3 ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ಆರೋಪ
ಚಿಕ್ಕಬಳ್ಳಾಪುರ: ಕಳೆದ ಕೆಲ ದಿನಗಳಿಂದ ಜಿಲ್ಲೆಯ ಸರಕಾರಿ ಅಧಿಕಾರಿಗಳ ಚಳಿ ಬಿಡಿಸುತ್ತಿರುವ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಂದು ಮತ್ತೊಮ್ಮೆ ಸದ್ದು ಮಾಡಿದೆ.
ಕೋಟ್ಯಂತರ ರೂಪಾಯಿ ತಿಂದು ತೇಗಿದ್ದವರ ಬೇಟೆಯಾಡುತ್ತಿರುವ ಎಸಿಬಿ ಅಧಿಕಾರಿಗಳು; ಚಿಕ್ಕಬಳ್ಳಾಪುರ, ಚಿಂತಾಮಣಿಯ ಎನ್ ಆರ್ ಬಡಾವಣೆಯಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆ, ಚಿಂತಾಮಣಿ ನಗರದ ಹಿಂದುಳಿದ ವರ್ಗಗಳ ಇಲಾಖೆ ಮೇಲೆ ದಾಳಿ ನಡೆದಿದ್ದು, 3 ಕೋಟಿ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿರುವ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಗೊತ್ತಾಗಿದೆ.
ಚಿಂತಾಮಣಿಯ ಆರ್‌ಟಿಐ ಕಾರ್ಯಕರ್ತ ಮಲ್ಲಿಕ್ ಪಾಷಾ ನೀಡಿದ ದೂರಿನ ಮೇಲೆ ಈ ದಾಳಿ ನಡೆದಿದೆ ಎಂದು ಎನ್ನಲಾಗಿದ್ದು, ಟೆಂಡರ್ ಕರೆಯದೇ ಮೇಲ್ವಿಚಾರಕರ ಬೇಡಿಯ ಅನುಮತಿಯನ್ನೂ ಪಡೆಯದೇ 98-99 ಸಾವಿರದಂತೆ ವಸ್ತುಗಳ ಖರೀದಿ ಹೆಸರಲ್ಲಿ ಬಿಲ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಎರಡ್ಮೂರು ದಿನಗಳ ಕಾಲ ಒಂದೇ ವಸ್ತುಗಳನ್ನ ಪದೇ ಪದೇ ಖರೀದಿಸಿದಂತೆ ಹಣ ಡ್ರಾ ಮಾಡಿರುವ ಆರೋಪವಿದ್ದು, ನಕಲಿ ಟಿನ್ ನಂಬರ್ ಬಳಸಿ ಬಿಲ್ ಪಾವತಿ ಮಾಡಿಕೊಂಡ ಆರೋಪವೂ ಕೇಳಿಬಂದಿದೆ.
ವಿದ್ಯಾರ್ಥಿ ನಿಲಯಗಳಿಗೆ ವಸ್ತುಗಳ ಸರಬರಾಜು ಮಾಡದೆಯೇ ಬಿಲ್ ಮಾಡಿಕೊಂಡಿರುವ ಬಗ್ಗೆ ಭಾರೀ ಆರೋಪಗಳಿದ್ದು, ಮೂರೇ ತಿಂಗಳಲ್ಲಿ ಮೂರು ಕೋಟಿ ರೂಪಾಯಿಗಳನ್ನು ಅಧಿಕಾರಿಗಳು ತಿಂದು ತೇವಗಿದ್ದಾರೆಂದು ಹೇಳಲಾಗಿದೆ.
ಮಲ್ಲಿಕ್ ಪಾಷಾ ಅವರು ಈ ಮೊದಲೇ ಇಲಾಖೆಯಲ್ಲಿ ನಡೆದಿದ್ದ ಅವ್ಯವಹಾರದ ಬಗ್ಗೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ದೂರು ನೀಡಿದ್ದರು. ಆದರೆ, ಆ ಅಧಿಕಾರಿಗಳು ದೂರಿಗೆ ಸ್ಪಂದಿಸದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದ ಅನುಸಾರ ಎಸಿಬಿ ಈ ದಾಳಿ ನಡೆಸಿದೆ ಎಂದು ಮಾಹಿತಿ ಸಿಕ್ಕಿದೆ.
ಚಿಕ್ಕಬಳ್ಳಾಪುರದ ಎಸಿಬಿ ಡಿವೈಎಸ್ ಪಿ ಪ್ರವೀಣ್ ಹಾಗೂ ಇನಸ್ಪೆಕ್ಟರ್ ಹರೀಷ್ ನೇತೃತ್ವದಲ್ಲಿ ಎಸಿಬಿ ದಾಳಿ ನಡೆಸಿದ್ದು, ಅನೇಕ ದಾಖಲೆಗಳನ್ನು ಜಾಲಾಡಿದೆ.