ಗಂಗಾಧರ ಗೌಡ ಸಚಿವ ಡಾ.ಕೆ.ಸುಧಾಕರ್ ಕಟ್ಟಾ ಅಭಿಮಾನಿ
By GS Bharath Gudibande
ಗುಡಿಬಂಡೆ: ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹೋಬಳಿಯ ನವಿಲುಗುರ್ಕಿ ಬಳಿ ಕುಶಾವತಿ ನದಿ ರಭಸವಾಗಿ ಹರಿಯುತ್ತಿದ್ದು, ಕಳೆದ ರಾತ್ರಿ 7-30ರ ಸಮಯದಲ್ಲಿ ರಸ್ತೆ ದಾಟುವಾಗ ನೀರಿನ ರಭಸಕ್ಕೆ ದ್ವಿಚಕ್ರ ವಾಹನ ಸಮೇತ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಅವರಿಗಾಗಿ ಶೋಧ ರಾತ್ರಿಯಿಂದಲೇ ನಡೆಯುತ್ತಿದೆ.
ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದ ಕಮ್ಮಗುಟ್ಟಹಳ್ಳಿ ಗ್ರಾ.ಪಂ. ಸದಸ್ಯ ನಮಿಲಗುರ್ಕಿ ನಿವಾಸಿ ಗಂಗಾಧರ್ ಅಲಿಯಾಸ್ ಗೌಡ ಎಂಬಾತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ಮೊದಲು ಇದೇ ಜಾಗದಲ್ಲಿ ನೀರಿನಲ್ಲಿ ದ್ವಿಚಕ್ರ ವಾಃನ ಸಮೇತ ಕೊಚ್ಚಿಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.
ಅಗ್ನಿಶಾಮಕ ದಳದಿಂದ ತೀವ್ರ ಶೋಧ
ಕುಶಾವತಿ ನದಿ ನೀರು ನಮಿಲುಗುರ್ಕಿಯ ರಸ್ತೆಯ ಮೇಲೆ ಉಕ್ಕಿ ಹರಿಯುತ್ತದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದೆ. ಗಂಗಾಧರ್ ಅವರು ಈ ರಸ್ತೆ ಮೂಲಕವೇ ರಾಮಪಟ್ಟಣ ಗ್ರಾಮದಿಂದ ನವಿಲುಗುರ್ಕಿಗೆ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದಾಗ ನೀರಿನ ರಭಸಕ್ಕೆ ಕೆಳಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ರಾತ್ರಿಯ ಕತ್ತಲಿನಲ್ಲಿ ಸಂಭವಿಸಿದ ಈ ಘಟನೆ ಸ್ಥಳೀಯ ಗ್ರಾಮಸ್ಥರಿಗೆ ದಿಗ್ಭ್ರಮೆ ಉಂಟು ಮಾಡಿದೆ. ಹಗಲು ವೇಳೆಯಾಗಿದ್ದರೆ ಯಾರಾದರೂ ರಕ್ಷಿಸುವ ಸಾಧ್ಯತೆ ಇತ್ತು. ರಾತ್ರಿ ಘಟನೆ ನಡೆದಾಗ ಅವರನ್ನು ರಕ್ಷಣೆ ಮಾಡಲಾಗಲಿಲ್ಲ. ಯಾರೋ ಒಂದಿಬ್ಬರು ರಕ್ಷಣೆಗೆ ಧಾವಿಸುವ ಹೊತ್ತಿಗೆ ಗಂಗಾಧರ್ ಅವರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಅವರಿಬ್ಬರು ದ್ವಿಚಕ್ರ ವಾಹನವನ್ನು ದಡಕ್ಕೆ ಎಳೆದು ಪ್ರಯತ್ನ ನಡೆಸಿದರಾದರೂ ಸಾಧ್ಯವಾಗಿಲ್ಲ ಎಂದು ಗೊತ್ತಾಗಿದೆ.
ಕುಶಾವತಿ ನದಿಯು ಗುಡಿಬಂಡೆಯ ಅಮಾನಿ ಭೈರಸಾಗರಕ್ಕೆ ಹರಿಯುತ್ತಿದ್ದು, ನದಿ ಹರಿವಿನ ಉದ್ದಕ್ಕೂ ಶೋಧ ನಡೆಸಲಾಗುತ್ತಿದೆ. ಸ್ಥಳೀಯರು ಕೂಡ ಹುಡುಕಾಟ ನಡೆಸುತ್ತಿದ್ದಾರೆ.
ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ಘಟನಾ ಸ್ಥಳದಲ್ಲಿ ಗುಡಿಬಂಡೆಯ ಅಗ್ನಿಶಾಮಕ ದಳದ ಸಿಬ್ಬಂದಿ ಗಂಗಾಧರ್ ಅವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಗಂಗಾಧರ್ ಆರೋಗ್ಯ ಸಚಿವರ ಕಟ್ಟಾ ಅಭಿಮಾನಿಯಾಗಿದ್ದು, ಅವರ ಹಿತೈಷಿಗಳು ಸ್ಥಳದಲ್ಲಿ ಜಮಾಯಿಸಿದ್ದಾರೆ. ಅವರ ಕುಟುಂಬ ಸದಸ್ಯರು ಅತೀವ ದುಃಖದಲ್ಲಿದ್ದಾರೆ.
ಗುಡಿಬಂಡೆ ಹಾಗೂ ಪೇರೆಸಂದ್ರ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಗಂಗಾಧರ್ ಅವರನ್ನು ಹುಡುಕಾಡುತ್ತಿದ್ದಾರೆ. ಗ್ರಾಮಸ್ಥರು ಸೇತುವೆ ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments 1