ನೀರು ಪಾಲಾದ ಭತ್ತ, ರಾಗಿ, ಮುಸುಕಿನ ಜೋಳ; ಇನ್ನೂ ಮುಗಿಯದ ಬೆಳೆಹಾನಿ ಜಂಟಿ ಸಮೀಕ್ಷೆ
By GS Bharath Gudibande
ಗುಡಿಬಂಡೆ: ಕಳೆದ 40 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಹಲವೆಡೆ ಕಟಾವು ಹಂತಕ್ಕೆ ಬಂದಿದ್ದ ಭತ್ತ, ರಾಗಿ, ಮುಸುಕಿನ ಜೋಳ, ನೆಲಕಡಲೆ ಸೇರಿದಂತೆ ಬಹುತೇಕ ಬೆಳೆಗಳು ನೆಲಕ್ಕುರಳಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ ತಾಲೂಕುಗಳಲ್ಲಿ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ, ಒಂದೆಡೆ ಸರಕಾರಿ ಬೆಳೆ ಹಾನಿ ಸಮೀಕ್ಷೆ ಬಂದ ತಕ್ಷಣ ಪರಿಹಾರ ಬಿಡುಗಡೆ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದರೆ, ಇತ್ತ ತಾಲೂಕಿನಲ್ಲಿ ಇನ್ನೂ ಬೆಳೆ ಹಾನಿ ಸಮೀಕ್ಷೆ ಮಾಡುತ್ತಿದ್ದಾರೆ. ಆದಷ್ಟು ಬೇಗೆ ಸಮೀಕ್ಷೆ ಮುಗಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.
ಗುಡಿಬಂಡೆ ತಾಲೂಕಿನಲ್ಲಿ ಆಗಿರುವ ಮಳೆ ಎಷ್ಟು?
ಈ ವರ್ಷದ ಆರಂಭದಿಂದ ಇಲ್ಲಿಯವರೆಗೂ ಸರಾಸರಿ 702.50 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ವರ್ಷ 992.55 ಮಿ.ಮೀ. ಮಳೆಯಾಗಿದೆ. ಅಂದರೆ 289.65 ಮಿ.ಮೀ.ಯಷ್ಟು ಸಾಮಾನ್ಯ ಮಳೆಗಿಂತ ಹೆಚ್ಚು ಮಳೆಯಾಗಿದೆ. ಗುಡಿಬಂಡೆ ತಾಲೂಕಿನ ಕಸಬಾ ಹೋಬಳಿಯಲ್ಲಿ 1014 ಮಿ.ಮೀ. ಹಾಗೂ ಸೋಮೇನಹಳ್ಳಿಯಲ್ಲಿ 902 ಮಿ.ಮೀ. ದಾಖಲೆಯ ಮಳೆಯಾಗಿದೆ ಎಂಬ ಮಾಹಿತಿ ತಾಲೂಕು ಕೃಷಿ ಇಲಾಖೆಯ ಅಧಿಕಾರಿಗಳು ಸಿಕೆನ್ಯೂಸ್ ನೌ ಗೆ ನೀಡಿದರು.
ಬೆಳೆ ಹಾನಿ ಸಮೀಕ್ಷೆ
ಈ ವರ್ಷದಲ್ಲಿ ಬೆಳೆ ಬಿತ್ತನೆ ಹಾಗೂ ಹಾನಿ ಸೇರಿದಂತೆ ಸರಕಾರದ ಆದೇಶದಂತೆ ಜಂಟಿ ಸಮೀಕ್ಷೆಯನ್ನು ಕೃಷಿ ಇಲಾಖೆಯ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆಯ ಸಹಕಾರದಲ್ಲಿ ತಾಲೂಕಿನಲ್ಲಿ ಮಾಡುತ್ತಿದ್ದರೆ, ತಾಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಸಮೀಕ್ಷೆ ಕಾರ್ಯ ಮುಗಿದಿದ್ದು, ಇನ್ನೂ ಕೆಲ ಗ್ರಾಮಗಳು ಬಾಕಿ ಇವೆ ಎಂದು ಗೊತ್ತಾಗಿದೆ.
ರಾಗಿ ಬೆಳೆ: 3761 ಹೆಕ್ಟೇರ್ ಬೆಳೆಯಲ್ಲಿ 144 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮುಸುಕಿನ ಜೋಳ 3720 ಹೆಕ್ಟೇರ್ ಬೆಳೆಯಲ್ಲಿ 145 ಹೆಕ್ಟೇರ್ ಬೆಳೆ ಹಾನಿಯಾಗಿದೆ. ನೆಲಕಡಲೆ 2290 ಹೆಕ್ಟೇರ್ ಬೆಳೆಯಲ್ಲಿ 45 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂಬುದು ಬೆಳೆ ಹಾನಿ ಜಂಟಿ ಸಮೀಕ್ಷೆಯಿಂದ ಕಂಡು ಬಂದಿದೆ. ಬೆಳೆಗಳ ಹಾನಿ ಕುರಿತು ಜಂಟಿ ಸಮೀಕ್ಷೆ ಇನ್ನೂ ಪ್ರಗತಿಯಲ್ಲಿದೆ ಎಂದು ಕೃಷಿ ಅಧಿಕಾರಿ ಶಂಕರಯ್ಯ ಅವರು ಸಿಕೆನ್ಯೂಸ್ ನೌ ಗೆ ಮಾಹಿತಿ ನೀಡಿದರು.
ಕಳೆದ 40 ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಸಮೀಕ್ಷೆ ಮಾಡಲು ಸಾಧ್ಯವಾಗಿಲ್ಲ. ಮಳೆ ಸ್ವಲ್ಪ ಕಡಿಮೆಯಾದ ತಕ್ಷಣ ಅಧಿಕಾರಿಗಳ ಸಹಾಯದಿಂದ ಜಂಟಿ ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸುತ್ತೇವೆ.
ಶಂಕರಯ್ಯ, ಕೃಷಿ ಇಲಾಖೆ ಗುಡಿಬಂಡೆ.
ಕೋವಿಡ್ ಸಂದರ್ಭದಲ್ಲಿ ಬೆಳೆದ ಬೆಳೆಗೆ ಬೆಲೆ ಇಲ್ಲದೇ ನಾಶವಾಯಿತು. ಈಗ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಬರುವಷ್ಟರಲ್ಲಿ ನೀರು ಪಾಲಾಯಿತು. 3 ಎಕರೆಯಲ್ಲಿ ಬೆಳದ ಭತ್ತ ಸಂಪೂರ್ಣ ನಾಶವಾಗಿದೆ. ಹೀಗಾದರೆ ರೈತರ ಪರಿಸ್ಥಿತಿ ಹೇಗೆ? ರೈತರ ಜೀವನ ಹೇಗೆ? ಕೃಷಿ ಬಿಟ್ಟು ಬೆರೆ ಕೆಲಸ ಮಾಡಲು ರೈತರಿಗೆ ಬರುವುದಿಲ್ಲ. ಹೀಗಿರುವಾಗ ಸರಕಾರ ರೈತರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬೇಕು. ಕೂಡಲೇ ಬೆಳೆ ನಷ್ಟ, ಹಾನಿ ಪರಿಹಾರ ಘೋಷಿಸಬೇಕು.
ದೇವರಾಜ್ ರೆಡ್ಡಿ, ರೈತ, ಅಲೆಗೆದರೇನಹಳ್ಳಿ