ಪ್ರಮೋದ್ ಮುತಾಲಿಕ್ ನಗರ ಪ್ರವೇಶಕ್ಕೆ ಅನುಮತಿ ಕೊಡದ ಡೀಸಿ
ಕೋಲಾರ: ದತ್ತ ಮಾಲಧಾರಿಗಳ ಮೇಲೆ ಕಲ್ಲು ಹೊಡೆದ ಪ್ರಕರಣವನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಗುರುವಾರದಂದು ಬಂದ್ʼಗೆ ಕರೆ ನೀಡಿದ ಪರಿಣಾಮ ಇಡೀ ಕೋಲಾರ ನಗರವೇ ತತ್ತರಿಸಿತಲ್ಲದೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಯಿತು.
ಮೊದಲೇ ಸತತ ಮಳೆಯಿಂದ ತತ್ತರಿಸಿದ್ದ ಜಿಲ್ಲಾ ಕೇಂದ್ರವು ಬಂದ್ ಬಿಸಿಗೆ ಬಸವಳಿಯಿತು ಮಾತ್ರವಲ್ಲದೆ, ವ್ಯಾಪಾರ-ವಾಣಿಜ್ಯ ಮತ್ತು ಬಸ್ ಸಂಚಾರವೂ ಸಂಪೂರ್ಣವಾಗಿ ಸ್ಥಗಿತವಾಗಿ ಜನರು ಪರದಾಡುವಂತಾಯಿತು.
ಬಂದ್ ಕಾರಣಕ್ಕೆ ನಗರದ ಎಲ್ಲೆಡೆ ಅಂಗಡಿಗಳನ್ನು ಮುಚ್ಚಲಾಗಿತ್ತು. ವಾಹನಗಳು ರಸ್ತೆಗೆ ಇಳಿಯಲೇ ಇಲ್ಲ. ಜತೆಗೆ, ಸರಕು ಸಾಗಣೆ ವಾಹನಗಳು ಕೂಡ ಸಂಚಾರ ಮಾಡಲಿಲ್ಲ. ಬೆಳಗ್ಗೆ ಡಿಪೋದಿಂದ ಹೊರಬಂದ ರಾಜ್ಯ ಸಾರಿಗೆ ಬಸ್ಸುಗಳನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತಡೆದರಲ್ಲದೆ, ಸಾರಿಗೆ ಸಿಬ್ಬಂದಿಯನ್ನು ಹೆದರಿಸುವ ಪ್ರಯತ್ನವನ್ನೂ ಮಾಡಿದರು. ನಗರದ ಟೇಕಲ್ ವೃತ್ತದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದರು.
ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ಎಂದಿನಂತೆ ಅಂಚೆ ಕಚೇರಿ, ಬಿಎಸ್‌ಎನ್‌ಎಲ್ ಕಚೇರಿ, ಬ್ಯಾಂಕುಗಳು ಕಾರ್ಯಾರಂಭ ಮಾಡಿದ್ದವು. ಏಕಾಎಕಿ ನುಗ್ಗಿದ ಪ್ರತಿಭಟನಾಕಾರರು ಅವುಗಳನ್ನು ಬಲವಂತವಾಗಿ ಮುಚ್ಚಿಸಿದರು. ಆದರೆ, ಮೆಡಿಕಲ್ ಶಾಪ್, ಆಸ್ಪತ್ರೆಗಳ ತಂಟೆಗೆ ಪ್ರತಿಭಟನಾಕಾರರು ಹೋಗಲಿಲ್ಲ. ಆರೋಗ್ಯ ಸೇವೆ ಎಂದಿನಂತೆಯೇ ಇತ್ತು.
ಇದೇ ಇಡೀ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಸದ ಮುನಿಸ್ವಾಮಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಬೈಕ್ ರಾಲಿಯನ್ನೂ ಆಯೋಜಿಸಲಾಗಿತ್ತು. ಬಜರಂಗ ದಳ, ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಂದ್ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾಧಿಕಾರಿ ಸೆಲ್ವಮಣಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಕಟ್ಟೆಚ್ಚರ ವಹಿಸಿದ್ದರು.
ಇದೇ ನ.13ರ ಶನಿವಾರ ರಾತ್ರಿ 11 ಗಂಟೆ ವೇಳೆಗೆ ನಗರದ ವಿಶಾಲ್ ಮಾರ್ಟ್ ಬಳಿ ಕಿಡಿಗೇಡಿಗಳು ದತ್ತ ಮಾಲಧಾರಿಗಳ ವಾಹನದ ಮೇಲೆ ಕಲ್ಲುಗಳನ್ನು ಹೊಡೆದಿದ್ದರು. ಇದು ಆಕ್ರೋಶಕ್ಕೆ ಕಾರಣವಾಗಿತ್ತು. ಭದ್ರತೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಕೋಲಾರಕ್ಕೆ ಬಂದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ʼಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಜತೆಗೆ ಆಡಿಯೋ-ವಿಡಿಯೋ ಬಾಷಣ ಮಾಡದಂತೆಯೂ ನಿರ್ಭಂಧ ವಿಧಿಸಲಾಗಿತ್ತು.
ಈ ನಡುವೆ ಕೋಲಾರ ಪ್ರವೇಶಿಸಲು ಯತ್ನಿಸಿದ ಮುತಾಲಿಕ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ನಂತರ ಬಿಟ್ಟು ಕಳಿಸಲಾಯಿತು.