ಜಂಟಿ ಪತ್ರಿಕಾಗೋಷ್ಠಿಯಲ್ಲಿ ಡಿಕೆಶಿ-ಸಿದ್ದರಾಮಯ್ಯ; ಮಲ್ಲಿಕಾರ್ಜುನ ಖರ್ಗೆ ಅವರಿಂದ ಉದ್ಘಾಟನೆ
ಬೆಂಗಳೂರು: ನೀರಿಗಾಗಿ ನಡಿಗೆ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ರಾಜ್ಯ ಸರ್ಕಾರ ಏನೇಲ್ಲಾ ಷಡ್ಯಂತ್ರ ನಡೆಸಿದರೂ ಅದು ಫಲಿಸುವುದಿಲ್ಲ. ನಾಳೆ ಬೆಳಗ್ಗೆ 8.30ರ ಸಮಯಕ್ಕೆ ಪಾದಯಾತ್ರೆ ಆರಂಭವಾಗಲಿದೆ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟ ಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕನಕಪುರ ನಿವಾಸದಲ್ಲಿ ಕಾಂಗ್ರೆಸ್ ಶಾಸಕಾಂಗ ಹಾಗೂ ಹಿರಿಯ ನಾಯಕರ ಸಭೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಇವತ್ತು ಎರಡು ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟವಾಗಿದೆ. ಜಾಹಿರಾತು ಕೊಟ್ಟವರು ಯಾರು ಎಂಬ ಹೆಸರಿಲ್ಲ. ಕಾಂಗ್ರಸ್ ಪಕ್ಷ ರಾಜಕೀಯಕ್ಕಾಗಿ ಪಾದಯಾತ್ರೆ ಆಯೋಜನೆ ಮಾಡಿಲ್ಲ. ಮೂರು ತಿಂಗಳ ಹಿಂದೆಯೇ ಹಿರಿಯ ನಾಯಕರ ಜೊತೆ ಚರ್ಚಿಸಿ ನಿರ್ಧಾರ ಮಾಡಲಾಗಿತ್ತು ಎಂದು ಹೇಳಿದರು.
ಯೋಜನೆ ಆರಂಭಿಸಲು ರಾಜ್ಯ ಸರ್ಕಾರ ವಿಳಂಬ ದ್ರೋಹ ಮಾಡುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾಗಿದೆ. ಆದರೂ ಯೋಜನೆ ಜಾರಿ ಮಾಡಿಲ್ಲ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಕೇಂದ್ರ ಅರಣ್ಯ ಇಲಾಖೆ ಅನುಮತಿ ಮಾತ್ರ ಬಾಕಿ ಇದೆ. ಅದನ್ನು ಒಂದು ವಾರದಲ್ಲಿ ಪಡೆದುಕೊಳ್ಳಬಹುದು, ಆದರೆ ರಾಜ್ಯ ಸರ್ಕಾರ ಯಾವ ಪ್ರಯತ್ನವನ್ನು ಮಾಡಿಲ್ಲ ಎಂದು ಆರೋಪಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಯೋಜನೆ ರೂಪಗೊಂಡಿತ್ತು. ಯಾವ ನ್ಯಾಯಾಲಯದಲ್ಲೂ ಯೋಜನೆಗೆ ತಡೆಯಾಜ್ಞೆ ಇಲ್ಲ. ಆದರೂ ಯೋಜನೆ ಶುರುವಾಗಿಲ್ಲ ಎಂದು ಹೇಳಿದರು.
ಮಳೆ ನೀರು ಸಂಗ್ರಹಿಸುವ ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಬೆಂಗಳೂರಿನ ಶೇ.30ರಷ್ಟು ಪ್ರದೇಶಕ್ಕೆ ನೀರು ಪೂರೈಕೆಯಾಗಲಿದೆ. ಮುಂದಿನ ಐವತ್ತು ವರ್ಷ ನೀರಿನ ಸಮಸ್ಯೆವಿರುವುದಿಲ್ಲ, ಎರಡು ಕೋಟಿ ಜನರಿಗೆ ನೀರು ಪೂರೈಸುವ ಈ ಯೋಜನೆ ಅತ್ಯಂತ ಮಹತ್ವದ್ದು ಎಂದರು.
ರಾಜ್ಯ ಸರ್ಕಾರ ಪಾದಯಾತ್ರೆಗೆ ಅಡ್ಡಿ ಪಡಿಸುವ ಸಲುವಾಗಿ ರಾಮನಗರ ಜಿಲ್ಲೆಯಲ್ಲಿ ಮಾತ್ರ ನಿಷೇಧಾಜ್ಞೆ ಜಾರಿಗೊಳಿಸಿದೆ. ವಿಳಂಬ ಮಾಡಿರುವ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪಾದಯಾತ್ರೆಗೆ ಅಡ್ಡಿ ಪಡಿಸುತ್ತಿದ್ದೆ. ನಾವು ಕಾನೂನನ್ನು ಗೌರವಿಸಿ ಪಾದಯಾತ್ರೆ ಮಾಡುತ್ತೇವೆ. ಇದರ ಹಿಂದೆ ಜನಪರ ನಿಲುವು ಇದೆಯೇ ಹೊರತು ರಾಜಕಾರಣ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಬಿಜೆಪಿ ಷಡ್ಯಂತ್ರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ. ಈವರೆಗೆ ನಮಗಿರುವ ಮಾಹಿತಿ ಪ್ರಕಾರ ಪೊಲೀಸರು ನಿಯಮ ಪಾಲನೆಯ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ. ಉಲ್ಲಂಘನೆಯಾದರೆ ಕೇಸು ದಾಖಲಿಸುತ್ತಾರೆ. ಅದನ್ನು ಹೊರತು ಪಡಿಸಿ ಪಾದಯಾತ್ರೆಗೆ ಅಡ್ಡಿ ಪಡಿಸಲು ಅವಕಾಶ ಇಲ್ಲ ಎಂದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಇಂದಿನ ಸಭೆಯಲ್ಲಿವ120 ಜನ ನಾಯಕರು ಸಾಧಕ ಭಾದಕಗಳ ಚರ್ಚೆ ಮಾಡಿದ್ದೇವೆ. ಹೋರಾಟ ನಿಲ್ಲಿಸಲು ಸರ್ಕಾರ ತೆಗೆದುಕೊಂಡ ನಿರ್ಧಾರಗಳನ್ನು ಖಂಡಿಸಲಾಗಿದೆ.ನಾಳೆಯಿಂದ ಪಾದಯಾತ್ರೆ ನ ನ ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದರು.
ರಾಮನಗರದಲ್ಲಿ ಒಂದು ಐಸಿಯು ರೋಗಿಯಿಲ್ಲ. ಪಾದಯಾತ್ರೆ ನಿಲ್ಲಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೋವಿಡ್ ಸಂಖ್ಯೆ ಹೆಚ್ಚು ತೋರಿಸಿದ್ದಾರೆ. ಪಾದಯಾತ್ರೆ ನಿಲ್ಲಿಸಲು ಸರ್ಕಾರ ಪ್ರಯತ್ನ ನಡೆಸಿದೆ. ಸರ್ಕಾರ ಸುಳ್ಳು ಪ್ರಚಾರ ನಡೆಸಿದೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಲಾಕ್ ಡೌನ್ , ಕರ್ಫ್ಯೂ ಜಾರಿ ಮಾಡಿಸಿದ್ದಾರೆ.
ಮುಂಜಾಗೃತೆ, ಅಂತರ ಕಾಪಾಡುವುದು, ಲಕ್ಷಕ್ಕೂಹೆಚ್ಚು ಮಾಸ್ಕ್ ಪೂರೈಕೆ ಸೇರಿ ಹಲವು ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ. ನೂರು ಜನ ವೈದ್ಯರು, ಒಂದುವರೆ ಸಾವಿರ ಕಾರ್ಯಕರ್ತರು ಕೆಲಸ ಸ್ವಯಂ ಪ್ರೇರಿತವಾಗಿ ಕೆಲಸ ಮಾಡುತ್ತಿದ್ದಾರೆ.
ನಾಳೆ ಬೆಳಗ್ಗೆ 8.30 ರಿಂದ ನೀರಿಗಾಗಿ ನಡಿಗೆ ಶುರುವಾಗಲಿದೆ. ದಾರಿ ಮಧ್ಯೆ ನಿಮ್ಮನ್ನು ತಡೆಯುವ ಪ್ರಯತ್ನ ನಡೆಯುತ್ತೆ. ಕೋವಿಡ್ ನಿಯಮ ಪಾಲನೆ ಮಾಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ನಾಳೆ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಪಾದಯಾತ್ರೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.