ಕಲ್ಲು ಲೂಟಿಕೋರರ ಜತೆ ಕೈಜೋಡಿಸಿತಾ ಜಿಲ್ಲಾಡಳಿತ? ಕ್ವೀನ್ಸ್‌ರೋಸ್ ಗ್ರಾನೈಟ್ ಮೇಲೆ ಮತ್ತೆ ಬಿತ್ತಾ ಕಲ್ಲು ಖದೀಮರ ಕಾಕದೃಷ್ಟಿ??
ಹಣದಾಸೆಗೆ ಡೀಮ್ಡ್ ಅರಣ್ಯ ಪ್ರದೇಶದ ಪಹಣಿ ತಿದ್ದುಪಡಿ: ಸುಪ್ರೀಂ ಕೋರ್ಟ್ʼಗೆ ಹೆದರುತ್ತಿರುವ ಕಂದಾಯ ಇಲಾಖೆ
ಅರಣ್ಯ ಪ್ರದೇಶ ಉಳಿಸಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳ ಹರಸಾಹಸ
CkNewsNow Exclusive
By GS Bharath Gudibande
ಗುಡಿಬಂಡೆ: ಕೆಲ ದಿನಗಳ ಹಿಂದೆ ತಾಲೂಕಿನ ಮೀಸಲು ಅರಣ್ಯ ಪ್ರದೇಶದಲ್ಲಿ ಕೈಗಾರಿಕೆಗಳ ವಿಷತ್ಯಾಜ್ಯವನ್ನು ವಿಲೇವಾರಿ ಮಾಡುವ ದುಷ್ಪ್ರಯತ್ನ ನಡೆದ ಬೆನ್ನಲ್ಲೇ ನೂರಾರು ಎಕರೆ ಅರಣ್ಯ ಪ್ರದೇಶವನ್ನು ನುಂಗಿಹಾಕುವ ಭಕಾಸುರ ಪ್ರಯತ್ನವು ಗೌರಿಬಿದನೂರು ತಾಲೂಕಿನ ನಗರಗೆರೆ ಬಳಿ ನಡೆದಿದೆ.
ಒಂದೆಡೆ ಅರಣ್ಯೀಕರಣಕ್ಕೆ ಕೇಂದ್ರದ ನರೇಂದ್ರ ಮೋದಿ ಸರಕಾರ ಅತಿಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರೆ, ಮತ್ತೊಂದೆಡೆ ರಾಜ್ಯದ ಬಿಜೆಪಿ ಸರಕಾರದ ಮೂಗಿನಡಿಯಲ್ಲೇ ಸುಮಾರು 284 ಎಕರೆಯಷ್ಟು ಅಮೂಲ್ಯ ಅರಣ್ಯವನ್ನು ಕಬಳಿಸಲು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಂದಾಯ ಇಲಾಖೆ ನಡೆಸಿರುವ ಷಡ್ಯಂತ್ರವನ್ನು ಸಿಕೆನ್ಯೂಸ್ ನೌ ಬಯಲಿಗೆಳೆದಿದ್ದು, ಅದರ ಹಿಂದೆ ಕಲ್ಲು ಗಣಿಗಾರಿಕೆಯ ಮಾಫಿಯಾ ಕೈವಾಡ ಇರುವುದನ್ನು ಪತ್ತೆ ಹಚ್ಚಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿರುವ 284 ಎಕರೆ ʼಡಿʼ ದರ್ಜೆಯ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಪಹಣಿಯನ್ನು ತಿದ್ದುಪಡಿ ಮಾಡಿ ಕಲ್ಲು ಗಣಿಗಾರಿಕೆಗೆ ಅನುವು ಮಾಡಿಕೊಟ್ಟು, ಅನನ್ಯ ವನ್ಯಸಂಪತ್ತು ಹಾಗೂ ಜೈವಿಕವಾಗಿ ಸೂಕ್ಷ್ಮವಾಗಿ ಈ ಕಾಡನ್ನು ಕಲ್ಲು ಖದೀಮರ ಪಾಲು ಮಾಡುವ ಘೋರ ಪ್ರಯತ್ನವನ್ನು ಕಂದಾಯ ಇಲಾಖೆ ನಡೆಸಿದೆ! ಆದರೆ, ಈ ಅರಣ್ಯವನ್ನು ಉಳಿಸಿಕೊಳ್ಳಲು ಗುಡಿಬಂಡೆ ಅರಣ್ಯಾಧಿಕಾರಿಗಳು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ.
ಪಹಣಿ ತಿದ್ದುಪಡಿ ಐಡಿಯಾ
ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ಮಟ್ಟಾವಲಹಳ್ಳಿ ಗ್ರಾಮದ ಸರ್ವೆ ನಂ.37ರ ಪಹಣಿ ಕಾಲಂ 4 ಮತ್ತು 9ರ ಆಕಾರ್ ಬಂದ್ʼನಂತೆ ಸರಕಾರಿ ಖರಾಬ್ ತಿದ್ದುಪಡಿ ಮಾಡಲು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಅವರು ಗೌರಿಬಿದನೂರು ತಾಲೂಕಿನ ತಹಸೀಲ್ದಾರ್ ಅವರಿಗೆ ಆದೇಶ ಮಾಡಿದ್ದಾರೆ. ಆದರೆ ಡಿ ದರ್ಜೆಯ ಅರಣ್ಯ ಪ್ರದೇಶವನ್ನು ಸಂಬಂಧಿತ ವಲಯ ಅರಣ್ಯಾಧಿಕಾರಿಗಳ ಗಮನಕ್ಕೂ ಬಾರದಂತೆ, ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು, ಶಿರಸ್ತೇದಾರ ಹಾಗೂ ತಹಸೀಲ್ದಾರ್ ಅವರುಗಳು ಕುಮ್ಮಕ್ಕಾಗಿ ತಿದ್ದುಪಡಿ ಮಾಡಿದ್ದಾರೆ ಎಂಬ ಅಂಶ ಗೊತ್ತಾಗಿದೆ.
ಮಟ್ಟಾವಲಹಳ್ಳಿ ರಮಣೀಯ ಪ್ರಕೃ ತಿ ಸೌಂದರ್ಯ ಹಾಗೂ ಸೊಬಗಿಗ ಶಿಲೆಗಳ ಸಾಲು ನೋಡಲು ಕೆಳಗಿನ ಫೊಟೋ ಸ್ಲೈಡ್ ಕ್ಲಿಕ್ ಮಾಡಿ..
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ
ಯಾವುದೇ ಅರಣ್ಯ ಪ್ರದೇಶಕ್ಕೆ ಕಂದಾಯ ಇಲಾಖೆ ಅಥವಾ ಬೇರೆ ಯಾವುದೇ ಇಲಾಖೆಯಿಂದಾಗಲಿ ಮಂಜೂರು, ದುರಸ್ಥಿ, ಹೊಸದಾಗಿ ಸರ್ವೆ ನಂಬರ್, ಸಾಗುವಳಿ ಚೀಟಿ, ನೀಡಲು ಅಧಿಕಾರ ಇರುವುದಿಲ್ಲ ಎಂಬ ಸ್ಪಷ್ಟ ನಿಯಮ ಇದೆ ಹಾಗೂ ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವೂ ಇದೆ. ಈ ಆದೇಶವನ್ನು ಉಲ್ಲಂಘಿಸಿ ಯಾರೇ ಅಧಿಕಾರಿ ಅರಣ್ಯ ಪ್ರದೇಶವನ್ನು ಬೇರೆ ಉದ್ದೇಶಕ್ಕೆ ಮಂಜೂರು ಮಾಡುವುದು ಅಥವಾ ಸಾಗುವಳಿ ಚೀಟಿ ನೀಡುವುದು ಮಾಡಿದರೆ ಅದು ಸಂಪೂರ್ಣ ಅಸಿಂಧವಾಗುತ್ತದೆ. ಅಲ್ಲದೇ; ಇದು ಶಿಕ್ಷಾರ್ಹ ಕಾನೂನು ಬಾಹಿರ ಅಪರಾಧವಾಗಿರುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಕರ್ನಾಟಕ ಅರಣ್ಯ ಕಾಯ್ದೆ 1963, ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಸೆಕ್ಷನ್ 94 (ಬಿ) ಪ್ರಕಾರ ಅಧಿಸೂಚಿತ ಅರಣ್ಯ ಭೂಮಿಯನ್ನು ಮಂಜೂರು ಮಾಡಲು ಅರಣ್ಯ ಸಂರಕ್ಷಣಾ ಕಾಯ್ದೆ 1980 ಸೆಕ್ಷನ್ (2)ರ ಅಡಿಯಲ್ಲಿ ಕೇಂದ್ರ ಸರಕಾರದ ಪೂರ್ವಾನುಮತಿ ಪಡೆಯಬೇಕು. ಆದರೆ, ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಗೌರಿಬಿದನೂರು ತಾಲೂಕು ಆಡಳಿತದ ಕಂದಾಯ ಅಧಿಕಾರಿಗಳು ಸಂಪೂರ್ಣವಾಗಿ ಉಲಂಘಿಸಿದ್ದಾರೆ ಹಾಗೂ ಕಾನೂನು ಬಾಹಿರವಾಗಿ ಪಹಣಿ ತಿದ್ದುಪಡಿ ಮಾಡಿ ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯಗಳ ಮಹತ್ವದ ಆದೇಶಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.
ನಂದಿ ಗಿರಿಧಾಮವೂ ಇರುವ ಪಂಚಗಿರಿಗಳ ಸಾಲಿಗೆ ಹೊಂದಿಕೊಂಡಿರುವ ನಗರಗೆರೆ ಸಮೀಪದ ಬೆಟ್ಟಗಳ ನಡುವೆ ಹಂಚಿಹೋಗಿರುವ ಅರಣ್ಯದ ನಡುವೆ ಕಂಡುಬರುವ ಏಕಶಿಲಾ ಬೆಟ್ಟಗಳ ಮೇಲೆ ಕಲ್ಲು ಖದೀಮರ ಕಣ್ಣು ಬಿದ್ದಿದ್ದು, ಹೇಗಾದರೂ ಮಾಡಿ ಆ ಅಪರೂಪದ ಶಿಲೆಗಳನ್ನು ನುಂಗಲು ಹೊಂಚು ಹಾಕುತ್ತಿದ್ದಾರೆ. ಇನ್ನೊಂದೆಡೆ, ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ ಮಾಡಿ ಪಹಣಿ ತಿದ್ದುಪಡಿ ಮಾಡಿ ಅರಣ್ಯಭೂಮಿಯನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆದಿರುವ ಬೆನ್ನಲ್ಲೇ ಈ ಅಕ್ರಮ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳು ಬೆವರುತ್ತಿದ್ದಾರೆ.
ಕಲ್ಲು ಗಣಿಗಾರಿಕೆ ಅನುಮತಿ ಕೇಳಲಾಗಿತ್ತಾ?
ಪ್ರಭಾವೀ ಕಲ್ಲು ಗಣಿಗಾರಿಕೆ ಉದ್ಯಮಿಯೊಬ್ಬರು ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಮನವಿ ಸಲ್ಲಿಸಿದ್ದರೂ ಎನ್ನಲಾಗಿದ್ದು, ಸುಪ್ರೀಂ ಕೋರ್ಟ್ ಭಯದಿಂದ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಅನುಮತಿ ನೀಡಲು ಹಿಂದೇಟು ಹಾಕಿದ್ದಾರೆ ಎನ್ನುವ ಮಾಹಿತಿಯೂ ಇದೆ. ಅಲ್ಲದೆ, ಜೈವಿಕ ಜೀವಸೂಕ್ಷ್ಮ ಪ್ರದೇಶ ಎಂದು ಗುರುತಿಸಲ್ಪಟ್ಟಿರುವ ಐತಿಹಾಸಿಕ ಯಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ಬೆಟ್ಟದ ಸಮೀಪದ ಇರುವ ʼಕ್ವೀನ್ಸ್‌ರೋಸ್ʼ ಗ್ರಾನೈಟ್‌ಗುಡ್ಡಗಳಿಗೆ 8-10 ಕಿ.ಮೀ ದೂರದಲ್ಲಿ ಈ ಅರಣ್ಯ ಪ್ರದೇಶವಿದ್ದು, ಅಲ್ಲಿರುವ ಶಿಲೆಗಳು ಕ್ವೀನ್ಸ್ ರೋಸ್ ಮಾದರಿಯಲ್ಲೇ ಇವೆ. ಜಾಗತಿಕ ಮಾರುಕಟ್ಟೆಯಲ್ಲಿ ಈ ಗ್ರಾನೈಟ್ʼಗೆ ಚಿನ್ನದ ಬೆಲೆ ಇರುವ ಕಾರಣಕ್ಕೆ ಕಲ್ಲುಕುಳಗಳು ಈ ಅಪರೂಪದ ಅರಣ್ಯದ ಮೇಲೆ ಕಾಕದೃಷ್ಟಿ ಬೀರಿದ್ದಾರೆ.
1995-96ರಲ್ಲಿ ಕೆಲ ಕಲ್ಲು ಉದ್ಯಮಿಗಳು ಯಲ್ಲೋಡು ಬಳಿ ಕ್ವೀನ್ಸ್ ರೋಸ್ ಶಿಲೆಗಳನ್ನು ಮನಸೋ ಇಚ್ಛೆ ಕಡಿದು ದೋಚುವ ಪ್ರಯತ್ನಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅಂದಿನ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಇದು ಬಹಳ ದೊಡ್ಡ ಸುದ್ದಿಯಾವಗಿ ಕೊನೆಗೆ ಸರಕಾರ ಈ ಕಲ್ಲು ಲೂಟಿಗೆ ಅಂಕುಶ ಹಾಕಿತ್ತು.
ಅಂದು ಕೋಲಾರ ಪತ್ರಿಕೆಯ ವರದಿಗಾರರಾಗಿದ್ದ ಸಿಕೆನ್ಯೂಸ್ ನೌ ಸಂಪಾದಕ ಪಿ.ಕೆ.ಚನ್ನಕೃಷ್ಣ ಅವರು, ರಾಜ್ಯದಲ್ಲೇ ಮೊತ್ತ ಮೊದಲಿಗೆ ಕ್ವೀನ್ಸ್ ರೋಸ್ ಲೂಟಿಯನ್ನು ಬೆಳಕಿಗೆ ತಂದಿದ್ದರು. ಆಗ ಗುಡಿಬಂಡೆಯಲ್ಲಿ ವಲಯ ಅರಣ್ಯಾಧಿಕಾರಿ ಆಗಿದ್ದ ಗಣಪತಿ ಅವರು ಕಲ್ಲು ಖದೀಮರ ವಿರುದ್ಧ ಜೀವದ ಹಂಗು ತೊರೆದು ಹೋರಾಟ ನಡೆಸಿದ್ದರು. ಅವರಿಬ್ಬರ ಕಠಿಣ ಪರಿಶ್ರಮದ ಫಲವಾಗಿ ಕ್ವೀನ್ಸ್ ರೋಸ್ ಲೂಟಿ ಸ್ಥಗಿತವಾಗಿತ್ತು. ಈಗಲು ಆ ಪ್ರದೇಶದಲ್ಲಿ ಕತ್ತರಿಸಲ್ಪಟ್ಟಿರುವ ಕ್ವೀನ್ಸ್ ರೋಸ್ ಕಲ್ಲಿನ ತುಂಡುಗಳು ಬಿದ್ದಿವೆ.
ಎಲ್ಲಿದೆ ಈ ಅರಣ್ಯ?
ಕಂದಾಯ ಇಲಾಖೆ ಅಧಿಕಾರಿಗಳು ನುಂಗಲೆತ್ನಿಸಿರುವ ಸರ್ವೇ ನಂಬರ್ 37ರ 284 ಎಕರೆ ಡೀಮ್ಡ್ ಅರಣ್ಯ ಪ್ರದೇಶವು ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ಮಟ್ಟಾವಲಹಳ್ಳಿ ಬಳಿ ಇದೆ. ಆದರೆ, ಆ ಅರಣ್ಯವು ಗುಡಿಬಂಡೆ ತಾಲೂಕಿನ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಗೆ ಬರುತ್ತದೆ. ಅಲ್ಲದೆ, ಅರಣ್ಯವೂ ಕರ್ನಾಟಕ-ಆಂಧ್ರ ಪ್ರದೇಶದ ಗಡಿಯಲ್ಲೇ ಇದೆ. ಅರಣ್ಯದ ಸ್ವಲ್ಪ ಭಾಗ ಆಂಧ್ರದಲ್ಲೂ ಚಾಚಿಕೊಂಡಿದೆ.
ಅಪರೂಪದ ವನ್ಯ ಸಂಕುಲ
ನವಿಲುಗಳು, ಜಿಂಕೆ, ಕರಡಿ, ಚಿರತೆ, ರಡಿ, ಕೃಷ್ಣಮೃಗ, ಮೊಲ, ಮಂಗಗಳು ಸೇರಿದಂತೆ ಹಲವಾರು ಬಗೆಯ ವನ್ಯ ಪ್ರಾಣಿಗಳು ಈ ಅರಣ್ಯದಲ್ಲಿ ಆಶ್ರಯ ಪಡೆದಿವೆ. ಜತೆಗೆ ಅಕ್ಕಪಕ್ಕದ ಹಳ್ಳಿಗಳಿಗೆ ಜೀವನಾಧಾರವಾದ ಕೆರೆಗಳು, ಇನ್ನಿತರೆ ಜಲಮೂಲಗಳು ಇವೆ. ಒಂದು ವೇಳೆ ಡೀಮ್ಡ್ ಅರಣ್ಯದಿಂದ ಇಷ್ಟೂ ಪ್ರದೇಶವನ್ನು ಹಿಂಪಡೆದು ಕಲ್ಲು ಕ್ವಾರಿಗಳ ವಶಕ್ಕೆ ಕೊಟ್ಟರೆ ಇಡೀ ಅರಣ್ಯ ಪ್ರದೇಶ ನಾಶವಾಗಿ, ಪರಿಸರ ಮಾಲಿನ್ಯದಿಂದ ಜಲಮೂಲಗಳು ಹಾಳಾಗಿ ವನ್ಯಜೀವಿಗಳ ಮಾರಣಹೋಮ ನಡೆಯುವುದಂತೂ ಖಂಡಿತಾ. ಈಗಾಗಲೇ ಇಂಥ ದೃಶ್ಯಗಳನ್ನು ನಂದಿಬೆಟ್ಟದ ಆಸುಪಾಸು, ಪೇರೆಸಂದ್ರ ಸಮೀಪದ ಹಿರೇನಾಗವೇಲಿಯ ಬಳಿ ನಡೆಯುತ್ತಿರುವ ಕ್ವಾರಿಗಳು ಸೃಷ್ಟಿ ಮಾಡಿರುವ ಅವಾಂತರಗಳೇ ಸಾಕ್ಷಿ ಎನ್ನುತ್ತಾರೆ ಸ್ಥಳೀಯರು.
ಗೌರಿಬಿದನೂರು ತಹಸೀಲ್ದಾರ್ ಹೇಳುವುದೇನು?
ಮಟ್ಟಾವಲಹಳ್ಳಿ ಬಳ್ಳಿ ಸರಕಾರಿ ಖರಾಬು ಡಿ ದರ್ಜೆ ಅರಣ್ಯ ಪ್ರದೇಶ ಅಂತ ಇತ್ತು. ಈಗ ಅದು ಸರಕಾರಿ ಖರಾಬು ಆಗಿದೆ. ಎಂಆರ್ (ಅರಣ್ಯ ಪ್ರದೇಶದಿಂದ ಹಿಂಪಡೆಯುವಿಕೆ) ಆಧಾರದ ಮೇಲೆ ಎಸಿ ಅವರಿಗೆ ಖರಾಬು ಮಾಡುವಂತೆ ಪ್ರಸ್ತಾವನೆ ಕಳಿಸಿದ್ದೇವೆ. 1991-92ರಲ್ಲಿ ಈ ಸರ್ವೇ ನಂಬರಿನ ಪ್ರದೇಶವನ್ನು ಎಂಆರ್ ಮಾಡಲಾಗಿದೆ. ಅದರಂತೆ ತಿದ್ದುಪಡಿಗೆ ಕಳಿಸಲಾಗಿದೆ. ಆದರೆ, ಈಗ ಆ ಪ್ರದೇಶವನ್ನು ಡೀಮ್ಡ್ ಅರಣ್ಯವನ್ನಾಗಿ ಪರಿವರ್ತನೆ ಮಾಡುವ ಪ್ರಸ್ತಾವನೆ ಆಗಿದೆ ಎಂದು ಗೊತ್ತಾಗಿದೆ. ನಮ್ಮಲ್ಲೂ ಈ ಬಗ್ಗೆ ಮಾಹಿತಿ ಇಲ್ಲ. ಹಿಂದೆ 1991-92ರಲ್ಲಿ ಎರಡು-ಮೂರು ಬಾರಿ ಏನೇನೋ ಬದಲಾವಣೆ ಆಗಿದೆಯಂತೆ. ಈಗಾಗಲೇ ಗುಡಿಬಂಡೆ ಆರ್‌ಎಫ್‌ಓ ಅವರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ದಾಖಲೆಗಳನ್ನು ತರಿಸಿಕೊಳ್ಳುತ್ತಿದ್ದೇನೆ. ಆ ದಾಖಲೆಗಳನ್ನು ಪರಿಶೀಲನೆ ಮಾಡುತ್ತೇವೆ. ಒಂದು ವೇಳೆ ಅದು ಡೀಮ್ಡ್ ಫಾರೆಸ್ಟ್ ಎಂದಿದ್ದರೆ, ಮತ್ತೆ ಅದನ್ನು ಡೀಮ್ಡ್ ಫಾರೆಸ್ಟ್ ಅಂತಲೇ ಮಾಡುತ್ತೇವೆ. ಈ ಪ್ರದೇಶವನ್ನು ಯಾವ ವ್ಯಕ್ತಿಯ ಹೆಸರಿಗೆ ಮಾಡಿಲ್ಲ, ಬದಲಿಗೆ ಸರಕಾರದ ವಶದಲ್ಲೇ ಇದೆ ಎನ್ನುತ್ತಾರೆ ಗೌರಿಬಿದನೂರಿನ ತಹಸೀಲ್ದಾರ್ ಶ್ರೀನಿವಾಸ್.
ಈಗ ಈ ಪ್ರದೇಶವು ಡೀಮ್ಡ್ ಫಾರೆಸ್ಟ್ʼನಿಂದ ಸೆಕ್ಷನ್ 4ಗೆ ಅಂದರೆ, ಮೀಸಲು ಅರಣ್ಯವಾಗಿ ಪರಿವರ್ತಿಸಲು ಪ್ರಸ್ತಾವನೆ ಆಗಿದೆ. ಈಗಷ್ಟೇ ನನಗೆ ಮಾಹಿತಿ ಗೊತ್ತಾಗಿದೆ. ಕೂಡಲೇ ಗುಡಿಬಂಡೆ ಆರ್‌ಎಫ್‌ಒ ಜತೆಗೂ ಮಾತನಾಡಿದೆ. ಅವರು ಒಂದು ದಾಖಲೆ ಕಳಿಸಲಾಗುವುದು ಎಂದು ತಿಳಿಸಿದ್ದಾರೆ. ಆ ದಾಖಲೆ ನಮಗೆ ಸಿಕ್ಕಿದ ಕೂಡಲೇ ಸರ್ವೇ ನಂ.37ರ ಪ್ರದೇಶದ ಎಂಆರ್ ರದ್ದುಪಡಿಸಿ ಡೀಮ್ಡ್ ಫಾರೆಸ್ಟ್ ಆಗಿ ಪರಿವರ್ತನೆ ಮಾಡುತ್ತೇವೆ. ಈಗ ಆ ಇಡೀ ಜಾಗ ಸರಕಾರದ ಹೆಸರಿನಲ್ಲೇ ಇದೆ. ಯಾರೇ ಖಾಸಗಿ ವ್ಯಕ್ತಿಯ ಹೆಸರಿನಲ್ಲಿ ಇಲ್ಲ. ಹಾಗೆ ಮಾಡಲು ಸಾಧ್ಯವಿಲ್ಲ ಎನ್ನುವುದು ತಹಸೀಲ್ದಾರ್ ಹೇಳುವ ಮಾತು.
ಅರಣ್ಯಾಧಿಕಾರಿಗಳು ಏನಂತಾರೆ?
ಗುಡಿಬಂಡೆ ವಲಯ ಅರಣ್ಯ ವ್ಯಾಪ್ತಿಯ ಮಟ್ಟಾವಲಹಳ್ಳಿಯ ಸರ್ವೆ ನಂ.37ರಲ್ಲಿ ಒಟ್ಟು 286.20 ಎಕರೆ ಅರಣ್ಯ ಪ್ರದೇಶವಿದೆ. ಪಹಣಿಯಲ್ಲಿ ಗೌರಿಬಿದನೂರು ಕಂದಾಯ ಇಲಾಖೆಯಿಂದ ಸರಕಾರಿ ಖರಾಬ್ ಡಿ ದರ್ಜೆ ಅರಣ್ಯ ಪ್ರದೇಶವನ್ನು ಸರಕಾರಿ ಖರಾಬ್ ಎಂದು ತಿದ್ದುಪಡಿ ಮಾಡಿರುವುದು ವಿಷಾದನೀಯ. ಈ ಅರಣ್ಯ ಪ್ರದೇಶವನ್ನು ಸೆಕ್ಷನ್ 4ರ ಅಧಿಸೂಚನೆಗಾಗಿ ಈ ಹಿಂದೆಯೇ ಪ್ರಸ್ತಾಪಿಸಲಾಗಿದ್ದು, ಅದು ಪ್ರಗತಿಯಲ್ಲಿದೆ. ಸ್ವಾಭಾವಿಕ ಅರಣ್ಯ ಪ್ರದೇಶ ಇರುವುದರಿಂದ ಅದನ್ನು ಪರಿಭಾವಿತ ಅರಣ್ಯ ಮಾನದಂಡಗಳ ಅನುಸಾರ ಪರಿಭಾವಿತ ಅರಣ್ಯ ಪ್ರದೇಶದ ಪಟ್ಟಿಗೆ ಸೇರಿಸಲಾಗಿರುತ್ತದೆ. ಈ ಪ್ರದೇಶದಲ್ಲಿ ಚಿರತೆ, ಕರಡಿ, ನರಿ ಕೃಷ್ಣ ಮೃಗ ಮೊಲ ಇತ್ಯಾದಿ ವನ್ಯಜೀವಿಗಳ ಆವಾಸಸ್ಥಾನವಾಗಿದ್ದು, ಆಂಧ್ರ ಪ್ರದೇಶದ ಗಡಿ ಹೊಂದಿಕೊಂಡಿರುವುದರಿಂದ ಅರಣ್ಯ ಸಂರಕ್ಷಣೆಗೆ ಹೆಚ್ಚು ಒತ್ತು ಕೊಡಬೇಕು.
ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ, ಗುಡಿಬಂಡೆ
ಗುಡಿಬಂಡೆ ಅರಣ್ಯ ಪ್ರದೇಶದಲ್ಲಿ ಅಪರೂಪ ಜೀವ ಸಂಕುಲವಿದೆ. ನಮ್ಮ ಇಲಾಖೆಯಿಂದ ಸಂರಕ್ಷಿಸಲ್ಪಡುವ, ಅರಣ್ಯ ಪ್ರದೇಶದ ದಾಖಲೆಗಳಲ್ಲಿ ಒಂದಾದ ಪಹಣಿ ತಿದ್ದುಪಡಿ ವಿಚಾರ ಅರಣ್ಯ ಇಲಾಖೆಯ ಗಮನಕ್ಕೆ ಬಾರದೆ ತಿದ್ದುಪಡಿ ಮಾಡಿರುವುದು ಎಷ್ಟು ಸರಿ? ಅದನ್ನು ಕೂಡಲೇ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು.
ಕನಕರಾಜು, ಉಪ ವಲಯ ಅರಣ್ಯಾಧಿಕಾರಿ, ಗುಡಿಬಂಡೆ
Comments 1