ರಾತ್ರೋರಾತ್ರಿ ಕೈಗಾರಿಕೆ ಕಿರಾತಕರಿಂದ ವಿಷ ಜಲತ್ಯಾಜ್ಯ ವಿಲೇವಾರಿ / ಐತಿಹಾಸಿಕ ಶ್ರೀನಿವಾಸ ಸಾಗರಕ್ಕೆ ಸೇರಿದ ವಿಷ ನೀರು / ಗುಡಿಬಂಡೆ ಘಟನೆ ಮಾಸುವ ಮುನ್ನವೇ ಈ ಘಟನೆ; ರೊಚ್ಚಿಗೆದ್ದ ಜನ, ಅಧಿಕಾರಿಗಳ ವಿರುದ್ಧ ಆಕ್ರೋಶ
by GS Bharath Gudibande
ಚಿಕ್ಕಬಳ್ಳಾಪುರ: ರಾಜಧಾನಿಗೆ ಹತ್ತಿರದಲ್ಲೇ ಇರುವ ಚಿಕ್ಕಬಳ್ಳಾಪುರ ಶಾಪಗ್ರಸ್ತವಾಗಿದೆಯೇನೋ ಎಂಬ ಭಾವನೆ ಕಾಡುತ್ತಿದೆ.
ಬೆಂಗಳೂರಿನ ವಿಷಕಾರಿ ಕೊಳಚೆ ನೀರು ಹೆಚ್.ಎನ್.ವ್ಯಾಲಿ ಮೂಲಕ ಹರಿದುಬಂದು ಜಿಲ್ಲೆಯ ಜಲಮೂಲಗಳೆಲ್ಲವನ್ನೂ ಕಲುಶಿತಗೊಳಿಸಿರುವ ಬೆನ್ನಲ್ಲೆ, ಅಂತರ್ಜಲದಲ್ಲಿ ಅಪಾಯಕಾರಿ ಯುರೇನಿಯಂ ಅಂಶ ಸೇರಿಕೊಂಡು ಜನಜೀವನ ನರಕವಾಗುತ್ತಿರುವ ಬೆನ್ನಲ್ಲೇ ಪದೇಪದೆ ವಿಷದಾಳಿಗೆ ತುತ್ತಾಗುತ್ತಿದೆ.
ಕೆಲ ದಿನಗಳ ಹಿಂದೆಯಷ್ಟೇ ಗುಡಿಬಂಡೆ ಮೀಸಲು ಅರಣ್ಯ ಪ್ರದೇಶದಲ್ಲಿರುವ ವಾಟದಹೊಸಹಳ್ಳಿ ಕೆರೆಗೆ ಕೈಗಾರಿಕೆಗಳು ಹೊರಹಾಕುವ ವಿಷಕಾರಿ ಜಲತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದ ಘಟನೆ ನಡೆದ ನಂತರ ಈಗ ಅಂಥದ್ದೇ ಘಟನೆ ಚಿಕ್ಕಬಳ್ಳಾಪುರ ನಗರಕ್ಕೆ ಕೂಗಳತೆ ದೂರದಲ್ಲಿ ನಡೆದಿದೆ.
ಪ್ರಕೃತಿದತ್ತವಾಗಿ ಸಮೃದ್ಧವಾಗಿರುವ ಜಿಲ್ಲೆಯ ಮೇಲೆ ನಡೆಯುತ್ತಿರುವ ವಿಷದಾಳಿಯಿಂದ ಪರಿಸರ ಪ್ರೇಮಿಗಳು ರೊಚ್ಚಿಗೆದ್ದಿದ್ದಾರೆ. ವಿಷತ್ಯಾಜ್ಯದ ಅಕ್ರಮ ವಿಲೇವಾರಿಯಿಂದ ಜಲಮೂಲಗಳೆಲ್ಲವೂ ಅಪಾಯಕ್ಕೆ ಸಿಲುಕಿದ್ದು, ಜನ ಜಾನುವಾರುಗಳಿಗೆ ಸಾವಿನ ಕೂಪವನ್ನು ಸೃಷ್ಟಿ ಮಾಡುತ್ತಿದೆ.
ಬಯಲುಸೀಮೆ ಪ್ರದೇಶದಲ್ಲಿ ಒಂದು ವರ್ಷದಿಂದ ಉತ್ತಮ ಮಳೆಯಾಗುತ್ತಿದ್ದು, ಜನರು ನೆಮ್ಮದಿಯ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಕೈಗಾರಿಕೆಗಳಿಂದ ಹೊರಬರುವ ವಿಷಕಾರಿ ಜಲತ್ಯಾಜ್ಯವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಲ್ಲಿ ರಹಸ್ಯವಾಗಿ ವಿಲೇವಾರಿ ಮಾಡುವ ಮೂಲಕ ʼಕೈಗಾರಿಕೆ ಕಿರಾತಕರುʼ ದುಷ್ಕೃತ್ಯ ಎಸಗಿ ಅಟ್ಟಹಾಸ ಮೆರೆಯುತ್ತಿದ್ದಾರೆ.
ಕಳೆದ ರಾತ್ರಿ (ಸೋಮವಾರ) ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ವಿಷಕಾರಿ ಜಲತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಆ ವಿಷಕಾರಿ ತ್ಯಾಜ್ಯ ಐತಿಹಾಸಿಕ ಶ್ರೀನಿವಾಸ ಸಾಗರ ಅಣೆಕಟ್ಟು ಸೇರಿದ್ದು ಜಲಚರಗಳಿಗೆ ಅಪಾಯ ಎದುರಾಗಿದೆ. ವಿಷಕಾರಿ ನೀರು. ಕೆಳಗೆ ಬಿದ್ದು ಭೂಮಿ, ಗಿಡಗಳು, ಹುಲ್ಲು ಸುಟ್ಟು ಹೋಗಿದೆ. ಅಲ್ಲದೆ, ಅದರ ದುರ್ವಾಸನೆಯಿಂದ ರಸ್ತೆಯಲ್ಲಿ ನಡೆದಾಡುವುದೇ ಕಷ್ಟವಾಗಿದೆ.
ಕಳೆದ ಅಗಸ್ಟ್ 29ರಂದು ಇದೇ ರೀತಿಯಲ್ಲಿ ಗುಡಿಬಂಡೆ ಮೀಸಲು ಅರಣ್ಯ ಪ್ರದೇಶದಲ್ಲಿರುವ ವಾಟದಹೊಸಹಳ್ಳಿ ಕೆರೆಗೆ ಟ್ಯಾಂಕರ್ ಒಂದು ಕೈಗಾರಿಕೆ ವಿಷತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ವೇಳೆಯಲ್ಲಿ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದುಹಾಕಿದ್ದರು. ಆ ಟ್ಯಾಂಕರ್ ಇನ್ನೂ ಗುಡಿಬಂಡೆ ಅರಣ್ಯ ಇಲಾಖೆಯ ವಶದಲ್ಲೇ ಇದೆ. ಈ ಘಟನೆ ಮಾಸುವ ಮುನ್ನವೇ; ಅಂದರೆ, ಆ ಘಟನೆ ನಡೆದ 46 ದಿನಗಳ ನಂತರ ಚಿಕ್ಕಬಳ್ಳಾಪುರದಲ್ಲಿ ಅಂಥದ್ದೇ ಘಟನೆ ನಡೆದಿದೆ.
ಘಟನೆ ನಡೆದಿರುವುದು ಎಲ್ಲಿ?
ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸ ಸಾಗರ ಕೆರೆಯ ಜಲಾನಯನ ಪ್ರದೇಶದ ಜಕ್ಕಲಮಡಗು ಬಳಿ ಮಳೆ ನೀರು ಹರಿಯುವ ಮೋರಿಗೆ ಕಾರ್ಖಾನೆಗಳ ವಿಷಪೂರಿತ ರಾಸಾಯನಿಕ ತ್ಯಾಜ್ಯವನ್ನು ಟ್ಯಾಂಕರ್ʼನಲ್ಲಿ ತಂದು ವಿಲೇವಾರಿ ಮಾಡಲಾಗಿದೆ. ಇಲ್ಲಿಂದ ಮಳೆ ನೀರು ಜಕ್ಕಮಡುಗು ಜಲಾಶಯಕ್ಕೆ ಹಾಗೂ ಶ್ರೀನಿವಾಸ ಸಾಗರಕ್ಕೂ ಹರಿಯುತ್ತದೆ.
ಶ್ರೀನಿವಾಸ ಸಾಗರದಿಂದ ವಿಷ ಜಲತ್ಯಾಜ್ಯ ಹರಿಯುತ್ತಿರುವುದು.
ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಎಲ್ಲಿ?
ಜಿಲ್ಲೆಯ ಮೇಲೆ ಕೈಗಾರಿಕೆ ಕಿರಾತಕರು ಇಂಥ ವಿಷದಾಳಿಗಳನ್ನು ನಿರಂತರವಾಗಿ ನಡೆಸುತ್ತಿದ್ದರೂ ಜಿಲ್ಲಾಡಳಿತ ಮೌನವಾಗಿದೆ. ಗುಡಿಬಂಡೆ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದರೂ ಜಿಲ್ಲಾಡಳಿತ ಚಕಾರವನ್ನೇ ಎತ್ತಿರಲಿಲ್ಲ.
ಶ್ರೀನಿವಾಸ ಸಾಗರಕ್ಕೆ ಸೇರಿರುವ ವಿಷ ಜಲತ್ಯಾಜ್ಯ ಸೇರಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಇಡೀ ಜಿಲ್ಲೆಯ ಪರಿಸರ ಪ್ರೇಮಿಗಳು, ತಜ್ಞರು, ಜನರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ-ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಜಿಲ್ಲಾಧಿಕಾರಿ ಆಗಲಿ, ಪೊಲೀಸ್ ವರಿಷ್ಠಾಧಿಕಾರಿ ಆಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.
ಇನ್ನೊಂದು ವಿಶಾಖಪಟ್ಟಣವಾಗುತ್ತಾ ಚಿಕ್ಕಬಳ್ಳಾಪುರ?
ಸತತವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿಷತ್ಯಾಜ್ಯ ವಿಲೇವಾರಿ ಆಗುತ್ತಿರುವುದನ್ನು ನೋಡಿದರೆ ಚಿಕ್ಕಬಳ್ಳಾಪುರ ಇನ್ನೊಂದು ವಿಶಾಖಪಟ್ಟಣ ಆಗುತ್ತಾ ಎಂಬ ಆತಂಕವನ್ನು ಸಾರ್ವಜನಿಕರು, ಪರಿಸರ ಪ್ರೇಮಿಗಳು ಹಾಗೂ ನೀರಾವರಿ ಹೋರಾಟಗಾರರು ವ್ಯಕ್ತಪಡಿಸಿದ್ದಾರೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ 2020ರ ಮೇ 7ರಂದು ಮುಂಜಾನೆ ಸಮೀಪದ ವೆಂಕಟಾಪುರಂ ಗ್ರಾಮದಲ್ಲಿದ್ದ ಎಲ್.ಜಿ.ಪಾಲಿಮರ್ಸ್ ರಾಸಾಯನಿಕ ಸ್ಥಾವರದಲ್ಲಿ ವಿಷಾನಿಲ ಸೋರಿಕೆಯಾಗಿ 13ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅಲ್ಲದೇ; ಒಂದು ಸಾವಿರಕ್ಕೂ ಹೆಚ್ಚು ಜನರು ಅನಿಲ ದುಷ್ಪರಿಣಾಮಕ್ಕೆ ಗುರಿಯಾದರು. ಈ ಘಟನೆ ಭಾರತ ಮಾತ್ರವಲ್ಲದೆ ಇಡೀ ಜಗತ್ತನ್ನೇ ದಿಗ್ಭ್ರಮೆಗೊಳಿಸಿತ್ತು. ಈಗ ಚಿಕ್ಕಬಳ್ಳಾಪುರದ ಪರಿಸ್ಥಿತಿಯೂ ಅದೇ ಹಾದಿಯಲ್ಲಿದೆಯಾ ಎನ್ನುವ ಅನುಮಾನ ದಟ್ಟವಾಗಿದೆ.
ವಿಷ ಜಲತ್ಯಾಜ್ಯವನ್ನು ತೋರಿಸುತ್ತಿರುವ ಸ್ಥಳೀಯರು.
ಮೊದಲೇ ಬರಪೀಡಿತವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿಗೆ ಉತ್ತಮ ಮಳೆಯಾಗಿದೆ. ಜನ ನೆಮ್ಮದಿಯಿಂದ ಇದ್ದಾರೆ. ಇಂತಹ ಸಮಯದಲ್ಲಿ ಕೈಗಾರಿಕೆಗಳ ನಿರುಪಯುಕ್ತ ವಿಷಕಾರಿ ತ್ಯಾಜ್ಯವನ್ನು ಸುರಿದು ಜಲಮೂಲಗಳನ್ನು ಮಲಿನಗೊಳಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡರೆ ಮುಂದೆಂದು ಈ ರೀತಿಯ ಕೃತ್ಯಗಳು ನಡೆಯುವುದಿಲ್ಲ. ಆದರೆ ಯಾವುದೋ ಆಮಿಷಗಳಿಗೆ ಒಳಗಾದಂತೆ ಸಂಬಂಧಪಟ್ಟವರು ಜಾಣಮೌನಕ್ಕೆ ಶರಣಾಗಿರೋದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆರ್.ಆಂಜನೇಯ ರೆಡ್ಡಿ, ಅಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ
ಕಣಿವೆ ಪ್ರದೇಶದಲ್ಲಿ ಸುರಿದಿರುವ ರಾಸಾಯನಿಕ ತ್ಯಾಜ್ಯ ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಅರಣ್ಯ ಪ್ರದೇಶ, ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ಸೇರಿ ಹಲವೆಡೆ ಇಂಥ ವಿಷವನ್ನು ಹರಿದುಬಿಡಲಾಗಿತ್ತು. ಈ ಬಗ್ಗೆ ದೂರು ದಾಖಲಾಗಿದ್ದರೂ ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ಸಂಬಂಧಿಸಿದವರು ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ ಜಿಲ್ಲೆಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ.
ಮುನೇಗೌಡ, ರೈತ
- ವಿಷ ಜಲತ್ಯಾಜ್ಯ ವಿಲೇವಾರಿಯಿಂದ ಸ್ಥಳದಲ್ಲಿ ಗಿಡಗಂಟೆಗಳು ಸುಟ್ಟಿರುವುದು.
Comments 1