ಅಮೆರಿಕ ವಿಜ್ಞಾನಿಯ ಭರವಸೆಯ ಮಾತು
ವಾಷಿಂಗ್ಟನ್: ವೈರಸ್ ತೊಲಗಲಿದೆ, ಸದ್ಯದಲ್ಲೇ ಎಲ್ಲವೂ ಮುಗಿಯಲಿದೆ ಎಂದು ವಾಷಿಂಗ್ಟನ್‍ನಲ್ಲಿರುವ ವಿಜ್ಞಾನಿ ಮತ್ತು ವೈರಲಾಜಿಸ್ಟ್ ಡಾ.ಕುತುಬ್ ಮೆಹಬೂಬ್ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ವಿಜ್ಞಾನಿ ಸದ್ಯದಲ್ಲೇ ನಾವು ಮಾಸ್ಕ್ ನಿಂದ ಹೊರಬಂದು ನೆಮ್ಮದಿಯ ಜೀವನ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಮೂರನೆ ಅಲೆ ಭೀತಿ ಮುಂದುವರೆದು ತಲ್ಲಣದ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ಇವರ ಮಾತು ಭರವಸೆ ಮೂಡಿಸಿದೆ.
ಕೋವಿಡ್ ಈ ವರ್ಷದಲ್ಲಿ ಕೊನೆಯಾಗಲಿದೆ. ಈ ವೈರಸ್‍ಗೆ ಲಸಿಕೆಯೇ ಬಲಿಷ್ಠ ಅಸ್ತ್ರ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಪಿಡುಗು ಅಂತ್ಯವಾಗುವ ಕಾಲ ಹತ್ತಿರದಲ್ಲಿದೆ. ಈ ಚೆಸ್ ಆಟದಲ್ಲಿ ಯಾರೂ ವಿನ್ನರ್ ಅಲ್ಲ, ಇದು ಡ್ರಾ ಆಗಲಿದೆ. ವೈರಸ್ ಅಡಗಿಕೊಳ್ಳುತ್ತದೆ. ನಾವು ಮಾಸ್ಕ್ ನಿಂದ ಹೊರಬಂದು ಜಯಿಸುತ್ತೇವೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಮನುಷ್ಯರಲ್ಲಿ ರೋಗ-ನಿರೋಧಕ ಶಕ್ತಿ ವೃದ್ಧಿಯಾಗುತ್ತಿದೆ, ಇದಕ್ಕೆ ಹೊಂದಿಕೊಳ್ಳಲು ವೈರಸ್ ಗೆ ಒತ್ತಡವಾಗುತ್ತಿದೆ. ಆದ್ದರಿಂದ ಇದು ರೂಪಾಂತರವಾಗುತ್ತಿದೆ. ಇದೊಂದು ರೀತಿ ಮನುಷ್ಯ ಮತ್ತು ವೈರಸ್ ನಡುವಿನ ಹೋರಾಟವಾಗಿದೆ ಎಂದು ಹೇಳಿದ್ದಾರೆ.
ಫೇಸ್‍ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಸಾಮಾಜಿಕ ಅಂತರದೊಂದಿಗೆ ಲಸಿಕೆ ಅಸ್ತ್ರ ಬಳಸಬೇಕು. ಹಾಗಾದರೂ ಕೋವಿಡ್ ರೂಪಾಂತರಿ ಬರುವುದಿಲ್ಲ ಎಂದಲ್ಲ, ಮುಂದೆ ಮತ್ತೊಂದು ರೂಪಾಂತರಿ ಬಂದರೂ ಅಚ್ಚರಿ ಇಲ್ಲ. ಆದರೆ, ಇದಕ್ಕೆ ಲಸಿಕೆ ಪ್ರಬಲ ಅಸ್ತ್ರವಾಗಲಿದೆ. ಅದಕ್ಕಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಡಾ.ಮೆಹಬೂಬ್ ಸಲಹೆ ನೀಡಿದ್ದಾರೆ.
ಭಾರತದಲ್ಲಿ ಒಂದೇ ವರ್ಷದಲ್ಲಿ ಶೇ.60ರಷ್ಟು ಲಸಿಕಾಕರಣವಾಗಿರುವುದನ್ನು ಡಾ.ಕುತುಬ್ ಪ್ರಶಂಸಿಸಿದ್ದಾರೆ.