ಸಚಿವ ಕೆ.ಎಸ್.ಈಶ್ವರಪ್ಪ ಸಿಡಿಸಿದರು ಹೊಸ ಬಾಂಬ್
ಬೆಳಗಾವಿ: ಬೇರೆ ಪಕ್ಷದಿಂದ ಕೆಲವರು ಬಿಜೆಪಿಗೆ ಬಂದು ಉದ್ಯಮ ಮಾಡುತ್ತಿದ್ದಾರೆ. ಅಂತವರು ಬಹಳ ಕಾಲ ಪಕ್ಷದಲ್ಲಿ ಇರುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಗುರುವಾರ ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲವರು ಹೊರಗಿನಿಂದ ಬಂದು ಇನ್ನೂ ಪಕ್ಷಕ್ಕೆ ಹೊಂದಾಣಿಕೆ ಆಗಿಲ್ಲ. ಪರಿಷತ್ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಯತ್ನಿಸಿದ್ದಾರೆ. ಈ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿಗೆ ಬಂದ ಮೇಲೆ ಉದ್ಯಮ ಮಾಡುತ್ತಿದ್ದಾರೆ. ಹೊಂದಾಣಿಕೆ ಆಗದಿದ್ದರೆ ಪಕ್ಷದಿಂದ ಹಿಂದೆ ಸರಿಯುತ್ತಾರೆ ಎಂದು ಯಾರ ಹೆಸರನ್ನೂ ಹೇಳದೆ ಕಿಡಿಕಾರಿದರು.
ಶಾಸಕ ರೇಣುಕಾಚಾರ್ಯ ಮಾತನಾಡಿ, ಸಚಿವರು ತಮ್ಮ ನಡವಳಿಕೆ ಬದಲಿಸಿಕೊಳ್ಳಲು ಶಾಸಕಾಂಗ ಸಭೆಯಲ್ಲಿ ಸೂಚಿಸಲಾಗಿದೆ. ನಮ್ಮ ಪಕ್ಷಕ್ಕೆ ಬಂದು ಪಕ್ಷದಲ್ಲಿ ಅಧಿಕಾರ ಅನುಭವಿಸಿ, ಹೊರ ಹೋದರೆ ಬಿಜೆಪಿಗೆ ದ್ರೋಹ ಮಾಡಿದಂತೆ. ಶಾಸಕರಿಂದಲೇ ಸರ್ಕಾರವಿದೆ, ಹಾಗೆಂದು ಯಾವ ಸಚಿವರ ಬಗ್ಗೆ ಆರೋಪ ಮಾಡಿಲ್ಲ ಎಂದು ಹೇಳಿದರು.
ಮೂಲ, ವಲಸಿಗರು ಎಂಬುದು ನಮ್ಮಲ್ಲಿ ಇಲ್ಲ. ಶಾಸಕಾಂಗ ಸಭೆಯಲ್ಲಿ ಮುಂದಿನ ಬಾರಿ ಅಧಿಕಾರಕ್ಕೆ ಬರುವ ಬಗ್ಗೆ ಹಾಗೂ ಇನ್ನಿತರೆ ವಿಷಯಗಳ ಚರ್ಚೆ ನಡೆಸಲಾಯಿತು ಎಂದರು.