ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದ ಬಿ.ವೈ.ವಿಜಯೇಂದ್ರ
by Ra Na Gopala Reddy Bagepalli
ಬಾಗೇಪಲ್ಲಿ: ಮುಂದಿನ ವಿಧಾನಸಭೆ ಚುನಾವಣೆ ತನಕ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಎನ್ನುವುದು ಕಾಂಗ್ರೆಸ್ ಪಕ್ಷ ಹುಟ್ಟುಹಾಕಿದ ʼರಾಜಕೀಯ ಕುತಂತ್ರʼ ಎಂದು ರಾಜ್ಯ ಬಿಜೆಪಿ ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಅವರು ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಬಂದ ವೇಳೆ ಪಟ್ಟಣದಲ್ಲಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.
ಬಿಟ್ ಕಾಯನ್ ಪ್ರಕರಣದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಬಿಟ್ ಕಾಯನ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಎಳೆಯುತ್ತಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಯಾವುದೇ ಕಾರಣಕ್ಕೆ ಸಿ.ಎಂ.ಬದಲಾವಣೆ ಇಲ್ಲ” ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಬಿಟ್ ಕಾಯಿನ್ ವಿಷಯ ಇಟ್ಟುಕೊಂಡು ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ. ಏನೂ ಆಗದು ಎಂದು ಗೊತ್ತಿದ್ದೇ ಮುಖ್ಯಮಂತ್ರಿಗಳನ್ನು ಅನಗತ್ಯವಾಗಿ ಎಳೆದುತರುತ್ತಿದೆ ಎಂದು ಅವರು ದೂರಿದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲೂಕು ಮಂಡಲಾಧ್ಯಕ್ಷ ಆರ್.ಪ್ರತಾಪ್, ಮುಖಂಡ ಹಾಗೂ ವರ್ತುಲ ರಸ್ತೆ ಪ್ರಾಧಿಕಾರದ ಅಧ್ಯಕ್ಷ ಸಿ.ಮುನಿರಾಜು, ಕೆ.ಡಿ.ಪಿ.ಸದಸ್ಯ-ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷ ವೆಂಕಟೇಶ್, ರಾಜ್ಯ ಕಾರ್ಯಕಾರಣಿ ಸದಸ್ಯ ನಿರ್ಮಲಮ್ಮ, ಮಹಿಳಾ ಮುಖಂಡರಾದ ಮಂಜುಳಾ, ಗಂಗುಲಮ್ಮ, ರೂಪಾ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನರೆಡ್ಡಿ, ಬಾಬಾಜಾನ್, ರಂಗಾರೆಡ್ಡಿ, ವೆಂಕಟರೆಡ್ಡಿ, ಕೃಷ್ಣಾರೆಡ್ಡಿ, ಗಂಗಿರೆಡ್ಡಿ, ಅನಿಲ್, ಮಂಜು, ಸೋಮು, ಮಧು ಮತ್ತಿತರರು ಹಾಜರಿದ್ದರು.