ಇಂದು ಕನಕದಾಸರ ಜಯಂತಿ
ಶ್ರೀ ಕನಕದಾಸರು (1509-1609) ಕರ್ನಾಟಕದಲ್ಲಿ 15-16ನೇ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕವಿಗಳು, ಮತ್ತೂ ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದಲ್ಲಿ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಕನಕದಾಸರು ದಂಡನಾಯಕನಾಗಿದ್ದು, ಯಾವುದೋ ಯುಧ್ಧದಲ್ಲಿ ಸೋತ ಅವರಿಗೆ ಉಪರತಿ ಉಂಟಾಗಿ ಹರಿ ಭಕ್ತರಾದರಂತೆ. ಕನಕದಾಸರ ಊರು ಕಾಗಿನೆಲೆ (ಈಗ ಹಾವೇರಿ ಜಿಲ್ಲೆಯಲ್ಲಿದೆ). ಕನಕದಾಸರ ಕೀರ್ತನೆಗಳು ಕಾಗಿನೆಲೆಯ ಕೇಶವನಿಗೆ ಅರ್ಪಿತವಾಗಿರುವುದನ್ನು ಗಮನಿಸಬಹುದು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಭಕ್ತರು.
ಕೀರ್ತನೆಗಳು ಮತ್ತು ಕಾವ್ಯಗಳು ಎರಡನ್ನೂ ರಚಿಸಿದ ಕೆಲವೇ ಕೆಲ ಹರಿದಾಸರಲ್ಲಿ ಕನಕದಾಸರು ಒಬ್ಬರು. ಆ ಕಾಲದ ಸಾಹಿತ್ಯ ಸಂದರ್ಭದಲ್ಲಿ ಕನಕದಾಸರಿಗೆ ವಿಶಿಷ್ಟವಾದ ಹಿನ್ನೆಲೆಯಿತ್ತು. ಅವರು ಸಾಮಂತ ರಾಜರೋ ಅಥವಾ ಪಾಳೆಯಗಾರರೋ ಆಗಿದ್ದುದರಿಂದ ಅವರಿಗೆ ಯುದ್ಧ ಮತ್ತು ಆಡಳಿತಗಳ ನೇರ ಅನುಭವವಿತ್ತು. ಅವರ ತವರು ನೆಲವಾದ ಕಾಗಿನೆಲೆಯಲ್ಲಿ ಇಂದಿಗೂ ಇರುವ ಆದಿಕೇಶವನ ಗುಡಿಯ ದೇವರಾದ ಕೇಶವನು ಅವರ ಆರಾಧ್ಯದೈವವಾಗಿದ್ದು, ಅವರ ಅಂಕಿತವಾದ ‘ಕಾಗಿನೆಲೆಯಾದಿಕೇಶವರಾಯ‘ ಎನ್ನುವುದು ಅಲ್ಲಿಂದಲೇ ಬಂದಿದೆ. ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಮಾಡಿದ ನಿರಂತರವಾದ ತಿರುಗಾಟಗಳು ಮತ್ತು ಧಾರ್ಮಿಕ ಮುಖಂಡರೊಂದಿಗಿನ ಅವರ ಮುಖಾಮುಖಿಗಳು ಸಾಹಸ-ವಿಷಾದಗಳಿಂದ ಕೂಡಿವೆ.
ಅವರ ಭಾವಗೀತೆಯಂತಹ ಕೀರ್ತನೆಗಳಲ್ಲಿ ಬಹಳ ಸಮರ್ಥವಾದ ಅಭಿವ್ಯಕ್ತಿಯನ್ನು ಪಡೆದಿವೆ. ಕನಕದಾಸರ ಹಿರಿಯರೂ ಸಮಕಾಲೀನರೂ ಆದ ವ್ಯಾಸರಾಯರು, ಪುರಂದರದಾಸರು ಮುಂತಾದವರು ಅವರ ಭಕ್ತಿ ಮತ್ತು ಪ್ರತಿಭೆಗಳನ್ನು ಮೆಚ್ಚಿ ಕೊಂಡಾಡಿದ್ದಾರೆ.
ಅವರು ಶ್ರೀವೈಷ್ಣವ ಸಿದ್ಧಾಂತವನ್ನು ಇಷ್ಟಪಟ್ಟು ದ್ವೈತ ತಾತ್ವಿಕತೆಯ ಮೂಲ ನೆಲೆಗಳಲ್ಲಿ ಕೀರ್ತನೆಗಳು ರಚಿಸಿದರು. ಅವರು ಅಂತರಂಗದ ಭಾವನೆಗಳಿಗೆ ಕಟ್ಟುಪಾಡಿಲ್ಲದೆ, ನುಡಿಗೊಡುವ ಅನೇಕ ಕೀರ್ತನೆಗಳನ್ನು ಹಾಡಿದ್ದಾರೆ. ಕನಕದಾಸರ ಕೀರ್ತನೆಗಳು ಆರ್ದ್ರವಾಗಿದ್ದು, ಅನೇಕ ಕೀರ್ತನೆಗಳು ದ್ವೈತ ಸಿದ್ಧಾಂತದ ಚೌಕಟ್ಟಿನಿಂದ ಆಚೆಗೆ ಹೋಗುವುದಿಲ್ಲವೆನ್ನುವುದು ನಿಜವಾದರೂ ಅವುಗಳೊಳಗೆ ಆಳವಾದ ವಿಷಾದವೂ ಇದೆ.
ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರೆ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ.
ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ‘ನಳಚರಿತೆ‘ ಕನ್ನಡದ ಜನಪ್ರಿಯ ಕಾವ್ಯಗಳಲ್ಲಿ ಒಂದು. ಇದರಲ್ಲಿ ಒಂಬತ್ತು ಅಧ್ಯಾಯಗಳಿದ್ದು, ಅವು ಸುಮಾರು 480 ಪದ್ಯಗಳನ್ನು ಒಳಗೊಂಡಿವೆ. ಒಂದು ನೆಲೆಯಲ್ಲಿ ಇದು ನಿಜವಾದ ಪ್ರೇಮಿಗಳು ಎದುರಿಸುವ ಪಡಿಪಾಟಲುಗಳನ್ನು ನಿರೂಪಿಸುವುದರಿಂದಲೇ ಆತ್ಮೀಯವಾಗುತ್ತದೆ. ಮಹಾಭಾರತದಿಂದ ತೆಗೆದುಕೊಳ್ಳಲಾಗಿರುವ ಈ ಉಪಾಖ್ಯಾನವು ನಳ-ದಮಯಂತಿಯರ ಜೀವನವನ್ನು ಸರಳವಾದರೂ ಶಕ್ತಿಶಾಲಿಯಾದ ಶೈಲಿಯಲ್ಲಿ ನಿರೂಪಿಸುತ್ತದೆ. ಈ ದಂಪತಿಗಳು ಎದುರಿಸಿದ ಕಾಡು ಮತ್ತು ಕಾಳ್ಗಿಚ್ಚುಗಳ ವರ್ಣನೆಯು ಬಹಳ ಸಹಜವಾಗಿದೆ. ಈ ಕಾವ್ಯವು ತನ್ನ ಅನೇಕ ಆಶಯಗಳನ್ನು ಜಾನಪದದಿಂದ ತೆಗೆದುಕೊಂಡಿದೆ. ‘ನಳಚರಿತೆ‘ ಮುಖ್ಯವಾಗಿ ಮನುಷ್ಯಜೀವಿಗಳ ಕಷ್ಟಸುಖಗಳ ಹಂಚಿಕೊಳ್ಳುವಿಕೆಯೇ ವಿನಾ ತಾತ್ವಿಕವಾದ ಉಪದೇಶವಲ್ಲ.
ಮೋಹನ ತರಂಗಿಣಿ‘ ಸಾಂಗತ್ಯವೆಂಬ ಛಂದೋಪ್ರಕಾರವನ್ನು ಬಳಸಿಕೊಂಡಿರುವ ದೊಡ್ಡ ಗಾತ್ರದ ಕಾವ್ಯ. ಈ ಕಾವ್ಯವು ಕೃಷ್ಣನ ಮೊಮ್ಮಗನಾದ ಅನಿರುದ್ಧ ಮತ್ತು ಬಾಣಾಸುರನ ಮಗಳಾದ ಉಷಾರ ಪ್ರಣಯ ಕಥೆಯನ್ನು ವಸ್ತುವಾಗಿ ಹೊಂದಿದೆ. ಈ ಕಾವ್ಯವು ಕೂಡ ಯಾವುದೇ ಕೃಷ್ಣ ಕಥೆಯ ಮೂಲ ಆಕರಗಳಾದ ಭಾಗವತ, ಹರಿವಂಶ, ವಿಷ್ಣುಪುರಾಣ ಮತ್ತು ಮಹಾಭಾರತಗಳಿಂದ ತನಗೆ ಅಗತ್ಯವಾದ ವಿವರಗಳನ್ನು ತೆಗೆದುಕೊಂಡಿದೆ. ಮನ್ಮಥನ ಹುಟ್ಟು, ಶಂಬರಾಸುರನ ವಧೆ, ಉಷಾ ಮತ್ತು ಅನಿರುದ್ಧರ ಪ್ರಣಯ, ಬಾಣಾಸುರ ವಧೆ ಮುಂತಾದವು ಈ ಕಾವ್ಯದ ಮುಖ್ಯ ಘಟನೆಗಳು. ಅದೆಲ್ಲಕ್ಕಿಂತ ಮುಖ್ಯವಾಗಿ ಮೋಹನ ತರಂಗಿಣಿಯು ತನ್ನ ಕಾಲದ ಕರ್ನಾಟಕದ ಜೀವನಶೈಲಿಯ ಮೇಲೆ ಬೆಳಕು ಚೆಲ್ಲುತ್ತದೆ. ನಿಧಾನಗತಿಯ ಹಾಗೂ ಗೇಯತೆಯ ಕಡೆಗೆ ಒಲಿಯುವ ಸಾಂಗತ್ಯದ ಛಂದಸ್ಸು, ಈ ಕಾವ್ಯದ ವಸ್ತುವಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.
ರಾಮಧಾನ್ಯ ಚರಿತ್ರೆ‘ಯು ಇಡೀ ಕನ್ನಡ ಸಾಹಿತ್ಯಚರಿತ್ರೆಯಲ್ಲಿಯೇ ಬಹಳ ಅನನ್ಯವಾದ ಕಾವ್ಯ. ಜಾತಿ ಪದ್ಧತಿ ಮತ್ತು ಜನಾಂಗಿಕ ಭೇದದಿಂದ ಉಂಟಾಗುವ ಧಾರುಣ ಯಾತನೆಯನ್ನು ಬಹಳ ಸಾಂಕೇತಿಕವಾಗಿ ಮತ್ತು ಅನುಪಮವಾದ ಕಲ್ಪನಾಶಕ್ತಿಯ ಬಲದಿಂದ ಕಟ್ಟಿಕೊಡುವುದು ಈ ಕಾವ್ಯದ ಹೆಗ್ಗಳಿಕೆ. ಅದು ಅಹಂಕಾರಿಯಾದ ಬತ್ತ ಮತ್ತು ವಿನಯದಿಂದ ತಲೆಬಾಗಿದ, ಜನಸಾಮಾನ್ಯರ ಆಹಾರವಾದ ನರೆದಲೆಗಳ ನಡುವೆ ನಡೆಯುವ ಕಾಲ್ಪನಿಕವಾದ ಮುಖಾಮುಖಿಯ ಕಥನ. ಅವರಿಬ್ಬರ ನಡುವೆ ಯಾರು ಶ್ರೇಷ್ಠರೆನ್ನುವ ವಿಷಯದಲ್ಲಿ ಜಗಳ ನಡೆಯುತ್ತದೆ. ಕೊನೆಯ ತೀರ್ಮಾನವನ್ನು ಕೊಡುವ ಕೆಲಸವನ್ನು ರಾಮನು ನಿರ್ವಹಿಸಬೇಕಾಗುತ್ತದೆ. ಅವನು ಒಂದು ಪರೀಕ್ಷೆಯನ್ನು ಮಾಡಿ, ನರೆದಲೆಯ ಪರವಾದ ತೀರ್ಮಾನವನ್ನು ಕೊಡುತ್ತಾನೆ. ಅದನ್ನು ರಾಗಿ ಎಂದು ಕರೆಯುತ್ತಾನೆ. (ರಾಘವ ಧಾನ್ಯ) ಈ ಕಾವ್ಯಕ್ಕೆ ಇರುವ ಸಾಂಕೇತಿಕ ಹಾಗೂ ಸಾಮಾಜಿಕವಾದ ಮಹತ್ವವನ್ನು ಕನ್ನಡ ಸಾಹಿತ್ಯದ ಪ್ರಧಾನಧಾರೆಯು ಗುರುತಿಸಿದ್ದು ಈಚೆಗೆ. ಹಿಂದುಳಿದ ವರ್ಗಗಳು ಮುಂದೆ ಬಂದಿದ್ದಕ್ಕೂ ಈ ಕಾವ್ಯದ ಮರುಹುಟ್ಟಿಗೂ ಇರುವ ಸಂಬಂಧವು ಕಾಕತಾಳೀಯವಲ್ಲ. ಈ ಕಾವ್ಯವನ್ನು ಅಂಚಿಗೆ ತಳ್ಳಿ, ಕಡಿಮೆ ಆಸ್ಫೋಟಕವಾದ ಕಾವ್ಯಗಳನ್ನು ಹೊಗಳಿರುವುದು, ಕನ್ನಡ ಸಾಹಿತ್ಯವಿಮರ್ಶೆಯ ಮಾನದಂಡಗಳ ಬಗ್ಗೆ, ಮುಖ್ಯವಾದ ಸತ್ಯಗಳನ್ನು ಹೇಳುತ್ತದೆ.
‘ಕನಕನ ಮುಂಡಿಗೆಗಳು‘, ಒಗಟಿನ ಹೊರ ಆವರಣದೊಳಗೆ, ಮಹತ್ವದ ತಾತ್ವಿಕ ಸಂಗತಿಗಳನ್ನು ಹೊಂದಿರುವ, ಚಿಕ್ಕ ಗೇಯ ಕವಿತೆಗಳನ್ನು ಒಳಗೊಳ್ಳುತ್ತವೆ. ಇವುಗಳನ್ನು ಅರ್ಥ ಮಾಡಿಕೊಳ್ಳುವ ತಾಂತ್ರಿಕವಾದ ಪರಿಭಾಷೆಯ ನಿಕಟ ಪರಿಚಯ ಇರಬೇಕು. ‘ಹರಿಭಕ್ತಸಾರ‘ದಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ 110 ಪದ್ಯಗಳಿವೆ. ಅವು ಕನಕದಾಸರ ಜೀವನದೃಷ್ಟಿ ಮತ್ತು ನೈತಿಕ ನೆಲೆಗಟ್ಟನ್ನು ಬಹಳ ಭಾವನಾತ್ಮಕವೂ ಸರಳವೂ ಆದ ಶೈಲಿಯಲ್ಲಿ ಹೇಳುತ್ತದೆ.
‘ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ?’ ಎಂದು ನೈತಿಕತೆ ಇಲ್ಲದ ನಾಯಕರನ್ನು ತರಾಟೆಗೂ ತೆಗೆದುಕೊಂಡ ಕನಕದಾಸರು, ‘ಇವರು ಧರ್ಮಕ್ಕೂ, ಮಾನವೀಯತೆಗೂ ದೂರ ನಿಲ್ಲವವರು. ಯಾವುದಕ್ಕೂ ಹೇಸದ, ಒಳಿತನ್ನು ಮಾಡದ ಇವರು ಸಮಾಜಕ್ಕೆ ಕಂಟಕರು’ ಎಂದೂ ಕರೆದಿದ್ದರು.
ಮನುಷ್ಯ ಸದಾಕಾಲ ಹಲವು ಹಸಿವುಗಳಿಂದ ಕೊರಗುತ್ತಿರುತ್ತಾನೆ. ತನ್ನ ಹಸಿವು ಪೂರೈಸಿಕೊಳ್ಳುವುದು, ಪರರ ಹಸಿವನ್ನು ಪೂರೈಸುವ ಜೀವಪರ ಕಾಳಜಿಬೇಕು. ಅದು ಆಗದಿದ್ದಾಗ, ನೀತಿ ಮಾರ್ಗ ಬಿಟ್ಟು ಅನೀತಿ ಮಾರ್ಗದ ಮೂಲಕ ಅವುಗಳನ್ನು ಪೂರೈಸಿಕೊಳ್ಳಲು ಇಚ್ಛಿಸುತ್ತಾನೆ. ಈ ಕುರಿತು ಕನಕದಾಸರು ಮುಂಚಿವಾಗಿಯೇ ಆಲೋಚನೆಯ ಎಚ್ಚರಿಕೆಯನ್ನು ಕೊಡುತ್ತಾರೆ.
ಕನಕದಾಸರ ಸಾಹಿತ್ಯದಲ್ಲಿ ನೈತಿಕ ಮೌಲ್ಯಗಳು ಬೀಜ ಮಂತ್ರದಂತೆ ಬಿತ್ತರಗೊಂಡಿವೆ. ಇಂತಹ ಅನೇಕ ಮೌಲ್ಯಗಳ ಸಂದೇಶ ಹೊತ್ತ ಕನಕದಾಸರು, ‘ಹೃದಯ ಹೊಲವನು ಮಾಡಿ, ತನುವ ನೇಗಿಲು ಮಾಡಿ, ನಾಲಗೆಯ ಕೊರಿಗೆ ಮಾಡಿ ಬಿತ್ತಿರಯ್ಯ’ ಎನ್ನುವ ಚಿಂತನೆಯ ನೆಲೆಯಲ್ಲಿ ಲೋಕದ ಒಳಿತನ್ನು ಬಯಸಿದ್ದಾರೆ.
ಕನಕದಾಸರು ತಾವು ಕಂಡದ್ದನ್ನು, ಅನುಭವಕ್ಕೆ ಬಂದುದನ್ನು ಅಭಿವ್ಯಕ್ತಿಸಿದ್ದಾರೆ. ಅಂದು ಅವರು ಹೇಳಿದ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಂತವು. ಯವುದೇ ಒಂದು ಜಾತಿ, ಮತ, ಪ್ರದೇಶ, ಭಾಷೆಗೆ ಸೀಮಿತವಾಗದ ವಿಶ್ವ ಮಾನವ ಪರಿಕಲ್ಪನೆಯ ಸಂದೇಶಗಳು. ಹಾಗಾಗಿ ಇಂದಿನ ಆಧುನಿಕ ಸಮಾಜಕ್ಕೆ ಕನಕದಾಸರ ತತ್ವ ಸಂದೇಶಗಳ ಅವಶ್ಯಕತೆ ಇದೆ.
ಡಾ.ಗುರುಪ್ರಸಾದ ಹವಲ್ದಾರ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.