ಸ್ಥಳೀಯ ಬಂಕ್‌ಗಳಲ್ಲಿ ತೈಲ ದಾಸ್ತಾನು ಖಾಲಿ
by Ra Na Gopala Reddy Bagepalli
ಬಾಗೇಪಲ್ಲಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 7ರಲ್ಲಿರುವ ಪೆಟ್ರೋಲ್ ಬಂಕ್‌ಗಳಿಂದ ಪೆಟ್ರೋಲ್, ಡೀಸೆಲ್ ತುಂಬಿಕೊಳ್ಳಲು ನೆರೆಯ ಆಂಧ್ರ ಪ್ರದೇಶದ ಜನರು ಮುಗಿಬೀಳುತ್ತಿದ್ದಾರೆ.
ಬಾಗೇಪಲ್ಲಿ ಪಟ್ಟಣವು ಆಂಧ್ರದ ಗಡಿಗೆ ಕೇವಲ ಕೇವಲ 3 ಕಿ.ಮೀ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ-7 ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸಂಪರ್ಕ ಹೊಂದಿದೆ. ಹೀಗಾಗಿ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚು.
ಆಂಧ್ರ ಪ್ರದೇಶದಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ ಒಂದಕ್ಕೆ ₹110.17 ಇದೆ. ಡೀಸೆಲ್ ₹96.28 ಇದೆ. ಆದರೆ ಬಾಗೇಪಲ್ಲಿಯಲ್ಲಿ ಪೆಟ್ರೋಲ್-₹100. 62 ಹಾಗೂ ಡೀಸೆಲ್ ₹85. 06 ಇದೆ.

ಲೀಟರ್ ಒಂದಕ್ಕೆ ಹೆಚ್ಚು ಕಡಿಮೆ ₹10 ಆಂಧ್ರ ಪ್ರದೇಶ ಮತ್ತು ಕರ್ನಾಟಕಕ್ಕೆ ವ್ಯತ್ಯಾಸವಿದ್ದು, ಗಡಿಯ ಅಂಚಿನಲ್ಲಿರುವ ಜನರು ಹಾಗೂ ಬಹುದೂರ ಸಾಗುವ ಲಾರಿ-ಬಸ್ಸುಗಳು ಹಾಗೂ ಚೆಕ್‌ಪೋಸ್ಟ್, ಕೊಡೂರು, ಚಿಲಮತ್ತೂರು, ಲೇಪಾಕ್ಷಿ, ಗೋರಂಟ್ಲ ಸೇರಿದಂತೆ ವಿವಿಧ ಕಡೆಯ ಗ್ರಾಮೀಣ ಪ್ರದೇಶಗಳ ಜನರು ದ್ವಿಚಕ್ರ, ಆಟೋ, ಕಾರು, ಟೆಂಪೋ, ಲಾರಿಗಳಲ್ಲಿ ಹಾಗೂ ಕ್ಯಾನುಗಳಲ್ಲಿ ಇಂಧನ ತುಂಬಿಸಿಕೊಂಡು ಹೋಗುತ್ತಿದ್ದಾರೆ.
ಇದರಿಂದ ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿರುವ ಪೆಟ್ರೋಲ್ ಬಂಕ್ʼಗಳಲ್ಲಿ ಇಂಧನದ ಮಾರಾಟ ಹೆಚ್ಚಾಗಿದೆ. ಆದರೆ ಬೆಲೆ ಇಳಿಕೆಯಿಂದ ದಾಸ್ತಾನು ಇಟ್ಟಿದ್ದ ಹಲವು ಬಂಕ್ ಮಾಲೀಕರಿಗೆ ನಷ್ಟ ಅಗಿದೆ ಎಂದು ಗೊತ್ತಾಗಿದೆ.
ಒಟ್ಟಾರೆ ಪೆಟ್ರೋಲ್, ಡೀಸಲ್ ಬೆಲೆ ಇಳಿಕೆಯಿಂದ ಆಂಧ್ರದ ಜನತೆಯಿಂದ ಗಡಿಯಂಚಿನಲ್ಲಿರುವ ಬಂಕ್ʼಗಳಿಗೆ ದುಪ್ಪಟ್ಟು ವ್ಯಾಪಾರವಾಗುತ್ತಿದೆ.

















