ರಾಜ್ಯಾದ್ಯಂತ ಅಹೋರಾತ್ರಿ ಪ್ರತಿಭಟನೆ ಶುರು ಮಾಡಿದ ಅತಿಥಿಗಳು
by GS Bharath Gudibande
ಗುಡಿಬಂಡೆ: ಹೇಳುವುದು ಭಾರತ ವಿಶ್ವಗುರುವಾಗಬೇಕು ಎಂದು. ಮಾತನಾಡುವುದು ಭಾರತ ಜ್ಞಾನ ಕಣಜ ಆಗಬೇಕೆಂದು. ಅದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಎಂಬ ಹೆಸರು ಬೇರೆ! ಆದರೆ ಪಾಠ ಮಾಡುವವರಿಗೆ ಮಾರು ಕಾಸಿನ ಬೆಲೆ ಇಲ್ಲ.
ಹೀಗೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಸಂಖ್ಯೆಯಷ್ಟು ಅತಿಥಿ ಉಪನ್ಯಾಸಕರು.
ರಾಜ್ಯದ ಸರಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ತೆಗೆದು ಹಾಕಿ ಕಾಲೇಜು ನಡೆಸಲಿ. ಕನಿಷ್ಠ ಗೌರವ, ನ್ಯಾಯಯುತ ವೇತನ, ಸೇವಾ ಭದ್ರತೆ ನೀಡದೇ ನಮ್ಮ ಜತೆ ಜೊತೆ ಸರಕಾರ ಆಟವಾಡುತ್ತಿದೆ ಎಂದು ಅತಿಥಿ ಉಪನ್ಯಾಸಕರು ನೇರ ಆರೋಪ ಮಾಡುತ್ತಿದ್ದಾರೆ.
ರಾಜ್ಯ ಸರಕಾರಿ ಪದವಿ ಕಾಲೇಜುಗಳಲ್ಲಿ 10–15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಹಾಗೂ ವೇತನ ಹೆಚ್ಚಳ ಮಾಡಬೇಕು ಎಂದು ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ಅಹೋರಾತ್ರಿ ಪ್ರತಿಭಟನೆ ಮಡುತ್ತಿದ್ದಾರೆ.
ಪಟ್ಟಣದ ಸರಕಾರಿ ಪದವಿ ಕಾಲೇಜಿನಲ್ಲಿ ಒಟ್ಟು 14 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಎಲ್ಲರೂ ಪ್ರಾಂಶುಪಾಲರಾಗಿ ಮನವಿ ಪತ್ರಕೊಟ್ಟು ತರಗತಿ ಬಹಿಷ್ಕರಿಸಿದ್ದಾರೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅತಿಥಿ ಉಪನ್ಯಾಸಕರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಚಂದ್ರ ಅವರು; ನಮ್ಮ ಭವಿಷ್ಯದ ಜತೆ ಸರಕಾರ ಚೆಲ್ಲಾಟವಾಡುತ್ತಿದೆ. ಅತ್ಯಂತ ಕೆಟ್ಟದಾಗಿ ಸರಕಾರ ನಮ್ಮನ್ನು ನಡೆಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಸುಮಾರು 14 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ವಯೋಮಿತಿ ಮೀರಿದೆ. ನಿರಂತರವಾಗಿ ಕೆಲಸ ಮಾಡುತ್ತಿದ್ದರೂ ಅವರ ಬದುಕು ಚಿಂತಾಜನಕ ಸ್ಥಿತಿಯಲ್ಲಿದೆ. ಸರಕಾರ ಕೆಲ ಸಂದರ್ಭದಲ್ಲಿ ವೇತನ ಹೆಚ್ಚಳ ಮಾಡಿ ಸೇವಾ ಭದ್ರತೆ ನೀಡುತ್ತೇವೆ ಎನ್ನುತ್ತಿದೆ. ಆದರೆ ಇದುವರೆಗೂ ಸಮಸ್ಯೆ ಬಗೆ ಹರಿಸಲು ಸೂಕ್ತ ಕ್ರಮ ವಹಿಸಿಲ್ಲ ಎಂದು ಅವರು ದೂರಿದರು.
ಕೋವಿಡ್ ಸಂಕಷ್ಟದಲ್ಲೂ ಕೆಲಸ
ಕೋವಿಡ್–19 ಪರಿಣಾಮದಿಂದಾಗಿ ಆ ಕುಟುಂಬಗಳು ಬೀದಿಪಾಲಾಗುವ ದುಃಸ್ಥಿತಿ ಬಂದೊದಗಿದೆ. ಅನೇಕರು ಸಾವಿಗೀಡಾಗಿದ್ದಾರೆ. ಇದರಿಂದಾಗಿ, ಅವರನ್ನೇ ನಂಬಿದ್ದ ಕುಟುಂಬಗಳ ಸದಸ್ಯರು ಅತಂತ್ರವಾಗಿವೆ. ಆದರೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಡಿಮೆ ವೇತನಕ್ಕೆ ಕೆಲಸ ಮಾಡಿದರೂ ಸರಕಾರ ಕುರುಡುತನದಿಂದ ನಡೆದುಕೊಳ್ಳುತ್ತಿರುವುದು ಶೋಚನೀಯ ಎಂದು ಜಯಚಂದ್ರ ಹೇಳಿದ್ದಾರೆ.
ರಾಜ್ಯಾದ್ಯಂತ ಅಹೋರಾತ್ರಿ ಪ್ರತಿಭಟನೆ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದ ವೇಳೆಯೂ ತೀವ್ರ ಹೋರಾಟ ಮಾಡಲಾಗಿತ್ತು. ಆಗ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು, ‘ನಮ್ಮ ಸರಕಾರ ಬಂದರೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲಾಗುವುದು’ ಎಂದು ಭರವಸೆ ಕೊಟ್ಟಿದ್ದರು. ಅದಾದ ನಂತರ ಬಿಜೆಪಿ ಸರಕಾರವೇ ಬಂತು. ಆದರೆ, ಯಡಿಯೂರಪ್ಪ ಅವರು ಭರವಸೆ ಈಡೇರಿಸಲಿಲ್ಲ. ನಂತರ ಬಂದ ಮುಖ್ಯಮಂತ್ರಿಗಳು ಕೂಡ ನಮ್ಮ ಕಷ್ಟಕ್ಕೆ ಸ್ಪಷಂದಿಸಲಿಲ್ಲ’ ಎಂದು ಅಸಮಾಧಾನ ಅವರು ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಬೇಕು
ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತ್ವರಿತವಾಗಿ ಕ್ರಮ ವಹಿಸಬೇಕು. ಶೈಕ್ಷಣಿಕ ವರ್ಷದ ಹಲವು ತಿಂಗಳಿನಿಂದ ಇದುವರೆಗೂ ಗೌರವಧನ ನೀಡಿಲ್ಲ. ತುರ್ತಾಗಿ ಬಿಡುಗಡೆ ಮಾಡಬೇಕು. ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂ ಮಾಡಬೇಕು, ಅತಿಥಿ ಉಪನ್ಯಾಸಕರ ಸಂಕಷ್ಟಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಅಶ್ವತ್ಥಪ್ಪ, ಶಿವಶಂಕರಪ್ಪ, ರಮೇಶ್, ಉಮಾ, ರಮೇಶ್ ರೆಡ್ಡಿ, ಸೌಭಾಗ್ಯ, ಕಾಂತರಾಜ್, ಪ್ರಕಾಶ್ ಒಂಟೆ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.