರಲಿಲ್ಲ! ಆದರೂ ಅಪರೇಶನ್ ಕಮಲ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ವಾಮಮಾರ್ಗದ ಮೂಲಕ ಬಿಜೆಪಿ ಬೆಂಬಲಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಗೆಲ್ಲಿಸಿಕೊಂಡರು ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ʼಗೆ ಗುನ್ನ ಇಟ್ಟ ಬಿಜೆಪಿ
ಗುಡಿಬಂಡೆ ಪಟ್ಟಣ ಪಂಚಾಯಿತಿಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಬಿಜೆಪಿ, ಬಹುಮತವಿದ್ದ ಕಾಂಗ್ರೆಸ್ ಪಕ್ಷದ ಬುಟ್ಟಿಗೆ ಕೈ ಹಾಕಿದೆ. ಈ ಮೂಲಕ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗುಡಿಬಂಡೆಯಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡಿರುವ ಕಮಲ ಪಾಳೆಯ, ಮುಂದಿನ ಚುನಾವಣೆಗೆ ಹೊಸ ವರಸೆ ಶುರು ಮಾಡಿದೆ.
ಇದು ಹೀಗಿದ್ದರೆ, ಆಪರೇಶನ್ ಕಮಲದ ಹಿಂದೆ ಸಚಿವ ಸುಧಾಕರ್ ಹಾಗೂ ಅವರ ಸಂಬಂಧಿಕರ ನೇರ ಕೈವಾಡವಿದೆ. ಯೋಗ್ಯತೆ ಇದ್ದರೆ ಜನ ಬೆಂಬಲ ಪಡೆದು ಅಧಿಕಾರಕ್ಕೆ ಬರಲಿ ಎಂದು ಕಾಂಗ್ರೆಸ್ಸಿಗರು ಆಕ್ರೋಶ ವ್ಯಕ್ತಪಡಿಸಿದರು.
ನೂಕು ನುಗ್ಗಲು; ಪೊಲೀಸ್ ಪೇದೆಗೆ ಗಾಯ
ಶಾಸಕರ ಬೆಂಬಲಿಗರು ಹಾಗೂ ಪೊಲೀಸರ ಮಧ್ಯೆ ನಡೆದ ನೂಕಾಟ, ತಳ್ಳಾಟದಲ್ಲಿ ಚಿಕ್ಕಬಳ್ಳಾಪುರ ಪೊಲೀಸ್ ಇನಸ್ಪೆಕ್ಟರ್ ಪ್ರಶಾಂತ್ ಅವರು ಶಾಸಕ ಸುಬ್ಬಾರೆಡ್ಡಿ ಅವರನ್ನು ತಳ್ಳಿದರು. ಮತ್ತೊಂದೆಡೆ ಶಾಸಕರ ಬೆಂಬಲಿಗರು ಪೊಲೀಸರನ್ನು ತಳ್ಳಿದ್ದಕ್ಕೆ ಓರ್ವ ಪೊಲೀಸ್ ಪೇದೆಗೆ ಗಾಯವಾಗಿದೆ. ಶಾಸಕರ ಕೊರಳಪಟ್ಟಿ ಹಿಡಿದರೆನ್ನಲಾದ ಇನಸ್ಪೆಕ್ಟರ್ ಪ್ರಶಾಂತ್ ಅವರನ್ನು ಅಮಾನತು ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು.
ಸಂಸದರು ಹೇಳಿದ್ದೇನು?
ನಾವು ಯಾರನ್ನೂ ಕಿಡ್ನಾಪ್ ಮಾಡಿಲ್ಲ. ಯಾರಿಂದಲೂ ಬಲವಂತವಾಗಿ ಮತ ಹಾಕಿಸಿಕೊಂಡಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಕೆಲ ಸದಸ್ಯರು ಬಿಜೆಪಿ ಪರವಾಗಿ ಮತದಾನ ಮಾಡಿದ್ದಾರೆ. ಹೀಗಾಗಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಬಿ.ಎನ್.ಬಚ್ಚೇಗೌಡ, ಸಂಸದ
Comments 1