ರಾಮನಗರದಲ್ಲಿ ರಂಪಾಯಣ
ರಾಮನಗರ: ರಾಮನಗರದಲ್ಲಿ ನೂತನವಾಗಿ ನಿರ್ಮಿಸಿರುವ ಕೆಂಪೇಗೌಡ ಹಾಗೂ ಡಾ.ಬಿ.ಅರ್ ಅಂಬೇಡ್ಕರ್ ಪ್ರತಿಮೆಗಳ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದಲಿತ ಮುಖಂಡರು ಕಪ್ಪುಪಟ್ಟಿ ಪ್ರದರ್ಶಿಸಿ ತೀವ್ರ ಪ್ರತಿಭಟನೆ ನಡೆಸಿದರು.
ರಾಮನಗರದ ಜಿಲ್ಲಾಡಳಿತ ಭವನದ ಎದುರು ನಿರ್ಮಿಸಿರುವ ಡಾ. ಅಂಬೇಡ್ಕರ್ ಪ್ರತಿಮೆ ಅನಾವರಣದಲ್ಲಿ ದಲಿತ ಮುಖಂಡರನ್ನು ಕಡೆಗಣಿಸಲಾಗಿದೆ. ನಮ್ಮನ್ನು ಕಾರ್ಯ
ಕ್ರಮಕ್ಕೆ ಆಹ್ವಾನಿಸಿಲ್ಲ. ಕಾರ್ಯಕ್ರಮಕ್ಕೆ ಮುನ್ನೂರು ಜನರಿಗಷ್ಟೆ ಸೀಮಿತವಾಗಿದೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ ಬಿಜೆಪಿ ಮುಖಂಡರು, ನಾವು ಯಾರನ್ನೂ ಕಡೆಗಣಿಸಿಲ್ಲ. ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ ಎಂದು ಹೇಳಿದ್ದಾರೆ.
ಇದರ ಜತೆಯಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆ ಕ್ರೆಡಿಟ್‌ಗೂ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕಿತ್ತಾಡಿಕೊಂಡಿವು! ಒಂದೆಡೆ ಸಿಎಂ, ಸಚಿವ ಡಾ.ಅಶ್ವತ್ಥನಾರಾಯಣ ಅವರು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸುತ್ತಿದ್ದರೆ, ಇತ್ತ ವೇದಿಕೆ ಪಕ್ಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಜೈಕಾರ ಕೂಗುತ್ತಿದ್ದರು. ಅಂಬೇಡ್ಕರ್ ಪ್ರತಿಮೆ ನಿರ್ಮಿಸಿದ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಜೈ ಎನ್ನುತ್ತಿದ್ದರು. ಇದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಮುಜುಗರ ಸೃಷ್ಟಿಸಿತು.
ದಾರ್ಶನಿಕರ ಪ್ರತಿಮೆ ಉದ್ಘಾಟನೆ ಬಳಿಕ ಪುಷ್ಪರ್ಚಾನೆಗೆ ಮೂವರಷ್ಟೆ ಲಿಪ್ಟ್ ಮೂಲಕ ಮೇಲಕ್ಕೆ ಹೋಗಬೇಕಿತ್ತು. ಹೀಗಾಗಿ ಅಂಬೇಡ್ಕರ್ ಪ್ರತಿಮೆಗೆ ಮೊದಲು ಮುಖ್ಯ ಬೊಮ್ಮಾಯಿ, ಡಿಸಿಎಂ ಅಶ್ವತ್ಥ್ ನಾರಾಯಣ್ ಲಿಫ್ಟ್ ಮೂಲಕ ಮೇಲೆ ಹೋಗುತ್ತಿದ್ದರು. ಇದೇ ವೇಳೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಕಂಡು, ಅವರನ್ನು ಸಹ ಸೇರಿಸಿಕೊಂಡರು. ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲು ಅಶ್ವತ್ಥನಾರಾಯಣ ಬದಲು ಡಿ.ಕೆ.ಸುರೇಶ್ ಸಿಎಂರೊಟ್ಟಿಗೆ ಭಾಗಿಯಾದರು. ಹೀಗಾಗಿ ಸಿಎಂ ಕಾರ್ಯಕ್ರಮ ಜೆಡಿಎಸ್, ಕಾಂಗ್ರೆಸ್ ಪಕ್ಷಗಳಿಗೂ ಆದ್ಯತೆ ನೀಡಿದಂತಾಗಿತ್ತು. ಕಲಾ ತಂಡಗಳು, ಪೂರ್ಣಕುಂಭ ಸ್ವಾಗತದ ಮೂಲಕ ಸಿಎಂ ಅವರನ್ನು ವೇದಿಕೆಗೆ ಕರೆತರಲಾಯಿತು.
ಈ ವೇಳೆ ಸಚಿವರಾದ ಬೈರತಿ ಬಸವರಾಜು, ಡಾ.ಕೆ.ಸುಧಾಕರ್, ಶಾಸಕ ಎ.ಮಂಜುನಾಥ್, ಎಂಎಲ್ಸಿಗಳಾದ ಪುಟ್ಟಣ್ಣ, ಸಿ.ಪಿ.ಯೋಗೇಶ್ವರ್, ಎಸ್.ರವಿ , ಸಿ.ಎಂ.ಲಿಂಗಪ್ಪ, ಅ.ದೇವೇಗೌಡ, ಕೆಆರ್ ಐಡಿ ಎಲ್ ಅಧ್ಯಕ್ಷ ರುದ್ರೇಶ್ ಸೇರಿದಂತೆ ಇತರರಿದ್ದರು.
ಸಿಎಂಗೆ ಕಪ್ಪು ಪಟ್ಟಿ ಪ್ರದರ್ಶನ
ಮುಖ್ಯಮಂತ್ರಿ ಬೊಮ್ಮಾಯಿ ವೇದಿಕೆಗೆ ಬರುತ್ತಿದ್ದಂತೆ ದಲಿತ ಮುಖಂಡರು ಕಪ್ಪು ಪಟ್ಟಿ ಧರಿಸಿ, ಡಿಕೆ -ಡಿಕೆ ಎಂದು ಘೋಷಣೆ ಕೂಗಿದರು. ಜಿಲ್ಲಾಡಳಿತ ಹಾಗೂ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಇನ್ನೊಂದೆಡೆ ಇದ್ಯಾವುದಕ್ಕೂ ಸೊಪ್ಪು ಹಾಕದೇ ವೇದಿಕೆ ಕಾರ್ಯಕ್ರಮ ನಡೆಯುತ್ತಲೇ ಇತ್ತು. ನಾಡಗೀತೆ ಶುರುವಾದರೂ, ಪ್ರತಿಭಟನೆಯ ಘೋಷಣೆ ಕಡಿಮೆಯಾಗಿರಲಿಲ್ಲ. ಬಳಿಕ ತಣ್ಣಗಾದರೂ, ನಾಡ ಗೀತೆ ಬಳಿಕ ಮತ್ತೆ ಪ್ರತಿಭಟನೆ ಕೂಗು ಹೆಚ್ಚಾಯಿತು. ಆದರೆ ಇದರ ನಡುವೆಯೇ ಮುಖ್ಯಮಂತ್ರಿ, ಸಚಿವರು ಸ್ನ್ಯಾಕ್ಸ್ ತಿನ್ನುವುದರಲ್ಲಿ ಬಿಝಿಯಾಗಿದ್ದರು. ಇದು ಪ್ರತಿಭಟನಾಕಾರರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು.
ಪ್ರತಿಭಟನೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು. ಹೀಗಾಗಿ ಮಹಿಳಾ ಪೊಲೀಸರು ಬರುವವರೆಗೂ ಪೊಲೀಸರು ಸಹ ಮೂಕರಾಗಿ ನಿಂತಿದ್ದರು. ವೇದಿಕೆಯಲ್ಲೇ ಸಚಿವ ಅಶ್ವತ್ಥನಾರಾಯಣ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಬಳಿಕ ಸಚಿವರು, ಸಿಎಂಗೆ ಈ ಬಗ್ಗೆ ರಿಪೋರ್ಟ್ ಕೊಡುತ್ತಿದ್ದರು. ವೇದಿಕೆ ಎದುರು ಗಲಾಟೆ, ವೇದಿಕೆ ಮೇಲೆ ಕೋಟಿಗಟ್ಟಲೆ ಕಾಮಗಾರಿಗಳಿಗೆ ಚಾಲನೆ ನೀಡಿಯು ಆಯ್ತು. ಡಿಕೆ ಎಂಬ ಘೋಷಣೆ ನಡುವೆ ಬಿಜೆಪಿ ಸರಕಾರ ಶಕ್ತಿ ಪ್ರದರ್ಶನ ನಡೆಸಲು ಮುಂದಾಗಿತ್ತು. ಇದೇ ವೇಳೆ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಕಾಂಗ್ರೆಸ್‌ನ ಎಂಎಲ್ಸಿ ರವಿ ಮಧ್ಯ ಪ್ರವೇಶಿಸಿ, ಸಾಕು ಬಿಡ್ರಪ್ಪ ಎಂದು ದಲಿತ ಮುಖಂಡರಿಗೆ ಮನವಿ ಮಾಡಿದರು.
ಇದಾದ ಬಳಿಕ ಎಸ್.ರವಿ ಅವರೇ ಒಂದಿಷ್ಟು ದಲಿತ ಮುಖಂಡರನ್ನು ವೇದಿಕೆಗೆ ಏರಿಸಿದರು. ಹೀಗಿದ್ದರೂ, ಪ್ರತಿಭಟನೆ ನಿಲ್ಲದಿದ್ದ ವೇಳೆ ಡಿಕೆ ಸುರೇಶ್ ವೇದಿಕೆ ಮೇಲೆಯೇ ಕೈಮುಗಿದು ಸಾಕು ನಡಿರಿ. ನಿಮ್ಮ ನೋವನ್ನು ಸಿಎಂಗೆ ಹೇಳುತ್ತೆನೆ. ನಡೀರಿ ನಡೀರಿ ಎಂದರು. ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಮುಖ್ಯಮಂತ್ರಿ ಕಾರ್ಯಕ್ರಮ. ಕೆಳಗಡೆ ಇಳಿರಿ. ಸಿಎಂ ಮೊದಲ ಬಾರಿಗೆ ಬಂದಿದ್ದಾರೆ. ವೇದಿಕೆಗೆ ಅಗೌರವ ತರಬೇಡಿ ಎಂದರು. ಸುರೇಶ್ ಮಧ್ಯ ಪ್ರವೇಶಿಸಿದ ಬಳಿಕ ಕಾರ್ಯಕರ್ತರು ಹಾಗು ಪ್ರತಿಭಟನಾಕಾರರು ತಣ್ಣಾಗಾದರು.
ಸ್ವಾಗತ ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ್ ಅವರ ಹೆಸರು ಬರುತ್ತಿದ್ದಂತೆ ಡಿಕೆ ಡಿಕೆ ಎಂಬ ಕೂಗು ವೇದಿಕೆ ಎದುರೇ ಜೋರಾಗಿತ್ತು. ಸಿ.ಪಿ.ಯೋಗೇಶ್ವರ್ ಹೆಸರಿಗೂ ಇದೇ ಮಾದರಿಯಲ್ಲಿ ಸಿಪಿವೈ ಎಂದು ಕೂಗಿದ್ದನ್ನು ಬಿಟ್ಟರೆ, ಇನ್ನುಳಿದವರಿಗೆ ಸದ್ದೆ ಬರಲಿಲ್ಲ.