ಸರಣಿ ಕಾರ್ಯಕ್ರಮಗಳಲ್ಲಿ ಸಿಎಂ ಜತೆ ಭಾಗವಹಿಸಿದ್ದರಿಗೆ ಆತಂಕ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್ ಪಾಸಿಟೀವ್ ಆಗಿದೆ.
ಇದರೊಂದಿಗೆ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಅಬ್ಬರಿಸುತ್ತಿರುವುದಕ್ಕೆ ಸ್ವತಃ ಸಿಎಂ ಅವರೇ ಸಾಕ್ಷಿಯಾಗಿದ್ದು, ಅವರಿಗೂ ಮೊದಲು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಸೋಂಕು ತಗುಲಿತ್ತು.
ಇಂದು (ಸೋಮವಾರ) ರಾಜ್ಯದಲ್ಲಿ 60 ವರ್ಷ ದಾಟಿದ ಅನಾರೋಗ್ಯ ಪೀಡಿತರು, ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್ (ಬೂಸ್ಟರ್ ಡೋಸ್) ಲಸಿಕಾ ಅಭಿಯಾನಕ್ಕೆ ನೀಡಿದ ಬೆನ್ನಲ್ಲೇ ಬೊಮ್ಮಾಯಿ ಅವರಿಗೆ ಪಾಸಿಟಿವ್ ಆಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಅವರು, “ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದೆ, ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ಮನವಿ ಮಾಡಿದ್ದಾರೆ.
ಸಿಎಂ ಇಂದು ಬೆಳಗ್ಗೆ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದು, ಸಂಜೆ ಪಾಸಿಟಿವ್ ಎಂದು ಕೊವಿಡ್ ರಿಪೋರ್ಟ್ ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಿಎಂ ಬೊಮ್ಮಾಯಿ ನಡೆಸಬೇಕಿದ್ದ ಬೆಂಗಳೂರು ಪ್ರದಕ್ಷಿಣೆ ಕಾರ್ಯಕ್ರಮ ರದ್ದಾಗಿದೆ. ಸಿಎಂ ಬೊಮ್ಮಾಯಿ ಅವರು ಕೋವಿಡ್ ಬೂಸ್ಟರ್ ಡೋಸ್ ಲಸಿಕೆಗೆ ಚಾಲನೆ ನೀಡಿದ ನಂತರ ಇಂದು ನಿಧನರಾದ ಹಿರಿಯ ಸಾಹಿತಿ ಪ್ರೋ. ಚಂದ್ರಶೇಖರ ಪಾಟೀಲ ಅವರ ಅಂತಿಮ ದರ್ಶನ ಪಡೆದಿದ್ದರು. ಅಲ್ಲದೆ ಆಡಳಿತ ಸುಧಾರಣಾ ಸಭೆಯಲ್ಲೂ ಭಾಗಿಯಾಗಿದ್ದರು.