ಚುನಾವಣೆಗೆ ಮುನ್ನ ಚಾಣಾಕ್ಷ ಹೆಜ್ಜೆ ಇಟ್ಟ ಕಮಲ ಪಾಳೆಯ! ರಿವರ್ಸ್ ಆಪರೇಷನ್ ಕಮಲ
ಚಿಕ್ಕಬಳ್ಳಾಪುರ/ಬೆಂಗಳೂರು: ಅರಣ್ಯಗಳಲ್ಲಿ ಕಾರ್ಖಾನೆಗಳ ವಿಷತ್ಯಾಜ್ಯ ವಿಲೇವಾರಿ, ಅಕ್ರಮ ಕಲ್ಲು ಗಣಿಗಾರಿಕೆ, ಕಲ್ಲು ಗಣಿಗಳಲ್ಲಿ ಶೇಖರಿಸಿದ್ದ ಅಕ್ರಮ ಸ್ಫೋಟಕಗಳಿಗೆ ಆರು ಆಮಾಯಕ ಕಾರ್ಮಿಕರ ಬಲಿ, ಜಲಮೂಲಗಳಿಗೆ ಬೆಂಗಳೂರಿನ ವಿಷಯುಕ್ತ ನೀರಿನ ಸೇರ್ಪಡೆ, ಮಿತಿಮೀರಿದ ಮಾಲಿನ್ಯ, ಸೇಡಿನ ರಾಜಕೀಯ ಹಾಗೂ ರಿಯಲ್ ಎಸ್ಟೇಟ್ ಕುಳಗಳ ಪಾಲಿನ ಅಕ್ಷಯಪಾತ್ರೆಯಾಗಿಬಿಟ್ಟಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿ ತನ್ನ ಹಳೆಯ ವರಸೆಯ ರಾಜಕೀಯಕ್ಕೆ ನಾಂದಿ ಹಾಡಿದೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಮತ್ತೊಬ್ಬ ವಲಸಿಗ ಮಂತ್ರಿ ಹೊಸಕೋಟೆಯ ಎಂಟಿಬಿ ನಾಗರಾಜ್ ಅವರಿಗೆ ವಹಿಸುವ ಮೂಲಕ ಬಿಜೆಪಿ ರಾಜಕೀಯ ಚಾಣಾಕ್ಷತೆಯನ್ನು ಮೆರೆದಿದ್ದು, ಬೆಂಗಳೂರಿನಿಂದ ಬೀಸಿದ ಕಲ್ಲು ಯಾರಾರ ಮೇಲೆ ಹೋಗಿ ಬೀಳುತ್ತದೋ ಎನ್ನುವುದನ್ನು ಕಾದು ನೋಡಬೇಕಿದೆ.
ಒಂದೇ ಸಾಲಿನಲ್ಲಿ ಹೇಳುವುದಾದರೆ; ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಗಳನ್ನು ಹೊಡೆದುರುಳಿಸುವ ʼಚಕ್ರವ್ಯೂಹʼವನ್ನು ಬಿಜೆಪಿ ರೂಪಿಸಿದ್ದು, ಅದಕ್ಕೆ ಜಿಲ್ಲಾ ಉಸ್ತುವಾರಿ ಪ್ರಹಸನದ ಮೂಲಕ ಸ್ಪಷ್ಟ ನಾಂದಿ ಹಾಡಿದೆ.
ಲಾಗಾಯ್ತಿನಿಂದಲೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಖಾತೆ ತೆರೆಯದ ಬಿಜೆಪಿ, ಆಪರೇಷನ್ ಕಮಲದ ಮೂಲಕ ತನ್ನ ತೆಕ್ಕೆಗೆ ಬಂದಿದ್ದ ಡಾ.ಕೆ.ಸುಧಾಕರ್ ಅವರನ್ನು ಕಳೆದ ಉಪ ಚುನಾವಣೆಯಲ್ಲಿ ಗೆಲ್ಲಿಸಿಕೊಂಡಿತ್ತು. ಗೆಲ್ಲಿಸಿಕೊಂಡಿತ್ತು ಎನ್ನುವುದಕ್ಕಿಂತ ಸುಧಾಕರ್ ಅವರೇ ಸ್ವಶಕ್ತಿಯಿಂದ ಗೆದ್ದು ಬೆಜೆಪಿಯನ್ನೂ ಗೆಲ್ಲಿಸಿದ್ದರು. ಜತೆಗೆ; ಲೋಕಸಭೆ ಚುನಾವಣೆಯಲ್ಲಿ ಮೋದಿ ಪರ ಬೀಸಿದ ಅಲೆಯ ಪರಿಣಾಮ ಹೊಸಕೋಟೆಯ ಬಿ.ಎನ್.ಬಚ್ಚೇಗೌಡರು ಸಂಸತ್ ಸದಸ್ಯರಾಗಿ ಗೆದ್ದು ಹೋಗಿದ್ದರು. ಈಗ ಇವರಿಬ್ಬರ ನಡುವೆ ಹೊಸಕೋಟೆಯ ಮತ್ತೊಂದು ಹುಲಿ ಎಂಟಿಬಿ ನಾಗರಾಜ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.
ಎಲ್ಲರಿಗೂ ಗೊತ್ತಿರುವಂತೆ ಬಚ್ಚೇಗೌಡರು ಮತ್ತು ಎಂಟಿಬಿ ನಡುವಿನ ಸಂಬಂಧ ಹಾವು-ಮುಂಗುಸಿಯಂಥದ್ದು. ಇವರ ವೈರತ್ವ ಎಷ್ಟರ ಮಟ್ಟಿಗಿದೆ ಎಂದರೆ, ಹೊಸಕೋಟೆಯಲ್ಲಿ ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿದ್ದ ಎಂಟಿಬಿ ಅವರನ್ನು ಬಚ್ಚೇಗೌಡರ ಪುತ್ರ ಶರತ್ ಪಕ್ಷೇತರ ಅಭ್ಯರ್ಥಿಯಾಗಿ ಪರಾಭವಗೊಳಿಸಿದ್ದರು. ಆ ರಾಜಕೀಯ ಜಿದ್ದು ಅವರಿಬ್ಬರ ಅಂತರವನ್ನು ಮತ್ತಷ್ಟು ಹಿಗ್ಗಿಸಿದೆಯಲ್ಲದೆ; ಪುತ್ರ ಕಾಂಗ್ರೆಸ್ ಸೇರಿದ ಕಾರಣಕ್ಕೆ ಬಿಜೆಪಿ ನಾಯಕರು ಬಚ್ಚೇಗೌಡರ ವಿರುದ್ಧ ಬಹಿರಂಗವಾಗಿಯೇ ಮುನಿಸಿಕೊಂಡಿದ್ದಾರೆ. ಈ ಬಗ್ಗೆ ವರಿಷ್ಠರಿಗೆ ಅವರ ವಿರುದ್ಧ ಮಾಹಿತಿ ರವಾನೆಯಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಇದರ ಪ್ರಭಾವ ಖಂಡಿತಾ ಇರಲಿದೆ.
ವಲಸಿಗರಿಗೆ ಚೆಕ್ʼಮೇಟ್
ಅದೇ ರೀತಿ ಆಪರೇಷನ್ ಕಮಲದ ಮೂಲಕ ಬಂದು ಸಚಿವರಾದ ಡಾ.ಕೆ.ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಮೇಲೆ ಈಗ ಬಿಜೆಪಿಗೆ ಅಷ್ಟಕ್ಕಷ್ಟೇ. ಯಡಿಯೂರಪ್ಪ ಅವರು ಸಿಎಂ ಗಾದಿಯಿಂದ ಕೆಳಗಿಳಿದ ಮೇಲೆ ಇಡೀ ಸರಕಾರ ಸಂಘ ಪರಿವಾರದ ಕಣ್ಸಜ್ಞೆಯಲ್ಲೇ ಕೆಲಸ ಮಾಡುತ್ತಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಜಿಲ್ಲಾ ಉಸ್ತುವಾರಿ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ವಲಸಿಗರಿಗೆ ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಬಿಜೆಪಿ ಚೆಕ್ʼಮೇಟ್ ಇಡುವುದು ಬಹುತೇಕ ಕಾಯಂ.
ಕಾರಣವಿಷ್ಟೇ; ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ತಮ್ಮದೇ ಆದ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದಾರೆ. ಅವರಿಗೆ ಬೇಕಾದ ಉನ್ನತ ಅಧಿಕಾರಿಗಳು ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಝಾಂಡಾ ಹೂಡಿದ್ದಾರೆ. ಸಣ್ಣಪುಟ್ಟ ಕಾರಣಗಳಿಗೂ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳನ್ನು ಮನಸೋ ಇಚ್ಛೆ ವರ್ಗಾವಣೆ ಮಾಡುವ ಸರಕಾರ, ಕಲ್ಲು ಕ್ರಷರ್ ಅಕ್ರಮ ಸ್ಫೋಟದಲ್ಲಿ ಆರು ಕಾರ್ಮಿಕರ ದೇಹಗಳು ಛಿದ್ರವಾದರೂ (ಆಗಿನ ಗೃಹ ಮಂತ್ರಿ, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಛಿದ್ರ ದೇಹಗಳನ್ನು ನೋಡಿದ್ದರು.) ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಯಾವ ಆತಂಕವೂ ಇಲ್ಲದೆ ಜಿಲ್ಲೆಯಲ್ಲೇ ತಳವೂರಿದ್ದಾರೆ. ಕೇವಲ ಗಣಿ ಇಲಾಖೆಯ ಅಧಿಕಾರಿಯಿಬ್ಬರನ್ನು ಇನ್ನೊಂದು ಜಿಲ್ಲೆಗೆ ಎತ್ತಂಗಡಿ ಮಾಡಲಾಗಿತ್ತಷ್ಟೇ. ಇದಕ್ಕೆ ರಾಜಕೀಯ ಪ್ರಭಾವ ಕಾರಣ ಇಲ್ಲದೇ ಬೇರೇನೂ ಇಲ್ಲ ಎನ್ನುವುದು ಜಿಲ್ಲೆಯ ಜನರ ಮಾತು. ಸಚಿವರ ಈ ಪ್ರಭಾವಳಿಯನ್ನೇ ಹೊಡೆದುರುಳಿಸಬೇಕು ಎನ್ನುವುದು ಬಿಜೆಪಿಯ ಒಳ ಲೆಕ್ಕಾಚಾರ.
ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಮತಾಂತರ
ಶಾಸಕ ಸ್ಥಾನ ನಮಗೇ ಇರಲಿ, ಸಚಿವಗಿರಿಯೂ ಬರಲಿ; ಅಕ್ಕಪಕ್ಕದ ಕ್ಷೇತ್ರಗಳ ಟಿಕೆಟ್ʼಗಳು ತಮ್ಮವರಿಗೇ ಇರಲಿ, ಹೇಗೋ ಬಚ್ಚೇಗೌಡರಿಗೆ ಕೈತಪ್ಪುವ ಲೋಕಸಭಾ ಚುನಾವಣೆ ಟಿಕೆಟ್ ಕೂಡ ನಮಗೇ ಬರಲಿ ಎನ್ನುವ ಅತಿ ರಾಜಕೀಯ ಮಹತ್ವಾಕಾಂಕ್ಷೆಯನ್ನು ಮೂಲೋತ್ಪಾಟನೆ ಮಾಡುವುದು ಬಿಜೆಪಿ ಬಹುಮುಖ್ಯ ಅಜೆಂಡಾಗಳಲ್ಲಿ ಒಂದಾಗಿದೆ. ಅಲ್ಲದೆ, ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆದ ಮತಾಂತರ, ನಾಯಿಕೊಡೆಗಳಂತೆ ಮೇಲೆದ್ದ ಚರ್ಚುಗಳು-ಪ್ರಾರ್ಥನಾ ಮಂದಿರಳು, ಅವುಗಳಿಗೆ ಸಿಗುತ್ತಿರುವ ಬೆಂಬಲ, ಚಿಕ್ಕಬಳ್ಳಾಪುರ ಹೃದಯ ಭಾಗದಲ್ಲೇ ನಡೆದ ಮತಾಂತರ ಕಾರ್ಯಗಳ ಎಲ್ಲ ಮಾಹಿತಿಯೂ ಆರೆಸ್ಸೆಸ್ ಕಿವಿಗೆ ಬಿದ್ದಿರುವುದರಲ್ಲಿ ಸಂಶಯವೇ ಇಲ್ಲ.
ಇನ್ನು; ಡಾ.ಕೆ.ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ಪಾರಮ್ಯ ತೋರಿದರೆ ಎಂಟಿಬಿ ʼಈಗೋʼ ಹರ್ಟ್ ಆಗುತ್ತದೆ. ಹೋಗಲಿ, ಅವರು ಬೆಂಗಳೂರು ಗ್ರಾಮಾಂತರದಲ್ಲಿ ಅತ್ತ ಬಚ್ಚೇಗೌಡರು, ಇತ್ತ ಎಂಟಿಬಿ ಇಬ್ಬರ ಒತ್ತಡವನ್ನೂ ಸಹಿಸಿಕೊಳ್ಳಬೇಕು. ಆ ಜಿಲ್ಲೆ ಚಿಕ್ಕಬಳ್ಳಾಪುರದಷ್ಟು ಸುಲಭವಲ್ಲ. ಅಲ್ಲಿನ ಅಧಿಕಾರಿಗಳ ನಿರ್ವಹಣೆ ಕೂಡ ಸುಲಭ ಸಾಧ್ಯವಲ್ಲ. ಆದರೆ, ಚಿಕ್ಕಬಳ್ಳಾಪುರ ಉಸ್ತುವಾರಿ ಬದಲಾವಣೆ ಬಗ್ಗೆ ಪಟ್ಟಿ ಹೊರಬಿದ್ದ ಕೆಲಹೊತ್ತಿನಲ್ಲೇ ಹಗ್ಗಜಗ್ಗಾಟ ನಡೆದಿದ್ದು, ರಿಪಬ್ಲಿಕ್ ಡೇ ದಿನ ಎಂಟಿಬಿ ಅವರು ಧ್ವಜಾರೋಹಣ ಮಾಡಿಬರುತ್ತಾರೆ, ಆಮೇಲೆ ನಿಮ್ಮದೇ ರಾಜ್ಯಭಾರ ಎಂದು ಸಮಾಧಾನಪಡಿಸುವ ಕೆಲಸವೂ ಶುರುವಾಗಿದೆ ಎಂಬ ಮಾಹಿತಿಯೂ ಸಿಕ್ಕಿದೆ.
ಚಿಕ್ಕಬಳ್ಳಾಪುರದಲ್ಲಿ ಹೊಸಕೋಟೆ ರಾಜಕೀಯ
ಎಂಟಿಬಿ ನಾಗರಾಜ್ ಜಿಲ್ಲಾ ಉಸ್ತುವಾರಿ ಆಗುವುದರೊಂದಿಗೆ ಹೊಸಕೋಟೆ ರಾಜಕೀಯವು ಚಿಕ್ಕಬಳ್ಳಾಪುರದಲ್ಲೂ ಕಾಣಿಸಿಕೊಳ್ಳುವುದು ಪಕ್ಕಾ. ಸರಕಾರಿ ಸಭೆ-ಸಮಾರಂಭಗಳಲ್ಲಿ ಉಸ್ತುವಾರಿ ಸಚಿವರು ಹಾಗೂ ಸಂಸದರಿಬ್ಬರನ್ನು ನಿರ್ವಹಣೆ ಮಾಡುವುದು ಅಧಿಕಾರಿಗಳಿಗೆ ಸವಾಲಾಗುವುದು ಗ್ಯಾರಂಟಿ. ಇವರಿಬ್ಬರ ತಿಕ್ಕಾಟದಿಂದ ಹೊಸಕೋಟೆಯಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ.
ಕೆಲ ದಿನಗಳ ಹಿಂದೆ ಒಂದು ಸರಕಾರಿ ಸಭೆಯ ವಿಷಯದಲ್ಲಿ ಅಲ್ಲಿನ ಶಾಸಕ ಶರತ್ ಬಚ್ಚೇಗೌಡ ಹಾಗೂ ಸಚಿವ ಎಂಟಿಬಿ ನಡುವಿನ ಶಿಷ್ಠಾಚಾರ ಪಾಲನೆ ತಿಕ್ಕಾಟದಲ್ಲಿ ಎರಡೂ ಕಡೆಯ ಕಾರ್ಯಕರ್ತರು ಹೊಡೆದಾಡಿಕೊಳ್ಳುವಂಥ ಉದ್ವಗ್ನ ಪರಿಸ್ಥಿತಿ ಸೃಷ್ಟಿಯಾಗಿತ್ತು. ಶರತ್ ಬಚ್ಚೇಗೌಡರು ಸಚಿವರ ವಿರುದ್ಧ ಹೆದ್ದಾರಿಯಲ್ಲೇ ಧರಣಿ ಕೂತಿದ್ದರು. ಇದೇ ದೃಶ್ಯಗಳು ಚಿಕ್ಕಬಳ್ಳಾಪುರದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಇದೆಲ್ಲವೂ ಬಿಜೆಪಿಗೆ ಗೊತ್ತಿಲ್ಲ ಎಂದು ಹೇಳಲಾಗದು.
ವಲಸಿಗರಿಗೆ ಟಿಕೆಟ್ ಅನುಮಾನ
2023ರ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಆಪರೇಷನ್ ಕಮಲಕ್ಕೆ ತುತ್ತಾಗಿ ಬಿಜೆಪಿಗೆ ವಲಸೆ ಬಂದವರಿಗೆ ಟಿಕೆಟ್ ಸಿಗುವ ಯಾವ ಖಾತರಿಯೂ ಇಲ್ಲ. ಅವರೆಲ್ಲ ಯಡಿಯೂರಪ್ಪನವರನ್ನು ನಂಬಿ ಬಂದಿದ್ದರು. ʼಒಬ್ಬರಿಗೆ ಒಂದೇ ಹುದ್ದೆ; ಒಂದು ಕುಟುಂಬಕ್ಕೆ ಒಂದೇ ಟಿಕೆಟ್ʼ ಎನ್ನುವ ನೀತಿಯನ್ನು ಅಳವಡಿಸಿಕೊಂಡಿರುವ ಪಕ್ಷಕ್ಕೆ ವಲಸಿಗರ ರಾಜಕೀಯ ಡಿಮಾಂಡುಗಳನ್ನು ಪೂರೈಸುವ ಅಗತ್ಯವಂತೂ ಸದ್ಯಕ್ಕಿಲ್ಲ. ಈಗ ವಲಸಿರಿಗೆ ಬಿಜೆಪಿ ಅನಿವಾರ್ಯ ಆಗಿದೆಯೇ ಹೊರತು, ಬಿಜೆಪಿಗೆ ಅವರು ಅನಿವಾರ್ಯವಾಗಿ ಉಳಿದಿಲ್ಲ. ಇಡೀ ಪಕ್ಷವೇ ಸಂಘದ ತೆಕ್ಕೆಗೆ ಜಾರಿರುವ ಪರಿಣಾಮ ಮುಂದಿನ ದಿನಗಳಲ್ಲಿ ಅಧಿಕಾರ ಸಂಘ ನಿಷ್ಠರಿಗೇ ಹೊರತು ಅಧಿಕಾರ ಪಿಪಾಸುಗಳಿಗಲ್ಲ ಎನ್ನುವ ಸಂದೇಶ ಈಗಾಗಲೇ ರವಾನೆಯಾಗಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ʼರಿವರ್ಸ್ ಆಪರೇಷನ್ ಕಮಲʼಕ್ಕೆ ನಾಂದಿ ಹಾಡಲಾಗಿದೆ. ಈ ಬೀಸಲಾಗಿರುವ ಕಲ್ಲು ಯಾವ ಯಾವ ಹಕ್ಕಿಗೆ ಹೋಗಿ ಬೀಳುತ್ತದೋ ಕಾದು ನೋಡಬೇಕಿದೆ.
ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..