ಸೋರುತಿವೆ ಗುಡಿಬಂಡೆ ಸರಕಾರಿ ಸ್ಕೂಲುಗಳು
- ಮಕ್ಕಳನ್ನು ಶಾಲೆಗಳಿಗೆ ಕಳಿಸಲು ಪೋಷಕರ ಹಿಂದೇಟು
- ಚಿಕ್ಕಬಳ್ಳಾಪುರ-ಕೋಲಾರದಲ್ಲಿ ಆರೆಂಜ್ ಅಲರ್ಟ್
- ಗುಡಿಬಂಡೆ ಪಟ್ಟಣಕ್ಕೆ ಸಂಪರ್ಕ ನೀಡುವ ಎಲ್ಲಾ ಮಾರ್ಗಗಳು ಜಲಾವೃತ
By GS Bharath Gudibande
ಗುಡಿಬಂಡೆ: ನಿರಂತರವಾಗಿ ಅನಾವೃಷ್ಟಿಯಿಂದ ತತ್ತರಿಸುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಈಗ ಅತಿವೃಷ್ಟಿಯಿಂದ ತತ್ತರಿಸುತ್ತಿದ್ದು, ನಿರಂತರ ಮಳೆ ಕಾರಣಕ್ಕೆ ಈ ಭಾಗದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಮಳೆ ಕೃಷಿಯ ಮೇಲೆ ಮಾರಕ ಪರಿಣಾಮ ಬೀರಿ ರೈತ ಕಂಗೆಟ್ಟಿರುವುದು ಒಂದೆಡೆಯಾದರೆ, ಕೋವಿಡ್ʼನಿಂದ ಎರಡು ವರ್ಷ ಕಷ್ಟಕ್ಕೆ ಸಿಲುಕಿದ್ದ ಶೈಕ್ಷಣಿಕ ವ್ಯವಸ್ಥೆ ಈಗ ವರುಣ ತಾಂಡವದಿಂದ ಪುನಾ ತತ್ತರಿಸಿದೆ. ಮಳೆ ಅಬ್ಬರದಿಂದ ಪೋಷಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ಎಲ್ಲರೂ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.
ಇದೇ ವೇಳೆ ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ ಇನ್ನೂ ಎರಡು-ಮೂರು ದಿನ ಭಾರೀ ಮಳೆ ಆಗುವ ಮುನ್ಸೂಚನೆ ಇದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹನ್ನೊಂದು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಎರಡು ದಿನಗಳ ಕಾಲ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಆದರೆ; ರಜೆ ಘೋಷಣೆಗೂ ಮುನ್ನವೇ ಪೋಷಕರು ತೀವ್ರ ಆತಂಕಕ್ಕೆ ಗುರಿಯಾಗಿದ್ದರು. ಎಲ್ಲ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಕೆರೆಗಳ ಕೋಡಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತಾಲೂಕಿನಾದ್ಯಂತ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಭಯದಿಂದ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಆತಂಕದ ನಡುವೆಯೇ ಜಿಲ್ಲಾಡಳಿತದಿಂದ ರಜೆಯ ಘೋಷಣೆ ಆಗಿದೆ.
ತಾಲೂಕಿನಲ್ಲಿ 6,699 ವಿದ್ಯಾರ್ಥಿಗಳು
ಗುಡಿಬಂಡೆ ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 120 ಶಾಲೆಗಳಿವೆ. 64 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, 28 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, 1 ಶಾಲೆ 6 ರಿಂದ 8ನೇ ತರಗತಿ, 11 ಪ್ರಾಥಮಿಕ ಶಾಲೆ, 1 ಶಾಲೆ 8 ರಿಂದ 10ನೇ ತರಗತಿ, 1 ಸರಕಾರಿ ಅನುದಾನಿತ ಶಾಲೆ, ಹಾಗೂ ಅನುದಾನ ರಹಿತ 12 ಶಾಲೆಗಳು ಸೇರಿ ಒಟ್ಟು 120 ಶಾಲೆಗಳಿವೆ. ಇವುಗಳಲ್ಲಿ 13,00 ವಿದ್ಯಾರ್ಥಿಗಳು ಪಟ್ಟಣದಲ್ಲಿ ಪ್ರತಿನಿತ್ಯ ಶಾಲೆಗಳಿಗೆ ಹೋಗುತ್ತಿದ್ದಾರೆ. ಇನ್ನು; ಗ್ರಾಮೀಣ ಪ್ರದೇಶದಲ್ಲಿ ಒಟ್ಟು 5,399 ವಿದ್ಯಾರ್ಥಿಗಳು ಮಳೆಯಲ್ಲೇ ಶಾಲೆಗಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇತ್ತು. ಬಹುತೇಕ ಭಾಗಗಳಲ್ಲಿ ಬಸ್ ಸೌಲಭ್ಯ ಇಲ್ಲದಿದ್ದ ಕಾರಣ ಮಕ್ಕಳು ನಡೆದೇ ಹೋಗಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸಲು ಹಿಂಜರಿಯುತ್ತಿದ್ದರು.
ಶಾಲೆಗಳಿಗೆ ರಜೆ ಘೋಷಣೆ
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆಯಾಗುತ್ತಿದೆ. ಬಹುತೇಕ ಎಲ್ಲಾ ಕಡೆ ಕೆರೆ ಕುಂಟೆ, ಕಾಲುವೆಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಮನೆಗಳು ಬಿದ್ದು ಕೆಲವರಿಗೆ ಪ್ರಾಣಾಪಾಯವಾಗಿದೆ. ತಾಲೂಕಿನಲ್ಲಿ ಬಹುತೇಕ ಶಾಲೆಗಳು ಹಳೆಯ ಹಾಗೂ ಕಳಪೆ ಕಾಮಗಾರಿಯ ಕಟ್ಟಡಗಳಾಗಿದ್ದು, ಅವು ಅಪಾಯದ ಸ್ಥಿತಿಯಲ್ಲಿವೆ. ಅನಾಹುತ ಸಂಭವಿಸುವ ಮೊದಲು ಮುನ್ನೆಚ್ಚರಿಕೆ ಕ್ರಮ ವಹಿಸಿರುವ ಜಿಲ್ಲಾಧಿಕಾರಿಗಳು ನವೆಂಬರ್ 19 ಮತ್ತು 20ರಂದು ರಜೆ ಘೋಷಿಸಿದ್ದಾರೆ.
ಪದವಿ ಕಾಲೇಜು ವಿದ್ಯಾರ್ಥಿಗಳಿಗಿಲ್ಲ ರಜೆ
ಜಿಲ್ಲಾಡಳಿತವು ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿಲ್ಲ. ಈ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ಮಳೆಯಲ್ಲಿ ಕೆಲಸಕ್ಕೆ ಹಾಜರಾಗಲು ಪರದಾಡುತ್ತಿದ್ದಾರೆ. ಹಾಗಾಗಿ ಈ ಕಾಲೇಜುಗಳಿಗೂ ರಜೆ ಘೋಷಣೆ ಮಾಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.
ಶಿಥಿಲ ಸ್ಥಿತಿಯಲ್ಲಿ ಶಾಲಾ ಕಟ್ಟಡಗಳು
ಬಹುತೇಕ ಸರಕಾರಿ ಶಾಲೆಗಳ ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಸಿಕೆನ್ಯೂಸ್ ನೌ ಪತ್ತೆ ಹಚ್ಚಿದೆ. ಗುಡಿಬಂಡೆ ಪಟ್ಟಣಕ್ಕಿಂತ ಗ್ರಾಮೀನ ಪ್ರದೇಶದಲ್ಲಿ ಶಾಲೆ ಕಟ್ಟಡಗಳು ಸೋರುತ್ತಿವೆ ಇಲ್ಲವೇ ಕುಸಿದು ಬೀಳುವ ಸ್ಥಿತಿಯಲ್ಲಿವೆ.
ಜಂಗಾಲಹಳ್ಳಿ ಶಾಲೆ ಚಿತ್ರಗಳು.
ತಾಲೂಕಿನ ಜಂಗಾಲಹಳ್ಳಿ ಗ್ರಾಮದ ಸರಕಾರಿ ಶಾಲೆ ಸಂಪೂರ್ಣವಾಗಿ ಸೋರುತ್ತಿದೆ. ಮಳೆಯಿಂದ ತರಗತಿ ಕೊಠಡಿಗಳಲ್ಲಿ ನೀರು ತುಂಬಿದೆ. ಕಿಟಕಿ ಬಾಗಿಲುಗಳು ಶಿಥಿಲವಾಗಿದ್ದು, ಮಳೆಯಿಂದ ಕಟ್ಟಡಕ್ಕೆ ರಕ್ಷಣೆ ಇಲ್ಲ. ಶಿಕ್ಷಣ ಇಲಾಖೆಯಿಂದ ಶಾಲಾ ಸಮರ್ಪಕ ನಿರ್ವಹಣೆಯೂ ಇಲ್ಲದಿರುವುದು ಹಾಗೂ ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ.
ಹಾಗೆಯೇ; ಪಸುಪುಲೋಡು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಭಾಗದ ಚಾವಣಿ ಕಿತ್ತು ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ತರಗತಿಗಳು ನಡೆಯದಿದ್ದ ಸಮಯದಲ್ಲಿ ಚಾವಣಿ ಕುಸಿದು ಬಿದ್ದಿದೆ. ಒಂದು ವೇಳೆ ತರಗತಿ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದರೆ ಪ್ರಾಣಾಪಾಯ ತಪ್ಪುತ್ತಿರಲಿಲ್ಲ. ಶಿಕ್ಷಕರ ಮುನ್ನೆಚ್ಚರಿಕೆಯಿಂದ ಅನಾಹುತ ತಪ್ಪಿದೆ.
ಪಸುಪುಲೋಡು ಸರಕಾರಿ ಶಾಲೆಯ ಚಿತ್ರಗಳು.
ಒಂದೆಡೆ ದೇಶದಲ್ಲಿ ಎಲ್ಲರಿಗಿಂತ ಮೊದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿ ಸುದ್ದಿ ಮಾಡಲು ತವಕಿಸುತ್ತಿರುವ ಕರ್ನಾಟಕದಲ್ಲಿ ಗುಡಿಬಂಡೆ ತಾಲೂಕಿನ ಸರಕಾರಿ ಶಾಲೆಗಳ ದುಃಸ್ಥಿತಿ ನಾಗರೀಕ ಸಮಾಜ ತಲೆತಗ್ಗಿಸುವಂತಿದೆ.
ಮತ್ತೆ ಮಳೆ ಯಾಕೆ?
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣಕ್ಕೆ ಮತ್ತೆ ಮಳೆ ಅಬ್ಬರಿಸುತ್ತಿದೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಭಾರೀ ಮಳೆ ಆಗುತ್ತಿದ್ದು, ಕರ್ನಾಟಕದ ಹನ್ನೊಂದು ಜಿಲ್ಲೆಗಳಲ್ಲಿ ಮುಂದಿನ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಆರೆಂಜ್ ಅಲರ್ಟ್ ನೀಡಿರುವ ಜಿಲ್ಲೆಗಳಲ್ಲಿ ಎಡೆಬಿಡದೇ ಧಾರಾಕಾರ ಮಳೆಯಾಗಲಿದೆ. ಯೆಲ್ಲೋ ಅಲರ್ಟ್ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯಲಿದೆ.