ಶೋಧ ಕಾರ್ಯಕ್ಕೆ ಬಿದಿರು, ಹಾವುಗಳ ತೊಡಕು; ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್ ಸಿಬ್ಬಂದಿಯಿಂದ ತೀವ್ರ ಶೋಧ
By GS Bharath Gudibande
ಗುಡಿಬಂಡೆ: ಶುಕ್ರವಾರ ರಾತ್ರಿ ಸುಮಾರು 7.30ರ ಸಮಯದಲ್ಲಿ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಗಂಗಾಧರ ಗೌಡ ಅವರು ಕುಶಾವತಿ ನದಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ 48 ಗಂಟೆಗಳೇ ಕಳೆದರೂ ಇನ್ನೂ ಅವರ ಸುಳಿವು ಸಿಕ್ಕಿಲ್ಲ.
ತಮ್ಮೆಲ್ಲ ಶ್ರಮ, ಬುದ್ಧಿಮತ್ತೆ ಬಳಸಿ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಶೋಧಿಸುತ್ತಿದ್ದರೂ ಗ್ರಾ,ಪಂ. ಸದಸ್ಯನ ಜಾಡು ಸಿಗದೇ ಸಿಗದೇ ಅಧಿಕಾರಿಗಳು ಚಿಂತಾಕ್ರಾಂತರಾಗಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
ಇಂದು ಬೆಳಗ್ಗೆಯಿಂದ ಕುಶಾವತಿ ನದಿ ಸೇತುವೆ ಬಳಿಯಿಂದ ಗುಡಿಬಂಡೆ ತಾಲೂಕಿನ ಅಮಾನಿ ಭೈರಸಾಗರದ ಅಂಗಳದವರೆಗೂ ಶೋಧ ಕಾರ್ಯ ನಡೆಸಲಾಯಿತು. ಅಮಾನಿ ಭೈರಸಾಗರದಲ್ಲಿ ಬೆಂಗಳೂರಿನ ಈಜು ಪರಿಣಿತರ ತಂಡ ಹಾಗೂ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರಾದರೂ ಯಾವುದೇ ಫಲ ಸಿಕ್ಕಿಲ್ಲ.
ಕಳೆದ 48 ಗಂಟೆಗಳಿಂದ ವಿಶ್ರಾಂತಿ ಇಲ್ಲದೇ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, ಆರಕ್ಷಕ ವೃತ್ತ ನಿರೀಕ್ಷಕರು, ತಹಸೀಲ್ದಾರ್, ಕಂದಾಯ ಇಲಾಖೆ ಹಾಗೂ ವಿವಿಧ ಅಧಿಕಾರಿಗಳು ಘಟನೆ ನಡೆದ ಸ್ಥಳದಿಂದ ಗುಡಿಬಂಡೆ ಅಮಾನಿ ಭೈರಸಾಗರ ಕೆರೆವರೆಗೂ ನಡೆಯುತ್ತಿರುವ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಹುಡುಕಾಟದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು
ಎರಡು ದಿನಗಳಿಂದ ಅಧಿಕಾರಿಗಳು ಗ್ರಾ.ಪಂ.ಸದಸ್ಯನ ಹುಡುಕಾಟದಲ್ಲಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದು, ಕುಶಾವತಿ ನದಿ ಹರಿವಿನ ಹಾದಿಯಲ್ಲಿ ಮರಗಿಡಗಳು, ಬಿದರಿನ ಗಿಡಗಳು ದಟ್ಟವಾಗಿವೆ. ಜತೆಗೆ, ಹಾವುಗಳ ಕಾಟವೂ ಇದೆ. ಗ್ರಾ.ಪಂ. ಸದಸ್ಯ ಕೊಚ್ಚಿಕೊಂಡು ಹೋದ ಸ್ಥಳದಿಂದ ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ಆರಂಭದ ಕಾಲುವೆವರೆಗೂ ಬಿದಿರು ಬೆಳದುನಿಂತಿದೆ. ಅಲ್ಲೆಲ್ಲ ನದಿಯು 10ರಿಂದ 15 ಅಡಿ ಆಳವಿದೆ. ಆ ಭಾಗದಲ್ಲಿ ದೇಹ ಸಿಲುಕಿಕೊಂಡಿರಬಹುದು ಎಂದು ಅಧಿಕಾರಿಗಳು ಹಾಗೂ ಪರಿಣಿತರ ತಂಡ ಅಂದಾಜಿಸಿ ರಾಫ್ಟ್ (raft) ಬಳಸಿಕೊಂಡು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಶುಕ್ರವಾರ ರಾತ್ರಿ ರಾಮಪಟ್ಟಣದಿಂದ ಮಂಕಡಿಲ್ಲು ರಸ್ತೆ ಮಾರ್ಗವಾಗಿ ಮನೆಗೆ ಹೋಗುವಾಗ ರಸ್ತೆಯ ಸೇತುವೆ ಮೇಲೆ ಕುಶಾವತಿ ನದಿ ನೀರು ರಭಸವಾಗಿ ಹರಿಯುತ್ತಿದ್ದನ್ನು ಕಂಡ ಗಂಗಾಧರ್ ತನ್ನ ಜತೆಯಲ್ಲಿದ್ದ ವೃದ್ದರೊಬ್ಬರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿ ನಂತರ ದ್ವಿಚಕ್ರ ವಾಹನ ತಳ್ಳಿಕೊಂಡು ಹೋಗಲು ವಾಪಸು ಬಂದು ಆ ವಾಹನವನ್ನು ತಳ್ಳಿಕೊಂಡು ಹೋಗುವಾಗ ನೀರಿನ ರಭಸಕ್ಕೆ ಮತ್ತು ಪಾಚಿಯಿಂದ ಕಾಲು ಜಾರಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಮುನ್ನೆಚ್ಚರಿಕೆಯಿಂದ ವೃದ್ಧರೊಬ್ಬರ ಜೀವ ಉಳಿಸಿ ತಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿಕೊಂಡ ಗಂಗಾಧರ ಗೌಡರ ಬಗ್ಗೆ ಸ್ಥಳೀಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅವರ ಮನೆಯವರು ತೀವ್ರ ದುಃಖದಲ್ಲಿದ್ದರೆ, ಜನರು ಗಂಗಾಧರ ಗೌಡರ ಕ್ಷೇಮಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.
ಶೋಧ ಕಾರ್ಯಚರಣೆಯಲ್ಲಿ ಸ್ವತಃ ಚಿಕ್ಕಬಳ್ಳಾಪುರ ತಹಸೀಲ್ದಾರ್ ಗಣಪತಿ ಶಾಸ್ತ್ರಿ ಹಾಗೂ ಗುಡಿಬಂಡೆ ಆರಕ್ಷಕ ವೃತ್ತ ನಿರೀಕ್ಷಕ ಲಿಂಗರಾಜು ಅವರು ಸಿಬ್ಬಂದಿ ಜತೆ ಹೋಗಿ ಹುಡುಕಾಟ ನಡೆಸಿದ್ದಾರೆ.
ಅಮಾನಿಭೈರ ಸಾಗರಕ್ಕೆ ಕುಶಾವತಿ ಸೇರುವ ಜಾಗದಲ್ಲಿ ಶೋಧ.
ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಅಗ್ನಿಶಾಮಕ ದಳ, ಆರ್.ಡಿ.ಪಿ.ಆರ್, ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ, ತಹಸೀಲ್ದಾರ್ ಹೀಗೆ ಅಧಿಕಾರಿಗಳು ಹುಡುಕಾಟದಲ್ಲಿದ್ದಾರೆ. ಘಟನೆ ನಡೆದ ಸ್ಥಳದಿಂದ ಗುಡಿಬಂಡೆ ಅಮಾನಿ ಭೈರಸಾಗರ ಕೆರೆ ಸೇರುವ ಆರಂಭದವರಗೂ ಹುಡುಕಾಟ ನಡೆಸಲಾಗುತ್ತಿದೆ. ಆರಂಭದಲ್ಲಿ ಗಿಡಮರಗಳು, ಬಿದಿರು ಹೆಚ್ಚಾಗಿದೆ. ಶೋಧಕ್ಕೆ ಬಳಸಲಾಗುವ ರಾಫ್ಟ್ (raft) ಹೊಗಲು ದಾರಿ ಇರಲಿಲ್ಲ. ಅವುಗಳನ್ನು ಕಡಿದು ಮುಂದಕ್ಕೆ ಹೊದೆವು. ಹಾವುಗಳ ಕಾಟ ಜಾಸ್ತಿ ಇತ್ತು. ಕೆಲ ಭಾಗದಲ್ಲಿ ನದಿ 10-15 ಅಡಿ ಆಳವಾಗಿದೆ. ಬಹುಶಃ ಈ ಪ್ರದೇಶದಲ್ಲಿ ಗಂಗಾಧರ ಗೌಡರು ಸಿಲುಕಿ ಕೊಂಡಿರಬಹುದು. ಹಾಗಾಗಿ ಎಲ್ಲಾ ತಂಡಗಳು ನಿರಂತರವಾಗಿ ಕಾರ್ಯಚರಣೆ ನಡೆಸುತ್ತಿವೆ.
ಗಣಪತಿ ಶಾಸ್ತ್ರಿ, ತಹಸೀಲ್ದಾರ್, ಚಿಕ್ಕಬಳ್ಳಾಪುರ