ಶರಪಂಜರ ಸೇರಿ ಸ್ಮರಣೀಯ ಚಿತ್ರಗಳ ನಟ ಎಸ್.ಶಿವರಾಂ ಇನ್ನಿಲ್ಲ
ಶಿವರಾಂ ಅವರ ಅಪರೂಪದ ಚಿತ್ರಗಳ ಸ್ಲೈಡ್ ಶೋ
ಬೆಂಗಳೂರು: ಶರಪಂಜರ, ಗೆಜ್ಜೆಪೂಜೆ, ಉಪಾಸನೆ, ಭಕ್ತ ಪ್ರಹ್ಲಾದ ಸೇರಿದಂತೆ ನೂರಾರು ಸ್ಮರಣೀಯ ಚಿತ್ರಗಳ ಮೂಲಕ ಚಿರಸ್ಮರಣೀಯರಾಗಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ಶಿವರಾಂ ಅವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಕೆಲ ದಿನಗಳ ಹಿಂದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಗಾಯಗೊಂಡಿದ್ದ ಶಿವರಾಂ ಅವರು, ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದರು. ಆದರೆ, ಕಳೆದ ಮಂಗಳವಾರ ರಾತ್ರಿ ತಮ್ಮ ಮನೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜೆ ನಡೆಸುವಾಗ ಅವರು ಕೆಳಗೆ ಬಿದ್ದಿದ್ದಾರೆ. ಆಗಲೂ ಅವರ ತಲೆಗೆ ತೀವ್ರ ಪೆಟ್ಟಾಗಿ ಮಿದುಳಿನಲ್ಲಿ ರಕ್ತಸ್ರಾವವಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಶನಿವಾರ ನಿಧನರಾಗಿದ್ದಾರೆ.
ಕನ್ನಡ ಚಿತ್ರಗಳಲ್ಲಿ ಹಾಸ್ಯ ಹಾಗೂ ಪೋಷಕ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಶಿವರಾಂ ಅವರು ʼಶರಪಂಜರ ಶಿವರಾಂʼ ಎಂದೇ ಖ್ಯಾತರು. ಕನ್ನಡ ಸಿನಿಮಾ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಅಚ್ಚುಮೆಚ್ಚಿನ ನಟರಾಗಿದ್ದ ಅವರು, ಪುಟ್ಟಣ್ಣ ಅವರ ನಿರ್ದೇಶನದ ‘ಗೆಜ್ಜೆಪೂಜೆ’, ‘ಉಪಾಸನೆ’ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ಶಿವರಾಂ ಅವರು 1938 ಜನವರಿ 28ರಂದು ಜನಿಸಿದ್ದರು. 1958ರಲ್ಲಿ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದ ಅವರು, ತಮ್ಮ ಸಹಜಾಭಿನಯದಿಂದ ಯಶಸ್ಸು ಕಾಣುತ್ತಾ ಹೋದರು. ಅವರ ಸಹೋದರ ರಾಮನಾಥನ್ ಅವರು ಆಗ್ಗೆ ಬಾಲಿವುಡ್ʼನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. 1972ರಲ್ಲಿ ಅವರಿಬ್ಬರು ಸೇರಿ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ‘ಹೃದಯ ಸಂಗಮ’ ಸಿನಿಮಾವನ್ನು ನಿರ್ಮಿಸಿದ್ದರು.
ಗುರುಸ್ವಾಮಿ, ಅಯ್ಯಪ್ಪ ಸ್ವಾಮಿ ಆರಾಧಕರು
ಶಿವರಾಂ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದರು. ಕಠಿಣ ವ್ರತ, ನಿಯಮ ನಿಷ್ಠೆಗಳಿಂದ ಗುರುಸ್ವಾಮಿಗಳಾಗಿದ್ದ ಅವರು ಪ್ರತೀ ವರ್ಷ ಅಯ್ಯಪ್ಪ ಯಾತ್ರೆಯನ್ನು ತಪ್ಪಿಸುತ್ತಿರಲಿಲ್ಲ. ಜತೆಗೆ, ಅನೇಕ ನಟರಿಗೆ ಶಬರಿಮಲೆ ಯಾತ್ರೆ ಮಾಡಿಸುವ ಮೂಲಕ ಸಾತ್ವಿಕ ಹಾದಿಯತ್ತ ನಡೆಸಿದ್ದರು.
ಭಾನುವಾರ ಅಂತ್ಯಕ್ರಿಯೆ
ನಟ ಶಿವರಾಂ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಾಳೆ ಸರಕಾರಿ ಗೌರವದೊಂದಿಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಎರಡು ಗಂಟೆಗಳ ಅಂತಿಮ ದರ್ಶನದ ಬಳಿಕ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ನಗರದ ಯಾವುದಾದರೂ ಕಟ್ಟಡ ಅಥವಾ ರಸ್ತೆಗೆ ಶಿವರಾಂ ಅವರ ಹೆಸರು ಇಡಲಾಗುವುದು ಎಂದು ಕಂದಾಯ ಸಚಿವ ಆಶೋಕ್ ತಿಳಿಸಿದ್ದಾರೆ.