ದು.ಗು.ಲಕ್ಷ್ಮಣರ ‘ಸಂಘ ಶಕ್ತಿ’ ಕೃತಿಯ ಆಯ್ದ ಅಧ್ಯಾಯ
by Du Gu Lakshamana Bengaluru
ದೇಶದಲ್ಲಿ ಯಾವುದೇ ವಿದ್ಯಮಾನ ಜರುಗಲಿ, ಅಲ್ಲಿ ಮೊದಲು ಕೇಳಿಬರುವ ಹೆಸರೆಂದರೆ ಆರೆಸ್ಸೆಸ್. ಅದು ಪ್ರವಾಹ ವಿಕೋಪವೇ ಇರಲಿ, ಬಾಂಬ್ ಸ್ಫೋಟವೇ ಇರಲಿ ಅಥವಾ ಕಾವೇರಿ ನೀರಿನ ವಿವಾದವೇ ಆಗಿರಲಿ – ಆ ವಿದ್ಯಮಾನದೊಂದಿಗೆ ಆರೆಸ್ಸೆಸ್ ಹೆಸರು ತಳಕು ಹಾಕಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭಗಳಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಪರಿಹಾರ ಕಾರ್ಯಗಳಿಗಾಗಿ ತಾವಾಗಿಯೇ, ಯಾರ ಸೂಚನೆಗೂ ಕಾಯದೆ ಧಾವಿಸುವುದು ಸ್ವಾಭಾವಿಕ ಚರ್ಯೆಯೇ ಆಗಿದೆ. ಆದರೆ ಸ್ವಯಂಸೇವಕರ ಈ ನಿಸ್ವಾರ್ಥ ನಡೆಯ ಬಗ್ಗೆ ಮಾಧ್ಯಮಗಳು ಅಷ್ಟಾಗಿ ಪ್ರಚಾರ ನೀಡದೆ ಮೌನವಹಿಸುವುದೇ ಹೆಚ್ಚು. ಬಾಂಬ್ ಸ್ಫೋಟ, ಕಾವೇರಿ ವಿವಾದ, ಇನ್ನಾವುದೋ ಸಮಸ್ಯೆ ಉಂಟಾದಾಗ ಉದ್ದೇಶಪೂರ್ವಕವಾಗಿಯೇ ಆರೆಸ್ಸೆಸ್ ಹೆಸರನ್ನು ಅದರೊಂದಿಗೆ ತಳಕು ಹಾಕುವುದರಲ್ಲಿ ಮಾತ್ರ ಮಾಧ್ಯಮಗಳದ್ದು ಇನ್ನಿಲ್ಲದ ಪೈಪೋಟಿ! ಹೀಗೆ ಬೇಕೆಂದೋ ಬೇಡವೆಂದೋ ಒಟ್ಟಾರೆ ಆರೆಸ್ಸೆಸ್ ಹೆಸರು ಸದಾ ಚಾಲ್ತಿಯಲ್ಲಿರುವುದು ಇತ್ತೀಚಿನ ವಿದ್ಯಮಾನ. ಆರೆಸ್ಸೆಸ್ ಮಾತ್ರ ಇಂತಹ ಎಲ್ಲಾ ಧನಾತ್ಮಕ – ಋಣಾತ್ಮಕ ಪ್ರಚಾರಗಳಿಂದ ದೂರವೇ ಉಳಿದು ತನ್ನ ಪಾಡಿಗೆ ತಾನು ರಾಷ್ಟ್ರಹಿತದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅದು ಪ್ರಚಾರಗಳಿಗೆ ಹಿಗ್ಗಿಲ್ಲ. ಅಪಪ್ರಚಾರಗಳಿಂದ ಕುಗ್ಗಿಲ್ಲ. ಅಪಪ್ರಚಾರಗಳಿಗೆ ಅನವಶ್ಯಕವಾಗಿ ಉತ್ತರಿಸುವ ಗೋಜಿಗೂ ಹೋಗಿಲ್ಲ. ಆರೆಸ್ಸೆಸ್ 96 ವರ್ಷಗಳ ದೀರ್ಘ ಅವಧಿಯಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವುದಕ್ಕೆ ಇದೂ ಕೂಡ ಮುಖ್ಯ ಕಾರಣ.
ನಮ್ಮ ದೇಶದಲ್ಲಿ ಬಹಳಷ್ಟು ಸಂಘಟನೆಗಳು ಭಾರಿ ಅಬ್ಬರದ ಪ್ರಚಾರದ ಮೂಲಕ ಜನ್ಮ ತಾಳುತ್ತವೆ. ಅಷ್ಟೇ ಬೇಗ ಅವುಗಳಲ್ಲಿ ಒಡಕುಂಟಾಗಿ ಒಡೆದು ಹೋಳಾಗುತ್ತವೆ. ಹೆಚ್ಚಿನ ಸಂಘಟನೆಗಳು ಒಡಕಿನ ಉರಿ ತಾಳಲಾಗದೆ ಸಾಯುತ್ತವೆ. ಇದಕ್ಕೆ ನಿದರ್ಶನಗಳು ಅನೇಕ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಜನ್ಮತಾಳಿ ಬರೋಬ್ಬರಿ 96 ವರ್ಷಗಳಾಗಿದ್ದರೂ ಅದರಲ್ಲಿ ಒಡಕು ಮೂಡಲಿಲ್ಲ. ಒಡೆದು ಹೋಳಾಗಲಿಲ್ಲ. ಇಡೀ ದೇಶದಲ್ಲಿರುವುದು ಒಂದೇ ಆರೆಸ್ಸೆಸ್. ಒಂದೊಂದು ರಾಜ್ಯಕ್ಕೆ ಒಂದೊಂದು ಆರೆಸ್ಸೆಸ್ ಇಲ್ಲ. ಜೊತೆಗೆ ಯಾರೋ ಒಬ್ಬ ವ್ಯಕ್ತಿಯ ನಿಯಂತ್ರಣದಲ್ಲೂ ಸಂಘ ಇಲ್ಲ. ಸಾಮೂಹಿಕ ನಾಯಕತ್ವ, ಸಾಮೂಹಿಕ ಚಿಂತನೆ, ಆಲೋಚನೆ ಹಾಗೂ ಸಾಮೂಹಿಕ ನಿರ್ಧಾರ – ಇದೇ ಆರೆಸ್ಸೆಸ್‌ನ ಯಶಸ್ಸಿನ ಮಂತ್ರ. ಹಾಗಾಗಿಯೇ ಈ ಸಂಘಟನೆ ಇಷ್ಟು ದೀರ್ಘಕಾಲ ಜನಮನದ ಮೆಚ್ಚುಗೆಗೆ ಭಾಜನವಾಗಿ, ದೇಶದ ಸಾಮಾಜಿಕ, ಸಾಂಸ್ಕೃತಿಕ ಬದುಕಿನಲ್ಲಿ ಅವಿಭಾಜ್ಯ ಭಾಗವೆನಿಸಿಕೊಂಡು ಮುನ್ನಡೆದಿದೆ.
ಇಂತಿಪ್ಪ ಆರೆಸ್ಸೆಸ್ ಕರ್ನಾಟಕದಲ್ಲಿ ಆರಂಭವಾಗಿದ್ದು ಏಳು ದಶಕಗಳ ಹಿಂದೆ. ಅಕ್ಷರಶಃ ಶೂನ್ಯದಿಂದ ಹುಟ್ಟು ಪಡೆದು ಇಂದು ಕರುನಾಡಿನ ಸುದೂರ ಗ್ರಾಮಗಳವರೆಗೆ ತನ್ನ ಬೇರುಗಳನ್ನು ಚಾಚಿ ವಿಶಾಲವಾಗಿ ಬೆಳೆದು ನಿಂತಿರುವ ಬೃಹತ್ ವೃಕ್ಷವಾಗಿ ಕಂಗೊಳಿಸಿದೆ. ಹಾಗೆಂದ ಮಾತ್ರಕ್ಕೆ ಸಂಘ ಕರ್ನಾಟಕದ ಮೂಲೆ ಮೂಲೆಗೂ ವಿಸ್ತರಿಸಿ ತನ್ನ ಕಾರ್ಯದ ಅಂತಿಮ ಹಂತದ ಬೆಳವಣಿಗೆ ಕಂಡಿದೆ ಎಂದು ಇದರರ್ಥವಲ್ಲ. ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕುಗಳಲ್ಲಿ ಸಂಘ ಅತ್ಯಂತ ಪ್ರಭಾವಿಯಾಗಿ ಬೆಳೆದಿದೆ ಎಂದೂ ಹೇಳುವಂತಿಲ್ಲ. ಸಂಘದ ಬೆಳವಣಿಗೆ ಆ ಬಗೆಯದೂ ಅಲ್ಲ. ಮೊಲದ ಓಟ ಅದರ ಸ್ವಭಾವವಲ್ಲ. ಆದರೆ ಸ್ಪರ್ಧೆಯಲ್ಲಿ ಆಮೆ ನಡೆಯ ಗಂಭೀರತೆ ಹಾಗೂ ಗೆಲ್ಲುವ ಗುರಿ ಅದರದ್ದು. ಹಾಗಾಗಿಯೇ ಸಂಘದ ಬೆಳವಣಿಗೆ ನಿರಂತರ, ಸದಾ ಪ್ರಗತ ಹಾಗೂ ಅನಂತ.
ಅಡಿಗಲ್ಲಾದ ಅನಾಮಿಕರು
ಕರ್ನಾಟಕದಲ್ಲಿ ಸಂಘಕಾರ್ಯದ ಸಸಿಗೆ ನೀರೆರೆದವರು, ಅದನ್ನು ಪೋಷಿಸಿ ಬೆಳೆಸಿದವರು, ಅದರ ಬೆಳವಣಿಗೆಗಾಗಿ ತಮ್ಮ ಬದುಕನ್ನೇ ಶ್ರೀಗಂಧದಂತೆ ತೇಯ್ದುಕೊಂಡವರು ಅಸಂಖ್ಯ, ಅಗಣಿತ. ಸಂಘ ಪ್ರಾರಂಭವಾಗಿ ೭ ದಶಕಗಳ ಬಳಿಕ ಒಮ್ಮೆ ಹಿಂತಿರುಗಿ ನೋಡಿದರೆ, ಸಂಘಕಾರ್ಯದ ಸಸಿಗೆ ನೀರೆರೆದು ಪೋಷಿಸಿದ ಈ ಅಗಣಿತ ಮಂದಿ ಯಾರ್‍ಯಾರು, ಅವರೆಲ್ಲ ಏನಾದರು, ಅವರ ಬೆವರಿನ ಬೆಲೆಯೇನು ಇತ್ಯಾದಿ ಸಂಗತಿಗಳನ್ನು ಯಾವುದೇ ಮಾನದಂಡದಿಂದಲೂ ಅಳೆಯಲು ಸಾಧ್ಯವಾಗದು. ಏಕೆಂದರೆ ಕರ್ನಾಟಕದಲ್ಲಿ ಸಂಘವನ್ನು ಬೆಳೆಸಲು ತಮ್ಮ ಬೆವರು, ನೆತ್ತರು ಹರಿಸಿದ ಅನಾಮಿಕ ಮಹನೀಯರು ಯಾವುದೇ ಪ್ರತಿಫಲಾಪೇಕ್ಷೆ ಬಯಸಿದವರಲ್ಲ. ಸಂಘ ಬೆಳೆದರೆ ಮುಂದೆ ತಮ್ಮ ಸ್ವಂತಕ್ಕೆ ಏನಾದರೂ ಲಾಭವಾಗಲಿದೆ ಎಂದು ಕನಸಿನಲ್ಲೂ ಲೆಕ್ಕಾಚಾರ ಹಾಕಿದವರಲ್ಲ. ಅವರು ಅಂತಹ ಲೆಕ್ಕಾಚಾರ ಹಾಕುವ ಮಾನಸಿಕತೆ ಉಳ್ಳವರೂ ಆಗಿರಲಿಲ್ಲ. ಅವರ ಕಣ್ಮುಂದೆ ಇದ್ದಿದ್ದು ಒಂದೇ ಗುರಿ – ಜಾತಿ, ಪಂಥ, ಅಸ್ಪೃಶ್ಯತೆ, ಮೂಢನಂಬಿಕೆಗಳಿಂದ ತುಂಬಿ, ರಾಷ್ಟ್ರದೃಷ್ಟಿಯನ್ನು ಮರೆತಿರುವ ಹಿಂದೂ ಸಮಾಜ ಒಗ್ಗೂಡಬೇಕು. ಸಂಘವೊಂದೇ ಅದನ್ನು ಸಾಧಿಸಲು ಸಾಧ್ಯ. ಹಿಂದು ಸಮಾಜದಲ್ಲಿ ಭೇದಭಾವಗಳು ದೂರ ಸರಿದು ಸಾಮಾಜಿಕ ಸಾಮರಸ್ಯದ ಸಾಮಗಾನ ತೇಲಿ ಬರಬೇಕು. ತನ್ಮೂಲಕ ಭಾರತಮಾತೆಯ ವೈಭವ ಕಾಣುವಂತಾಗಬೇಕು.
ಇಂತಹ ನಿಸ್ವಾರ್ಥ ಉದ್ದೇಶದಿಂದ ಸಂಘದ ಸಸಿಗೆ ನೀರೆರೆದ ಮಹನೀಯರು ತಮ್ಮ ಸ್ವಂತ ಸುಖವನ್ನು ಬದಿಗಿಟ್ಟರು. ಕಷ್ಟನಷ್ಟಗಳನ್ನು ನಗುನಗುತ್ತಾ ಸಹಿಸಿದರು. ಸಮಸ್ಯೆಗಳಿಗೆ ತಲೆಕೊಟ್ಟರು. ಜಟಿಲ ಸನ್ನಿವೇಶಗಳನ್ನು ಮೈಮೇಲೆ ಎಳೆದುಕೊಂಡರು. ಸಂಘದ ಕಾರ್ಯ ಮಾಡಿದ ತಪ್ಪಿಗೆ ಹಲವರು ತಮ್ಮ ಉದ್ಯೋಗಗಳನ್ನೇ ಕಳೆದುಕೊಂಡರು. ಮನೆಯಲ್ಲಿ ಪತ್ನಿ, ತಂದೆ ತಾಯಿ ಹಾಗೂ ಇತರ ಸದಸ್ಯರ ನಿಂದನೆಗೆ ಒಳಗಾದವರು ಅದೆಷ್ಟೋ ಮಂದಿ. ಸಂಘಕಾರ್ಯದ ಹೊಣೆ ಹೊತ್ತಿದ್ದಕ್ಕೆ ಸೆರೆವಾಸ ಅನುಭವಿಸಿದವರು ಇನ್ನೂ ಅಗಣಿತ ಮಂದಿ! ಸಂಘ ನಿಷೇಧದ ಸಂದರ್ಭದಲ್ಲಿ ಜೈಲುಪಾಲಾಗಿ, ಅದೇ ಸಮಯದಲ್ಲಿ ಅಸುನೀಗಿದ ತಮ್ಮ ಕುಟುಂಬಸ್ಥರ ಅಂತಿಮ ದರ್ಶನದಿಂದ ವಂಚಿತರಾದ ಸಂಘದ ಕಾರ್ಯಕರ್ತರು ಇನ್ನೆಷ್ಟೋ. ಸಂಘಕಾರ್ಯ ಮಾಡುತ್ತಾ ಮಾಡುತ್ತಾ ಅನಾಮಿಕರಾಗಿ ಅಸುನೀಗಿದ ಮಹನೀಯರೂ ಇದ್ದಾರೆ. ಅದೆಲ್ಲಾ ಒಂದು ದೊಡ್ಡ ಇತಿಹಾಸ. ಆದರೆ ಅಂತಹ ಉಜ್ವಲ ಇತಿಹಾಸವನ್ನು ಯಾರೂ ದಾಖಲಿಸಿಲ್ಲ. ಸಂಘ ಕೂಡಾ ಅದನ್ನು ದಾಖಲಿಸುವ ಗೋಜಿಗೆ ಹೋಗಿಲ್ಲ. ಏಕೆಂದರೆ ಆರಂಭದಿಂದಲೂ ಸಂಘ ಪ್ರಚಾರದಿಂದ ವಿಮುಖ. ಹಿಂದೂ ಸಂಘಟನೆಯ ಕಾರ್ಯದಲ್ಲಿ ಕಲ್ಲು ಮುಳ್ಳುಗಳಿರುವ ಹಾದಿಯಲ್ಲಿ ಸಾಗುವಾಗ ಇಂತಹದ್ದೆಲ್ಲ ಇದ್ದದ್ದೇ ಎಂಬ ಭಾವನೆಯೇ ಇದಕ್ಕೆ ಕಾರಣ. ಸಂಘದ ಆರಂಭದ ಕಡುಕಷ್ಟದ ದಿನಗಳಲ್ಲಿ ಎಂತಹದೇ ಜಟಿಲ ಸನ್ನಿವೇಶ ಒದಗಿದರೂ ಆಗಿನ ಕಾರ್ಯಕರ್ತರು ಕಲ್ಲುಬಂಡೆಯಂತೆ ನಿಂತು ಅದನ್ನೆಲ್ಲ ಸಹಿಸಿದರು. ಸವಾಲುಗಳನ್ನು ಸ್ವೀಕರಿಸಿದರು. ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜ್ವಾಜ್ವಲ್ಯಮಾನವಾಗಿ ಬೆಳಗಿದರು. ಅವರೆಲ್ಲ ಹರಡಿದ ಬೆಳಕು, ನೀಡಿದ ಸ್ಫೂರ್ತಿಯೇ ಇಂದು ಕರ್ನಾಟಕದಲ್ಲಿ ಸಂಘದ ಈ ಪರಿಯ ಬೆಳವಣಿಗೆಗೆ ಭದ್ರ ಅಡಿಗಲ್ಲು ಎನ್ನುವುದನ್ನು ಇಂದಿನವರು ಮರೆಯಕೂಡದು.
ಆರಂಭದಲ್ಲಿ ಎಲ್ಲೆಡೆ ಇದ್ದಂತೆ, ಕರ್ನಾಟಕದಲ್ಲೂ ಸಂಘದ ಬಗ್ಗೆ ಸಾರ್ವಜನಿಕರ ಉಪೇಕ್ಷೆ, ಅನಂತರ ವಿರೋಧ, ಆಮೇಲೆ ಸ್ವೀಕಾರಭಾವ. ಸಾರ್ವಜನಿಕರ ಉಪೇಕ್ಷೆ, ತಿರಸ್ಕಾರ ಇದ್ದ ದಿನಮಾನಗಳಲ್ಲಿ ಸಂಘಕಾರ್ಯವನ್ನು ಬಹಳ ತಾಳ್ಮೆಯಿಂದ, ಜಾಣತನದಿಂದ ಮುನ್ನಡೆಸಬೇಕಾಗಿತ್ತು. ಜನರ ಉಪೇಕ್ಷೆ, ತಿರಸ್ಕಾರಗಳನ್ನು ಅಪೇಕ್ಷೆ, ಮೆಚ್ಚುಗೆಯಾಗಿ ಪರಿವರ್ತಿಸುವುದು ಹೇಳಿದಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಆರಂಭದ ದಿನಗಳಲ್ಲಿ ಸಂಘಕಾರ್ಯವನ್ನು ಒಂದು ಅಸಿಧಾರಾವ್ರತವನ್ನಾಗಿ ಸ್ವೀಕರಿಸಿದ ಕಾರ್ಯಕರ್ತರು ಇಂತಹ ಕಠಿಣ ಕಾರ್ಯದಲ್ಲೂ ಗೆಲುವು ಪಡೆದರು. ಸಂಘಕಾರ್ಯ ನಿಧಾನವಾಗಿ ಪ್ರಾಂತದಾದ್ಯಂತ ಟಿಸಿಲೊಡೆದು ಹರಡತೊಡಗಿದಾಗ ಅಲ್ಲಲ್ಲಿ ವಿರೋಧವೂ ವ್ಯಕ್ತವಾಯಿತು. ಶಾಖೆ ಆರಂಭಿಸಲೆಂದು ಊರಿಗೆ ಕಾಲಿಟ್ಟ ಕೆಲವು ಪ್ರಚಾರಕರನ್ನಂತೂ ತಕ್ಷಣ ಹಿಂದಿರುಗುವಂತೆ ಬಸ್ಸು ಹತ್ತಿಸಿ ಕಳುಹಿಸಿಕೊಟ್ಟ ಘಟನೆಗಳಿಗೂ ಕೊರತೆಯಿಲ್ಲ. ಕೆಲವು ಪ್ರಚಾರಕರಿಗಂತೂ ಒಂದು ಹೊತ್ತಿನ ಊಟ ಕೂಡಾ ನೆಟ್ಟಗೆ ಸಿಗದ ದಿನಗಳೂ ಇದ್ದವು. ಇಂತಹ ಕಡುವಿರೋಧಗಳನ್ನೂ ಮೆಟ್ಟಿನಿಂತು ಆಗಿನ ಪ್ರಚಾರಕರು, ಕಾರ್ಯಕರ್ತರು ಸಂಘಕಾರ್ಯವನ್ನು ಮುನ್ನಡೆಸಿದರೆಂಬುದು ಇಂದಿನವರಿಗೆ ಅಭಿಮಾನದ ಸಂಗತಿಯಾಗಬೇಕು.
ಒಂದೆರಡು ಘಟನೆಗಳು ಈ ಸಂದರ್ಭದಲ್ಲಿ ನೆನಪಾಗುತ್ತಿವೆ. ಅದು 70ರ ದಶಕದ ದಿನಗಳು. ನ.ಕೃಷ್ಣಪ್ಪನವರು ಶಿವಮೊಗ್ಗ ವಿಭಾಗ ಪ್ರಚಾರಕರಾಗಿದ್ದರು. ಒಮ್ಮೆ ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ಕಾರ್ಯಕರ್ತರೊಬ್ಬರ ಮನೆಯಲ್ಲಿ ಸಮಾರಂಭವೊಂದಿತ್ತು. ಕಾಲೇಜು ವಿದ್ಯಾರ್ಥಿಯಾಗಿದ್ದ ನನ್ನನ್ನೂ ಅವರು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಮರುದಿನ ಅಲ್ಲಿಂದ ಹೊಸನಗರ ತಾಲೂಕಿನ ನಿವಣೆ ಎಂಬ ಊರಿಗೆ ಕೃಷ್ಣಪ್ಪನವರು ಹೋಗಬೇಕಾಗಿತ್ತು. ಅವರನ್ನು ಕರೆದುಕೊಂಡು ಹೋಗಲು ಆಗ ಹೊಸನಗರ ತಾಲೂಕಿನ ಪ್ರಚಾರಕರಾಗಿದ್ದ ಮೋಹನ ಬಾರಿತ್ತಾಯ ಬಂದಿದ್ದರು. ಅರಳಸುರಳಿಯಿಂದ ನಿವಣೆಗೆ ಸುಮಾರು 18 ಕಿ.ಮೀ. ದೂರ. ಕೃಷ್ಣಪ್ಪನವರು ನನ್ನನ್ನು ತಮ್ಮ ಜೊತೆಗೇ ಕರೆದುಕೊಂಡು ಹೋದರು. ಆದರೆ ನಾವು ಮೂವರೂ ನಿವಣೆಗೆ ತಲುಪಿದ್ದು ಬಸ್ಸಿನಲ್ಲಲ್ಲ. ಆಗ ಅಲ್ಲಿಗೆ ಬಸ್ಸೇ ಇರಲಿಲ್ಲ. ನಡೆದುಕೊಂಡೇ ಅಲ್ಲಿಗೆ ತಲುಪಿದೆವು. ಅಲ್ಲೇನೂ ಅಂತಹ ಮುಖ್ಯ ಕೆಲಸ ಕೃಷ್ಣಪ್ಪನವರಿಗೆ ಇರಲಿಲ್ಲ. ಒಂದಿಬ್ಬರು ಹೊಸಬರನ್ನು ಮಾತನಾಡಿಸಿ, ಅವರನ್ನು ಸಂಘದ ಕೆಲಸಕ್ಕೆ ಜೋಡಿಸುವುದಾಗಿತ್ತು, ಅಷ್ಟೆ. ಅವರು ಸಣ್ಣಸಣ್ಣ ಊರುಗಳಿಗೂ, ಸಣ್ಣಸಣ್ಣ ಕೆಲಸಗಳಿಗೂ ಹೀಗೆ ನಡೆದುಕೊಂಡೇ ಹೋಗುತ್ತಿದ್ದುದನ್ನು ಈಗ ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ಸಂಘಕಾರ್ಯದ ಬಗ್ಗೆ ಅವರ ಬದ್ಧತೆ ಅಷ್ಟೊಂದು ಗಟ್ಟಿಯಾಗಿತ್ತು.
ಇನ್ನೊಮ್ಮೆ ಶಿವಮೊಗ್ಗ ಜಿಲ್ಲಾ ಪ್ರಚಾರಕರಾಗಿದ್ದ ಜಡೆ ಚಂದ್ರಶೇಖರ್ ಅವರು ಒಂದು ದಿನ ರಾತ್ರಿ 8 ಗಂಟೆ ವೇಳೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿದ್ದ ಸಂಘಕಾರ್ಯಾಲಯದಿಂದ 5 ಕಿ.ಮೀ. ದೂರವಿರುವ ಪಿಳ್ಳಂಗಿರಿಗೆ ನನ್ನನ್ನು ನಡೆಸಿಕೊಂಡೇ ಆ ರಾತ್ರಿ ಕರೆದುಕೊಂಡು ಹೋಗಿದ್ದರು. ಅವರು ಮೊದಲು ಹೇಳಿದ್ದು – ಒಂದು ವಾಕಿಂಗ್ ಹೋಗಿಬರೋಣ ಎಂದು. ಅನಂತರ ಪಿಳ್ಳಂಗಿರಿಗೆ ತಲುಪಿದಾಗಲೇ ಆ ವಾಕಿಂಗ್ ಅಷ್ಟು ದೂರದ್ದಿರಬಹುದೆಂದು ನನಗೆ ಗೊತ್ತಾಗಿದ್ದು! ಹೀಗೆ ಅಷ್ಟೊಂದು ದೂರ ನಡೆಸಿಕೊಂಡೇ ಹೋದ ಅವರ ಉದ್ದೇಶ – ನನ್ನಲ್ಲಿ ಕಷ್ಟಸಹಿಸುವ, ಪರಿಶ್ರಮ ಪಡುವ ಮನೋಭಾವ ಬೆಳೆಸುವುದಾಗಿತ್ತು ಎಂದು ಈಗ ನನಗೆ ಅರ್ಥವಾಗುತ್ತಿದೆ. ಆದರೆ ಆಗ ಮಾತ್ರ ಜಡೆ ಚಂದ್ರಶೇಖರ್ ಅವರ ಬಗ್ಗೆ ನನಗೆ ತುಂಬಾ ಕೋಪ ಬಂದಿತ್ತು!
ಸಂಘದ ಆ ದಿನಗಳಲ್ಲಿ ಕಾರ್ಯಕರ್ತರಲ್ಲಿ ಪರಿಶ್ರಮದ ಮನೋಭಾವ, ಬದ್ಧತೆಯನ್ನು ಸದ್ದಿಲ್ಲದೆ ನಿರ್ಮಿಸುತ್ತಿದ್ದುದಕ್ಕೆ ಈ ಎರಡು ಘಟನೆಗಳು ನಿದರ್ಶನವಾಗಬಹುದು.
ಮಹತ್ವದ ಕೊಡುಗೆಗಳು
ದೇಶದಲ್ಲಿ ಸಂಘ ಪ್ರಾರಂಭವಾಗಿದ್ದು 1925ರಷ್ಟು ಹಿಂದೆ. ಕರ್ನಾಟಕದಲ್ಲಿ ಸಂಘ ಪ್ರಾರಂಭವಾಗಿದ್ದು 1941ರಲ್ಲಿ. ಆದರೆ ಕರ್ನಾಟಕದ ಆರೆಸ್ಸೆಸ್ ಸಂಘದ ಅನೇಕ ಯೋಜನೆಗಳಿಗೆ ಮಹತ್ವದ ಕೊಡುಗೆ ನೀಡುವಲ್ಲಿ ಮುಖ್ಯಪಾತ್ರ ವಹಿಸಿದೆ. 1962ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮಶತಮಾನೋತ್ಸವ ವರ್ಷದ ಅಂಗವಾಗಿ ಕನ್ಯಾಕುಮಾರಿಯ ಮೂರು ಸಾಗರಗಳ ಸಂಗಮ ಸ್ಥಳದಲ್ಲಿರುವ ಶಿಲಾಖಂಡದ ಮೇಲೆ ವಿವೇಕಾನಂದರ ಆಳೆತ್ತರದ ಪ್ರತಿಮೆ ನಿಲ್ಲಿಸಿ, ಅವರಿಗೆ ಭವ್ಯ ಸ್ಮಾರಕ ನಿರ್ಮಿಸುವ ಸಂಘದ ಯೋಜನೆಗೆ ಕರ್ನಾಟಕದ ಕೊಡುಗೆ ಕಡಿಮೆಯದಾಗಿರಲಿಲ್ಲ. ಈ ಬೃಹತ್ ಯೋಜನೆಗೆ ಪ್ರಾಂತದಲ್ಲಿ ಸಾರ್ವಜನಿಕರಿಂದ ಸಂಗ್ರಹವಾದ ದೇಣಿಗೆ ಮೊತ್ತವೇ 8 ಲಕ್ಷ ರೂ. ಮೊದಲು ಈ ದೇಣಿಗೆ ಸಂಗ್ರಹ ಅಭಿಯಾನದ ಗುರಿ ಇದ್ದುದು ಎರಡರಿಂದ ಮೂರು ಲಕ್ಷದಷ್ಟು ಮಾತ್ರ. ಮೈಸೂರಿನ ಗಣೇಶ ಬೀಡಿ ವರ್ಕ್ಸ್ ಮಾಲಿಕರಾದ ಕೊಡುಗೈ ದಾನಿ ಎಂ. ಗೋವಿಂದ ರಾವ್ ಅವರು ನೀಡಿದ ಒಂದು ಲಕ್ಷ ರೂಪಾಯಿ ದೇಶದಲ್ಲೇ ಮೊಟ್ಟಮೊದಲ ಅತಿದೊಡ್ಡ ದೇಣಿಗೆ ಮೊತ್ತವಾಗಿತ್ತು.
ಹಿಂದು ಸಮಾಜದಲ್ಲಿ ರೂಢಿಗತವಾಗಿ ಆಚರಣೆಯಲ್ಲಿದ್ದ ಅಸ್ಪೃಶ್ಯತೆಯ ಕಳಂಕವನ್ನು ಪೂರ್ತಿ ದೂರಗೊಳಿಸಬೇಕು ಎಂಬುದು ಸಂಘದ ದ್ವಿತೀಯ ಸರಸಂಘಚಾಲಕ ಶ್ರೀ ಗುರೂಜಿಯವರ ಮನದ ಪ್ರಬಲ ಇಚ್ಛೆಯಾಗಿತ್ತು. ಹಿರಿಯ ಪೀಠಾಧಿಪತಿಗಳು, ಧರ್ಮಾಚಾರ್ಯರುಗಳ ಆಶೀರ್ವಾದ ಮತ್ತು ಪೂರ್ಣ ಸಹಕಾರ ಇದ್ದಲ್ಲಿ ಅದು ಸಾಧ್ಯ ಎಂಬ ಸ್ಪಷ್ಟ ಅರಿವೂ ಅವರಿಗಿತ್ತು. ಅದಕ್ಕಾಗಿ ವಿಶ್ವಹಿಂದೂ ಪರಿಷತ್ ಆಶ್ರಯದಲ್ಲಿ ಉಡುಪಿಯಲ್ಲಿ ಒಂದು ಸಮ್ಮೇಳನ ನಡೆಸಬೇಕೆಂಬ ಶ್ರೀ ಗುರೂಜಿಯವರ ಇಚ್ಛೆಗೆ ಕರ್ನಾಟಕದ ಆರೆಸ್ಸೆಸ್ ಸಂಪೂರ್ಣ ಸಹಕರಿಸಿತು. ಸಮ್ಮೇಳನಕ್ಕೆ ನಿರೀಕ್ಷೆ ಇದ್ದಿದ್ದು 6 ಸಾವಿರ ಪ್ರತಿನಿಧಿಗಳು ಬರಬಹುದೆಂದು. ಆದರೆ ಪ್ರತ್ಯಕ್ಷವಾಗಿ ಬಂದ ಪ್ರತಿನಿಧಿಗಳ ಸಂಖ್ಯೆ 15 ಸಾವಿರಕ್ಕೂ ಹೆಚ್ಚು! ಉಡುಪಿಯಂತಹ ಸಣ್ಣ ಊರಿನಲ್ಲಿ ಇಷ್ಟೊಂದು ಸಂಖ್ಯೆಯ ಪ್ರತಿನಿಧಿಗಳಿಗೆ ಊಟ, ವಸತಿ ವ್ಯವಸ್ಥೆ ಮಾಡುವುದಾದರೂ ಹೇಗೆ? ಆದರೆ ಕೊನೇ ಗಳಿಗೆಯಲ್ಲಿ ಸಮ್ಮೇಳನದ ವ್ಯವಸ್ಥಾಪಕರ ವಿನಂತಿಗೆ ಓಗೊಟ್ಟು ಉಡುಪಿ ನಗರದ ಮನೆಮನೆಗಳು ಪ್ರತಿನಿಧಿಗಳ ಸ್ವಾಗತಕ್ಕಾಗಿ ತಮ್ಮ ಬಾಗಿಲು ತೆರೆದಿಟ್ಟವು. ಅಸ್ಪೃಶ್ಯತೆಯ ಆಚರಣೆಗೆ ಧರ್ಮಶಾಸ್ತ್ರದಂತೆ ಯಾವುದೇ ಮನ್ನಣೆ ಇಲ್ಲವೆಂದು ವೇದಿಕೆಯ ಮೇಲಿದ್ದ ಧರ್ಮಾಚಾರ್ಯರು ಘಂಟಾಘೋಷವಾಗಿ ಸಾರಿದ್ದು ಆ ಸಮ್ಮೇಳನದ ವಿಶೇಷತೆ. ಹಿಂದುಗಳೆಲ್ಲ ಸೋದರರು ಎಂಬ ಘೋಷವಾಕ್ಯ ಕೇಳಿಬಂದಿದ್ದು ಅದೇ ಸಮ್ಮೇಳನದಲ್ಲಿ. ಉಡುಪಿಯ ಆ ಸಮ್ಮೇಳನ ಸಂಘಕಾರ್ಯಕ್ಕೆ ಸಾಮಾಜಿಕ ಸೇವೆಯ, ವಿಶೇಷವಾಗಿ ಅಸ್ಪೃಶ್ಯತಾ ನಿವಾರಣೆಯ ಕೆಲಸಕ್ಕೆ ಹೊಸ ತಿರುವೊಂದು ನೀಡಿತು. ಹಿಂದು ಸಮಾಜದ ಶಕ್ತಿ ಹ್ರಾಸವಾಗಿರುವುದೂ ಅಸ್ಪೃಶ್ಯತೆಯ ಕಾರಣದಿಂದಾಗಿಯೇ. ಹಿಂದು ಸಮಾಜವನ್ನು ಸಶಕ್ತಗೊಳಿಸಬೇಕಾದಲ್ಲಿ ಅದರಲ್ಲಿನ ಈ ದುರ್ಬಲ ವರ್ಗವನ್ನು ವಿಶೇಷ ಲಕ್ಷ್ಯ ವಹಿಸಿ ಹಿಂದು ಸಂಘಟನೆಯ ಪರಿಧಿಯೊಳಗೆ ತರಬೇಕಾದುದು ಅತ್ಯಗತ್ಯ. ಅಸ್ಪೃಶ್ಯರೆನಿಸಿಕೊಂಡವರು ದೂರವಿರುವವರೆಗೂ ಸಮಾಜಸಂಘಟನೆಯ ಕಾರ್ಯವು ಅಪೂರ್ಣ ಎಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಿಸಲು ಈ ಸಮ್ಮೇಳನ ಸಹಕಾರಿಯಾಯಿತು.
ಕರ್ನಾಟಕದಲ್ಲಿ ಸಂಘಕಾರ್ಯಕ್ಕೆ ಬೀಜಾರೋಪಣ ಮಾಡಿದವರಲ್ಲಿ ಮೊದಲಿಗರಾದ ಯಾದವರಾವ್ ಜೋಶಿ ಅವರ ದೂರದೃಷ್ಟಿಯಿಂದಾಗಿ ಸಂಘಕಾರ್ಯಕ್ಕೆ ಸೇವೆಯ ಆಯಾಮ ದೊರಕಿತು. ಸಂಘದ ಗುರಿ ಕೇವಲ ಶಾಖೆ ನಡೆಸುವುದಷ್ಟೇ ಅಲ್ಲ, ನಿತ್ಯಶಾಖೆಯ ಉದ್ದೇಶ ಚಾರಿತ್ರ್ಯವಂತ ವ್ಯಕ್ತಿಗಳ ನಿರ್ಮಾಣಕ್ಕಾಗಿ, ಆದರೆ ಅದು ಇಷ್ಟಕ್ಕೇ ನಿಲ್ಲಬಾರದು. ಶಾಖೆಯ ಸಂಸ್ಕಾರಗಳನ್ನು ಮೈಗೂಡಿಸಿಕೊಂಡ ಕಾರ್ಯಕರ್ತರು ವಿವಿಧ ರೀತಿಯ ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತನ್ಮೂಲಕ ಸಾಮಾಜಿಕ ಪರಿವರ್ತನೆಯನ್ನು ತರಬೇಕು. ಒಂದು ಗ್ರಾಮದಲ್ಲಿ ಅಥವಾ ಮೊಹಲ್ಲಾದಲ್ಲಿ ನಿತ್ಯಶಾಖೆ ಎಷ್ಟು ವರ್ಷಗಳಿಂದ ನಡೆಯುತ್ತಿದೆ ಎನ್ನುವುದಕ್ಕಿಂತ ಶಾಖೆಯ ಪ್ರಭಾವದಿಂದಾಗಿ ಸುತ್ತಮುತ್ತಲಿನ ಸಮಾಜದಲ್ಲಿ ಪರಸ್ಪರ ಸ್ನೇಹ, ಸಹಕಾರ, ಸ್ವಾವಲಂಬನೆ, ಸಾಮರಸ್ಯ ಮುಂತಾದ ಧನಾತ್ಮಕ ಅಂಶಗಳು ಎಷ್ಟರಮಟ್ಟಿಗೆ ಮೂಡಿವೆ ಎಂಬುದೇ ಅದರ ಯಶಸ್ಸಿನ ನಿಜವಾದ ಅಳತೆಗೋಲು ಎಂಬ ಅಂಶವನ್ನು ಯಾದವರಾಯರು ತಮ್ಮ ಪ್ರವಾಸದಲ್ಲಿ ತಪ್ಪದೇ ಉಲ್ಲೇಖಿಸುತ್ತಿದ್ದರು. ಯಾದವರಾಯರ ಈ ಸತತ ಚಿಂತನೆ ಇಂದು ಫಲಕೊಟ್ಟಿದೆ. ಪ್ರಾಂತದ ಮೂಲೆಮೂಲೆಗಳಲ್ಲಿ ನಾನಾ ಬಗೆಯ ಸಂಘ ಪ್ರೇರಿತ ಸೇವಾಕಾರ್ಯಗಳು ಜನಮೆಚ್ಚುಗೆಗೆ ಪಾತ್ರವಾಗಿ ಸಮಾಜ ಪರಿವರ್ತನೆಯಲ್ಲಿ ತಮ್ಮ ಕೊಡುಗೆ ನೀಡಿವೆ.
ಇವಲ್ಲದೆ 1975-77ರ ತುರ್ತುಸ್ಥಿತಿ ವಿರುದ್ಧದ ಹೋರಾಟ, ಹಿಂದೂ ಸಮಾಜೋತ್ಸವ, ರಾಷ್ಟೋತ್ಥಾನ ಪರಿಷತ್ತಿನ ದೇಶದ ಪ್ರಾತಃಸ್ಮರಣೀಯ ವ್ಯಕ್ತಿಗಳ ಕಿರುಪರಿಚಯ ಮಾಡಿಸುವ ಭಾರತ-ಭಾರತಿ ಪುಸ್ತಕ ಸಂಪದ ಎಂಬ ವಿನೂತನ ಕಲ್ಪನೆಯ ಸಾಕಾರ, ಬೆಂಗಳೂರಿನ ಚನ್ನೇನಹಳ್ಳಿಯಲ್ಲಿರುವ ಪ್ರಾಚೀನ ಗುರುಕುಲ ಮಾದರಿಯ ಶಿಕ್ಷಣದ ಪ್ರಯೋಗ ಸಂಸ್ಥೆಗಳಾಗಿರುವ ಜನಸೇವಾ ವಿದ್ಯಾಕೇಂದ್ರ, ವೇದವಿಜ್ಞಾನ ಗುರುಕುಲ, ವಿಟ್ಲದಲ್ಲಿರುವ ಮೈತ್ರೇಯಿ ಗುರುಕುಲ, ಹರಿಹರಪುರದ ಪ್ರಭೋದಿನಿ ಗುರುಕುಲ, ಸಂಸ್ಕೃತ ಭಾಷೆಯನ್ನು ಜನಸಾಮಾನ್ಯರೂ ಮಾತನಾಡುವಂತೆ ಮಾಡಿದ ಸಂಸ್ಕೃತ ಭಾರತೀ ಎಂಬ ಆಂದೋಲನ, ಗ್ರಾಮೀಣ ಪ್ರದೇಶಗಳಲ್ಲಿ ಹಿಂದುಳಿದ ಮಂದಿಗೆ ಸುಸಂಸ್ಕಾರ ನೀಡಿ, ಅವರನ್ನು ಸಮಾಜಮುಖಿಯಾಗಿ ಯೋಚಿಸುವಂತೆ ಮಾಡುವ ಹಿಂದು ಸೇವಾ ಪ್ರತಿಷ್ಠಾನ ಮುಂತಾದ ಹತ್ತು ಹಲವು ವಿನೂತನ ಪ್ರಕಲ್ಪಗಳಿಗೆ ಚಾಲನೆ ನೀಡಿದ್ದು – ಕರ್ನಾಟಕದ ಆರೆಸ್ಸೆಸ್ ಎಂಬುದು ಹೆಮ್ಮೆಯ ಸಂಗತಿ.
ಮೊದಲು ಉಪಹಾಸ, ಅನಂತರ ವಿರೋಧ ವ್ಯಕ್ತಪಡಿಸುತ್ತಿದ್ದ ಜನರೇ ಈಗ ಸಂಘದ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸುತ್ತಿರುವುದು ಸಂಘದ ಮಹತ್ವವನ್ನು ಸಾರಿ ಹೇಳುತ್ತದೆ. ನಾನಾ ಕ್ಷೇತ್ರಗಳಲ್ಲಿ ಸಂಘ ತಂದಿರುವ ಪರಿವರ್ತನೆ ಜನರಲ್ಲಿ ವಿಶ್ವಾಸ ಮೂಡಿಸಿದೆ. ಈಗ ನಾನೂ ಒಬ್ಬ ಸ್ವಯಂಸೇವಕ ಎಂದು ಹೇಳಿಕೊಳ್ಳಲು ಹಲವರು ದುಂಬಾಲು ಬೀಳುತ್ತಾರೆ. ಸ್ವಂತಕ್ಕೆ ಲಾಭ ಮಾಡಿಕೊಳ್ಳುವ ಹುನ್ನಾರವೊಂದೇ ಇದರ ಹಿಂದಿರುತ್ತದೆ ಎಂಬುದು ಗುಟ್ಟಲ್ಲ. ಸ್ವಯಂಸೇವಕತ್ವ ಎಂಬುದಕ್ಕೆ ಇರುವ ಅರ್ಥವೇ ಬೇರೆ. ಸಮಾಜ ಕಾರ್ಯಕ್ಕಾಗಿ ತನ್ನನ್ನು ಸಂಪೂರ್ಣ ಅರ್ಪಿಸಿಕೊಳ್ಳಬೇಕು. ಸಮಾಜಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಬೇಕು ಎಂಬುದು ಸ್ವಯಂಸೇವಕತ್ವದ ನಿಜವಾದ ಅರ್ಥ. ಆದರೆ ಅದನ್ನು ಅದೆಷ್ಟು ಜನ ಈಗ ಅರ್ಥಮಾಡಿಕೊಂಡಿದ್ದಾರೆ?
(2021)
- ದು.ಗು.ಲಕ್ಷ್ಮಣರ ʼಸಂಘ ಶಕ್ತಿʼ ಕೃತಿಯು ಇತ್ತೀಚೆಗೆ ಬಿಡುಗಡೆ ಆಗಿದೆ. ಕಳೆದ ನ.28ರಂದು ತೀರ್ಥಹಳ್ಳಿ ತಾಲೂಕಿನ ಹಾದಿಗಲ್ಲು ಶ್ರೀ ಅಭಯಲಕ್ಷ್ಮೀ ನರಸಿಂಹ ದೇವಸ್ಥಾನ ಸಭಾಂಗಣದಲ್ಲಿ ಕೃತಿಯನ್ನು ಪತ್ರಕರ್ತ, ಲೇಖಕ ಬೇಳೂರು ಸುದರ್ಶನ ಅವರು ಲೋಕಾರ್ಪಣೆಗೊಳಿಸಿದರು.ವೇದಿಕೆಯಲ್ಲಿ ಆರೆಸ್ಸೆಸ್ʼನ ಹಿರಿಯ ಕಾರ್ಯಕರ್ತರಾದ ಕಲ್ಲಡ್ಕ ಡಾ. ಪ್ರಭಾಕರ ಭಟ್, ಜ್ಞಾನಭಾರತಿ ಟ್ರಸ್ಟ್ ಅಧ್ಯಕ್ಷರಾದ ಕಜಂಪಾಡಿ ಸುಬ್ರಮಣ್ಯ ಭಟ್, ಉಡುಪಿಯ ವಿದ್ವಾನ್ ರವೀಂದ್ರ ಭಟ್ ಮತ್ತುಸುಜಾತ ಲಕ್ಷ್ಮಣ್ ಹಾಜರಿದ್ದರು.