ಟೊಮ್ಯಾಟೊ ರಕ್ಷಣೆಗೆ ಹಾಕಿದ್ದ ವಿದ್ಯುತ್ ತಂತಿಗೆ ಯುವಕ ಬಲಿ; ರೊಚ್ಚಿಗೆದ್ದ ಮೃತ ಯುವಕನ ಕುಟುಂಬಸ್ಥರಿಂದ ರೈತನ ಹತ್ಯೆ
ಚಿಕ್ಕಬಳ್ಳಾಪುರ: ಟೊಮ್ಯಾಟೊಗೆ ಬಂಪರ್ ಬೆಲೆ ಬಂದಿದ್ದು ಒಂದೆಡೆಯಾದರೆ, ಅದು ರೈತರ ಪಾಲಿಗೆ ವಿಷಾದವನ್ನೂ ಉಂಟು ಮಾಡುತ್ತಿದೆ.
ಚಿನ್ನದಂಥ ಬೆಲೆ ಬಂದಿರುವ ಟೊಮ್ಯಾಟೊವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿರುವ ಬೆನ್ನಲ್ಲೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚರುಕುಮಾಟೇನಹಳ್ಳಿ ಗ್ರಾಮದಲ್ಲಿ ಟೊಮ್ಯಾಟೊ ಕಾರಣಕ್ಕೆ ಎರಡು ಜೀವಗಳು ಬಲಿಯಾಗಿದ್ದು, ಉತ್ತಮ ಬೆಲೆಯ ಸಂತಸದಲ್ಲಿದ್ದ ಜಿಲ್ಲೆಯ ರೈತರಿಗೆ ದೊಡ್ಡ ಆಘಾತ ಉಂಟು ಮಾಡಿದೆ.
ಮಂಚೇನಹಳ್ಳಿಯಲ್ಲಿ ತನ್ನ ಟೊಮೇಟೊವನ್ನು ರಕ್ಷಣೆ ಮಾಡಿಕೊಳ್ಳಲು ರೈತನೊಬ್ಬ ಅಕ್ರಮವಾಗಿ ವಿದ್ಯುತ್ ಬೇಲಿ ಹಾಕಿದ್ದ. ಆ ಬೇಲಿಗೆ ಯುವಕನೊಬ್ಬ ಬಲಿಯಾಗಿದ್ದು, ಆಕ್ರೋಶಗೊಂಡ ಮೃತ ಯುವಕನ ಕಡೆಯವರು ರೈತನನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದ ಜಿಲ್ಲೆ ಬೆಚ್ಚಿಬಿದ್ದಿದೆ.
ಟೊಮೆಟೊ ತೋಟದಲ್ಲಿ ಮೇಯುತ್ತಿದ್ದ ಮೇಕೆ ಮರಿ ವಾಪಸ್ ತರಲು ಹೋದ ಯುವಕ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ಬೇಲಿ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನು ನೋಡಲು ಸ್ಥಳಕ್ಕೆ ಧಾವಿಸಿ ಬಂದ ತೋಟದ ಮಾಲೀಕನನ್ನು ಯುವಕನ ಕುಟುಂಬಸ್ಥರು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ವಸಂತ್ ರಾವ್ (29) ಮೃತ ಯುವಕ ಹಾಗೂ ತೋಟದ ಮಾಲೀಕ ಅಶ್ವತ್ಥ ರಾವ್ (47) ಕೊಲೆಯಾದ ವ್ಯಕ್ತಿ.
- ಅಶ್ವತ್ಥ ರಾವ್ ಟೊಮೊಟೊ ತೋಟ ಮತ್ತು ವಿದ್ಯುತ್ ಬೇಲಿ.
ಕಳೆದ ಕೆಲ ತಿಂಗಳುಗಳಿಂದ ಅಶ್ವತ್ಥ ರಾವ್ ಹಾಗೂ ವಸಂತ್ ರಾವ್ ಕುಟುಂಬಗಳ ನಡುವೆ ವಾಗ್ವಾದ, ಜಗಳ ನಡೆಯುತ್ತಿದ್ದವು. ಇದರಿಂದ ಬೇಸತ್ತಿದ್ದ ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಸಂಧಾನವನ್ನೂ ಮಾಡಿದ್ದರು. ಆದರೆ, ಅಶ್ವತ್ಥ ರಾವ್ ತೋಟದ ಪಕ್ಕದಲ್ಲಿಯೇ ವಸಂತ್ ರಾವ್ ಕುರಿ ಮೇಕೆ ಶೆಡ್ ಹಾಕಿದ್ದರು.
ಅಶ್ವತ್ಥ ರಾವ್ ಈಗ ಟೊಮೆಟೊ ಬೆಳೆ ಹಾಕಿದ್ದು, ಟೊಮೆಟೊಗೆ ಬಂಗಾರದ ಬೆಲೆ ಬಂದಿದೆ. ಮೇಕೆ ಮರಿಗಳು ಸೇರಿದಂತೆ ಇತರೆ ಪ್ರಾಣಿಗಳು ಟೊಮೆಟೊ ತೋಟಕ್ಕೆ ನುಗ್ಗಿ ಬೆಳೆ ಹಾಳು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮಾಲೀಕ ಅಶ್ವತ್ಥ ರಾವ್ ತೋಟಕ್ಕೆ ಅಕ್ರಮವಾಗಿ ವಿದ್ಯುತ್ ಬೇಲಿ ಅಳವಡಿಸಿದ್ದರು.
ಇಂದು (ಗುರುವಾರ) ಮುಂಜಾನೆ ಮೇಕೆ ಮರಿಯೊಂದು ಟೊಮೆಟೊ ತೋಟದ ಬಳಿ ಹೋಗಿದ್ದು, ಕೂಡಲೇ ಮರಿಯನ್ನು ವಾಪಸ್ ತರಲು ವಸಂತ ರಾವ್ ಹೋದಾಗ ತೋಟಕ್ಕೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ ತಾಳ್ಮೆಗೆಟ್ಟ ವಸಂತ ರಾವ್ ಕುಟುಂಬಸ್ಥರು ಅಶ್ವತ್ಥ ರಾವ್ ಬರುವಿಕೆಗಾಗಿ ಕಾಯುತ್ತಿದ್ದರು. ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ ಅಶ್ವತ್ಥ ರಾವ್ ಮೇಲೆ ವಸಂತ ರಾವ್ ಕುಟುಂಬಸ್ಥರು ಏಕಾಏಕಿ ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ಅಶ್ವತ್ಥ ರಾವ್ ಅವರನ್ನು ಗ್ರಾಮಸ್ಥರು ರಕ್ಷಿಸಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸುವ ವೇಳೆ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಪೊಲೀಸರು ಸರ್ಪಗಾವಲು ಹಾಕಿದ್ದಾರೆ.
ಸ್ಥಳಕ್ಕೆ ಪೊಲೀಸ್ ಇನಸ್ಪೆಕ್ಟರ್ ಶಶಿಧರ್ ಹಾಗೂ ಪಿಎಸ್ಐ ವಿಜಯ್ ಕುಮಾರ್ ಭೇಟಿ ನೀಡಿ ಮೃತ ವಸಂತ ರಾವ್ ಮತ್ತು ಅಶ್ವಥ್ ರಾವ್ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಚೇನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇಡೀ ಘಟನೆಯಿಂದ ಗ್ರಾಮದ ಜನರು ಮಾತ್ರವಲ್ಲದೆ, ಅಕ್ಕಪಕ್ಕದ ಗ್ರಾಮಸ್ಥರಿಗೆ ತೀವ್ರ ದಿಗ್ಭ್ರಮೆ ಉಂಟಾಗಿದೆ.