ಗುಡಿಬಂಡೆ ಮೀಸಲು ಅರಣ್ಯ ವಿಷಪ್ರಾಷಣ ಘಟನೆಗೆ 100 ದಿನ
- ಸ್ಯಾಂಪಲ್ ತೆಗೆದುಕೊಂಡ ಅಧಿಕಾರಿಗಳು ಪತ್ತೆ ಇಲ್ಲ
- ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ ಚಿಮುಕಲಹಳ್ಳಿ ಗ್ರಾಮಸ್ಥರು
By GS Bharath Gudibande
ಗುಡಿಬಂಡೆ: ಕೈಗಾರಿಕೆಗಳ ಅತ್ಯಂತ ವಿಷಕಾರಿಯಾದ ಜಲತ್ಯಾಜ್ಯವನ್ನು ಸಮೀಪದ ಕೆರೆಗಳು ಮತ್ತು ಮೀಸಲು ಅರಣ್ಯ ಪ್ರದೇಶಗಳಲ್ಲಿ ವಿಲೇವಾರಿ ಮಾಡುವಾಗ ರೆಡ್ ಹ್ಯಾಂಡಾಗಿ ಟ್ಯಾಂಕರ್ ಸಮೇತ ಸಿಕ್ಕಿಬಿದ್ದ ಪ್ರಕರಣ ನಡೆದು ಮೂರು ತಿಂಗಳೇ ಕಳೆದರೂ ಇನ್ನೂ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾತ್ರ ವರದಿ ನೀಡಿಲ್ಲ.
ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣದ ಬಗ್ಗೆ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ಇರುವುದರ ಬಗ್ಗೆ ಸ್ಥಳೀಯರು, ಅದರಲ್ಲೂ ಮುಖ್ಯವಾಗಿ ವಿಷಕಾರಿ ಟ್ಯಾಂಕರ್ ಅನ್ನು ರೆಡ್ ಹ್ಯಾಂಡ್ ಆಗಿ ಹಿಡಿದ್ದಿದ್ದ ಚಿಮುಕಲಹಳ್ಳಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಕಾರಿ ಟ್ಯಾಂಕರ್ ತ್ಯಾಜ್ಯವನ್ನು ವಿಲೇವಾರಿ ಮಾಡಲು ಯತ್ನಿಸಿದ ವಾಟದ ಹೊಸಹಳ್ಳಿ ಕೆರೆ ಹಾಗೂ ಗುಡಿಬಂಡೆ ತಾಲೂಕಿನ ಮೀಸಲು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದ ಜಿಲ್ಲಾ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು; ತ್ಯಾಜ್ಯದ ಸ್ಯಾಂಪಲ್ʼಗಳನ್ನು ಸಂಗ್ರಹ ಮಾಡಿದ್ದರು. ಆದರೆ, ಈವರೆಗೂ ವರದಿಯನ್ನು ನೀಡಿಲ್ಲ.
ಕೈಗಾರಿಕೆಗಳ ವಿಷತ್ಯಾಜ್ಯವನ್ನು ತುಂಬಿಕೊಂಡು ಬಂದು ಗುಡಿಬಂಡೆ ಮೀಸಲು ಅರಣ್ಯ ಪ್ರದೇಶದಲ್ಲಿ ವಿಲೇವಾರಿ ಮಾಡುವ ಸ್ಫೋಟಕ ಸುದ್ದಿಗಳ ಸರಮಾಲೆಯನ್ನೇ ಸಿಕೆನ್ಯೂಸ್ ನೌ ಪ್ರಕಟಿಸಿತ್ತು. ಸಂಕ್ಷಿಪ್ತವಾಗಿ ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆದಿತ್ತು. ಈ ಬಗ್ಗೆ ಸರಕಾರ, ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಅಧಿಕಾರಿಗಳು, ಸಂಬಂಧಪಟ್ಟ ಸಚಿವರ ಗಮನ ಸೆಳೆದಿತ್ತು.
ಸಿಟ್ಟಿಗೆದ್ದ ಗ್ರಾಮಸ್ಥರು
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮೀಸಲು ಅರಣ್ಯ ಪ್ರದೇಶ ಹಾಗೂ ಈ ಭಾಗದ ಏಕೈಕ ಜಲಮೂಲವಾದ ವಾಟದ ಹೊಸಹಳ್ಳಿ ಅಮಾನಿ ಕೆರೆಯಲ್ಲಿ ಕೈಗಾರಿಕಾ ಪ್ರದೇಶಗಳಿಂದ ಟ್ಯಾಂಕರ್ ಮೂಲಕ ವಿಷತ್ಯಾಜ್ಯ ತಂದು ವಿಲೇವಾರಿ ಮಾಡುತ್ತಿದ್ದ ವೇಳೆಯಲ್ಲೇ ಚಿಮುಕಲಹಳ್ಳಿ ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಟ್ಯಾಂಕರ್ ಅನ್ನು ಹಿಡಿದು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ಈ ಘಟನೆ ನಡೆದು 100 ದಿನಗಳೇ ಕಳೆದಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ತ್ಯಾಜ್ಯದ ಸ್ಯಾಂಪಲ್ʼಗಳನ್ನು ಸಂಗ್ರಹಿಸಿ ಲ್ಯಾಬ್ʼಗೆ ಕಳಿಸಿದ್ದ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಆ ವರದಿಯನ್ನು ಇನ್ನೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿಲ್ಲ. ಇದೆಲ್ಲವನ್ನು ನೋಡುತ್ತಿದ್ದರೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಗ್ರಾಮಸ್ಥರ ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದು 100 ದಿನಗಳಾದರೂ ಇನ್ನೂ ವರದಿ ಇಲ್ಲ
ತಾಲೂಕಿನ ಅರಣ್ಯ ವಲಯದ ಮೀಸಲು ಪ್ರದೇಶದ ಎನ್.ಡಿ.ಬಿ ಬ್ಲಾಕ್ 5ನೇ ಗಸ್ತು ವ್ಯಾಪ್ತಿಯ ವಾಟದಹೊಸಳ್ಳಿ ಕೆರೆಗೆ ಕಳೆದ ಅಗಸ್ಟ್ 29ರಂದು ರಾತ್ರಿ ಟ್ಯಾಂಕರ್ʼನಲ್ಲಿ ತುಂಬಿಕೊಂಡು ತರಲಾದ ಕೆಮಿಕಲ್ ನೀರನ್ನು ಕೆರೆಗೆ ವಿಲೇವಾರಿ ಮಾಡುತ್ತಿದ್ದಾಗ ಸ್ಥಳೀಯರ ಸಮಯ ಪ್ರಜ್ಞೆಯಿಂದ ಮಹಾ ದುರಂತವನ್ನು ತಪ್ಪಿಹೋಯಿತು.
ಕೂಡಲೇ ಪ್ರಕರಣ ದಾಖಲಿಸಿದ ಅರಣ್ಯ ಇಲಾಖೆ ವಿಷಯವನ್ನು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ತಿಳಿಸಿತ್ತು. ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರ್ ಮಾಡಿದ್ದಾರೆ. ಅಲ್ಲದೇ ಟ್ಯಾಂಕರ್ʼನಲ್ಲಿದ್ದ ಕೆಮಿಕಲ್ ನೀರನ್ನು ಬೆಂಗಳೂರಿನ ಲ್ಯಾಬ್ʼಗೆ ಕಳುಹಿಸಿ 100 ದಿನಗಳಾದರೂ, ಅರಣ್ಯಾ ಇಲಾಖೆಗೆ ಇನ್ನು ಲ್ಯಾಬ್ ವರದಿ ಸಿಕ್ಕಿಲ್ಲ. ತಪಿತಸ್ಥರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ.
ಸುಟ್ಟು ಹೋಗಿದ್ದ ಅರಣ್ಯ ಪ್ರದೇಶ
ಟ್ಯಾಂಕರ್ ನಿಂದ ಕೆರೆಗೆ ಕೆಮಿಕಲ್ ನೀರು ಬಿಡುವಾಗ ಆ ನೀರು ಭೂಮಿಗೆ ಸ್ಪರ್ಶಿಸಿದಾಗ ಭೂಮಿ ಸುಟ್ಟು ಹೋಗಿದೆ. ಅಲ್ಲದೇ ಪಕ್ಕದಲ್ಲೇ ಇದ್ದ ಗಿಡ ಮರಗಳು ಸುಟ್ಟುಹೋಗಿವೆ ಹಾಗೂ ಕೆಮಿಕಲ್ ವಾಸನೆಯಿಂದ ಸಾರ್ವಜನಿಕರು ಆರೋಗ್ಯಕ್ಕೆ ಸಂಬಂಧಿಸಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತ್ಯಾಜ್ಯ ವಿಲೇವಾರಿ ಮಾಡಿದ ಭಾಗದಿಂದ ಕೆಟ್ಟ ವಾಸನೆ ಬರುತ್ತಿತ್ತಲ್ಲದೆ, ಜನರು ತೀವ್ರ ತೊಂದರೆಗೆ ಒಳಗಾಗಿದ್ದರು.
ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಗುಡಿಬಂಡೆ ತಾಲೂಕಿನ ಮೀಸಲು ಅರಣ್ಯ ಪ್ರದೇಶದಲ್ಲಿ ಕೆಮಿಕಲ್ ನೀರು ಬಿಟ್ಟ ಜಾಗಕ್ಕೆ ಭೇಟಿ ನೀಡಿ, ಸ್ಯಾಂಪಲ್ʼಗಳನ್ನು ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್ ಗೆ ವರದಿಗಾಗಿ ಕಳುಹಿಸಿದ್ದಾರೆ. ನಮಗೆ ಇನ್ನೂ ವರದಿ ಬಂದಿಲ್ಲ, ವರದಿಗಾಗಿ ಕಾಯುತ್ತಿದ್ದೇವೆ.
ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ ಗುಡಿಬಂಡೆ.
ಮಾಹಿತಿ ನೀಡದ ಮಾಲಿನ್ಯ ನಿಯಂತ್ರಣ ಮಂಡಳಿ
ಬಗ್ಗೆ ಮಾಹಿತಿ ನೀಡಲು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಹಲವು ಬಾರಿ ಮೊಬೈಲ್ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ ಹಾಗೂ ಉತ್ತರವನ್ನೂ ನೀಡಿಲ್ಲ. ಅಲ್ಲದೇ ಬಹಳ ಮುಖ್ಯವಾಗಿ ವಿಷತ್ಯಾಜ್ಯದ ಬಗ್ಗೆ ಜನರಿಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ಇದೆಲ್ಲವನ್ನು ನೋಡಿದರೆ ಇಡೀ ಪ್ರಕರಣವನ್ನು ಮುಚ್ಚಿಹಾಕುವ ಅನುಮಾನ ವ್ಯಕ್ತವಾಗುತ್ತಿದೆ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಈ ಘಟನೆ ನಡೆದು ಮೂರು ತಿಂಗಳಾದರೂ ಅಧಿಕಾರಿಗಳು ಯಾಕೆ ಇನ್ನೂ ಕಾನೂನು ಕ್ರಮ ಜರುಗಿಸಿಲ್ಲ? ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಯಾವ ಲ್ಯಾಬ್ ಗೆ ಸ್ಯಾಂಪಲ್ʼಗಳನ್ನು ಕಳುಹಿಸಿದ್ದಾರೆ? ವರದಿನ್ನು ಯಾಕೆ ಇನ್ನೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿಲ್ಲ? ಒಂದು ವೇಳೆ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಆರೋಪಿಗಳ ಜತೆ ಶಾಮೀಲಾಗಿದ್ದಾರಾ? ಇಂಥ ಅನುಮಾನಗಳು ನಮಗೆ ಬರುತ್ತಿವೆ. ಆದಷ್ಟು ಬೇಗ ಈ ಬಗ್ಗೆ ಕ್ರಮ ವಹಿಸದಿದ್ದರೆ ನಮ್ಮ ಹಳ್ಳಿ ಗ್ರಾಮಸ್ಥರೆಲ್ಲ ಸೇರಿ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದರು ಧರಣಿ ಕೂರುತ್ತೇವೆ.
ಧನಂಜಯ, ಚಿಮುಕಲಹಳ್ಳಿ ಗ್ರಾಮಸ್ಥ
Comments 1