ಭೈರತಿ ಬಸವರಾಜ್ ವಿರುದ್ಧ ಆರೋಪ; ಬಿಜೆಪಿಗೆ ಇರಿಸುಮುರಿಸು; ಆರೋಗ್ಯ ಸಚಿವರ ಹೆಜ್ಜೆಗಳ ಮೇಲೆ ಕಮಲಪಾಳೆಯದ ಎಚ್ಚರಿಕೆ ಕಣ್ಣು
ಬೆಳಗಾವಿ: ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರ ಭೂ ಕಬಳಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಇಂದು ಬೆಳಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಾರಾಯಣಸ್ವಾಮಿ ಅವರು; “ಇಂದು ಬೆಳಗ್ಗೆ ಸಚಿವ ಸುಧಾಕರ್ ಅವರು ಆರೋಪಿ ಸ್ಥಾನದಲ್ಲಿರುವ ಸಚಿವ ಭೈರತಿ ಬಸವರಾಜ್ ಪರ ನನ್ನ ಜತೆ ಸಂಧಾನ ಮಾಡಲು ಪ್ರಯತ್ನ ಮಾಡಿದರು. ಅಲ್ಲದೆ, ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಉದ್ದೇಶಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜತೆಗೂ ಸುಧಾಕರ್ ಮಾತನಾಡಲು ಯತ್ನಿಸಿದ್ದರು. ಆದರೆ, ಸಿದ್ದರಾಮಯ್ಯ ಅವರು ಆ ಸಚಿವರ ಜತೆ ಮಾತನಾಡಲು ಇಷ್ಟಪಡಲಿಲ್ಲ” ಎಂದರು.
ಸುಧಾಕರ್ ಅವರು ಅಪರಾಧಿ ಸ್ಥಾನದಲ್ಲಿರುವ ತಮ್ಮ ಸಹೋದ್ಯೋಗಿ ಬಗ್ಗೆ ನನ್ನ ಹಾಗೂ ನಮ್ಮ ಪಕ್ಷದ ಶಾಸಕಾಂಗ ಪಕ್ಷದ ನಾಯಕರ ಜತೆ ಸಂಧಾನಕ್ಕೆ ಬಂದಿದ್ದು ನನಗೆ ತೀವ್ರ ಆಶ್ಚರ್ಯ ಉಂಟು ಮಾಡಿದೆ. ಅವರು ಕೂಡ ಭೈರತಿ ಬಸವರಾಜ್ ಮಾಡಿದ ಅಪರಾಧಕ್ಕೆ ಕುಮ್ಮಕ್ಕು ನೀಡುತ್ತಿದ್ದಾರಾ? ಎನ್ನುವ ಅನುಮಾನ ನನಗೆ ಉಂಟಾಗಿದೆ ಎಂದು ನಾರಾಯಣಸ್ವಾಮಿ ಹೇಳಿದರು.
ಬಿಜೆಪಿ ಸರಕಾರದಲ್ಲಿ ಪ್ರಭಾವೀ ಸಚಿವರಾಗಿರುವ ಭೈರತಿ ಬಸವರಾಜ್ ವಿರುದ್ಧ ಯಾರಾದರೂ ಷಡ್ಯಂತ್ರ ಮಾಡಲು ಸಾಧ್ಯವೇ? ಪ್ರಕರಣವನ್ನು ವಿಚಾರಣೆ ನಡೆಸಿರುವ ನ್ಯಾಯಾಲಯ ಆ ಸಚಿವರ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ಆದೇಶ ನೀಡಿದೆ. ಈಗ ಸಚಿವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯ ಮಾಡಿದರು.
ಬಿಜೆಪಿಗೆ ಇರಿಸುಮುರಿಸು
ಭೈರತಿ ಬಸವರಾಜ್ ಪ್ರಕರಣ ಬಿಜೆಪಿಗೆ ತೀವ್ರ ಇರಿಸುಮುರಿಸು ಉಂಟು ಮಾಡಿದೆ ಎಂದು ಗೊತ್ತಾಗಿದೆ. ಅಲ್ಲದೆ; ಆರೋಗ್ಯ ಸಚಿವ ಸುಧಾಕರ್ ಅವರು ನೇರವಾಗಿ ಎಂಎಲ್ಸಿ ನಾರಾಯಣಸ್ವಾಮಿ ಮತ್ತು ಸಿದ್ದರಾಮಯ್ಯ ಜತೆ ಸಂಧಾನಕ್ಕೆ ಹೋಗಿದ್ದು ಕೂಡ ಬಿಜೆಪಿ ನಾಯಕರಿಗೆ ಕಸಿವಿಸಿ ಉಂಟು ಮಾಡಿದೆ ಎನ್ನಲಾಗಿದೆ.
ಸಿಕೆನ್ಯೂಸ್ ನೌ ಜತೆ ಮಾತನಾಡಿದ ಬಿಜೆಪಿಯ ಹಿರಿಯ ನಾಯಕರೊಬ್ಬರು; “ಅಧಿಕಾರಕ್ಕಾಗಿ ಪಕ್ಷಕ್ಕೆ ವಲಸೆ ಬಂದವರ ಹೆಜ್ಜೆಗಳು ನಿಗೂಢವಾಗಿವೆ. ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಅವರ ಬಣ್ಣಗಳೂ ಕಳಚುತ್ತಿವೆ. ಭೈರತಿ ಬಸವರಾಜ್ ಪ್ರಕರಣವನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಜತೆಗೆ; ಸುಧಾಕರ್ ಸಂಧಾನಕ್ಕೆ ಪ್ರಯತ್ನ ಮಾಡಿರುವುದು ಪಕ್ಷದ ನೀತಿ-ರೀತಿ ರಿವಾಜುಗಳಿಗೆ ವಿರುದ್ಧವಾಗಿದೆ. ಈ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.
Comments 1