ಮರು ಚುನಾವಣೆ ನಡೆದ ಎಲ್ಲಾ ಐದು ಕ್ಷೇತ್ರಗಳಲ್ಲಿ ಕೇಸರಿ ಕಮಾಲ್
ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯತಿ ಮರು ಚುನಾವಣೆಯಲ್ಲಿ ಉಸ್ತುವಾರಿ ಸಚಿವ ಡಾ. ಸುಧಾಕರ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಐದು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಐದು ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಇದರೊಂದಿಗೆ ಸಚಿವ ಸುಧಾಕರ್ ಅವರ ಜಿಲ್ಲೆಯಲ್ಲಿನ ರಾಜಕೀಯ ನಾಗಾಲೋಟ ಮುಂದುವರಿದಿದೆ.
ಮರು ಚುನಾವಣೆ ನಡೆದ ಮಂಚೇನಹಳ್ಳಿ ತಾಲೂಕಿನ ವರವಣಿ ಹಾಗೂ ರಾಯನಕಲು, ಚಿಕ್ಕಬಳ್ಳಾಪುರ ತಾಲೂಕು ಕಾರಿಗಾನಪಾಳ್ಯ, ಕಾಮಗಾನಹಳ್ಳಿ ಮತ್ತು ನಾಯನಹಳ್ಳಿ ಪಂಚಾಯತಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಐವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಅಭಿವೃದ್ಧಿಗೆ ಸಂದ ಜಯ
ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಡಾ.ಕೆ. ಸುಧಾಕರ್ ಅವರು,’ಇದು ಜಿಲ್ಲೆಯ ಜನತೆ ಅಭಿವೃದ್ಧಿ ಪರ ಇದ್ದಾರೆ ಎಂಬುದನ್ನು ಸಾಬೀತುಪಡಿಸಿದೆ. ಹಾಗೆಯೇ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಕಡೆಗಿನ ನಮ್ಮ ನಡೆಗೆ ಮತ್ತಷ್ಟು ಬಲ ನೀಡಿದೆ. ಪ್ರತಿಪಕ್ಷಗಳ ಕೆಲ ನಾಯಕರ ಅಪಪ್ರಚಾರಗಳಿಗೆ ಕಿವಿಗೊಡದೆ ಮತದಾರರು ಗಟ್ಟಿಯಾಗಿ ತಮ್ಮಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.