ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ; ಸ್ಥಳದಲ್ಲಿಯೇ ಮೂವರು ಬಲೆಗೆ
By GS Bharath Gudibande
ಚಿಕ್ಕಬಳ್ಳಾಪುರ: ತಾಲೂಕಿನ ಅರೂರು ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆ ಮಾಂಸ ಕತ್ತರಿಸುತ್ತಿದ್ದ ಮೂವರನ್ನು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮೀ ಹಾಗೂ ಅವರ ತಂಡ ಖಚಿತ ಮಾಹಿತಿ ಮೇರೆಗೆ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಜಿಂಕೆ ಮಾಂಸ ಕತ್ತರಿಸುತ್ತಿದ್ದ ಖದೀಮರನ್ನು ಸ್ಥಳದಲ್ಲಿಯೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮೀ
10 ಕೆ.ಜಿ. ಜಿಂಕೆ ಮಾಂಸದ ಸಮೇತ ವೆಂಕಟೇಶಪ್ಪ (65), ರಾಜಣ್ಣ (55), ವೆಂಕಟೇಶ್ (35) ಎಂಬುವವರನ್ನು ಬಂಧಿಸಲಾಗಿದೆ. ಇನ್ನು ಮತ್ತಿಬ್ಬರು ಆರೋಪಿಗಳಾದ ಸುಶೀಲಮ್ಮ ಮತ್ತು ವೆಂಕಟಲಕ್ಷ್ಮಮ್ಮ ಎಂಬುವವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅರಣ್ಯಾಧಿಕಾರಿಗಳು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪೆರೇಸಂದ್ರ ಸಮೀಪವಿರುವ ಅರೂರು ಗ್ರಾಮದ ಹರಿಸ್ಥಳ ಮೀಸಲು ಅರಣ್ಯ ಪ್ರದೇಶದ 102 ಸರ್ವೆ ನಂಬರ್ ಬಳಿ ಜಿಂಕೆ ಮಾಂಸ ಕತ್ತಿರಿಸುತ್ತಿದ್ದಾಗ ಈ ಮೂವರು ಅರೆಸ್ಟ್ ಮಾಡಲಾಗಿದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಚಿಕ್ಕಬಳ್ಳಾಪುರ ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮೀ ಅವರು ಸಿಕೆನ್ಯೂಸ್ ನೌ ವೆಬ್‌ತಾಣಕ್ಕೆ ತಿಳಿಸಿದರು.
ವಿನಾಶದತ್ತ ಜಿಂಕೆ ಸಂತತಿ
ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಸಮೀಪದ ಹಿರೇನಾಗವೇಲಿ, ತೀಲಕುಂಟಹಳ್ಳಿ ಸಮೀಪದಲ್ಲಿ ಕಲ್ಲು ಕ್ವಾರಿಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಅಲ್ಲಿ ನಡೆಸಲಾಗುವ ಭಾರೀ ಸ್ಫೋಟಗಳಿಂದ ಮೀಸಲು ಅರಣ್ಯ ಪ್ರದೇಶದಲ್ಲಿರುವ ವನ್ಯ ಸಂಪತ್ತು ನಾಶವಾಗುತ್ತಿದೆ. ಕಲ್ಲು ಕಟುಕರ ಪಾಲಾಗಿರುವ ಹಿರೇನಾಗವೇಲಿ ಬೆಟ್ಟದ ಸುತ್ತಮುತ್ತ ಮೀಸಲು ಅರಣ್ಯ ಪ್ರದೇಶವಿದ್ದು, ಅಲ್ಲಿದ್ದ ಜಿಂಕೆ, ನವಿಲು, ಅಪರೂಪದ ಪಕ್ಷಿ ಸಂಕುಲ ವಿನಾಶದ ಅಂಚಿನಲ್ಲಿದೆ. ವನ್ಯಮೃಗಗಳು ಅಕ್ಕಪಕ್ಕದ ಹಳ್ಳಿಗಳಿಗೆ ನುಗ್ಗುತ್ತಿವೆ. ದುರಂತವೆಂದರೆ; ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಹುಟ್ಟೂರಿಗೆ ಕೆಲ ಕಿ.ಮೀ. ದೂರದಲ್ಲಿರುವ ಈ ಮೀಸಲು ಅರಣ್ಯ ಪ್ರದೇಶದಲ್ಲಿ ಎಗ್ಗಿಲ್ಲದೆ ಒತ್ತುವರಿ ನಡೆಯುತ್ತಿರುವುದು ಒಂದೆಡೆಯಾದರೆ, ಕಲ್ಲು ಬಂಡೆಗಳನ್ನು ನುಂಗುತ್ತಿರುವ ರಾಕ್ಷಸರಿಂದ ವನ್ಯ ಸಂಪತ್ತು ವಿನಾಶದತ್ತ ಸಾಗಿದೆ.

















