ವಿಶ್ವಗುರು ಆಗಬೇಕು ಎಂದರೆ ಅತ್ಯಂತ ಕನಿಷ್ಠ ಸಂಬಳಕ್ಕೆ ಉಪನ್ಯಾಸಕರನ್ನು ದುಡಿಸಿಕೊಳ್ಳುವುದೇ..
ಬೆಂಗಳೂರು: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಮುಂದಾಗಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು,ಕಳೆದ ಡಿಸೆಂಬರ್ 10ರಿಂದ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ.
ರಾಜ್ಯದಲ್ಲಿ ಕೆಲಸ ಮಾಡುತ್ತಿರುವ 14,500 ಅತಿಥಿ ಉಪನ್ಯಾಸಕರ ಬಗ್ಗೆ ರಾಜ್ಯ ಸರಕಾರ ಅಸಡ್ಡೆ ತೋರುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಮಾಸಿಕ 11000 ರಿಂದ 13000 ರೂ. ಗೌರವ ಧನ ನೀಡಲಾಗುತ್ತಿದೆ. ಇದು ಸರಕಾರವೇ ನಿಗದಿ ಮಾಡಿರುವ ಮೂಲ ವೇತನಕ್ಕಿಂತ ಕಡಿಮೆ ಎಂದು ಟೀಕಿಸಿದ್ದಾರೆ.
ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುತ್ತಿದೆ.ಭಾರತ ವಿಶ್ವಗುರು ಆಗಬೇಕು ಎನ್ನುತ್ತಾರೆ ಉನ್ನತ ಶಿಕ್ಷಣ ಸಚಿವರು. ಸ್ವತಃ ಪ್ರಧಾನಿಯವರು ಇದೇ ಮಾತು ಹೇಳುತ್ತಿದ್ದಾರೆ. ವಿಶ್ವಗುರು ಆಗಬೇಕು ಎಂದರೆ ಅತ್ಯಂತ ಕನಿಷ್ಠ ಸಂಬಳಕ್ಕೆ ಉಪನ್ಯಾಸಕರನ್ನು ದುಡಿಸಿಕೊಳ್ಳುವುದೇ ಎಂದು ಎಚ್ ಡಿ ಕೆ ಪ್ರಶ್ನಿಸಿದ್ದಾರೆ.