ಅವಿಭಜಿತ ಆಂಧ್ರ ಪ್ರದೇಶದ ಮಾಜಿ ಸಿಎಂ ಇಂದು ಬೆಳಗ್ಗೆ ನಿಧನ
ಹೈದರಾಬಾದ್: 2014ರಲ್ಲಿ ಕೇವಲ 63ದಿನ ರಾಜ್ಯದ ರಾಜ್ಯಪಾಲರಾಗಿದ್ದ ಕೆ.ರೋಶಯ್ಯ ಅವರು ಇಂದು ಬೆಳಗ್ಗೆ ಹೈದರಾಬಾದ್ʼನಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಹಾಗೂ ತಮಿಳುನಾಡು ರಾಜ್ಯದ ರಾಜ್ಯಪಾಲರಾಗಿಯೂ ಅವರು ಕೆಲಸ ಮಾಡಿದ್ದರು. ದಿವಂಗತ ವೈ.ಎಸ್.ರಾಜಶೇಖರ ರೆಡ್ಡಿ ಅವರಿಗೆ ಅತ್ಯಂತ ಆಪ್ತರಾಗಿದ್ದರಲ್ಲದೆ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿದ್ದರು.
ಅನಾರೋಗ್ಯಕ್ಕೆ ತುತ್ತಾಗಿದ್ದ ರೋಶಯ್ಯ ಅವರನ್ನು ಬೆಳಗಿನ ಜಾವ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಅವರು ಮಾರ್ಗ ನಡುವೆಯೇ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ ಹೈದರಾಬಾದ್ʼನಲ್ಲಿ ನಡೆಯಲಿದೆ.
ಮುಖ್ಯವಾಗಿ ಹಣಕಾಸು ಸಚಿವರಾಗಿ ಅವಿಭಜಿತ ಆಂದ್ರ ಪ್ರದೇಶಕ್ಕೆ ಅನನ್ಯ ಕೊಡುಗೆ ನೀಡಿರುವ ರೋಶಯ್ಯ ಅವರು 15 ಸಲ ಬಜೆಟ್ ಮಂಡಿಸಿದ್ದರು. 2009ರಲ್ಲಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದಾಗ ಅವರು ಮುಖ್ಯಮಂತ್ರಿಯಾದರು.
ರೋಶಯ್ಯ ಅವರು 2014ರ ಜೂನ್ 28ರಿಂದ ಅಗಸ್ಟ್ 31ರ ವರೆಗೂ ಕರ್ನಾಟಕದ ರಾಜ್ಯಪಾಲರಾಗಿದ್ದರು.
ಹೆಚ್‌ಡಿಕೆ ಕಂಬನಿ
ಕೆ.ರೋಶಯ್ಯ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿಗಳು; “2014ರಲ್ಲಿ ರಾಜ್ಯದ ರಾಜ್ಯಪಾಲರಾಗಿ, ಜತೆಗೆ; ತಮಿಳುನಾಡಿನ ರಾಜ್ಯಪಾಲರು ಹಾಗೂ ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಕೆ.ರೋಶಯ್ಯ ಅವರ ಹಠಾತ್ ನಿಧನ ನನಗೆ ತೀವ್ರ ಆಘಾತ ಉಂಟು ಮಾಡಿದೆ. ರಾಜಕೀಯದಲ್ಲಿ ಅಜಾತಶತ್ರು ಆಗಿದ್ದ ರೋಶಯ್ಯ ಅವರು ಪ್ರಾಮಾಣಿಕ, ದಕ್ಷ ಆಡಳಿತಗಾರರಾಗಿದ್ದರು.
ಶ್ರೇಷ್ಟ ರಾಜಕೀಯ ಮುತ್ಸದ್ದಿಯಾಗಿದ್ದ ರೋಶಯ್ಯ ಅವರು ರಾಜಕೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಋಷಿಯಂತೆ ದುಡಿಯುತ್ತಿದ್ದರು. ಅವರ ಅಗಲಿಕೆ ದೊಡ್ಡ ನಷ್ಟ. ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಅಗಲಿದ ಚೇತನಕ್ಕೆ ನನ್ನ ಶ್ರದ್ಧಾಂಜಲಿ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.