ಕಾಂಗ್ರೆಸ್ ಜಾತ್ರೆ ಪ್ರಾರಂಭವಾಗಿದೆ ಎಂದ ಡಿಕೆಶಿ
ಬೆಂಗಳೂರು: ಜೆಡಿಎಸ್ ಪಕ್ಷದ ಮಾಜಿ ನಾಯಕ ಹಾಗೂ ಎರಡು ದಿನಗಳ ಹಿಂದೆಯಷ್ಟೇ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಚಲನಚಿತ್ರ ನಿರ್ಮಾಪಕ ಸಿ.ಆರ್.ಮನೋಹರ್ ತಮ್ಮ ಬೆಂಗಲಿಗರ ಜತೆ ಗುರುವಾರದಂದು ಕಾಂಗ್ರೆಸ್ ಸೇರಿದ್ದಾರೆ.
ಮನೋಹರ್ ಅವರು ಕೋಲಾರ-ಚಿಕ್ಕಬಳ್ಳಾಪುರದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಕೆಲ ವರ್ಷಗಳಿಂದ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಅವರು, ಬಿಜೆಪಿಯಿಂದ ಅದೇ ಕ್ಷೇತ್ರಕ್ಕೆ ಪರಿಷತ್ ಟಿಕೆಟ್ ಬಯಸಿದ್ದರು. ಆದರೆ, ಕಮಲ ಪಾಳೆಯ ಟಿಕೆಟ್ ನೀಡದ ಪರಿಣಾಮ ಅವರು ಕಾಂಗ್ರೆಸ್ ಸೇರಿದ್ದಾರೆ.
ಲಭ್ಯವಾದ ಮಾಹಿತಿ ಪ್ರಕಾರ, ಮನೋಹರ್ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಹಾಲಿ ಶಾಸಕ, ಈಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಶ್ರೀನಿವಾಸಗೌಡರು ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ ಎಂದು ಗೊತ್ತಾಗಿದೆ.
ಇದೇ ವೇಳೆ ಮನೋಹರ್ ಅವರ ಜತೆಯಲ್ಲೇ ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಮಾಲೂರು ನಾಗರಾಜ್ ಪುನಾ ಮಾತೃಪಕ್ಷಕ್ಕೆ ಮರಳಿದ್ದಾರೆ. ಜತೆಗೆ; ತರೀಕೆರೆ ಕ್ಷೇತ್ರದ ಜೆಡಿಎಸ್ ನಾಯಕ ಗೋಪಿಕೃಷ್ಣ, ಅವರ ಪತ್ನಿಯೂ ಆಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಸೂಯಾ ಅವರೂ ಕಾಂಗ್ರೆಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಿಷ್ಟು;
ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಸಂಚಲನ ಶುರುವಾಗಿದೆ. ಕಾಂಗ್ರೆಸ್ ಜಾತ್ರೆ ಪ್ರಾರಂಭವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿದ ನಾಯಕರನ್ನು ಇಂದು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ.
ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಮನೋಹರ್ ಅವರು ಕೋಲಾರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಆಯ್ಕೆಯಾಗಿದ್ದರು. ಅವರ ಸದಸ್ಯತ್ವ ಚಾಲ್ತಿಯಲ್ಲಿದ್ದರೂ ಆ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಷರತ್ತು ಇಲ್ಲದೆ ಸೇರುತ್ತಿದ್ದಾರೆ. ಇವರ ಸೇರ್ಪಡೆ ಮಾಹಿತಿಯನ್ನು ದೆಹಲಿ ವರಿಷ್ಠರಿಗೂ ತಲುಪಿಸಲಾಗಿದೆ.
ಮನೋಹರ್ ರವರು ಕೇವಲ ಕೋಲಾರ ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು ನಗರದಲ್ಲೂ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಆರು ವರ್ಷಗಳಿಂದ ಕೋಲಾರ ವಿಧಾನ ಪರಿಷತ್ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಸೇರುತ್ತಿರುವ ಅವರನ್ನು ನಿಮ್ಮೆಲ್ಲರ ಪರವಾಗಿ ಅಭಿನಂದಿಸುತ್ತೇನೆ.
ಮತ್ತೊಬ್ಬ ಪ್ರಮುಖ ನಾಯಕರು, ನಾವು ವಿದ್ಯಾರ್ಥಿ ನಾಯಕರಾಗಿದ್ದಾಗ ಹೆಚ್ಚು ಹೆಸರು ಮಾಡಿದ್ದ ಮಾಲೂರು ನಾಗರಾಜ್ ಅವರು 15 ವರ್ಷ ಜಿಲ್ಲಾ ಅಧ್ಯಕ್ಷರಾಗಿ 3 ಬಾರಿ ಶಾಸಕರಾಗಿ ಕೆಲಸ ಮಾಡಿದವರು. ಅವರು ಬಿಜೆಪಿಗೆ ಸೇರಿದ್ದರು. ಆದರೆ ಎಲ್ಲ ವರ್ಗದ ಜನರ ರಕ್ಷಣೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಮನವರಿಕೆ ಆಗಿ ಮತ್ತೆ ಪಕ್ಷಕ್ಕೆ ಹಿಂತಿರುಗುತ್ತಿದ್ದಾರೆ. ಅವರನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತೇನೆ.
ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಮಾಲೂರು ಶಾಸಕ ನಂಜೇಗೌಡ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯಿಲಿ ಮುಂತಾದವರು ಇದ್ದರು.