ಅಪಾಯಕಾರಿ ಸ್ಥಳಗಳಿಗೆ ಹೋಗಬೇಡಿ, ಮೀನು ಹಿಡಿಯಬೇಡಿ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದ ಎಲ್ಲ ಕೆರೆಕಟ್ಟೆಗಳು, ಜಲಾಶಯಗಳು ತುಂಬಿ ಹರಿಯುತ್ತಿವೆ. ಎಲ್ಲ ಕಡೆ ಅಪಾಯಕಾರಿ ಮಟ್ಟ ಮೀರಿ ನೀರು ಹರಿಯುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಹೇಳಿದ್ದಾರೆ.
ಈ ಬಗ್ಗೆ ಅವರು ಸರಣಿ ಟ್ವೀಟ್ ಮಾಡಿದ್ದು; ಅದರ ಸಾರಾಂಶ ಹೀಗಿದೆ;
ಭಾರಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಕೆರೆ ಮತ್ತು ನದಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯುತ್ತಿರುತ್ತದೆ. ಯಾವುದೇ ಕೆರೆ, ನದಿ, ನೀರು ತುಂಬಿ ಹರಿಯುವ ಸೇತುವೆಗಳ ಕಡೆ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಲು ಹೋದರೆ ಅವಘಡಗಳು ಉಂಟಾಗುವ ಸಂಭವವಿದ್ದು, ದಯವಿಟ್ಟು ಅಂತಹ ಸ್ಥಳಗಳಿಗೆ ಹೋಗದಂತೆ ಎಚ್ಚರವಹಿಸಿ.
ತುರ್ತುಪರಿಸ್ಥಿತಿಗಳಲ್ಲಿ ಮಾತ್ರ ಹೊರಗಡೆ ಓಡಾಡಿ. ಕೆರೆ, ನದಿ, ಸೇತುವೆಗಳ ಕಡೆ ಎಲ್ಲಾ ಸ್ಥಳಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗೂ ಸ್ಥಳೀಯ ಪ್ರಕಟಣೆಯನ್ನು ಮಾಡಲಾಗುತ್ತಿದೆ. ದಯವಿಟ್ಟು ಮನೆಯಲ್ಲಿಯೇ ಇರಿ ಹಾಗೂ ಸುರಕ್ಷಿತವಾಗಿರಿ.
ವಾಯುಭಾರ ಕುಸಿತದಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಕೆರೆ ಹಾಗೂ ನದಿಗಳು ಉಕ್ಕಿ ಹರಿಯುತ್ತಿರುತ್ತವೆ. ಇದರಿಂದಾಗಿ ರಸ್ತೆಗಳ ಮೇಲೆ ನೀರು ಹರಿಯುತ್ತಿರುತ್ತದೆ. ಎಲ್ಲಾ ಕಡೆ ಸೂಕ್ತ ಬ್ಯಾರಿಕೇಡ್ ಮತ್ತು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಹಾಗೂ ಸಾರ್ವಜನಿಕರಿಗೆ ಓಡಾಡಲು ಪರ್ಯಾಯ ರಸ್ತೆಗಳ ವ್ಯವಸ್ಥೆಯನ್ನುಮಾಡಲಾಗಿದೆ. ಮಳೆ ಇನ್ನೂ ಮುಂದುವರಿಯುವ ಸಂಭವವಿದ್ದು, ಹೆಚ್ಚಿನ ಅವಘಡಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಕೆರೆ ಹಾಗೂ ನದಿಗಳ ಬಳಿ ನೋಡಲು ಹೋಗಿ ಜಾರಿ ಬೀಳುವ ಸಂಭವವಿರುತ್ತದೆ. ಆದ್ದರಿಂದ ಮಕ್ಕಳು ಮತ್ತು ಯುವಕರನ್ನು ಕೆರೆಗಳ ಹಾಗೂ ನದಿಗಳ ಬಳಿ ಹೋಗದಂತೆ, ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಹೊರಗಡೆ ಓಡಾಡಲು ಹಾಗೂ ನದಿ ಮತ್ತು ಕೆರೆಕಟ್ಟೆಗಳಲ್ಲಿ ಸುಚಮ್ಮನೇ ಸುತ್ತಾಡದೇ, ಮೀನು ಹಿಡಿಯಲು ಹೋಗದಂತೆ ತಿಳಿಸಲಾಗಿದೆ. ತುಂಬಿ ಹರಿಯುತ್ತಿರುವ ಎಲ್ಲ ಕೆರೆ ಹಾಗೂ ನದಿ ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಒದಿಸಿರುತ್ತಾರೆ.