ಅನಾರೋಗ್ಯದಿಂದ ಅಗಲಿಕೆ; ‘ನನ್ನ ತೇಜಸ್ವಿʼ ಅವರ ಕೃತಿ
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಪುತ್ರ ಸಾಹಿತಿ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿಯವರು (84 ವರ್ಷ) ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬೆಂಗಳೂರಿನ ರಾಜಲಕ್ಷ್ಮಿಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಅವರು ಇಂದು ಬೆಳಗ್ಗೆ 6.30ಕ್ಕೆ ಅಗಲಿದ್ದಾರೆ. ಅವರು ತಿವ್ರ ಜ್ವರದಿಂದ ಬಳಲುತ್ತಿದ್ದರು. ಅವರಿಗೆ ಹೃದಯಾಘಾತವೂ ಆಗಿತ್ತು ಎಂದು ಮೂಲಗಳು ತಿಳಿಸವೆ.
ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ʼನಲ್ಲಿರುವ ಅವರ ಪುತ್ರಿಯ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಜೆ 5.30ರ ವರೆಗೆ ಅಂತಿಮ ದರ್ಶನ ಇರಲಿದೆ. ಆಸ್ಪತ್ರೆಗೆ ದೇಹದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ಗೊತ್ತಾಗಿದೆ.
1937ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ರಾಜೇಶ್ವರಿ ಅವರು, ಮೈಸೂರು ವಿವಿಯಲ್ಲಿ ತತ್ತ್ವಶಾಸ್ತ್ರದಲ್ಲಿ ಆನರ್ಸ್, ಸ್ನಾತಕೋತ್ತರ ಪದವಿ ಪಡೆದಿದ್ದರು. 1966ರಲ್ಲಿ ಪೂರ್ಣಚಂದ್ರ ತೇಜಸ್ವಿ ಅವರನ್ನು ವಿವಾಹವಾಗಿದ್ದರು.
ಪತಿಯಂತೆ ಸಾಹಿತ್ಯ ಕ್ಷೇತ್ರದಲ್ಲೇ ಸಕ್ರಿಯರಾಗಿದ್ದ ಅವರು ʼನನ್ನ ತೇಜಸ್ವಿʼ ಕೃತಿ ರಚಿಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಕಂಬನಿ
ರಾಜೇಶ್ವರಿ ತೇಜಸ್ವಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೂಡಿಗೆರೆಯ ಕೊಟ್ಟಿಗೆ ಹಾರದಲ್ಲಿ ರಾಜೇಶ್ವರಿ ತೇಜಸ್ವಿ ಅವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿದ್ದ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕೆಲಸ ನಿಲ್ಲಬಾರದು ಎಂದು ಅವರು ಸರಕಾರವನ್ನು ಒತ್ತಾಯ ಮಾಡಿದ್ದಾರೆ.