ಪ್ರಪಂಚದಲ್ಲೇ ಅಗ್ರಸ್ಥಾನದಲ್ಲಿದೆ ಭಾರತ
ಬೆಂಗಳೂರು: ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಖುದ್ದು ಆಸಕ್ತಿಯೊಂದಿಗೆ ಆರಂಭವಾದ ಲಸಿಕಾ ಅಭಿಯಾನದ ಮೂಲಕ ಒಂದು ವರ್ಷದ ಅವಧಿಯಲ್ಲಿ 156 ಕೋಟಿ ಲಸಿಕೆಗಳನ್ನು ಕೊಡಲಾಗಿದ್ದು, ಭಾರತವು ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಲಸಿಕೆಗಳನ್ನು ಕೊಟ್ಟ ರಾಷ್ಟ್ರವೆಂಬ ಹಿರಿಮೆಗೆ ಪಾತ್ರವಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಐಟಿ/ಬಿಟಿ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದರು.
ಲಸಿಕಾ ಅಭಿಯಾನ ಶುರುವಾಗಿ ಒಂದು ವರ್ಷವಾಗಿದ್ದು, ದೇಶದಲ್ಲಿ ಕೊಡಲಾಗಿರುವ 156 ಕೋಟಿ ಲಸಿಕೆಗಳ ಪೈಕಿ 99 ಕೋಟಿ ಲಸಿಕೆಗಳು ಗ್ರಾಮೀಣ ಭಾಗದಲ್ಲಿ ಬಳಕೆಯಾಗಿವೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಬಹುತೇಕ ಲಸಿಕೆ ತೆಗೆದುಕೊಂಡಿದ್ದು, ಸಮಾಜದ ವಿವಿಧ ವಲಯಗಳ ಬೆಂಬಲದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದ ಸಚಿವರು, ಇದಕ್ಕಾಗಿ ಪ್ರಧಾನಿಯವರನ್ನು ಅಭಿನಂದಿಸಿದರು.
ಲಸಿಕಾ ಅಭಿಯಾನ ಯಶಸ್ವಿಯಾಗಿರುವುದರಿಂದ ಸೋಂಕಿನ ಮಧ್ಯೆಯೂ ನಾವು ಹೆಚ್ಚು ಆತಂಕವಿಲ್ಲದೆ ಬದುಕಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.