ಝೀರೋ ಟ್ರಾಫಿಕ್‌ನಲ್ಲೇ ಬ್ಯುಸಿಯಾದರಾ ಪೊಲೀಸರು!!
ಸಚಿವ ಡಾ.ಕೆ.ಸುಧಾಕರ್ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್; ಜಿಲ್ಲಾಡಳಿತ, ಪೊಲೀಸರ ಮೇಲೂ ಟೀಕಾ ಪ್ರಹಾರ
by M Krishnappa Chikkaballapura
ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಚಿಕ್ಕಬಳ್ಳಾಪುರ ಭೇಟಿಗಳು ಕೇವಲ ಕಾಟಾಚಾರಕ್ಕೆ, ಸಂತ್ರಸ್ತ ಜನರನ್ನು ಅಣಕಿಸುವಂತೆ ಇವೆ. ಜಿಲ್ಲಾಡಳಿತ ಅವರ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೆ, ಜಿಲ್ಲಾ ಪೊಲೀಸ್ ವ್ಯವಸ್ಥೆ ಸಚಿವರಿಗೆ ಝೀರೋ ಟ್ರಾಫಿಕ್ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
ಮಳೆ, ನೆರೆ ಹಾಗೂ ಕೋವಿಡ್ ಸಂತ್ರಸ್ತರಿಗೆ ನೇರ ನಗದು ಇಲ್ಲವೆ ಚೆಕ್ ನೀಡುವುದನ್ನು ಬಿಟ್ಟು ಸಚಿವ ಸುಧಾಕರ್ ಅವರು ವಿಪತ್ತಿನಲ್ಲೂ ರಾಜಕೀಯ ಮಾಡಲು ಹೊರಟು ಸ್ವಂತ ಲಾಭಕ್ಕೆ ಹಾಗೂ ʼನಾಮಕಾವಸ್ತೆ ಪಟೇಲ್ʼ ಎಂಬಂತೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡು ಎಂದು ಕಾಂಗ್ರೆಸ್ ನಾಯಕರು ಮೂದಲಿಸಿದ್ದಾರೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಕೆಪಿಸಿಸಿ ಮಾಜಿ ಸದಸ್ಯ ಹಾಗೂ ಹಿರಿಯ ವಕೀಲ ನಾರಾಯಣಸ್ವಾಮಿ, ಕಾಂಗ್ರೆಸ್ ಪಕ್ಷದ ಮುಖಂಡರು; ಈ ಜಿಲ್ಲೆಯಲ್ಲಿ ಹಿಂದೆಂದೂ ಕಾಣದಂತ ಮಳೆ ಸುರಿದು ಬೆಳೆದ ಅಷ್ಟೂ ಬೆಳೆ ಮಳೆಗೆ ಅಹುತಿಯಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಮತ್ತೊಂದೆಡೆ ಬಡಬಗ್ಗರ ಮನೆಗಳು ಬಿದ್ದುಹೋಗಿ ಅವರೆಲ್ಲರೂ ಬೀದಿ ಪಾಲಾಗಿದ್ದಾರೆ ಎಂದು ಹೇಳಿದರು.
ಈ ನೋವಿನ ಮೇಲೆ ಬರೆ ಎಳೆಯುವಂತೆ ಸರಕಾರ ಮತ್ತು ಸಚಿವರು ಸಂತ್ರಸ್ತರ ಬಗ್ಗೆ ಅಮಾನುಷವಾಗಿ ವರ್ತಿಸುತ್ತಿದ್ದಾರೆ. ಇಂಥ ಸಂಕಷ್ಟದಲ್ಲಿರುವ ಜನರಿಗೆ ನೇರ ನಗದು ಅಥವಾ ಚೆಕ್ ನೀಡದೇ ಕೇವಲ ರಾಜಕೀಯ ಲಾಭಕ್ಕಾಗಿ ಸುಧಾಕರ್ ಪ್ರಯತ್ನಪಡುತ್ತಿದ್ದಾರೆ. ಮಳೆಯಿಂದ ಮನೆಗಳನ್ನು ಕಳೆದುಕೊಂಡವರಿಗೆ (ಮಂಜೂರಾತಿ ಪತ್ರ) ಸರ್ಟಿಫಿಕೇಟ್ ಕೊಟ್ಟು ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ, ಇದು ದುರಂತವೇ ಸರಿ ಎಂದು ಅವರು ಟೀಕಿಸಿದರು.
ಸುಧಾಕರ್ ಸ್ವಂತ ಲಾಭಕ್ಕೆ ಇಂಥ ಬೂಟಾಟಿಕೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಖಂಡನೀಯ. ಇದು ಸರಕಾರದ ದೌರ್ಭಾಗ್ಯವೇ ಹೌದು ಎಂದು ಅವರು ಹೇಳಿದರು.
ಸಚಿವರ ತಾಳಕ್ಕೆ ತಕ್ಕಂತೆ ಕುಣಿಯುವ ಜಿಲ್ಲಾಡಳಿತ
ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಸಚಿವ ಸುಧಾಕರ್ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಸುಧಾಕರ್ ಮೂಗಿನ ನೇರಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ. ಇದು ಶೋಚನೀಯ. ಸಾಮಾನ್ಯ ಜನರ ಸಂಕಷ್ಟಕ್ಕೆ ಜಿಲ್ಲಾಧಿಕಾರಿ ಸ್ವಲ್ಪವೂ ಸ್ಪಂದಿಸುತ್ತಿಲ್ಲ. ಬದಲಿಗೆ ಸುಧಾಕರ್ ಅವರ ಏಜೆಂಟ್ʼರಂತೆ ಜಿಲ್ಲಾಡಳಿತ ನಡೆದುಕೊಳ್ಳುತ್ತಿದೆ. ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡುವುದಾಗಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಸುಧಾಕರ್ ಭಂಟರಾದ ಪೊಲೀಸರು
ಜಿಲ್ಲೆಯಾದ್ಯಂತ ಅತಿವೃಷ್ಠಿಯಿಂದ ಬಳಲಿರುವ ಜನತೆಗೆ ಜಿಲ್ಲಾಡಳಿತ ನಯಾಪೈಸೆ ಹಣ ನೀಡದೆ ಕೇವಲ ಬಂದಾ ಪುಟ್ಟ, ಹೋದಾ ಪುಟ್ಟ ಎಂಬಂಥ ಕಾರ್ಯಕ್ರಮಗಳನ್ನು ಸಚಿವ ಸುಧಾಕರ್ ಮಾಡುತ್ತಿದ್ದಾರೆ ಎಂದು ಛೇಡಿಸಿರುವ ಕಾಂಗ್ರೆಸ್ ಹಿರಿಯ ಧುರೀಣ ವೆಂಕಟರಮಣ; ಸರಕಾರದ ಹಣ ಈ ಮೂಲಕ ಪೋಲು ಮಾಡುವ ಜಾಯಮಾನ ರೂಢಿಸಿಕೊಂಡಿದ್ದಾರೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶನಿವಾರ ಹಮ್ಮಿಕೊಂಡಿರುವ ಕಾರ್ಯಕ್ರಮವೂ ದುಂದು ವೆಚ್ಚ ಮಾಡುವಂತದ್ದೇ ಹೊರತು ಜನರಿಗೆ ಅದರಿಂದ ಮೂರು ಕಾಸಿನ ಪ್ರಯೋಜನವಿಲ್ಲ. ಸಚಿವ ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಆಗಮಿಸುವ ಸುಳಿವು ಸಿಗುತಿದ್ದಂತೆ ಯಾವುದೇ ಮುಖ್ಯಮಂತ್ರಿಗೆ ನೀಡದಷ್ಟು ಭದ್ರತೆಯನ್ನು ಇಲ್ಲಿನ ಪೊಲೀಸರು ನೀಡುತ್ತಾರೆ ಎಂದರೆ ಏನರ್ಥ? ಇವರು ಜನರ ಕೆಲಸ ಮಾಡಬೇಕೋ ಅಥವಾ ಸುಧಾಕರ್ ಭಂಟರಂತೆ ಕೆಲಸ ಮಾಡಬೇಕೋ ಎಂದು ಅವರು ಪ್ರಶ್ನೆ ಮಾಡಿದರು.
ಇನ್ನು ಜಿಲ್ಲಾಡಳಿತವೂ ಪೊಲೀಸರಿಗಿಂತ ದುಸ್ಥಿತಿಯಲ್ಲಿದೆ. ಶನಿವಾರ ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅತಿವೃಷ್ಠಿಗೆ ಒಳಗಾದ ರೈತರಿಗೆ ಮತ್ತು ಮನೆ ಮಠ ಕಳೆದುಕೊಂಡವರಿಗೆ ಪರಿಹಾರದ ಮೊಬಲಗು ಇಲ್ಲವೇ ಚಕ್ ನೀಡದೆ ಕೇವಲ ಮಂಜೂರಾತಿ ಪತ್ರ ಮಾತ್ರ ನೀಡಿ ಕೈತೊಳೆದುಕೊಳ್ಳುವ ಕಾರ್ಯಕ್ರಮವಾಗಿತ್ತು. ಇದರ ಜತೆ ಚೆಕ್ ನೀಡುವುದಕ್ಕೆ ಮತ್ತೊಂದು ಕಾರ್ಯಕ್ರಮ ನಿಗದಿ ಮಾಡಿ ಅದಕ್ಕೊಂದಷ್ಟು ಮೊತ್ತ ಖಜಾನೆಯಿಂದ ಜಿಲ್ಲಾಡಳಿತವು ಹೊಡೆಯುವ ವ್ಯವಸ್ಥಿತ ಹುನ್ನಾರ ನಡೆಸಿದೆ. ಇದಕ್ಕೆಲ್ಲಾ ಸಚಿವ ಸುಧಾಕರ್ ಅವರೇ ಕೀ ಮಾಸ್ಟರ್ ಎಂದು ವೆಂಕಟರಮಣ ಟೀಕಿಸಿದರು.
ಸಚಿವ ಸುಧಾಕರ್ ಚಿಕ್ಕಬಳ್ಳಾಪುರಕ್ಕೆ ಬಂದರೆಂದರೆ ಸಾಮಾನ್ಯ ಜನತೆಗೆ ಅವರ ಭೇಟಿ ಕಷ್ಟ. ಕೇವಲ ಅವರ ಭಟ್ಟಂಗಿಗಳಿಗಷ್ಟೇ ದರ್ಶನ ನೀಡುತ್ತಾರೆ ಸಚಿವರು ಎಂದು ಹೇಳುತ್ತಾರೆ ಮತ್ತೊಬ್ಬ ಜಿಲ್ಲೆಯ ಹಿರಿಯ ರಾಜಕಾರಣಿ ಮುನೇಗೌಡ.
ಇದಕ್ಕೆಲ್ಲಾ ಅಂಕುಶ ಹಾಕುವ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ತೋರಿಸಿದೆ. ಹಾಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಹೈ-ಫೈ ರಾಜಕಾರಣಕ್ಕೆ ಮುಕ್ತಿ ಸಿಕ್ಕಿ ವಿಧಾನಸಭಾ ಕ್ಷೇತ್ರದ ಜನತೆಗೂ ನೆಮ್ಮದಿ ಸಿಗಲಿದೆ ಎಂದೂ ಸುಧಾಕರ್ ಅವರ ವಿರುದ್ದ ಅವರು ಕಿಡಿ ಕಾರಿದರು.
Comments 1