ಕನ್ನಡಪರ ಸಂಘಟನೆಗಳ ಜತೆ ಸಿಎಂ ಚರ್ಚೆ ಯಶಸ್ವಿ
ಬೆಂಗಳೂರು: ಡಿಸೆಂಬರ್ 31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳನ್ನು ಅವರೊಂದಿಗೆ ಚರ್ಚಿಸಲಾಗಿದ್ದು, ಕನ್ನಡಪರ ಸಂಘಟನೆಗಳು ಬಂದ್ ಕರೆಯನ್ನು ಹಿಂದಕ್ಕೆ ಪಡೆದಿರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.
ಇಂದು ಅವರು, ಗೃಹ ಕಛೇರಿ ಕೃಷ್ಣಾದಲ್ಲಿ ಡಿಸೆಂಬರ್ 31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳ ಮುಖಂಡರರಾದ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ, ಸಾ.ರಾ.ಗೋವಿಂದು, ಕೆ.ಆರ್. ಕುಮಾರ್. ಶಿವರಾಮೇಗೌಡ್ರು ಅವರುಗಳ ನೇತೃತ್ವದ ಕನ್ನಡಪರ ಸಂಘಟನೆಗಳ ನಿಯೋಗದೊಂದಿಗೆ ಸಭೆ ನಡೆಸಿ, ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಿದ್ದರು.
ಕನ್ನಡದ ರಕ್ಷಣೆ, ಗಡಿ ಭಾಗವನ್ನು ಉಳಿಸಿಕೊಳ್ಳುವುದರಲ್ಲಿ ಕನ್ನಡಿಗರಾದ ನಾವು-ನೀವೆಲ್ಲರು ಒಂದಾಗಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.
ಸರ್ಕಾರದ ಮನವಿಯನ್ನು ಮನ್ನಿಸಿ, ಗೌರವ ಕೊಟ್ಟು ಕರ್ನಾಟಕ ಬಂದ್ ನ್ನು ಕನ್ನಡಪರ ಸಂಘಟನೆಗಳು ಹಿಂದಕ್ಕೆ ಪಡೆದಿರುವುದಾಗಿ ತಿಳಿಸಿದರು ಹಾಗೂ ಇದಕ್ಕಾಗಿ ಅವರುಗಳನ್ನು ಅಭಿನಂದಿಸುತ್ತೇನೆ ಎಂದರು. ನಾಳೆ ಕರ್ನಾಟಕ ಬಂದ್ ಇರುವುದಿಲ್ಲ ಹಾಗೂ ವ್ಯಾಪಾರ-ವಹಿವಾಟು ಮಾಡಲು ಯಾವುದೇ ತೊಂದರೆಗಳು ಇರುವುದಿಲ್ಲ ಎಂಬ ಭರವಸೆಯನ್ನು ಸಹ ನೀಡಿದರು.
ಎಂಇಎಸ್ ನಿಷೇಧಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಎಂಇಎಸ್ ನಿಷೇಧ ಬಗ್ಗೆ ಕಾನೂನಾತ್ಮಕ ವಿಚಾರಣೆ ಮಾಡುತ್ತಿದ್ದೇನೆ ಎನ್ನುವ ಬಗ್ಗೆ ನಿಯೋಗದವರಿಗೆ ಮನದಟ್ಟು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.