ಹಳ್ಳಿ ಹುಡುಗನ ಅದ್ಭುತ ಸಾಧನೆ
by Ra Na Gopala Reddy Bagepalli
ಬಾಗೇಪಲ್ಲಿ: ತಾಲೂಕು ಯಲ್ಲಂಪಲ್ಲಿ ಗ್ರಾಮ ಪಂಚಾಯತಿಯ ಲಕ್ಷ್ಮೀನಾರಾಯಣಪುರದ ಬಿ.ವಿ.ಸುಬ್ಬಾರೆಡ್ಡಿ ಮತ್ತು ರಾಧಾ ಎಂಬ ರೈತ ದಂಪತಿಯ ಮಗ ಬಿ.ವಿ.ಲಕ್ಷ್ಮಣರೆಡ್ಡಿ 2021ರ ನೀಟ್ ಫಲಿತಾಂಶದಲ್ಲಿ 695 ಅಂಕ ಪಡೆದು ಒಬಿಸಿ ವಿಭಾಗದ ಅಲ್ ಇಂಡಿಯಾ ಮಟ್ಟದಲ್ಲಿ 65ನೇ ರ‍್ಯಾಂಕ್ ಗಳಿಸಿದ್ದಾರೆ.
ಈ ಮೂಲಕ ಬಾಗೇಪಲ್ಲಿ ತಾಲೂಕಿನ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಲಕ್ಷ್ಮಣರೆಡ್ಡಿ ಹಾರಿಸಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ಪುಟ್ಟ ಹಳ್ಳಿಯಲ್ಲಿ ಜನಿಸಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ ಲಕ್ಷ್ಮಣರೆಡ್ಡಿ 1ರಿಂದ 5ನೇ ತರಗತಿವರೆಗೆ ತೀಮಾಕಲಹಳ್ಳಿಯ ಪ್ರಗತಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಅದರ್ಶ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಅದರ್ಶ ಶಾಲೆಯಲ್ಲಿ ಸೀಟು ಗಿಟ್ಟಿಸಿಕೊಂಡು 6ರಿಂದ 10ನೇ ತರಗತಿವರೆಗೂ ಸರ್ಕಾರದಿಂದ ಉಚಿತ ಶಿಕ್ಷಣ ಪಡೆದಿದ್ದಾರೆ.
ಕಾಲೇಜು ವಿದ್ಯಾಭ್ಯಾಸಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದು 2021ನೇ ಸಾಲಿನ ನೀಟ್ ಪರೀಕ್ಷೆ ಬರೆದಿದ್ದಾರೆ. 720 ಅಂಕಗಳ ನೀಟ್ ಪರೀಕ್ಷೆಯಲ್ಲಿ 695 ಅಂಕಗಳನ್ನು ಪಡೆದುಕೊಂಡು ಬಾಗೇಪಲ್ಲಿ ತಾಲೂಕಿನ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿ ಒಬಿಸಿ ವಿಭಾದಲ್ಲಿ ಅಲ್ ಇಂಡಿಯಾ 65ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ.
ವ್ಯವಸಾಯ ಮಾಡಿಕೊಂಡು ಹಳ್ಳಿಯ ಜೀವನ ನಡೆಸುತ್ತಿರುವ ನಮ್ಮ ತಂದೆ ತಾಯಿರವರ ಸಹಕಾರದಿಂದ ಉತ್ತಮ ವಿದ್ಯಾಭ್ಯಾಸ ಪಡೆದುಕೊಂಡಿದ್ದು, ನೀಟ್‌ನಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಎಂಬಿಬಿಎಸ್ ಕೋರ್ಸ್ ಮಾಡಿ ವೈದ್ಯನಾಗಬೇಕೆಂದು ಬಯಸುತ್ತಿದ್ದೇನೆ ಎಂದು ಲಕ್ಷ್ಮಣ ರೆಡ್ಡಿ ತಿಳಿಸಿದ್ದಾರೆ.