ಕೃಷ್ಣ ಮೇಲ್ದಂಡೆ ಯೋಜನೆಯ ಜಾರಿ ವಿಳಂಬದಲ್ಲಿ ಕಾಂಗ್ರೆಸ್ ಅಪರಾಧಿ: ಗೋವಿಂದ ಕಾರಜೋಳ
ಬೆಳಗಾವಿ (ವಿಧಾನ ಪರಿಷತ್ತು): ಕೃಷ್ಣ ಮೇಲ್ದಂಡೆ ಯೋಜನೆಯ ಜಾರಿಗೆ ಒತ್ತಾಯಿಸಿ 2013 ರಲ್ಲಿ ಜನವರಿ 7 ರಿಂದ ಜನವರಿ 14ರ ವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ನಾಯಕರು ತಮ್ಮ ದೇಹದ ತೂಕ ಮಾಡಿಕೊಂಡರೇ ಹೊರತು ಜನತೆಯ ಭಾರ ಕಡಿಮೆ ಮಾಡಲಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ವಿಧಾನಪರಿಷತ್ತಿನಲ್ಲಿ ಇಂದು ವ್ಯಂಗ್ಯವಾಡಿದರು.
ಕೃಷ್ಣ ಮೇಲ್ದಂಡೆ ಯೋಜನೆಯ ಅನುಷ್ಟಾನದ ವಿಷಯದಲ್ಲಿ ಅಪರಾಧಿ ಸ್ಥಾನದಲ್ಲಿರುವುದು ಕಾಂಗ್ರೇಸ್ ಹೊರತು ಬಿ.ಜೆ.ಪಿ ಅಲ್ಲ ಎಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಇಂದು ಕಾಂಗ್ರೆಸ್ನ ಪರಿಷತ್ ಸದಸ್ಯರದಾದ ಪ್ರಕಾಶ್ ಕೆ.ರಾಠೋಡ್ ರವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡುತ್ತಾ 2013 ರಲ್ಲಿ ಕಾಂಗ್ರೆಸ್ನವರ ಪಾದಯಾತ್ರೆ ಸಂದರ್ಭದಲ್ಲಿ ವಿಶೇಷ ಪುರವಣಿಯನ್ನು ಪ್ರಕಟಿಸಿ ಅಬ್ಬರದ ಪ್ರಚಾರ ಮಾಡಿದ ಕಾಂಗ್ರೆಸ್ ಪಕ್ಷ ಕೃಷ್ಣ ಕೊಳ್ಳದ ನೀರಾವರಿ ಯೋಜನೆಗಳಿಗೆ ಪ್ರತೀ ವರ್ಷ 10,000 ಕೋಟಿ ವೆಚ್ಚ ಮಾಡುವುದಾಗಿ ಘೋಷಿಸಿ, 6½ ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ್ ಮತ್ತು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯು.ಕೆ.ಪಿ ಗೆ ಖರ್ಚು ಮಾಡಿದ್ದು, ಕೇವಲ 7,728 ಕೋಟಿ ರೂಪಾಯಿಗಳು ಎಂದು ವಿವರಿಸಿದರು. ಅಂದಿನ ಜಲಸಂಪನ್ಮೂಲ ಸಚಿವರು ಎಂ.ಬಿ.ಪಾಟೀಲ್ ರು ವಿಜಯಪುರ ಜಿಲ್ಲೆಯವರಾಗಿದ್ದರೂ ಕೃಷ್ಣ ಮೇಲ್ದಂಡೆ ಯೋಜನೆಗೆ ಯಾವುದೇ ಕಾಳಜಿ ತೋರಲಿಲ್ಲ ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು.
ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡಲು ಏನು ಕ್ರಮ ಕೈಗೊಳ್ಳಲಾಗಿದೆಯೆಂದು ಪ್ರಕಾಶ್ ರಾಠೋಡ್ ರವರು ಕೇಳಿದ ಪ್ರಶ್ನೆಗೆ ಉತ್ತವಾಗಿ ಸಚಿವರು ಯಾವುದೇ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕಾದರೆ ಅಂತರ್ರಾಜ್ಯ ಜಲವಿವಾದ ಪೂರ್ಣವಾಗಿ ಬಗೆಹರಿದಿರಬೇಕು. ಆದರೆ ಕೃಷ್ಣ ಮೇಲ್ದಂಡೆ ಯೋಜನೆಯ ಅಂತರ್ರಾಜ್ಯ ವಿವಾದ ಸುಪ್ರೀ ಕೋರ್ಟ್ನಲ್ಲಿ ಇರುವುದರಿಂದ ವಿಳಂಬವಾಗಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ನ್ಯಾಯಾಧೀಕರಣದ ಅಂತಿಮ ಐತೀರ್ಪು ಗೆಜೆಟ್ನಲ್ಲಿ ಪ್ರಕಟಗೊಂಡ ತಕ್ಷಣ ಈ ವಿವಾದ ಬಗೆ ಹರಿಯುತ್ತದೆ. ಅದಾದ ನಂತರ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಲು ಅನುಕೂಲವಾಗುವಂತೆ ಪೂರ್ವ ಸಿದ್ಧತಾ ವರದಿಯನ್ನು ದಿನಾಂಕ 12-11-2020 ರಂದು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆಯೆಂದು ಸಚಿವರು ವಿವರಿಸಿದರು.
ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತದ ಭೂಸ್ವಾಧೀನ ಕಾಮಗಾರಿಗಳಿಗೆ ಪ್ರಸ್ತುತ ಮುಂಗಡ ಪತ್ರದಲ್ಲಿ ಎಷ್ಟು ಅನುದಾನ ನೀಡಲಾಗಿದೆ ಎಂದು ಕೇಳಿದ ಮೂಲ ಪ್ರಶ್ನೆಗೆ ಉತ್ತರವನ್ನು ಈಗಾಗಲೇ ಮುಂಗಡ ಪತ್ರದಲ್ಲಿ 970 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿತ್ತು. ದಿನಾಂಕ 24-08-2021 ರಂದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ 2500 ಕೋಟಿಗಳ ಹೆಚ್ಚುವರಿ ಅನುದಾನವನ್ನು ಒದಗಿಸಲು ನಿರ್ಧರಿಸಲಾಗಿದೆ ಹಾಗೂ ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಬಸವರಾಜ ಬೊಮ್ಮಾಯಿ ಯವರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೂರು ಸಾರಿ ನವದೆಹಲಿಗೆ ಪ್ರಯಾಣ ಮಾಡಿ ಕೇಂದ್ರ ಜಲಶಕ್ತಿ ಸಚಿವರು ಮತ್ತು ಜಲಶಕ್ತಿ ಮಂತ್ರಾಲಯದ ಉನ್ನತ ಅಧಿಕಾರಿಗಳೊಂದಿಗೆ ಕರ್ನಾಟಕದ ಯೋಜನೆಗಳನ್ನು ತ್ವರಿತವಾಗಿ ಅನುಮೋದಿಸುವಂತೆ ಕೋರಲಾಗಿದೆ. ದಿನಾಂಕ 04-12-2021 ರಂದು ನಾನೂ ಸಹ ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದು ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದೇನೆ ಎಂದು ತಿಳಿಸಿದರು.