ಗಡಿ ಜಿಲ್ಲೆಯಲ್ಲಿ ಕನ್ನಡ ಪರಿಚಾರಿಕೆಯ ಹೊಸ ಮನ್ವಂತರ ಆರಂಭ
by M Krishnappa Chikkaballapura
ಚಿಕ್ಕಬಳ್ಳಾಪುರ: ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಪ್ರಾಧ್ಯಾಪಕ ಹಾಗೂ ಶಿಕ್ಷಣ ತಜ್ಞ ಕೋಡಿ ರಂಗಪ್ಪ ಅವರು ಆಭೂತಪೂರ್ವ ಗೆಲುವು ಸಾಧಿಸಿರುವುದು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಸಂತಸ ಉಂಟು ಮಾಡಿದೆ.
ಆದರೆ, ಕನ್ನಡ ತೇರನ್ನು ಎಳೆಯಲು ಮುಂದಾಳುವನ್ನು ಆಯ್ಕೆ ಮಾಡುವ ಈ ಪವಿತ್ರ ಚುನಾವಣೆಯಲ್ಲಿ ಕಾಂಚಾಣ, ಆಮಿಷ, ಜಾತಿ ಇತ್ಯಾದಿಗಳು ಹುಚ್ಚೆದ್ದು ಕುಣಿದಿವೆ. ಈ ಕಾರಣಕ್ಕೆ ಈ ಚುನಾವಣೆಯ ಪಾವಿತ್ರ್ಯತೆಯೇ ಹಾಳಾಗಿದ್ದು, ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸಮಾಧಾನಕರ ಸಂಗತಿ ಎಂದರೆ ಕೋಡಿ ರಂಗಪ್ಪ ಗೆಲುವು ಈ ಬೇಸರಕ್ಕೆ ಕೊಂಚ ಮುಲಾಮು ಹಚ್ಚಿದೆ.
ಪ್ರೊ.ಕೋಡಿ ರಂಗಪ್ಪ ಹಾಗೂ ಕಸಾಪ ಹಾಲಿ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ನಡುವೆ ಅಧ್ಯಕ್ಷಗಾದಿಗೆ ಬಿರುಸಿನ ಪೈಪೋಟಿಯೇ ನಡೆದಿತ್ತು. ರಂಗಪ್ಪ ಅವರು ಕನ್ನಡದ ಪರಿಚಾರಿಕೆಯನ್ನೇ ಪ್ರಣಾಳಿಕೆ ಮಾಡಿಕೊಂಡು ಹೆಜ್ಜೆ ಇಟ್ಟರೆ, ಕೈವಾರ ಶ್ರೀನಿವಾಸ್ ಹಾಲಿ ಇದ್ದ ಅಧಿಕಾರವನ್ನು ಬಳಿಸಿಕೊಂಡು ಪ್ರಚಾರ ಆರಂಭಿಸಿದರಲ್ಲದೆ, ಗೆಲುವಿಗೆ ಏನೆಲ್ಲ ಮಾಡಬಹುದೋ ಅದೆಲ್ಲವನ್ನೂ ಮಾಡಿದರು ಎಂದು ಚಿಕ್ಕಬಳ್ಳಾಪುರ ಸಾಹಿತ್ಯಾಸಕ್ತಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ.
ಹಾಗಾದರೆ, ಕೈವಾರ ಶ್ರೀನಿವಾಸ್ ಸೋತಿದ್ದು ಏಕೆ? ಅನೇಕರು ಹತ್ತಾರು ಕಾರಣಗಳನ್ನು ನೀಡುತ್ತಾರೆ. ಅವು ಹೀಗಿವೆ;
- ಐದು ವರ್ಷ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಕೈವಾರ ಶ್ರೀನಿವಾಸ್ ಸಾಧನೆ ಸಮ್ಮೇಳನಗಳಿಗಷ್ಟೇ ಸೀಮಿತ. ಅವು ಅವ್ಯವಸ್ಥೆಯ ಸಮ್ಮೇಳನಗಳು ಎನ್ನುವ ಆರೋಪವಿದೆ.
- ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ಇರಲಿಲ್ಲ. ಸಮ್ಮೆಳನಗಳ ಖರ್ಚು-ವೆಚ್ಚದಲ್ಲಿ ಹೆಚ್ಚೂ ಕಡಿಮೆಯಾಗಿರುವ ಆರೋಪಗಳು ಕೇಳಿಬಂದಿವೆ.
- ಜಾತಿ ಆಧಾರದ ಮೇಲೆ ಚುನಾವಣೆ ಪ್ರಚಾರ ಮಾಡಿದ್ದು. ಸ್ವಜನ ಪಕ್ಷಪಾತ ಮತ್ತು ಓಲೈಕೆ ಹಾಗೂ ಮತದಾರರಿಗೆ ಆಮಿಷ ಒಡ್ಡಿದ್ದು, ರೆಸಾರ್ಟ್ʼಗಳಲ್ಲಿ ಮತದಾರರಿಗೆ ಆತಿಥ್ಯ ನೀಡಿದ್ದು.
- ಕೇಂದ್ರದ ಪರಿಷತ್ತಿನಿಂದ ಬಂದ ಅನುದಾನದಲ್ಲಿ ಲೆಕ್ಕದ ಪಾರದರ್ಶಕತೆ ಇಲ್ಲದಿರುವುದು. ತಾಲೂಕು ಸಮ್ಮೇಳನಗಳಿಗೆ ಅನುದಾನ ಬಿಡುಗಡೆ ಮಾಡುವಾಗ ಕತ್ತರಿ ಹಾಕಿದ್ದು, ಅದರಲ್ಲಿ ಹಣವನ್ನು ಜೇಬಿಗಿಳಿಸಿದ ಆರೋಪವೂ ಇದೆ.
- ತಾಲೂಕು ಕಸಾಪ ಅಧ್ಯಕ್ಷರುಗಳಿಗೆ ಇಷ್ಟ ಬಂದಾಗ ಅರ್ಧಚಂದ್ರ. ಪ್ರಶ್ನೆ ಮಾಡಿದರು ಎಂಬ ಕಾರಣಕ್ಕೆ ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ಘಟಕಗಳ ಅಧ್ಯಕ್ಷರ ಕಿತ್ತೊಗೆತ.
- ಗಡಿ ತಾಲೂಕುಗಳಾದ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರುಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಿಲ್ಲ ಹಾಗೂ ದತ್ತಿ ಕಾರ್ಯಕ್ರಮಗಳ ಸೊಲ್ಲೆ ಇಲ್ಲ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಫಲಿತಾಂಶದ ವಿವರ
ಕೋಡಿ ರಂಗಪ್ಪ ಅವರು 3,420 ಮತಗಳನ್ನು ಪಡೆಯುವುದರ ಮೂಲಕ ಜಯಭೇರಿ ಭಾರಿಸಿದರು. ಕೈವಾರ ಶ್ರೀನಿವಾಸ್ 1,041 ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ. ರಂಗಪ್ಪ ಅವರು 2382 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಜಿಲ್ಲೆಯಾದ್ಯಂತ ಇಬ್ಬರೂ ಪಡೆದ ಮತಗಳು ಹೀಗಿವೆ;
- ಚಿಕ್ಕಬಳ್ಳಾಪುರ: ಕೋಡಿರಂಗಪ್ಪ 1037-ಕೈವಾರ ಶ್ರೀನಿವಾಸ್ 329
- ಗುಡಿಬಂಡೆ: ಕೋಡಿ ರಂಗಪ್ಪ 261-ಕೈವಾರ ಶ್ರೀನಿವಾಸ್ 147
- ಚಿಂತಾಮಣಿ: ಕೋಡಿ ರಂಗಪ್ಪ 609-ಕೈವಾರ ಶ್ರೀನಿವಾಸ್ 299
- ಬಾಗೇಪಲ್ಲಿ: ಕೋಡಿ ರಂಗಪ್ಪ 123-ಕೈವಾರ ಶ್ರೀನಿವಾಸ್ 28
- ಗೌರಿಬಿದನೂರು: ಕೋಡಿ ರಂಗಪ್ಪ 447-ಕೈವಾರ ಶ್ರೀನಿವಾಸ್ 44
- ಶಿಡ್ಲಘಟ್ಟ: ಕೋಡಿ ರಂಗಪ್ಪ 946-ಕೈವಾರ ಶ್ರೀನಿವಾಸ್ 194
- ಬುದ್ಧಿವಂತರ ಕ್ಷೇತ್ರ ಎಂದೆನಿಸಿಕೊಂಡ ಈ ಚುಣಾವಣೆಯಲ್ಲೂ 72 ತಿರಸ್ಕೃತವಾಗಿವೆ.
ಸತ್ಯ ಮತ್ತು ಸತ್ವಯುತ ಸುದ್ದಿಗೆ ಧನ್ಯವಾದಗಳು. ಇದರ ಜೊತೆಗೆ
ಪವಿತ್ರ ಕ್ಷೇತ್ರವಾದ ಕೈವಾಡದಲ್ಲಿ ಪರಿಷತ್ತಿನ ಕಾರ್ಯಕ್ರಮದಲ್ಲಿ ಕ್ಯಾಬರೆ ಕುಣಿಸಿದ್ದು, ಹಲ್ಲೆ ಆರೋಪಗಳಲ್ಲಿ ಜೈಲು ಸೇರಿದ್ದಿದು ,ಅವರಿಗಿಷ್ಟದ ವ್ಯಕ್ತಿಗಳಿಗೆ ಮಾತ್ರವೇ ರಾಜ್ಯೋತ್ಸವ ಪ್ರಶಸ್ತಿಗಳು ಕೊಡುವುದು ಸಾಹಿತಿಗಳ ಕಂಗೆಣ್ಣಿಗೆ ಗುರಿಯಾಯ್ತು.ಪ್ರೊ ಕೋಡಿರಂಗಪ್ಪನವರು ಯಾವುದೇ ಕಳಂಕರಹಿತವಾದವರು.ಹಿಂದಿನ ಚುನಾವಣೆಯಲ್ಲೂ ಜಾತಿ ರಾಜಕೀಯದ ಅಲೆಯಿತ್ತು.ಈ ಬಾರಿಯೂ ಇತ್ತು.ಮೂರು ವರ್ಷದ ಅವಧಿಯಿಂದ ತಮ್ಮ ಸ್ವಾರ್ಥಗಳಿಗೆ ಐದು ವರ್ಷ ಅಧಿಕಾರಾವಧಿ ಮಾಡಿದ ಮನುಬಳಿಗಾರ್ ಮತ್ತು ಅದನ್ನು ಬೆಂಬಲಿಸಿದ ಜಿಲ್ಲಾಧ್ಯಕ್ಷರುಗಳನ್ನ ಜನ ಕಿತ್ತೊಗೆದಿದ್ದು ನ್ಯಾಯೋಚಿತ.
ಗುಡಿಬಂಡೆ ಫಯಾಜ್ ಅಹಮದ್