ಗುಡಿಬಂಡೆಯಲ್ಲಿ ಬೀದಿ ನಾಯಿಗಳ ಉಪಟಳ
By GS Bharath Gudibande
ಗುಡಿಬಂಡೆ: ಪಟ್ಟಣದ ಮುಖ್ಯರಸ್ತೆ ಹಾಗೂ ವಿವಿಧ ವಾರ್ಡ್ʼಗಳಲ್ಲಿ ಬೀದಿ ನಾಯಿಗಳ ಹುಚ್ಚಾಟದಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಭಯಬೀತರಾಗಿದ್ದಾರೆ.
ಪಟ್ಟಣದ ಹೊಸ ಕೋರ್ಟ್ʼನಿಂದ ಹಿಡಿದು ಗೌರಿಬಿದನೂರು ರಸ್ತೆಯಲ್ಲಿರುವ ಮಾರುತಿ ದೇವಸ್ಥಾನದ ವರೆಗೆ ಬೀದಿ ನಾಯಿಗಳು ಅಡ್ಡಾದಿಡ್ಡವಾಗಿ ಓಡಾಡಿ ಕಚ್ಚುತ್ತಿವೆ. ಮಕ್ಕಳು ಹಾಗೂ ಪೋಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಪಟ್ಟಣ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಕೆಲ ದಿನಗಳಿಂದ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ದೂರು ಕೂಡ ನೀಡಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ. ಬೀದಿ ನಾಯಗಳ ಗುಂಪು ಗುಂಪಾಗಿ ಓಡಾಡುತ್ತಾ, ಮಕ್ಕಳು, ಮಹಿಳೆಯರು, ವೃದ್ಧರು ಎನ್ನದೇ ಒಂದೇ ದಿನ ಐದಕ್ಕೂ ಹೆಚ್ಚು ಜನರಿಗೆ ಕಚ್ಚಿವೆ. ನಾಯಿಗಳ ದಾಳಿಗೆ ಒಳಗಾದ ಸಂತ್ರಸ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ
ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಟ್ಟಣದ ಬಹುತೇಕ ವಾರ್ಡುಗಳಲ್ಲಿ ನಾಯಿಗಳ ಉಪಟಳ ಮೇರೆ ಮೀರಿದ್ದು, ಚಿಕ್ಕಮಕ್ಕಳು ಮನೆಯಿಂದ ಹೊರ ಬರುವುದು ಕಷ್ಟವಾಗಿದೆ. ಅಲ್ಲದೇ, ಮನೆಗಳ ಮುಂದೆ ಮಕ್ಕಳನ್ನು ಆಟಕ್ಕೆ ಬಿಡಲು ಪೋಷಕರು ಹೆದರುತ್ತಿದ್ದಾರೆ, ವೃದ್ಧರು, ಮಹಿಳೆಯರು ಸಂಜೆ ಅಥವಾ ಬೆಳಗಿನ ವಾಯು ವಿಹಾರಕ್ಕೆ ಹೋಗಲು ಆತಂಕಪಡುತ್ತಿದ್ದಾರೆ.
ಪಟ್ಟಣ ಪಂಚಾಯಿತಿ ಮೌನವೇಕೆ?
ಜನರಿಗೆ ನಾಯಿಗಳು ಕಚ್ಚಿ ಅವರು ಆಸ್ಪತ್ರೆಗೆ ಹೋಗಿ ನಂತರ ಅದು ಸುದ್ದಿಯಾದ ನಂತರವಷ್ಟೇ ಪಟ್ಟಣ ಪಂಚಾಯಿತಿ ಸ್ಪಂದಿಸುತ್ತದಾ ಎನ್ನುವ ಸಿಟ್ಟು ಜನರಲ್ಲಿ ವ್ಯಕ್ತವಾಗುತ್ತಿದೆ. ಅಲ್ಲದೆ, ಒಂದೇ ದಿನ ಐವರಿಗೆ ನಾಯಿಗಳು ಕಚ್ಚಿದ ಮೇಲಂತೂ ಜನರ ಸಿಟ್ಟು ಹೆಚ್ಚಾಗಿದೆ. ಜಾಲತಾಣಗಳಲ್ಲಿ ಪ.ಪಂ. ವೈಖರಿಯ ಬಗ್ಗೆ ಕಟು ಟೀಕೆ ವ್ಯಕ್ತವಾಗುತ್ತಿದೆ. ಇಷ್ಟಾದರೂ ಈವರೆಗೆ ಅಧಿಕಾರಿಗಳು ನಾಯಿಗಳ ದಾಳಿಗೆ ಗುರಿಯಾದವರ ಯೋಗಕ್ಷೇಮ ವಿಚಾರಿಸಿಲ್ಲ.
ಪ್ರಸ್ತುತ ಕೊರೋನ ಸೋಂಕಿನ ಬಗ್ಗೆ ಭಯ ಒಂದೆಡೆಯಾದರೆ, ಮಕ್ಕಳನ್ನು ಹೊರಗೆ ಕಳುಹಿಸಲು ನಾಯಿಗಳ ಭೀತಿ ಇನ್ನೊಂದೆಡೆ. ಮಕ್ಕಳನ್ನು ಹೊರಗೆ ಕಳಿಸಲು ಭಯ, ಶಾಲೆಗೆ ಕಳಿಸಲು ಆತಂಕ. ಹಿರಿಯರು ರಸ್ತೆಗೆ ಬರಲಿಕ್ಕೇ ಹೆದರುತ್ತಿದ್ದಾರೆ. ನಾಯಿಗಳು ಅಟ್ಟಿಸಿಕೊಂಡು ಬಂದರೆ ಓಡಲು ಇವರಿಂದ ಕಷ್ಟ. ಇಂಥ ಪರಿಸ್ಥಿತಿ ಗುಡಿಬಂಡೆ ಪಟ್ಟಣದಲ್ಲಿ ಸೃಷ್ಟಿಯಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು.
ಶ್ರೀನಾಥ್, ಪೋಷಕರು ಗುಡಿಬಂಡೆ.
ಪಟ್ಟಣದಲ್ಲಿ ಸುಮಾರು ವರ್ಷದಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ವಾಹನ ಸವಾರರಿಗೆ ಅಡ್ಡ ದಾಳಿ ಮಾಡುತ್ತಿವೆ. ಅಂಥ ಸಂದರ್ಭದಲ್ಲಿ ವಾಹನ ಸವಾರರು ಕೆಳಗೆ ಬಿದ್ದು ಕೈ, ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಅನೇಕ ಉದಾಹರಣೆಗಳು ಇವೆ. ಇದಕ್ಕೆ ಕಾರಣರು ಯಾರು? ಜವಾಬ್ದಾರಿ ಯಾರದ್ದು?
ಜಿ.ಎನ್.ನವೀನ್, ಜಿಲ್ಲಾಧ್ಯಕ್ಷ, ಜಯಕರ್ನಾಟಕ ಯುವ ವಿಭಾಗ