ಅಟಲ್ ಜನ್ಮದಿನಕ್ಕೆ ಎಲ್.ಕೆ. ಅಡ್ವಾಣಿ ಅವರ ಅಕ್ಷರಪ್ರೇಮ
ನಾನೆಂದೂ ಸೋಲೊಪ್ಪಲಾರೆ; ನಾನೆಂದಿಗೂ ಸಿದ್ಧ ಹೊಸಹೊಸ ಸಮರಕ್ಕೆ; ಹಳೆಯದನ್ನೆಲ್ಲ ಅಳಿಸಿ, ಕಾಲದ ನೆತ್ತಿಯ ಮೇಲೆ ಹೊಸದನ್ನು ಬರೆವೆ ನಾನು; ನಾನೆಂದಿಗೂ ಹಾಡುವೆನು ಹೊಸ ಹಾಡೊಂದನು, ಹೊಸ ಹಾಡೊಂದನು!
-ಅಟಲ್ ಬಿಹಾರಿ ವಾಜಪೇಯಿ
ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಯಾರಾದರೊಬ್ಬರನ್ನು ನನ್ನ ವ್ಯಕ್ತಿತ್ವದ ಅವಿಭಾಜ್ಯ ಅಂಗವೆಂದು ಹೇಳುವುದಾದರೆ ಅದು ಅಟಲ್ ಬಿಹಾರಿ ವಾಜಪೇಯಿಯವರು ಮಾತ್ರವೇ! ಅವರು ಬಿಜೆಪಿಯಲ್ಲೂ ಸರಕಾರದ ಮಟ್ಟದಲ್ಲೂ ಐವತ್ತಕ್ಕೂ ಹೆಚ್ಚು ವರ್ಷಗಳ ದೀರ್ಘಕಾಲ ನನ್ನೊಂದಿಗೆ ಹೆಜ್ಜೆ ಹಾಕಿದವರಾಗಿದ್ದಾರೆ. ಹಾಗೆಯೇ, ಅವರ ನಾಯಕತ್ವವನ್ನು ನಾನು ಸದಾ ಒಪ್ಪಿಕೊಂಡಿದ್ದೆ. ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಇಬ್ಬರು ವ್ಯಕ್ತಿಗಳು ಹೀಗೆ ಅರ್ಧ ಶತಮಾನ ಕಾಲ ಗಟ್ಟಿಯಾಗಿ ಬೆಸೆದುಕೊಂಡಿರುವುದು ಅತ್ಯಂತ ಅನುಪಮವಾದ ವಿದ್ಯಮಾನವೆಂದು ರಾಜಕೀಯ ಪಂಡಿತರು ಬಣ್ಣಿಸಿದ್ದಾರೆ.
ವಾಜಪೇಯಿಯವರನ್ನು ನಾನು ಮೊಟ್ಟಮೊದಲಿಗೆ ಭೇಟಿಯಾಗಿದ್ದು 1952ರಲ್ಲಿ; ರಾಜಾಸ್ತಾನದ ಕೋಟಾದಲ್ಲಿ. ಆಗ ನಾನು ಅಲ್ಲಿ ಆರೆಸ್ಸೆಸ್ ಪ್ರಚಾರಕನಾಗಿದ್ದೆ. ಆ ಸಂದರ್ಭದಲ್ಲಿ ವಾಜಪೇಯಿಯವರು ಆಗತಾನೇ ಅಸ್ತಿತ್ವಕ್ಕೆ ಬಂದಿದ್ದ ಭಾರತೀಯ ಜನಸಂಘ’ವನ್ನು ಜನರ ನಡುವೆ ಪ್ರಚುರಗೊಳಿಸಲು ಡಾ.ಶಾಮಪ್ರಸಾದ್ ಮುಖರ್ಜಿಯವರೊಂದಿಗೆ ರೈಲಿನಲ್ಲಿ ಅಲ್ಲಿಗೆ ಬಂದಿದ್ದರು. ಅಂದಹಾಗೆ, ಇವರು ಆಗ ಮುಖರ್ಜಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಇಪ್ಪತ್ತೇಳೋ, ಇಪ್ಪತ್ತೆಂಟೋ ವರ್ಷದವರಾಗಿದ್ದ ವಾಜಪೇಯಿಯವರ ಈ ಚೊಚ್ಚಲ ಭೇಟಿಯ ಕೊನೆಯೆ ಹೊತ್ತಿಗೆ ನನಗೆ,
ಈ ಮನುಷ್ಯನಲ್ಲಿ ಏನೋ ಒಂದು ಅಗಾಧ ಸಾಮರ್ಥ್ಯವಿದೆ. ನಾನು ಇವರನ್ನು ಪರಿಚಯ ಮಾಡಿಕೊಳ್ಳಬೇಕು!’ ಎನ್ನುವ ಭಾವನೆ ನನಗೆ ಬಂತು.
ಇಷ್ಟು ಹೊತ್ತಿಗಾಗಲೇ ನನಗೆ ವಾಜಪೇಯಿಯವರ ಹೆಸರು ಪರಿಚಿತವಾಗಿತ್ತು. ಏಕೆಂದರೆ, 1948ರಲ್ಲಿ ಸಂಘವು ಶುರು ಮಾಡಿದ ಪಾಂಚಜನ್ಯ’ ಪತ್ರಿಕೆಗೆ ಇವರೇ ಸಂಸ್ಥಾಪಕ ಸಂಪಾದಕರಾಗಿದ್ದರು, ಇದರಲ್ಲಿ ಅವರು ಬರೆಯುತ್ತಿದ್ದ ಶಕ್ತಿಶಾಲಿ ಸಂಪಾದಕೀಯಗಳು, ಭಾವಪೂರ್ಣವಾದ ಕವನಗಳು ಎಲ್ಲವನ್ನೂ ಒಬ್ಬ ಪ್ರಚಾರಕನಾಗಿ ನಾನೂ ಓದುತ್ತಲೇ ಇದ್ದೆ. ಇದೆಲ್ಲ ಆಗಿ ಒಂದಿಷ್ಟು ದಿನಗಳಾಗಿದ್ದವು. ಆಗ ವಾಜಪೇಯಿ ಒಬ್ಬರೇ ಒಂದು ರಾಜಕೀಯ ಪ್ರವಾಸಾರ್ಥವಾಗಿ ರಾಜಾಸ್ತಾನಕ್ಕೆ ಬಂದರು. ಆ ಪ್ರವಾಸವಿಡೀ ನಾನು ಅವರ ಜತೆಗಿದ್ದೆ. ಈ ಸಂದರ್ಭದಲ್ಲಿ ನನಗೆ ಅವರ ಪರಿಚಯ ಹೆಚ್ಚಿನ ರೀತಿಯಲ್ಲಾಯಿತು. ಆಗ ಅವರ ಅಸಾಧಾರಣ ವ್ಯಕ್ತಿತ್ವ, ಅಸಾಮಾನ್ಯವಾದ ವಾಗ್ಝರಿಗಳು ನನ್ನ ಅನುಭವಕ್ಕೆ ಬಂದವು. ಅವರು ತಮ್ಮ ಮಾತಿನ ಮೂಲಕ ಹತ್ತಾರು ಸಾವಿರ ಜನರನ್ನು ಹಾಗೆಯೇ ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಳ್ಳುತ್ತಿದ್ದರು. ಹಿಂದಿ ಭಾಷೆಯ ಮೇಲಂತೂ ಅವರಿಗೆ ಪ್ರಚಂಡ ಹಿಡಿತವಿತ್ತು. ಇದರ ಜತೆಗೆ ಅವರಲ್ಲಿ ಅಪಾರವಾದ ವಿನೋದ ಪ್ರಜ್ಞೆಯೂ ಇತ್ತು. ವಾಜಪೇಯಿಯವರ ವ್ಯಕ್ತಿತ್ವದಲ್ಲಿದ್ದ ಈ ಗುಣಗಳು ನನ್ನ ಮೇಲೆ ಮೋಡಿ ಮಾಡಿದವು. ಆಗ ನನಗೆ, ``ಈ ವ್ಯಕ್ತಿಯನ್ನು ದೈವವೇ ನಮಗೆ ಕಳಿಸಿ ಕೊಟ್ಟಿದೆ. ಒಂದಿಲ್ಲೊಂದು ದಿನ ಭಾರತವನ್ನು ಮುನ್ನಡೆಸುವ ಶಕ್ತಿ ಇವರಲ್ಲಿದೆ!’’ ಎನ್ನಿಸಿತು.
ಇದು 44 ವರ್ಷಗಳ ನಂತರ ನಿಜವಾಯಿತು. ಶಾಮಪ್ರಸಾದ್ ಮುಖರ್ಜಿಯವರು ಭಾರತದ ಸಮಗ್ರತೆಯನ್ನು ಎತ್ತಿ ಹಿಡಿಯುವ ಮಹೋನ್ನತ ಉದ್ದೇಶದಿಂದ 1953ರಲ್ಲಿ ಕಾಶ್ಮೀರಕ್ಕೆ ನುಗ್ಗಿ, ಈ ರಾಜ್ಯಕ್ಕೆ ಕೊಟ್ಟಿದ್ದ ವಿಶೇಷಾಧಿಕಾರವನ್ನು ರದ್ದುಪಡಿಸಬೇಕೆಂಬ ಆಗ್ರಹದೊಂದಿಗೆ ಅಲ್ಲೇ ಹುತಾತ್ಮರಾದರು. ಮುಖರ್ಜಿಯವರ ನಂತರ ಜನಸಂಘದಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದು ಪಂಡಿತ್ ದೀನದಯಾಳ್ ಉಪಾಧ್ಯಾಯರು. ಅವರಿಗೆ ಕೂಡ ವಾಜಪೇಯಿಯವರ ಮೇಲೆ ಅಪಾರ ಅಭಿಮಾನವಿತ್ತು. ಹೀಗಾಗಿ, ಕೆಲವೇ ದಿನಗಳಲ್ಲಿ ಅವರು ಜನಸಂಘದಲ್ಲಿ ಅತ್ಯಂತ ವರ್ಚಸ್ವೀ ನಾಯಕರೆನಿಸಿಕೊಂಡರು. ಆ ದಿನಗಳಲ್ಲೇ ವಾಜಪೇಯಿಯವರು ರಾಷ್ಟ್ರೀಯ ಮಹತ್ತ್ವದ ವಿಚಾರಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ನಾಯಕರಿಗಿಂತ ಭಿನ್ನವಾದ ನಿಲುವುಗಳನ್ನು ಧೈರ್ಯವಾಗಿ ಹೇಳುತ್ತಿದ್ದರು. ಆಗಲೇ ಅವರು ಜನಸಮುದಾಯಗಳ ನಾಯಕನಾಗಿ ಹೊರಹೊಮ್ಮುವ ಲಕ್ಷಣಗಳನ್ನು ತೋರಿಸುತ್ತಿದ್ದರು. ಇಂತಹ ವ್ಯಕ್ತಿತ್ವದ ವಾಜಪೇಯಿ ಮೊಟ್ಟಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದು 1957ರಲ್ಲಿ. ಆಗ ದೀನದಯಾಳ್ ಉಪಾಧ್ಯಾಯರು ನನ್ನನ್ನು ರಾಜಾಸ್ತಾನದಿಂದ ದೆಹಲಿಗೆ ಕರೆಸಿಕೊಂಡು, ವಾಜಪೇಯಿಯವರ ಸಂಸದೀಯ ಕೆಲಸಗಳಲ್ಲಿ ಅವರಿಗೆ ಸಹಕರಿಸುವಂತೆ ಸೂಚಿಸಿದರು. ಇದು ನಮ್ಮಿಬ್ಬರ ಮೈತ್ರಿಯನ್ನು ಇನ್ನಷ್ಟು ಗಟ್ಟಿಯಾಗಿ ಬೆಸೆಯಿತು. ಅಲ್ಲಿಂದ ನಾವಿಬ್ಬರೂ ಮೊದಲು ಜನಸಂಘದ ಮತ್ತು ನಂತರ ಬಿಜೆಪಿಯ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಜತೆಜತೆಯಾಗಿ ದುಡಿದೆವು. ಲೋಕಸಭೆಗೆ ಆರಿಸಿಬಂದ ವಾಜಪೇಯಿ ಸಹಜವಾಗಿಯೇ ಅಲ್ಲಿ ಜನಸಂಘದ ದನಿಯಾದರು.
ಇಷ್ಟರ ಮಧ್ಯೆ 1968ರಲ್ಲಿ ದೀನದಯಾಳರು ಉತ್ತರಪ್ರದೇಶದ ಮೊಘಲ್ ಸರಾಯ್ ನಲ್ಲಿ ನಿಗೂಢವಾಗಿ ನಿಧನ ಹೊಂದಿದರು. ಇದಾದ ಬಳಿಕವಂತೂ ವಾಜಪೇಯಿಯವರೇ ಜನಸಂಘದ ಚುಕ್ಕಾಣಿಯನ್ನೂ ಹಿಡಿಯಬೇಕಾಗಿ ಬಂತು. ಆ ಕಾಲಮಾನವಂತೂ ಜನಸಂಘದ ಪಾಲಿಗೆ ತುಂಬಾ ಕಷ್ಟದ ದಿನಗಳಾಗಿದ್ದವು. ಅದನ್ನೆಲ್ಲ ಮೆಟ್ಟಿ ನಿಂತ ವಾಜಪೇಯಿ, ನೋಡನೋಡುತ್ತಿದ್ದಂತೆಯೇ ದೇಶವಾಸಿಗಳ ಪಾಲಿಗೆ ಭರವಸೆಯ ಕಿರಣವಾಗಿ ಹೊರಹೊಮ್ಮಿದರು.
ಅಂಧೇರೇ ಮೇ ಏಕ್ ಚಿಂಗಾರಿ, ಅಟಲ್ ಬಿಹಾರಿ ಅಟಲ್ ಬಿಹಾರಿ!’ (ಕಗ್ಗತ್ತಲಿನಲ್ಲಿ ಕಾಣುತ್ತಿರುವ ಕಿರಣ ಈ ಅಟಲ್ ಬಿಹಾರಿ) ಎನ್ನುವ ಘೋಷಣೆ ಹುಟ್ಟಿಕೊಂಡಿದ್ದು ಆ ದಿನಗಳಲ್ಲೇ!
ಹೀಗಿದ್ದಾಗ, ಅಂದರೆ 1973ರಲ್ಲಿ ಅವರು ನಮ್ಮ ಪಕ್ಷದ ಸಂಘಟನೆಯ ಕೆಲಸವನ್ನು ನನಗೆ ವಹಿಸಿದರು. ಆಗ ನನ್ನ ಬೆಂಬಲಕ್ಕೆ ವಾಜಪೇಯಿಯವರ ಜತೆಗೆ ನಾನಾಜಿ ದೇಶಮುಖ್, ಕುಶಭಾವು ಠಾಕ್ರೆ, ಸುಂದರ್ ಸಿಂಗ್ ಭಂಡಾರಿ ಮುಂತಾದವರಿದ್ದರು. ನನ್ನ ರಾಜಕೀಯ ಜೀವನದಲ್ಲಿ ಆ ದಿನಗಳು ನಿಜಕ್ಕೂ ಈಗಲೂ ಅಚ್ಚಹಸುರಾಗಿವೆ. ಇದಾಗಿ ಎರಡು ವರ್ಷಕ್ಕೆ ಇಂದಿರಾ ಗಾಂಧಿ ದೇಶದ ಮೇಲೆ ಎಮರ್ಜೆನ್ಸಿಯನ್ನು ಹೇರಿದರು. ಅಷ್ಟು ಹೊತ್ತಿಗಾಗಲೇ ನಮ್ಮ ಪಕ್ಷವು ಅತ್ಯಂತ ಪ್ರಬಲ ಮತ್ತು ಸಂಘಟಿತ ಪಕ್ಷವೆಂದು ಹೆಸರು ಮಾಡಿತ್ತು; ಜತೆಗೆ ಲೋಕನಾಯಕ ಜಯಪ್ರಕಾಶ ನಾರಾಯಣರ ಮೆಚ್ಚುಗೆಗೂ ಪಾತ್ರವಾಗಿತ್ತು. ಆ ದಿನಗಳಲ್ಲಿ ನಾನು ಮತ್ತು ವಾಜಪೇಯಿ ಇಬ್ಬರೂ ಜನತಾ ಪಕ್ಷವನ್ನು ಹುಟ್ಟುಹಾಕಲು ಅಹರ್ನಿಶಿ ಶ್ರಮಿಸಿದೆವು. ದುರಂತವೆಂದರೆ, ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಜನತಾ ಸರಕಾರ ಅಸ್ತಿತ್ವಕ್ಕೆ ಬಂದ ಎರಡು ವರ್ಷಗಳಲ್ಲೇ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಭುಗಿಲೆದ್ದವು. ಆಗ ನಾವಿಬ್ಬರೂ ಪಕ್ಷದಲ್ಲಿ ಒಗ್ಗಟ್ಟನ್ನು ಮೂಡಿಸಲು ಇನ್ನಿಲ್ಲದಂತೆ ಕಷ್ಟಪಟ್ಟೆವು. ಬೇಸರದ ಸಂಗತಿಯೆಂರೆ, ನಮ್ಮಿಬ್ಬರನ್ನೇ ಆಗ ಪಕ್ಷದಿಂದ ಉಚ್ಚಾಟಿಸಲಾಯಿತು!
ಅಟಲ್ ಸೋತಿದ್ದರು!
ಇಷ್ಟೆಲ್ಲ ಆದಮೇಲೆ ನಾನು ಮತ್ತು ವಾಜಪೇಯಿ ಇಬ್ಬರೂ ಸುಮ್ಮನೇನೂ ಕೂರಲಿಲ್ಲ. ಬದಲಿಗೆ, ನಮ್ಮ ಹಳೆಯ ಸಹೋದ್ಯೋಗಿಗಳನ್ನು ಸೇರಿಸಿಕೊಂಡು 1980ರಲ್ಲಿ ಬಿಜೆಪಿಯನ್ನು ಹುಟ್ಟು ಹಾಕಿದೆವು. ಇದಾದ ಬಳಿಕ, 1984ರಲ್ಲಿ ಇಂದಿರಾ ಗಾಂಧಿಯವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಕೊಂದರು. ಇದರ ಬೆನ್ನಲ್ಲೇ ದೇಶದಲ್ಲಿ ಮಹಾಚುನಾವಣೆ ನಡೆಯಿತು. ಇಂದಿರಾ ಕಗ್ಗೊಲೆಯಿಂದ ಸೃಷ್ಟಿಯಾದ ಅನುಕಂಪದ ಭಾರೀ ಲಾಭ ಪಡೆದ ಕಾಂಗ್ರೆಸ್ ಪಕ್ಷವು ಆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತು. ಬಿಜೆಪಿ ಎದುರಿಸಿದ ಆ ಮೊಟ್ಟಮೊದಲ ಚುನಾವಣೆಯಲ್ಲಿ ನಮಗೆ ಸಿಕ್ಕಿದ್ದು ಬರೀ ಎರಡು ಕ್ಷೇತ್ರಗಳಷ್ಟೇ! ಆಶ್ಚರ್ಯವೆಂದರೆ, ಆ ಚುನಾವಣೆಯಲ್ಲಿ ವಾಜಪೇಯಿ ಕೂಡ ಗ್ವಾಲಿಯರ್ ಕ್ಷೇತ್ರದಲ್ಲಿ ಸೋಲುಂಡರು.
ಇದಾದಮೇಲೆ ಬಿಜೆಪಿಯ ಬತ್ತಳಿಕೆ ಸೇರಿದ್ದೆಂದರೆ ಅಯೋಧ್ಯಾ ಚಳವಳಿ; ಇದಾಗಿದ್ದು 1986ರಲ್ಲಿ. ಆಶ್ಚರ್ಯವೆಂದರೆ, ಈ ಅವಧಿಯಲ್ಲಿ ವಾಜಪೇಯಿ ಅಷ್ಟೇನೂ ಸಕ್ರಿಯರಾಗಿರಲಿಲ್ಲ. ರಾಮ ಮಂದಿರದ ವಿಚಾರವನ್ನು ಪಕ್ಷವು ಕೈಗೆತ್ತಿಕೊಳ್ಳುವ ಬಗ್ಗೆ ಅವರ ನಿಲುವುಗಳು ಬೇರೆಯೇ ಆಗಿದ್ದವು. ಆದರೆ, ಪಕ್ಷದ ಆದೇಶದಂತೆ ನಾನು 10 ಸಾವಿರ ಕಿಲೋಮೀಟರ್ ಉದ್ದದ ರಾಮ ರಥಯಾತ್ರೆ ನಡೆಸಿದೆ. ಸುದ್ದಿ ಮಾಧ್ಯಮಗಳು ನನ್ನನ್ನು ಖಟ್ಟರ್ ಹಿಂದೂವಾದಿ’ ಎಂದೂ, ವಾಜಪೇಯಿಯವರನ್ನು
ಉದಾರವಾದಿ ಹಿಂದೂವಾದಿ’ ಎಂದೂ ಬಿಂಬಿಸತೊಡಗಿದ್ದು ಆಗಲೇ. ನಿಜ ಹೇಳಬೇಕೆಂದರೆ, ನಮ್ಮಿಬ್ಬರ ವ್ಯಕ್ತಿತ್ವಗಳು ಈ ಹಣೆಪಟ್ಟಿಗಳಿಗೆ ತದ್ವಿರುದ್ಧವಾಗಿದ್ದವು!
ಇಷ್ಟರ ಮಧ್ಯೆ ಹವಾಲಾ ಹಗರಣದಲ್ಲಿ ನನ್ನ ವಿರುದ್ಧ ಆರೋಪ ಕೇಳಿಬಂತು. ಆಗ ನಾನು, ಈ ಆರೋಪದಿಂದ ನಾನು ವಿಮುಕ್ತನಾಗುವವರೆಗೂ ಲೋಕಸಭೆಗೆ ಕಾಲಿಡುವುದಿಲ್ಲ!’ ಎಂದು ಘೋಷಿಸಿದೆ. ಈ ಮಾತಿಗೆ ತಕ್ಕಂತೆ ನಾನು 1996 ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿಲ್ಲ. ಆಗ ವಾಜಪೇಯಿಯವರು ತಾವು ಸಾಂಪ್ರದಾಯಿಕವಾಗಿ ಪ್ರತಿನಿಧಿಸುತ್ತಿದ್ದ ಲಖನೌ ಕ್ಷೇತ್ರದ ಜತೆಗೆ ನನ್ನ ಅಚ್ಚುಮೆಚ್ಚಿನ ಗಾಂಧೀನಗರ ಕ್ಷೇತ್ರದಿಂದಲೂ ಕಣಕ್ಕಿಳಿದರು. ನನ್ನ ಬಗ್ಗೆ ಅವರು ತೋರಿಸಿದ ಈ ನಂಬಿಕೆ ಮತ್ತು ನನ್ನೊಂದಿಗೆ ಅವರು ಬಲವಾಗಿ ನಿಂತಿದ್ದು ನನ್ನನ್ನು ಗಾಢವಾಗಿ ತಟ್ಟಿದವು. ಅವರ ಈ ನಡೆಯು ಪಕ್ಷಕ್ಕೆ ಪ್ರಚಂಡ ಶಕ್ತಿಯನ್ನು ತಂದುಕೊಟ್ಟಿತಲ್ಲದೆ, ಪಕ್ಷದ ಉನ್ನತ ಸ್ತರದಲ್ಲಿರುವ ಒಗ್ಗಟ್ಟು ಎಷ್ಟೊಂದು ಅಭೇದ್ಯವಾಗಿದೆ ಎನ್ನುವುದನ್ನು ತೋರಿಸಿ ಕೊಟ್ಟಿತು. ಇದಕ್ಕೆ ಒಂದು ವರ್ಷ ಮೊದಲು, ಅಂದರೆ 1995ರಲ್ಲಿ ಬಾಂಬೆಯಲ್ಲಿ ನಮ್ಮ ಪಕ್ಷದ ಮಹಾಧಿವೇಶನ ನಡೆಯಿತು. ಆಗ ನಾನು ಪಕ್ಷದ ಅಧ್ಯಕ್ಷ. ಅಲ್ಲಿ ನಾನು ಯಾರ ಸಲಹೆಯನ್ನೂ ಕೇಳದೆ, ನನ್ನ ಆತ್ಮಸಾಕ್ಷಿಗೆ ಓಗೊಟ್ಟು,
ವಾಜಪೇಯಿಯವರೇ ನಮ್ಮ ಪ್ರಧಾನಿ ಅಭ್ಯರ್ಥಿ!’ ಎಂದು ಘೋಷಿಸಿದೆ. ಇದರಿಂದ ನಮ್ಮ ಪಕ್ಷ ಚಕಿತಗೊಂಡಿತು. 1998ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿಯೂ ನಾನು ಮತ್ತು ವಾಜಪೇಯಿ ಇಬ್ಬರೂ ಪಕ್ಷದ ಹಲವು ನಾಯಕರೊಂದಿಗೆ ಜತೆಗೂಡಿ ಕೆಲಸ ಮಾಡಿದೆವು. ಆ ಸರಕಾರದಲ್ಲಿ ನಾನು ಗೃಹ ಸಚಿವನಾದೆ; ನಂತರ, 2002ರಲ್ಲಿ ಅವರು ನನ್ನನ್ನು ಉಪಪ್ರಧಾನಿ ಎಂದು ಘೋಷಿಸಿದರು. ಇದೇ ವರ್ಷ ನಡೆದ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಡಾ.ಅಬ್ದುಲ್ ಕಲಾಂ ಅವರನ್ನು ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸುವಲ್ಲಿಯೂ ನಾವಿಬ್ಬರೂ ಗಹನವಾಗಿ ಚರ್ಚಿಸಿ, ಆ ತೀರ್ಮಾನವನ್ನು ಕೈಗೊಂಡಿದ್ದೆವು.
ರಾಜಕಾರಣ ಮತ್ತು ಗೆಳೆತನ
ರಾಜಕಾರಣದಲ್ಲಿ ದೀರ್ಘಾವಧಿಯ ಗೆಳೆತನ ಅಷ್ಟೊಂದು ಸುಲಭವಲ್ಲ. ಇದು ಉಳಿಯಬೇಕೆಂದರೆ ಮೂರು ಅಂಶಗಳು ಆಧಾರಪ್ರಾಯವಾಗಿವೆ. ಅವೆಂದರೆ- ಪರಸ್ಪರ ನಂಬಿಕೆ, ಗೌರವ ಮತ್ತು ಕೆಲವು ಗುರಿಗಳಿಗೋಸ್ಕರ ಇರಬೇಕಾದ ಬದ್ಧತೆ. ನಾವಿಬ್ಬರೂ ಸಮಾನ ಸಿದ್ಧಾಂತ, ಆದರ್ಶಗಳು ಮತ್ತು ಮೌಲ್ಯಗಳಲ್ಲಿ ನಂಬಿಕೆ ಇಟ್ಟುಕೊಂಡಿದ್ದ ಗೆಳೆಯರಾಗಿದ್ದೆವು. ದೇಶ ಮೊದಲು, ಆಮೇಲೆ ಪಕ್ಷ, ಕಟ್ಟಕಡೆಯದಾಗಿ ವೈಯಕ್ತಿಕತೆ’ ಎನ್ನುವುದೇ ನಮ್ಮಿಬ್ಬರಿಗೂ ಜನಸಂಘ ಮತ್ತು ಬಿಜೆಪಿ ಕಲಿಸಿದ ಸಂಸ್ಕೃತಿಯಾಗಿದೆ. ಒಂದು ಮಾತನ್ನಂತೂ ನಾನು ಅತ್ಯಂತ ಪ್ರಾಮಾಣಿಕತೆಯಿಂದ ಹೇಳಬಲ್ಲೆ. ಅದೇನೆಂದರೆ, ವಾಜಪೇಯಿಯವರು ನನಗಿಂತ ಹಿರಿಯರೆಂಬುದನ್ನೂ ಅವರೇ ನನ್ನ ನಾಯಕರೆಂಬುದನ್ನೂ ನಾನು ಯಾವಾಗಲೂ ಶಿರಸಾ ಪಾಲಿಸಿಕೊಂಡು ಬರುತ್ತಿದ್ದೆ. ವಾಜಪೇಯಿಯವರೂ ಅಷ್ಟೆ, ಯಾವ ವಿಚಾರಗಳಿಗೆ ಸಂಬಂಧಿಸಿದಂತೆ ನನ್ನ ಚಿಂತನಾಲಹರಿ ಏನೆಂಬುದನ್ನು ತಕ್ಷಣ ಗ್ರಹಿಸಿ, ಅದಕ್ಕೆ ತಕ್ಕಂತೆ ಸ್ಪಂದಿಸುತ್ತಿದ್ದರು. ಅಂತಹ ವೈಶಾಲ್ಯ ನಿಜವಾದ ಅರ್ಥದಲ್ಲಿ ಅವರಿಗಿತ್ತು. ಅಂದಮಾತ್ರಕ್ಕೆ, ನನಗೂ ವಾಜಪೇಯಿಯವರಿಗೂ ಭಿನ್ನಾಭಿಪ್ರಾಯಗಳೇ ಇರಲಿಲ್ಲವೆಂದಲ್ಲ. ಉದಾಹರಣೆಗೆ ಹೇಳಬೇಕೆಂದರೆ, ನಮ್ಮ ಪಕ್ಷವು ರಾಮ ಮಂದಿರ ಆಂದೋಲನದಲ್ಲಿ ನೇರವಾಗಿ ಪಾಲ್ಗೊಳ್ಳಬೇಕು ಎನ್ನುವುದನ್ನು ಅವರು ಒಪ್ಪಿರಲಿಲ್ಲ; ಹಾಗೆಯೇ, 2002ರಲ್ಲಿ ಗುಜರಾತಿನಲ್ಲಿ ಕೋಮುಗಲಭೆಗಳಾದಾಗ ಆಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ರಾಜೀನಾಮೆಯನ್ನು ಪಡೆಯಬೇಕೆನ್ನುವುದು ಅವರ ಚಿಂತನೆಯಾಗಿತ್ತು. ಆದರೆ, ಇದಕ್ಕೆ ನಾನು ಒಪ್ಪಲಿಲ್ಲ. ನನ್ನ ಈ ತರ್ಕ ಸರಿಯಾಗಿತ್ತು ಎನ್ನುವುದು ನಂತರದ ದಿನಗಳಲ್ಲಿ ಸಾಬೀತಾಯಿತು.ವಾಜಪೇಯಿಯವರು ಚಿಕ್ಕಂದಿನಿಂದಲೇ ರಾಷ್ಟ್ರೀಯವಾದಿಯೂ ಹಿಂದೂ ಸ್ವಾಭಿಮಾನಿಯೂ ಆಗಿದ್ದ ಅಪೂರ್ವ ವ್ಯಕ್ತಿಗಳಾಗಿದ್ದರು. ಈ ಸಂದರ್ಭದಲ್ಲಿ ಅವರು ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗಲೇ ಬರೆದಭೂ-ಭಾಗ್ ನಹೀಂ, ಶತ್-ಶತ್ ಮಾನವ್ ಕೀ ಹೃದಯ್ ಜೀತನೇ ಕಾ ನಿಶ್ಚಯ್/ ಹಿಂದೂ ತನು-ಮನ್, ಹಿಂದೂ ಜೀವನ್, ರಾಗ್-ರಾಗ್ ಹಿಂದೂ ಮೇರಾ ಪರಿಚಯ್’ ಎನ್ನುವ ಕವನದ ಸಾಲುಗಳು ನೆನಪಾಗುತ್ತಿದೆ. ಇಷ್ಟೊಂದು ಪ್ರಖರವಾ
ದ ಇನ್ನೊಂದು ರಾಷ್ಟ್ರೀಯವಾದಿ ಮತ್ತು ಹಿಂದೂ ಅಸ್ಮಿತೆಯನ್ನು ಪ್ರತಿಪಾದಿಸುವಂತಹ ಕವನವನ್ನು ನಾನು ಈವರೆಗೂ ಓದಿಲ್ಲ.
ಇಂತಹ ಒಬ್ಬ ದ್ರಷ್ಟಾರ ನನ್ನ ಮಿತ್ರರಾಗಿದ್ದರು, ನಾವಿಬ್ಬರೂ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಜತೆಜತೆಯಾಗಿ ಹೆಜ್ಜೆ ಇಟ್ಟೆವು ಎನ್ನುವುದು ಪದಗಳಲ್ಲಿ ಹೇಳಲಾಗದ ಒಂದು ಅಸದಳ ಸಂಗತಿ. ಒಂದೇ ಮಾತಿನಲ್ಲಿ ವಾಜಪೇಯಿಯವರನ್ನು ಬಣ್ಣಿಸುವುದಾದರೆ, ಅವರನ್ನು `ಕವಿಹೃದಯದಿಂದ ಕೂಡಿದ್ದ ರಾಜನೀತಿಜ್ಞ’ ಎನ್ನಬೇಕು.
ಬಿ ಎಸ್ ಜಯಪ್ರಕಾಶ ನಾರಾಯಣ
ಜೆಪಿ ಎಂದೇ ಹೆಸರಾಗಿರುವ ಬಿ ಎಸ್ ಜಯಪ್ರಕಾಶ ನಾರಾಯಣ ಕನ್ನಡ ಪ್ರಖರ ಬರಹಗಾರರಲ್ಲಿ ಒಬ್ಬರು. ಜತೆಗೆ ಅತ್ಯುತ್ತಮ ಅನುವಾದಕ. ನಾನು ಮಲಾಲಾ, ಸುಸ್ವರಲಕ್ಷ್ಮಿ ಸುಬ್ಬುಲಕ್ಷ್ಮಿ, ಪರ್ವಕಾಲದ ಪುರುಷೋತ್ತಮ ಪಿವಿಎನ್, ಶಿಕ್ಷಣ ಕ್ರಾಂತಿಗೆ ಆಹ್ವಾನ, ಗಂಡು ಜೀವ ಹೆಣ್ಣು ಭಾವ, ಸಾವರ್ಕರ್; ಹಿಂದುತ್ವ ಜನಕನ ನಿಜಕತೆ ಇತ್ಯಾದಿ ಕೃತಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ.
ರಾಜಕೀಯ ಧುರೀಣ ಎಲ್.ಕೆ. ಅದ್ವಾನಿ ಅವರೇ ಮಾತನಾಡುತ್ತಿರುವಷ್ಟು ಆಪ್ತವಾಗಿದೆ ಲೇಖಕ -ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರ ಬರಹ. ಅದ್ವಾನಿ ಅವರು ಜನಮಾನಸದಲ್ಲಿಯ ಕೆಲವು ಪೂರ್ವಗ್ರಹಗಳನ್ನು ನಿವಾರಿಸುವಲ್ಲಿ ಈ ಬರಹ ಸಹಕಾರಿಯಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವದ ಎತ್ತರವನ್ನೂ ದರ್ಶಿಸುತ್ತದೆ. ದೇಶ ಮೊದಲು, ಪಕ್ಷ ನಂತರ, ಆಮೇಲೆ ವೈಯಕ್ತಿಕತೆ ಎನ್ನುವ ಮೂಲಮಂತ್ರದ ಅಗತ್ಯ ಹಾಗೂ ಇಂದಿನ ಅನಿವಾರ್ಯತೆಯನ್ನು ಮನದಟ್ಟಾಗಿಸುತ್ತದೆ ಈ ಲೇಖನ. ಪ್ರಕಟಣೆಗೆ ಧನ್ಯವಾದಗಳು.