ರಕ್ಷಣಾ ಸಚಿವರಿಗೆ ವರದಿ ಸಲ್ಲಿಸಿದ ತನಿಖಾ ತಂಡ
ನವದೆಹಲಿ: ಡಿಸೆಂಬರ್ 8 ರಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮತ್ತು ಇತರ 12 ಮಿಲಿಟರಿ ಸಿಬ್ಬಂದಿಯ ಜೀವವನ್ನು ಬಲಿತೆಗೆದುಕೊಂಡ Mi-17 V5 ಅಪಘಾತದ ಕಾರಣವನ್ನು ತನಿಖೆ ಮಾಡಲು ರಚಿಸಲಾದ ತ್ರಿ-ಸೇವಾ ತನಿಖಾತಂಡವು ಯಾಂತ್ರಿಕ ವೈಫಲ್ಯವನ್ನು ತಳ್ಳಿಹಾಕಿದೆ ಮತ್ತು ಪೈಲಟ್ ದೋಷವೇ ಅಪಘತಕ್ಕೆ ಕಾರಣ ಎಂದು ತಿಳಿಸಿದ್ದಾರೆ.
ತನಿಖಾದಳವು ತನ್ನ ಪ್ರಾಥಮಿಕ ಸಂಶೋಧನೆಗಳನ್ನು ಕಳೆದ ವಾರ ರಕ್ಷಣಾ ಸಚಿವರಿಗೆ ಸಲ್ಲಿಸಿತ್ತು. ತನಿಖೆಯು ಅಪಘಾತಕ್ಕೆ ಯಾಂತ್ರಿಕ ವೈಫಲ್ಯ, ವಿಧ್ವಂಸಕ ಅಥವಾ ನಿರ್ಲಕ್ಷ್ಯದ ಕಾರಣವನ್ನು ತಳ್ಳಿಹಾಕಿದೆ.
ಭಾರತೀಯ ವಾಯುಪಡೆಯ ಹೇಳಿಕೆಯ ಪ್ರಕಾರ, ಕಣಿವೆಯಲ್ಲಿನ ಹವಾಮಾನ ಪರಿಸ್ಥಿತಿಗಳ ಅನಿರೀಕ್ಷಿತ ಬದಲಾವಣೆಯೇ ದುರದೃಷ್ಟಕರ ಅಪಘಾತಕ್ಕೆ ಕಾರಣವಾಗಿದೆ.ಮೋಡ ಕವಿದ ವಾತಾವರಣಕ್ಕೆ ಕಾಪ್ಟರ್ ಪ್ರವೇಶಿಸುತ್ತಿದ್ದಂತೆ ಕಣಿವೆಯಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆಯಾಗಿತ್ತು, ಇದರಿಂದ ಪೈಲಟ್ ದಿಗ್ಭ್ರಾಂತಗೊಂಡಿದ್ದಾರೆ. ದಾರಿ ಸ್ಪಷ್ಟವಾಗಿ ಗೋಚರಿಸದೇ ಭಯಭೀತರಾದ ಹೆಲಿಕಾಪ್ಟರನ್ನು ಭೂಪ್ರದೇಶಕ್ಕೆ ನುಗ್ಗಿಸಿದಾಗ ಪತನ ಸಂಭವಿಸಿದೆ ಎಂದು ಸೇನಾಧಿಕಾರಿಗಳು ನಡೆಸಿದ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಹೇಳಲಾಗಿದೆ.
ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಟ್ರೈನಿಂಗ್ ಕಮಾಂಡ್ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು.ಭಾರತೀಯ ವಾಯುಪಡೆ (ಐಎಎಫ್) ಡಿಸೆಂಬರ್ 8 ರಂದು ಎಂಐ-17 ಹೆಲಿಕಾಪ್ಟರ್ ಅಪಘಾತದ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿವರವಾದ ತ್ರಿ-ಸೇವಾ ತನಿಖಾ ವರದಿಯನ್ನು ಸಲ್ಲಿಸಿತ್ತು.
ಜನರಲ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್, ಅವರ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಲಖ್ಬಿಂದರ್ ಸಿಂಗ್ ಲಿಡ್ಡರ್, ಸ್ಟಾಫ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮತ್ತು ವಾಯುಪಡೆಯ ಹೆಲಿಕಾಪ್ಟರ್ ಸಿಬ್ಬಂದಿ ಸೇರಿದಂತೆ ಒಂಬತ್ತು ಸಶಸ್ತ್ರ ಪಡೆಗಳ ಸಿಬ್ಬಂದಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.