ಬಾಗೇಪಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಡಿ.ಎನ್.ಕೃಷ್ಣಾರೆಡ್ಡಿ ಅವಿರೋಧ ಆಯ್ಕೆ
ಬಾಗೇಪಲ್ಲಿ: ಕಲೆ, ಕ್ರೀಡೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಿರಿಯ ಪತ್ರಕರ್ತ ಡಿ.ಎನ್.ಕೃಷ್ಣಾರೆಡ್ಡಿ ಅವರು ಬಾಗೇಪಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಪಟ್ಟಣದಲ್ಲಿ ಇಂದು ಸತ್ಯಸಾಯಿ ಧರ್ಮಶಾಲಾದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಕೋಡಿ ರಂಗಪ್ಪ ಮಂಡಿಸಿದ ಪ್ರಸ್ತಾವನೆಯನ್ನು ನಿಕಟಪೂರ್ವ ಅಧ್ಯಕ್ಷ ಎ.ಜಿ.ಸುಧಾಕರ್, ಮಾಜಿ ಅಧ್ಯಕ್ಷ ಬಿ.ಆರ್.ಕೃಷ್ಣ, ನಿಕಟಪೂರ್ವ ಗೌರವ ಕಾರ್ಯದರ್ಶಿ ಡಾ.ಚಿನ್ನ ಕೈವಾರಮಯ್ಯ, ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟರಮಣಪ್ಪ ಮತ್ತಿತರರು ಅನುಮೋದಿಸಿದ ನಂತರ ಡಿ.ಎನ್.ಕೃಷ್ಣಾರೆಡ್ಡಿ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಸಾಹಿತ್ಯ ಪರಿಷತ್ತಿನ ಬಾವುಟವನ್ನು ಹಸ್ತಾಂತರಿಸವುದರ ಮೂಲಕ ಅಧಿಕಾರ ಹಸ್ತಾಂತರ ಮಾಡಿ ಶುಭ ಕೋರಲಾಯಿತು.
ಗಡಿ ತಾಲೂಕಿನಲ್ಲಿ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ಎಲ್ಲರ ಸಹಕಾರದಿಂದ ಹೆಚ್ಚು ಹೆಚ್ಚು ಮಾಡಲಾಗುವುದು. ಸಾಹಿತ್ಯಾಸಕ್ತರನ್ನು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಮತ್ತು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ವೋಟು ಹಾಕಲು ಸದಸ್ಯರನ್ನು ಗುರುತಿಸುವಂಥ ಪದ್ದತಿಗೆ ತಿಲಾಂಜಲಿ ಇಟ್ಟು ಕಸಾಪ ಸದಸ್ಯರೆಲ್ಲರೂ ಸಕ್ರಿಯವಾಗಿ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮನವೊಲಿಸುವ ಜತೆಗೆ ಸಾಹಿತ್ಯಾಸಕ್ತರಿಗೆ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುವುದು. ನನ್ನ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
ಡಿ.ಎನ್.ಕೃಷ್ಣಾರೆಡ್ಡಿ, ಬಾಗೇಪಲ್ಲಿ ತಾಲೂಕು ಕಸಾಪ ನೂತನ ಅಧ್ಯಕ್ಷ
ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ ಮಾತನಾಡಿ, “ಹಿಂದುಳಿದ ಪ್ರದೇಶದಲ್ಲಿ ಹೆಚ್ಚಾಗಿ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಸಹಕಾರವನ್ನು ಪಡೆದುಕೊಂಡು ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡಬೇಕಾದ ಅಗತ್ಯವಿದೆ. ಬಾಗೇಪಲ್ಲಿ ಸಾಹಿತ್ಯ ಪರಿಷತ್ತಿನ ಘಟಕ ಅತ್ಯಂತ ಕ್ರಿಯಾಶೀಲವಾಗಿ ಅನ್ಯೋನ್ಯದಿಂದ ಕೆಲಸ ಮಾಡಿಕೊಂಡು ಬರುತ್ತಿದ್ದು, ಮುಂದೆಯೂ ಅದು ಮುಂದುವರಿಯಬೇಕಾಗಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಅನೇಕರಲ್ಲಿ ಸಾಮರ್ಥ್ಯ ಇರುತ್ತದೆ ಅಂತಹವರಿಗೆ ಅವಕಾಶಗಳನ್ನು ಕಲ್ಪಿಸಿದಾಗ ಸಾಮರ್ಥ್ಯ ಹೊರಬರಲು ಸಾಧ್ಯವಾಗುತ್ತದೆ. ಭಾರತಾಂಭೆ ಮತ್ತು ಕನ್ನಡಾಂಭೆಯ ಘನತೆ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲಾ ಕೆಲಸ ಮಾಡಬೇಕಾಗಿದೆ. ಸಾಹಿತ್ಯ ಸಂಘಟನೆ ಎಲ್ಲರಿಗೂ ಆದರ್ಶವಾಗಿರಬೇಕಾಗಿದೆ. ಸಮೂಹ ಪ್ರಜ್ಞೆ ಎಲ್ಲರಲ್ಲಿಯೂ ಮೂಡಬೇಕಾಗಿದೆ ಎಂದರು.
ಸಭೆಯಲ್ಲಿ ಅಮೃತಕುಮಾರ್, ಚಿಕ್ಕಬಳ್ಳಾಪುರ ತಾಲೂಕು ಕಸಾಪ ಅಧ್ಯಕ್ಷ ಸೊಣ್ಣೇಗೌಡ, ಬಿ.ಎಸ್.ಸತೀಶ್, ಎ.ಜಿ.ಸುಧಾಕರ್, ಬಿ.ಆರ್.ಕೃಷ್ಣ, ಆರ್.ಹನುಮಂತರೆಡ್ಡಿ, ಡಾ.ಚಿನ್ನಕೈವಾರಮಯ್ಯ, ಎಸ್.ಮುನಿರಾಮಯ್ಯ, ಕೆ.ಎಂ.ನಾಗರಾಜು, ವೆಂಕಟರಾಯಪ್ಪ, ಪಿ.ವೆಂಕಟರಮಣಪ್ಪ, ಪಿ.ಎಸ್.ರಾಜೇಶ್, ಎನ್.ಶಿವಪ್ಪ, ಮಣಿಕಂಠ, ಎಸ್.ಎಸ.ಶ್ರೀನಿವಾಸ್, ರಾ.ನಾ.ಗೋಪಾಲರೆಡ್ಡಿ, ಬಿ.ಎಸ್.ಸುರೇಶ್, ರಾಮಚಂದ್ರರೆಡ್ಡಿ, ಆರ್.ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.