ಶಿವನ್ ಅಧಿಕಾರಾವಧಿ ಜನವರಿ 14ಕ್ಕೆ ಅಂತ್ಯ
ಬೆಂಗಳೂರು: ದೇಶದ ಸುಪ್ರಸಿದ್ಧ ರಾಕೆಟ್ ವಿಜ್ಞಾನಿ ಎಸ್.ಸೋಮನಾಥ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೂತನ ಮುಖ್ಯಸ್ಥ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಇಸ್ರೋ ಹಾಲಿ ಮುಖ್ಯಸ್ಥ ಕೆ.ಶಿವನ್ ಅವರ ಸ್ಥಾನಕ್ಕೆ ಸೋಮನಾಥ್ ಅವರು ನೇಮಕಗೊಂಡಿದ್ದು, ಶಿವನ್ ಅವರ ಅಧಿಕಾರಾವಧಿ ಇದೇ ಜನವರಿ 14ರಂದು ಕೊನೆಗೊಳ್ಳಲಿದೆ. ಉಳಿದಂತೆ ಸೋಮನಾಥ್ ಅವರು 2018ರಿಂದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕೂ ಮುನ್ನ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ನಿರ್ದೇಶಕರಾಗಿ ಎರಡೂವರೆ ವರ್ಷಗಳ ಅವಧಿ ಸೇವೆ ಸಲ್ಲಿಸಿದ್ದರು.
ಚಂದ್ರಯಾನ-2 ಲ್ಯಾಂಡರ್ ಎಂಜಿನ್‌ಗಳ ಅಭಿವೃದ್ಧಿ, ಜಿಎಸ್ ಎಟಿ-9 ರ ಎಲೆಕ್ಟ್ರಿಕ್ ಪ್ರಪುಲ್ಶನ್, ಥ್ರಸ್ಟ್ ಸೆಮಿ-ಕ್ರಯೋಜೆನಿಕ್ ಎಂಜಿನ್‌ನ ಅಭಿವೃದ್ಧಿ ಮೊದಲಾದ ಯೋಜನೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಕೀರ್ತಿಯನ್ನು ಸೋಮನಾಥ್ ಅವರು ಹೊಂದಿದ್ದಾರೆ.
ಕೇರಳದ ಕೊಲ್ಲಂನ ಟಿಕೆಎಂ ಕಾಲೇಜ್ ಆಫ್ ಎಂಜಿನಿಯರಿಂಗ್ʼನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವೀಧರರಾಗಿದ್ದರು. ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ʼಸಿ) ಹಳೆಯ ವಿದ್ಯಾರ್ಥಿಯಾಗಿರುವ ಸೋಮನಾಥ್ ಅವರು, 1985ರಲ್ಲಿ ಇಸ್ರೋಗೆ ಸೇರಿದರು ಮತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಯೋಜನೆಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಜೂನ್ 2015ರಲ್ಲಿ ಸೋಮನಾಥ್ ಅವರು ತಿರುವನಂತಪುರದ ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC) ನಿರ್ದೇಶಕರಾಗಿ ನೇಮಕಗೊಂಡಿದ್ದರು.