ಖಾಸಗಿ ಆಸ್ಪತ್ರೆಯ ಆನ್‌ಲೈನ್ ಸಾಫ್ವೇರ್ ಡೇಟಾ ಹ್ಯಾಕ್
ಮೈಸೂರು: ಬೆಂಗಳೂರು ನಗರದಲ್ಲಿ ವ್ಯಾಪಕವಾಗಿದ್ದ ಬಿಟ್ ಕಾಯಿನ್ ದಂಧೆ ಇದೀಗ ಮೈಸೂರಿಗೂ ವ್ಯಾಪಿಸಿದೆ. ಇಲ್ಲಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಆನ್ ಲೈನ್ ಸಾಫ್ಟ್ ವೇರ್ ಡೇಟಾ ಹ್ಯಾಕ್ ಮಾಡಲಾಗಿದೆ.
ಹ್ಯಾಕರ್ ಗಳು ಡೇಟಾ ರಿಲೀಸ್ ಮಾಡಲು ಬಿಟ್ ಕಾಯಿನ್ ಮೂಲಕವೇ ಹಣ ನೀಡಬೇಕೆಂದು ಷರತ್ತು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ.
ನವೆಂಬರ್ 19ರಂದು ರೋಗಿಗಳ ಚಿಕಿತ್ಸಾ ಶುಲ್ಕ, ಖಾಸಗಿ ಲೆಕ್ಕವಿರುವ ಡೇಟಾ, ದೈನಂದಿನ ಹಣಕಾಸು ವ್ಯವಹಾರದ ಮಾಹಿತಿಯಿರುವ ಕಂಪ್ಯೂಟರ್ ಸಿಸ್ಟಂಗಳು ಆಪರೇಟ್ ಆಗದಿರುವುದು ಆಸ್ಪತ್ರೆ ಡೇಟಾ ಎಂಟ್ರಿ ಆಪರೇಟರ್’ಗಳ ಗಮನಕ್ಕೆ ಬಂದಿದೆ.
ಇದನ್ನು ಪರಿಶೀಲಿಸಿದಾಗ ಆಸ್ಪತ್ರೆಯ ಸಾಫ್ಟ್ ವೇರ್ ನಲ್ಲಿ ಹ್ಯಾಕರ್’ಗಳು ತಮ್ಮನ್ನು ಸಂಪರ್ಕಿಸುವಂತೆ ಸಂದೇಶ ರವಾನಿಸಿರುವುದು ಕಂಡುಬಂದಿದೆ.
ಹ್ಯಾಕ್ ಮಾಡಿರುವುದನ್ನು ರಿಲೀಸ್ ಮಾಡಿ ಆನ್ ಲೈನ್ ಸಿಸ್ಟಂ ಆಪರೇಟ್ ಆಗಬೇಕೆಂದರೆ ಹಣ ನೀಡಬೇಕು, ಅದನ್ನು ಬಿಟ್ ಕಾಯಿನ್ ಮೂಲಕವೇ ತಲುಪಿಸಬೇಕೆಂದು ಹ್ಯಾಕರ್ ಗಳು ಬೇಡಿಕೆ ಇಟ್ಟಿದ್ದರೆಂದು ಗೊತ್ತಾಗಿದೆ.
ಆಸ್ಪತ್ರೆಯಲ್ಲಿ ಪ್ರತ್ಯೇಕ ಹಾರ್ಡ್ ಡಿಸ್ಕ್ ಹೊಂದಿದ್ದರಿಂದ ಡೇಟಾ ಬ್ಯಾಕ್ ಅಪ್ ನಷ್ಟವಾಗಿರದ ಕಾರಣ, ದೈನಂದಿನ ವಹಿವಾಟಿಗೆ ಯಾವುದೇ ತೊಂದರೆಯಾಗಲಿ ಅಥವಾ ಆರ್ಥಿಕ ನಷ್ಟವಾಗಿಲ್ಲವೆಂದು ಆಸ್ಪತ್ರೆ ಆಡಳಿತ ಮಂಡಳಿಯು ದೃಢಪಡಿಸಿದೆ.
ಡೇಟಾ ಹ್ಯಾಕ್ ಆಗಿರುವುದು ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯ ಸೆಕ್ಯೂರಿಟಿ ಆಫೀಸರ್ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿರುವ ಸೈಬರ್ ಕ್ರೈಂ ಠಾಣೆಗೆ ಠಾಣೆಗೆ ದೂರು ನೀಡಿದ್ದು, ಇನ್ಸ್ ಪೆಕ್ಟರ್ ಶೇಖರ್ ಸೈಬರ್ ಹ್ಯಾಕರ್ ಗಳ ಸುಳಿವಿನ ಜಾಡು ಹಿಡಿದು ಶೋಧ ಕೈಗೊಂಡಿದ್ದಾರೆ.