ತಪ್ಪು ಸರಿಪಡಿಸಿದ ಅಧಿಕಾರಿಗಳು; ಡೀಮ್ಡ್ ಫಾರೆಸ್ಟ್ ಮರಳಿ ನೀಡಿದ ಗೌರಿಬಿದನೂರು ಕಂದಾಯ ಇಲಾಖೆ
ಕಂದಾಯ ಅಧಿಕಾರಿಗಳ ನಿಗೂಢ ಹೆಜ್ಜೆಗಳ ಬಗ್ಗೆ ಸಂಶಯಗಳ ಹುತ್ತ; ಇನ್ನೂ ಬಗೆಯಲಿದೆ ಸಿಕೆನ್ಯೂಸ್ ನೌ
By GS Bharath Gudibande
ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಿಕೆನ್ಯೂಸ್ ನೌ ವರದಿ ಮತ್ತೊಮ್ಮೆ ಸದ್ದು ಮಾಡಿದೆ.
ಡೀಮ್ಡ್ ಅರಣ್ಯ ಪ್ರದೇಶವನ್ನು ಸರಕಾರಿ ಖರಾಬ್ ಮಾಡಿ ಕಲ್ಲು ಗಣಿಗಾರಿಕೆ ಕುಳಗಳಿಗೆ ಕೊಡಲು ಎಂಆರ್ (ಅರಣ್ಯದಿಂದ ಹಿಂಪಡಿಯುವಿಕೆ) ಮಾಡಲಾಗಿದ್ದ ಅಮೂಲ್ಯ ಅರಣ್ಯ ಪ್ರದೇಶವು ಬಚಾವಾಗಿದ್ದು, ಅದು ಪುನಾ ಅರಣ್ಯ ಇಲಾಖೆಯ ಸುಪರ್ದಿಗೇ ಹೋಗಿದೆ.
ಗುಡಿಬಂಡೆ ತಾಲೂಕು ಮೀಸಲು ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ನಿಷ್ಠೆ ಹಾಗೂ ಸಿಕೆನ್ಯೂಸ್ ನೌ ಕೆಚ್ಚೆದೆಯ ವರದಿಯ ಪರಿಣಾಮ ಇದು ಸಾಧ್ಯವಾಗಿದ್ದು, ಈ ವರದಿಗೆ ಜಿಲ್ಲಾಧಿಕಾರಿ ಆರ್.ಲತಾ ಅವರು ಸ್ಪಂದಿಸಿದ್ದಾರೆ.
ಗುಡಿಬಂಡೆ ತಾಲೂಕಿನ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿರುವ 284 ಎಕರೆಗೂ ಹೆಚ್ಚು ಅರಣ್ಯ ಪ್ರದೇಶವನ್ನು ಗೌರಿಬಿದನೂರು ತಾಲೂಕು ಕಂದಾಯ ಇಲಾಖೆಯು ಅನಧಿಕೃತವಾಗಿ ಪಹಣಿ ತಿದ್ದುಪಡಿ ಮಾಡಿತ್ತು. ಇದಕ್ಕೆ ಅಧಿಕೃತವಾಗಿ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಯೇ ಆದೇಶ ನೀಡಿದ್ದರು. ಅದರ ಬಗ್ಗೆ ಸಿಕೆನ್ಯೂಸ್ ನೌ ದಾಖಲೆಗಳ ಸಮೇತ ವರದಿ ಮಾಡಿದ ಬೆನ್ನೆಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಆಗಿರುವ ತಪ್ಪು ಸರಿ ಮಾಡಿಕೊಂಡಿದ್ದಾರೆ.
ಗೌರಿಬಿದನೂರು ತಾಲೂಕಿನ ಮಟ್ಟಾವಲಹಳ್ಳಿಯ ಸರ್ವೆ ನಂ.37ರ 284 ಎಕರೆ ಅರಣ್ಯ ಪ್ರದೇಶವು ಗುಡಿಬಂಡೆ ಅರಣ್ಯ ಇಲಾಖೆಗೆ ಒಳಪಡುತ್ತದೆ, ಈ ಪ್ರದೇಶದ ಪಹಣಿಯಲ್ಲಿ ಸರಕಾರ ಖರಾಬ್ ಡಿ ದರ್ಜೆ ಅರಣ್ಯ ಪ್ರದೇಶವನ್ನು ತಿದ್ದುಪಡಿ ಮಾಡಿ, ಡಿ ದರ್ಜೆ ಅರಣ್ಯ ಪ್ರದೇಶ ಎಂಬ ಪದವನ್ನು ತೆಗೆದುಹಾಕಿ, ಕೇವಲ ಸರಕಾರಿ ಖರಾಬ್ ಎಂದು ಉಳಿಸಿಕೊಂಡು ಕಂದಾಯ ಇಲಾಖೆ ಅಧಿಕಾರಿಗಳು ಸುಪ್ರೀಂ ಕೋರ್ಟ್, ಕೇಂದ್ರ ಸರಕಾರ ಹಾಗೂ ಅರಣ್ಯ ಕಾಯ್ದೆಗಳನ್ನು ಉಲಂಘಿಸಿ ತಿದ್ದುಪಡಿ ಮಾಡಿದ್ದರು, ಸಿಕೆನ್ಯೂಸ್ ನೌ ವರದಿ ಬಂದ ಕೂಡಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಉಪ ವಿಭಾಗಾಧಿಕಾರಿ, ಗೌರಿಬಿದನೂರು ತಾಲೂಕು ಆಡಳಿತ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಅರಣ್ಯ ಪ್ರದೇಶವನ್ನು ಮರಳಿ ಅರಣ್ಯ ಇಲಾಖೆಗೆ ನೀಡಿದ್ದಾರೆ.
ಈ ಸುದ್ದಿ ಓದಲು ಕೆಳಗಿನ ಲಿ<ಕ್ ಕ್ಲಿಕ್ ಮಾಡಿ..
ಜಿಲ್ಲಾಧಿಕಾರಿ ಹೇಳಿದ್ದೇನು?
ಸಿಕೆನ್ಯೂಸ್ ನೌ ವರದಿಯನ್ನು ಉಲ್ಲೇಖಿಸಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಅವರು ಹೇಳಿದ್ದಿಷ್ಟು;
ಎಂಆರ್ ಮುಟೇಷಬ್ ನಂ ಹಾಗೂ 1991ರಲ್ಲಿ ಡೀಮ್ಡ್ ಅರಣ್ಯ ಪ್ರದೇಶ ಇರುತ್ತದೆ. ಎಂಆರ್ 3/1991/92ರಲ್ಲಿ ಮಟ್ಟಾವಲಹಳ್ಳಿ ಸರ್ವೆ ನಂ.37ರ ಅರಣ್ಯ ಪ್ರದೇಶವನ್ನು ಕೈ ಬಿಡಲಾಗುತ್ತದೆ. ಈ ಸಂದರ್ಭದಲ್ಲಿ ಅರಣ್ಯ ಪ್ರದೇಶವನ್ನು ಸರಕಾರ ಖರಾಬ್ʼಗೆ ಸೇರಿಸಿತ್ತು. ನಂತರ 2017ರಲ್ಲಿ ಸರಕಾರದಿಂದ ಪ್ರಸ್ತಾವನೆಗೆ ಕಳುಹಿಸಿ ಸರಕಾರಿ ಡಿ ದರ್ಜೆ ಅರಣ್ಯ ಪ್ರದೇಶವಾಗಿ ಮಿಸಲಿಡಲಾಗಿದೆ. ಅದನ್ನು ಗಮನಿಸದೇ ತಹಸೀಲ್ದಾರ್ ತಿದ್ದುಪಡಿ ಮಾಡಿದ್ದಾರೆ ಹಾಗೂ ಅರಣ್ಯ ಇಲಾಖೆಯಿಂದ ಮಾಹಿತಿ ಪಡೆದು ಅರಣ್ಯ ಪ್ರದೇಶವನ್ನು ಉಪ ವಿಭಾಗಾಧಿಕಾರಿ ಪಹಣಿ ತಿದ್ದುಪಡಿಯನ್ನು ಕೋರ್ಟ್ ಪ್ರಕ್ರಿಯೆಗಳ ಮೂಲಕ ಹಿಂತಿರುಗಿಸಿದ್ದಾರೆ.
ಎಂ.ಆರ್ ಮುಟೇಷನ್ 1991 ಹಾಗೂ 1992ರಲ್ಲಿ ನಡೆದ ಮಾಹಿತಿ ಆಧಾರದ ಮೇಲೆ ಈ ರೀತಿಯ ಸಮಸ್ಯೆಯಾಗಿದೆ. ಅದನ್ನು ಕೂಡಲೇ ಸರಿಪಡಿಸಿದ್ದಾರೆ ಹಾಗೂ ಯಾವುದೇ ಖಾಸಗೀ ವ್ಯಕ್ತಿಗೆ ಹೆಸರಿಗೆ ಮಾಡಿಲ್ಲ. ಅದನ್ನು ಸರಕಾರಿ ಖರಾಬ್ ಅಂತಲೇ ಉಳಿಸಿಕೊಂಡಿದ್ದರಿಂದ ಏನು ಸಮಸ್ಯೆ ಇಲ್ಲ ಎನ್ನುವುದು ಅವರ ಮಾತು.
***
ಜಿಲ್ಲಾಧಿಕಾರಿಗಳ ಹೇಳಿಕೆಯನ್ನೇ ಗಮನಿಸಿದರೆ, ಸ್ವತಃ ಜಿಲ್ಲಾಡಳಿತದ ಗಮನಕ್ಕೆ ತಾರದೇ ಪಹಣಿ ತಿದ್ದುಪಡಿಗೆ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ ಅವರು ಗೌರಿಬಿದನೂರು ತಹಸೀಲ್ದಾರ್ ಅವರಿಗೆ ಆದೇಶ ನೀಡಿದ್ದಾರೆ. ಹಾಗಾದರೆ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಇಬ್ಬರೂ ಸ್ವತಃ ಜಿಲ್ಲಾಧಿಕಾರಿ ಗಮನಕ್ಕೆ ವಿಷಯವನ್ನು ತಾರದೇ ಪಹಣಿಗೆ ತಿದ್ದುಪಡಿ ತಂದು ಡೀಮ್ಡ್ ಅರಣ್ಯವನ್ನು ಸರಕಾರಿ ಖರಾಬ್ ಮಾಡಿದ್ದಾರೆ ಎನ್ನುವುದು ನೇರವಾಗಿಯೇ ಸಾಬೀತಾದಂತೆ ಆಗಿದೆ.
ಇದೇ ವೇಳೆ ಖಾಸಗಿ ವ್ಯಕ್ತಿಯೊಬ್ಬರು ಸರ್ವೇ ನಂ.37ರಲ್ಲಿ ಕಲ್ಲು ಕಣಿಗಾರಿಕೆ ಮನವಿ ಸಲ್ಲಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಕಂದಾಯ ಇಲಾಖೆ ಅಧಿಕಾರಗಳ ಮೇಲೆ ಅನೇಕ ಸಂಶಯಗಳಿಗೆ ಕಾರಣವಾಗಿದೆ.
ಜಿಲ್ಲಾಧಿಕಾರಿಗಳು ಕೂಡ, ತಮ್ಮ ಗಮನಕ್ಕೆ ತಾರದೇ ತಹಸೀಲ್ದಾರ್ ಈ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆಯೇ ಹೊರತು ಅರಣ್ಯ ಪ್ರದೇಶವನ್ನು ಎಂಆರ್ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಗೌರಿಬಿದನೂರು ತಹಸೀಲ್ದಾರ್ ಏನಂತಾರೆ?
ಇಡೀ ಪಹಣಿ ತಿದ್ದುಪಡಿ, ನಂತರ ಆದ ಪರಿಣಾಮಗಳು ಹಾಗೂ ಪುನಾ ಅರಣ್ಯ ಇಲಾಖೆಗೆ ಆ ಪ್ರದೇಶವನ್ನು ಒಪ್ಪಿಸಿದ ಅಷ್ಟೂ ವಿಷಯಗಳ ಬಗ್ಗೆ ಗೌರಿಬಿದನೂರು ತಹಸೀಲ್ದಾರ್ ಶ್ರೀನಿವಾಸ್ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡಿದರು; ಅವರು ಹೇಳಿದ ವಿವರ ಹೀಗಿದೆ.
ಮಟ್ಟಾವಲಹಳ್ಳಿ ಸರ್ವೇ ನಂ.37 ಮೊದಲು ಡೀಮ್ಡ್ ಆರಣ್ಯ ಅಂತ ಇತ್ತು. 1991-92ರಲ್ಲಿ ಇದನ್ನು ಎಂಆರ್ (ಅರಣ್ಯದಿಂದ ಹಿಂಪಡಿಯುವಿಕೆ) ಮಾಡಲಾಗಿತ್ತು. ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಆ ಪ್ರದೇಶವನ್ನು ಪಡೆಯಲಾಗಿತ್ತು. 2007ರಲ್ಲಿ ಅದನ್ನು ಡೀಮ್ಡ್ ಫಾರೆಸ್ಟ್ ಮಾಡುವ ಪ್ರಸ್ತಾವನೆಯೂ ಹೋಗಿದೆ. ಆ ಮಾಹಿತಿ ನಮ್ಮ ಇಲಾಖೆಗೆ ಇರಲಿಲ್ಲ, ನಮಗೂ ಗೊತ್ತಿರಲಿಲ್ಲ. ಹಳೆಯ ಎಂಆರ್ ಇಟ್ಟುಕೊಂಡೇ ನಾವೂ ಎಂಆರ್ ಮಾಡಿದ್ದೇವೆ. ಹೀಗೆ ಮಾಡುವಾಗ ಗುಡಿಬಂಡೆ ಆರ್‌ಎಫ್‌ಓ ಅವರು, ಇದು ಡೀಮ್ಡ್ ಫಾರೆಸ್ಟ್ ಅಂತ ನಮಗೆ ಮಾಹಿತಿ ನೀಡಿದರು. ಆಗ ನಾವು ದಾಖಲೆಗಳನ್ನೆಲ್ಲ ಪರಿಶೀಲನೆ ಮಾಡಿದಾಗ ಸರ್ವೇ ನಂ.37ನ್ನು ಡೀಮ್ಡ್ ಫಾರೆಸ್ಟ್ ಆಗಿ ಪ್ರಸ್ತಾವನೆ ಮಾಡಿದ್ದ ಮಾಹಿತಿ ಇತ್ತು. ಇಷ್ಟೂ ಅರಣ್ಯ ಪ್ರದೇಶವನ್ನು ಡೀಮ್ಡ್ ಅರಣ್ಯ ಪ್ರದೇಶ ಮಾಡುವ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಆಗಿದೆ. ಆ ದಾಖಲೆಯನ್ನೂ ನಾವು ಪಡೆದುಕೊಂಡಿದ್ದೇವೆ. ಈ ದಾಖಲೆಗಳನ್ನು ಕೂಡಲೇ ನಾವು ಉಪ ವಿಭಾಗಾಧಿಕಾರಿ ಗಮನಕ್ಕೆ ತಂದೆವು. ತದ ನಂತರ ಎಂಆರ್ ಮಾಡಲಾಗಿದ್ದ ಸರ್ವೇ ನಂ.37ರ 284 ಎಕರೆ ಪ್ರದೇಶವನ್ನೂ ಪುನಾ ಡೀಮ್ಡ್ ಅರಣ್ಯ ಪ್ರದೇಶ ಎಂದು ದಾಖಲೆ ಮಾಡಿದ್ದೇವೆ. ಈ ಬಗ್ಗೆ ಉಪ ವಿಭಾಗಾಧಿಕಾರಿ ಅವರು ಆದೇಶ ಮಾಡಿದ್ದಾರೆ.
ಪಹಣಿ ತಿದ್ದುಪಡಿ ಮುನ್ನ ಪಹಣಿಯಲ್ಲಿ ಡೀಮ್ಡ್ ಫಾರೆಸ್ಟ್ ಎಂದು ನಮೂದಿಸಲಾಗಿದ್ದರೂ ನೀವು ಏಕೆ ಅದನ್ನು ಸರಕಾರಿ ಖರಾಬ್ ಮಾಡಿದಿರಿ? ಅದನ್ನು ನೀವು ಗಮನಿಸಲಿಲ್ಲವೇ? ಎಂದು ಸಿಕೆನ್ಯೂಸ್ ನೌ ನೇರವಾಗಿ ಪ್ರಶ್ನೆ ಮಾಡಿದಾಗ ಉತ್ತರಿಸಲು ತಡವರಿಸಿದ ತಹಸೀಲ್ದಾರ್ ಅವರು; “ಪಹಣಿ ಗಮನಿಸಿಲ್ಲ, ಎಂಆರ್ ಆಧಾರದ ಮೇಲೆ ಸರಕಾರಿ ಮಾಡಿದ್ದೇವೆ. ಅದನ್ನು ಸರಕಾರದ ಹೆಸರಿಗೇ ಮಾಡಿದ್ದೇವೆಯೇ ವಿನಾ ಯಾವುದೇ ಖಾಸಗಿ ವ್ಯಕ್ತಿ ಹೆಸರಿಗೆ ಅಲ್ಲ” ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು.
ನೀವು ಹೇಳಿದ ದಾಖಲೆ ನಮಗೆ ಸಿಕ್ಕಿದ್ದಿದ್ದರೆ ಅದನ್ನು ಸರಕಾರಿ ಖರಾಬ್ ಮಾಡುತ್ತಲೇ ಇರಲಿಲ್ಲ. ಏನೇ ಆದರೂ ಸರಕಾರದ ಭೂಮಿ ಸರಕಾರದ ಹೆಸರಿನಲ್ಲೇ ಇತ್ತಲ್ಲ ಅಂತ ನಾವೆಲ್ಲ ಸ್ವಲ್ಪ ಸುಮ್ಮನಾಗಿದ್ದೆವು. ನಮ್ಮ ಗ್ರಾಮ ಲೆಕ್ಕಿಗ ಇರಬಹುದು, ಆರ್ ಐ ಇರಬಹುದು ಅಥವಾ ಶಿರಸ್ತೇದಾರ್ ಇರಬಹುದು ಎಲ್ಲ ಸುಮ್ಮನೆ ಇದ್ದರು. ನೀವು ವಿಷಯ ಪ್ರಸ್ತಾಪ ಮಾಡಿದ ಮೇಲೆಯೇ ನಮಗೆ ಗೊತ್ತಾಗಿದ್ದು, ಆಮೇಲೆ ಆರ್ ಎಫ್ ಓ, ಡಿಎಫ್ ಓ ಅವರಿಂದ ಮಾಹಿತಿ ಪಡೆದುಕೊಂಡೆ. ಡಿಎಫ್ ಓ ಕಚೇರಿಗೆ ನಮ್ಮ ಸಿಬ್ಬಂದಿಯನ್ನೇ ಕಳಿಸಿ ಮಾಹಿತಿ ಪಡೆದುಕೊಂಡೆ. ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲೂ ಈ ಬಗ್ಗೆ ಒಂದು ತೀರ್ಮಾನ ಆಗಿದೆ. ಆ ದಾಖಲೆಯನ್ನೂ ನಿಮಗೆ ಕೊಡಲಾಗುವುದು. ಆ ದಾಖಲೆಯಲ್ಲೂ ಡೀಮ್ಡ್ ಫಾರೆಸ್ಟ್ ಅಂತ ಇಲ್ಲ. ಆಮೇಲೆ ಡಿಎಫ್ ಓ ಕಚೇರಿಯಿಂದ ಯಾವುದೋ ದಾಖಲೆ ತರಿಸಿಕೊಂಡು ಆಗಿದ್ದ ಪ್ರಮಾದವನ್ನು ಸರಿ ಮಾಡಿದ್ದೇವೆ ಎಂದರು ತಹಸೀಲ್ದಾರ್ ಶ್ರೀನಿವಾಸ್.
ಈಗ ಡಿಎಫ್ ಓ ಕಚೇರಿಗೆ ಸರ್ವೇ ನಂ.37ರ ಅಷ್ಟೂ ಪ್ರದೇಶವನ್ನು ಅರಣ್ಯ ಅಂತ ಮಾಡಲು ಪ್ರಸ್ತಾವನೆ ಹೋಗಿದೆ. ಆ ಬಗ್ಗೆ ಉಪ ವಿಭಾಗಾಧಿಕಾರಿ ಆದೇಶವನ್ನು ಹೊರಡಿದ್ದಾರೆ. ಸಮಸ್ಯೆ ಸರಿ ಹೋಗಿದೆ ಎಂದರು ಅವರು.
ಕಂದಾಯ ಅಧಿಕಾರಿಗಳ ಕರಾಮತ್ತು
ಜಿಲ್ಲಾಧಿಕಾರಿ ಹೇಳಿಕೆ ಹಾಗೂ ಗೌರಿಬಿದನೂರು ತಹಸೀಲ್ದಾರ್ ಹೇಳಿಕೆಗಳನ್ನು ಗಮನಿಸಿದರೆ ಗೌರಿಬಿದನೂರು ಕಂದಾಯ ಇಲಾಖೆ ಅಧಿಕಾರಿಗಳ ಕರಾಮತ್ತಿನ ಬಗ್ಗೆ ನಾನಾ ಅನುಮಾನಗಳು ಮೂಡುತ್ತವೆ. ಇಡೀ ಪ್ರದೇಶವನ್ನು ಕಲ್ಲು ಗಣಿಗಾರಿಕೆ ಕುಳಗಳ ಕೈಗೆ ಒಪ್ಪಿಸಲು ನಡೆದಿರುವ ಪ್ರಯತ್ನಗಳ ಬಗ್ಗೆ ದಟ್ಟ ವಾಸನೆಯೂ ಬಡಿಯುತ್ತಿದೆ. ಈ ಬಗ್ಗೆ ಸಿಕೆನ್ಯೂಸ್ ನೌ ಇನ್ನಷ್ಟು ಆಳವಾಗಿ ವರದಿಗಳನ್ನು ಪ್ರಕಟಿಸಲಿದೆ.